ಸೋಮವಾರ, ಜೂನ್ 14, 2021
24 °C

50 ಸಾವಿರಕ್ಕೂ ಅಧಿಕ ಮಾನವ ದಿನಗಳ ಸೃಷ್ಟಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಭರವಸೆ ಯೋಜನೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಒಂದೇ ದಿನ 56,888 ಮಾನವ ದಿನಗಳನ್ನು ಅಸ್ವಾಭಿವಿಕ ರೀತಿಯಲ್ಲಿ ಸೃಷ್ಟಿಸಿರುವುದು ಬೆಳಕಿಗೆ ಬಂದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಿನಲ್‌ ಮೊಕದ್ದಮೆ ದಾಖಲಿಸುವು­ದಾಗಿ ಜಿಲ್ಲಾ ಪಂಚಾಯಿತಿ ಎಚ್ಚರಿಸಿದೆ.ಯೋಜನೆಗೆ ಸಂಬಂಧಿಸಿದ ವೆಬ್‌­ಸೈಟ್‌ನ ಎಂ.ಐ.ಎಸ್‌ನಲ್ಲಿ ಅಳವಡಿಸಿ­ರುವ ಈ  ಎಲ್ಲ ಕೆಲಸ ಕಾಮಗಾರಿ­ಗಳನ್ನು 24 ಗಂಟೆ ಒಳಗಾಗಿ ರದ್ದುಪಡಿ­ಸು­ವಂತೆ ಜಿಲ್ಲೆಯ ನಾಲ್ಕೂ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿ­ಕಾರಿ ಮತ್ತು ಎಲ್ಲ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಎಂ.ಐ.ಎಸ್‌ ಸಂಯೋಜಕರಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಉದಪುಡಿ, ತಾಕೀತು ಮಾಡಿದ್ದಾರೆ.

ಈ ಕುರಿತು ಮಾ.12ರಂದೇ ನಾಲ್ಕೂ ತಾಲ್ಲೂಕುಗಳಿಗೆ ಬರೆದಿರುವ ಪತ್ರದ ಪ್ರತಿ ‘ಪ್ರಜಾವಾಣಿ’ಗೆ ಲಭಿಸಿದೆ.ವರ್ಷದ 11 ತಿಂಗಳವರೆಗೆ ಯಾವುದೇ ಕೆಲಸ ಕಾಮಗಾರಿಗಳನ್ನು ನಿರ್ವಹಿಸಿಲ್ಲ. ಆದರೆ ಈ ವರ್ಷದ ಮಾ.12ರ ಎಂ.ಐ.ಎಸ್‌ ವರದಿಗಳನ್ನು ಪರಿಶೀಲಿಸಲಾಗಿ ಒಂದೇ ದಿನದಲ್ಲಿ ಭಾರಿ ಪ್ರಮಾಣದಲ್ಲಿ ಮಾನವ ದಿನಗಳನ್ನು ಸೃಷ್ಟಿಸಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹಣಕಾಸು ವರ್ಷದ ಕೊನೆಗಳಿಗೆಯಲ್ಲಿ ಮಾತ್ರ ದಿಢೀರನೇ ವ್ಯತಿರಿಕ್ತವಾದ ಮಾನವ ದಿನಗಳನ್ನು ಸೃಷ್ಟಿಸಿ ಅತಿ ಹೆಚ್ಚಿನ ಬಿಲ್‌ಗಳನ್ನು ಎಂ.ಐ.ಎಸ್‌ನಲ್ಲಿ ಅಳವಡಿಸಿರುವುದು ಸಂಶಯಕ್ಕೆ ಕಾರಣವಾಗಿದೆ ಎಂಬುದನ್ನು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.ಮಾ.12ರಂದು ಎಂ.ಐ.ಎಸ್‌ನಲ್ಲಿ ಅಳವಡಿಸಲಾಗಿರುವ ಎಲ್ಲ ಮಾನವ ದಿನಗಳಿಗೆ ಸಂಬಂಧಿಸಿದ ಕೂಲಿ, ಸಾಮಗ್ರಿ ವೆಚ್ಚಕ್ಕೆ ಸಂಬಂಧಿಸಿದ ಎಲ್ಲ ಕಾಮಗಾರಿಗಳನ್ನು ತನಿಖೆಗೆ ಒಳಪಡಿಸ­ಲಾಗುತ್ತದೆ. ಅದರಲ್ಲಿ ನ್ಯೂನತೆಗಳು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಸಂಬಂಧಿಸಿದ ತಾ.ಪಂ ಇ.ಒಗಳು, ಗ್ರಾ.ಪಂ. ಪಿಡಿಒಗಳು ಮತ್ತು ಆಯಾ ತಾಲ್ಲೂಕುಗಳ ಎಂ.ಐ.ಎಸ್‌ ಸಂಯೋಜಕರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಸಿದ್ದಾರೆ. ಹಾಗಾಗಿ ಸುತ್ತೋಲೆ ಹೊರಡಿಸಿದ 24 ತಾಸಿನ ಒಳಗೆ ಸದರಿ ದಿನ ಅಳವಡಿಸಿರುವ ಎಲ್ಲ ಕೆಲಸ ಕಾಮಗಾರಿಗಳನ್ನು ರದ್ದುಗೊಳಿಸಿ ಜಿ.ಪಂ.ಗೆ ವರದಿ ಸಲ್ಲಿಸುವಂತೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.