ಶನಿವಾರ, ಮಾರ್ಚ್ 6, 2021
19 °C
ಕೊಪ್ಪಳ: ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ ಆರಂಭ

60ರ ನಂತರದ ಉತ್ಸಾಹಿಗಳ ಕೂಟ

ಶರತ್‌ ಹೆಗ್ಡೆ Updated:

ಅಕ್ಷರ ಗಾತ್ರ : | |

60ರ ನಂತರದ ಉತ್ಸಾಹಿಗಳ ಕೂಟ

ಕೊಪ್ಪಳ: ಇಲ್ಲಿ ಎಲ್ಲರೂ ಕಲೆಯುತ್ತಾರೆ. ಹರಟುತ್ತಾರೆ, ಆಡುತ್ತಾರೆ, ಅನುಭವಗಳ ಬುತ್ತಿ ಬಿಚ್ಚಿ ಹಂಚಿಕೊಳ್ಳುತ್ತಾರೆ...ಇದು ಇಲ್ಲಿನ ಬಿ.ಟಿ.ಪಾಟೀಲ ನಗರದಲ್ಲಿರುವ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರದ ನಿತ್ಯ ಚಟುವಟಿಕೆ ನೋಟ.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ತಾಳಿಕೋಟೆಯ ಸಿದ್ದೇಶ್ವರ ವಿದ್ಯಾಪೀಠದ ಮೂಲಕ ಈ ಕೇಂದ್ರ ನಿರ್ವಹಿಸಲ್ಪಡುತ್ತಿದೆ. ಜೂನ್‌ 29ರಂದು ಉದ್ಘಾಟನೆಯಾಗಿದೆ. ಇಲ್ಲಿರುವವರು ಬಹುತೇಕ ನಿವೃತ್ತ ನೌಕರರು. ಹಾಗೆಂದು ಇದು ಅವರಿಗಷ್ಟೇ ಸೀಮಿತವಲ್ಲ. ಹಿರಿಯ ನಾಗರಿಕರಾದವರು ಯಾರೂ ಬರಬಹುದು. ನೋಂದಣಿ ಮಾಡಿಕೊಂಡು ಗುರುತಿನ ಕಾರ್ಡ್‌ ಪಡೆಯಬೇಕು. ಇಲ್ಲಿ ಯಾವುದಕ್ಕೂ ಶುಲ್ಕ ಇಲ್ಲ. ಸದಸ್ಯರಿಗೆ ಆಗಾಗ ಚಹಾ, ಬಿಸ್ಕತ್ತು ಕೂಡಾ ಪೂರೈಸಲಾಗುತ್ತದೆ. ಈಗಾಗಲೇ 150 ಜನ ನೋಂದಣಿಯಾಗಿದ್ದಾರೆ. ಅವರವರಿಗೆ ಬಿಡುವಾದಾಗಲೆಲ್ಲಾ ಕೇಂದ್ರದಲ್ಲಿದ್ದು ಹೋಗುತ್ತಾರೆಕೇಂದ್ರದ ಹಾಲ್‌ನಲ್ಲಿ ದಿನಪತ್ರಿಕೆ, ಟಿವಿ ಇದೆ. ಇತರ ಕೊಠಡಿಗಳಲ್ಲಿ ಚೆಸ್‌, ಕೇರಂ ಬೋರ್ಡ್‌ ಇದೆ. ಅವರವರ ಅಭಿರುಚಿಗೆ ತಕ್ಕಂತೆ ಆಟ, ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ತಿಂಗಳಿಗೊಮ್ಮೆ ಏನಾದರೂ ವಿಶೇಷ ಕಾರ್ಯಕ್ರಮ ನಡೆಸಲಾಗುತ್ತದೆ.ಕೇಂದ್ರದಲ್ಲಿ ಒಬ್ಬರು ಸಂಯೋಜಕಿ, ಒಬ್ಬರು ಸಹಾಯಕಿ ಇದ್ದಾರೆ. ಇಬ್ಬರು ನರ್ಸ್‌ಗಳು ಹಾಗೂ ಒಬ್ಬರು ವೈದ್ಯರು ಅರೆಕಾಲಿಕ ನೆಲೆಯಲ್ಲಿ ಭೇಟಿ ನೀಡುತ್ತಾರೆ.

