ಮಂಗಳವಾರ, ಮೇ 17, 2022
25 °C

6ನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ:ಹಳೇ ನಿಯಮ ಆಧರಿಸಿ ವಿಸ್ತರಣೆ: ಕಾಗೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: `ಸರ್ಕಾರಿ ಶಾಲೆಗಳಲ್ಲಿ ಆರನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಪ್ರಾರಂಭಿಸಲು ರಾಜ್ಯ ಸರ್ಕಾರ ಹೊಸದಾಗಿ ಅನುಮತಿ ಕೊಟ್ಟಿಲ್ಲ. 1994ರ ಭಾಷಾ ನೀತಿ ನಿಯಮಾವಳಿ ಪ್ರಕಾರ ಇನ್ನಷ್ಟು ಶಾಲೆಗಳಿಗೆ ವಿಸ್ತರಿಸಿದೆ ಅಷ್ಟೇ~ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಶನಿವಾರ ಇಲ್ಲಿ ಸಮರ್ಥಿಸಿಕೊಂಡರು.ತಾಲ್ಲೂಕಿನ ಇಸಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ  ನೂತನ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, `ಹೊಸ ನೀತಿಯನ್ನು ಜಾರಿಗೊಳಿಸುವ ಅಗತ್ಯವಿದ್ದಿದ್ದರೆ ಮೊದಲು ಸರ್ಕಾರ ಸಾರ್ವಜನಿಕರೊಂದಿಗೆ ಚರ್ಚಿಸಿ ನಿರ್ಧಾರ ಕೈಕೊಳ್ಳುತ್ತಿತ್ತು. ಪ್ರಸ್ತುತ ಈ ಹಿಂದಿನ ನಿಯಮವನ್ನೇ ಮುಂದುವರೆಸಿ 6ನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನೆಗೆ ಅನುಮತಿ ನೀಡಲಾಗಿದೆ~ ಎಂದು ಸ್ಪಷ್ಟಪಡಿಸಿದರು.`ರಾಜ್ಯದಲ್ಲಿ ಭಾಷಾ ವಿಷಯ ಹಲವು ದಿನಗಳಿಂದ ಚರ್ಚೆಯಾಗುತ್ತಿದೆ. 1994ರ ಕನ್ನಡ ಭಾಷಾ ನೀತಿಯ ಪ್ರಕಾರ 1ರಿಂದ 5ನೇ ತರಗತಿ ತನಕ ಕಡ್ಡಾಯ ಕನ್ನಡ ಬೋಧನೆಯನ್ನು ಒಪ್ಪಿಕೊಂಡಿದ್ದಾಗಿದೆ. ಕನ್ನಡ ಭಾಷೆ ಉಳಿವಿಗೆ ಸಾಕಷ್ಟು ಪ್ರಯತ್ನ ಮಾಡಲಾಗಿದೆ. ಕನ್ನಡ ನಾಡಿನ ಭವಿಷ್ಯದ ದೃಷ್ಠಿಯಿಂದ ಭಾಷಾ ನೀತಿ ಉಲ್ಲಂಘಿಸುವ ಪ್ರಶ್ನೆಯೇ ಇಲ್ಲ.ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿ ಕನ್ನಡದಲ್ಲಿ ನಡೆಯಬೇಕು ಎಂಬುದು ರಾಜ್ಯ ಸರ್ಕಾರದ ಸ್ಪಷ್ಟ ನಿಲುವಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನೆಗೆ ಹೈಕೋರ್ಟ್ ಅವಕಾಶ ನೀಡಿದಾಗ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ ಭಾಷಾ ನೀತಿ ಉಳಿಸಲು ತನ್ನ ಇಚ್ಛಾಶಕ್ತಿ ತೋರಿದೆ~ ಎಂದು ಅವರು ಹೇಳಿದರು.`ಸರ್ಕಾರಿ ಶಾಲೆಗಳಲ್ಲಿ 6ನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಬೋಧನೆಗೆ ಸಾಹಿತ್ಯ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ. ಭಾಷೆ ಬಗ್ಗೆ ಸಾಹಿತಿಗಳಿಗೆ ಇರುವ ಕಾಳಜಿ ಅಭಿನಂದನೀಯ. ಮಾತೃಭಾಷೆಯ ಅಗಾಧ ಶಕ್ತಿಯ ಅರಿವು ಸರ್ಕಾರಕ್ಕಿದೆ. ಆದರೆ ಗ್ರಾಮೀಣ ಭಾಗದ ಪಾಲಕರ ಬೇಡಿಕೆ, ಭವಿಷ್ಯದ ಸವಾಲು ಎದುರಿಸಲು ಯುವ ಜನರಲ್ಲಿ ಮಾನಸಿಕ ಸ್ಥೈರ್ಯ ನೀಡಲು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣದ ಅಗತ್ಯವಿದೆ. ಈ ಎಲ್ಲ ಸಂಗತಿಗಳನ್ನು ಮುಖ್ಯಮಂತ್ರಿ ಜೊತೆ ಚರ್ಚಿಸಿ ನಿರ್ಣಯ ಕೈಕೊಳ್ಳಲಾಗುವುದು ಎಂದು ಸಚಿವ ಕಾಗೇರಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.