ಕೇಂದ್ರದ ಬಗ್ಗೆ ಇಲ್ಲಿ ಬರುವ ಹಿರಿಯ ನಾಗರಿಕರು ಸಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿದರು.

ನಿವೃತ್ತ ಪ್ರಾಂಶುಪಾಲ ಸಿ.ವಿ. ಜಡಿಯವರ ಹೇಳುವಂತೆ, ಒಬ್ಬೊಬ್ಬರ ಮನೆಯಲ್ಲೂ ಒಂದೊಂದು ಸಮಸ್ಯೆ ಇದೆ. 24 ತಾಸು ಮನೆಯಲ್ಲೇ ಕುಳಿತರೆ ನಾವು ಮನೆಯವರಿಗೂ ಹೊರೆಯಾಗುತ್ತೇವೆ. ನಮಗೂ ಬೇಸರ ಬಂದು ಏಕಾಂಗಿತನ ಕಾಡುತ್ತದೆ. ಅದಕ್ಕಾಗಿ ಇಲ್ಲಿ ಸಮಾನ ಮನಸ್ಕರು ಸೇರಲು ಒಳ್ಳೆ ಜಾಗ ಸಿಕ್ಕಿದೆ ಎನ್ನುತ್ತಾರೆ.ಮಹಾದೇವ ಜಾಧವ್‌ ಹೇಳುವಂತೆ, ನೋಡಿ ನಮಗೆ ಎಂದು ಒಂದು ಜಾಗ ಬೇಡವೇ? ಅಂಗಡಿ, ಹೋಟೆಲ್‌, ದೇವಸ್ಥಾನಗಳ ಮುಂಭಾಗ ಎಷ್ಟು ಹೊತ್ತು ಕೂರಲು ಸಾಧ್ಯ?  ಕುಳಿತರೂ ಇತರರಿಗೆ ಕಿರಿಕಿರಿಯೆನಿಸುತ್ತದೆ. ಅದಕ್ಕಾಗಿ ನಾವು ಒಬ್ಬೊಬ್ಬರು ಒಂದೊಂದು ಹಿನ್ನೆಲೆಯಿಂದ ಬಂದವರಿದ್ದೇವೆ. ನಮ್ಮ ಅನುಭವಗಳನ್ನೇ ಮಾತನಾಡುವುದೂ ಒಂದು ಖುಷಿ. ನಮ್ಮದೇ ಸಮವಯಸ್ಸಿನವರು ಸ್ವಲ್ಪ ಮಂಕಾಗಿದ್ದರೂ ಪರಸ್ಪರ ವಿಚಾರಿಸು ತ್ತೇವೆ. ಇಂದು ಬೇಕಾಗಿರುವುದು ಇದೇ ಕಾಳಜಿ ಎಂದರು.ಶ್ರೀಧರಗೌಡ ಹೇಳುವಂತೆ, ಇಲ್ಲಿ ಪರಸ್ಪರ ಆತ್ಮೀಯತೆ, ಪ್ರೀತಿ ಹಂಚಿಕೊಳ್ಳುತ್ತಾರೆ. ಇದು ಇಲ್ಲಿ ನಿತ್ಯದ ಚಟುವಟಿಕೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೇಂದ್ರದ ಸಂಯೋಜಕಿ ಗೀತಾ ಹೇಳುವಂತೆ, ನಿವೃತ್ತಿಯ ಬಳಿಕ  ಕಾಡುವ ಒಂಟಿತನ ನಿವಾರಣೆಗೆ ಸಮಾನ ಮನಸ್ಕರ ಒಡನಾಟ ಬೇಕು. ಅದಕ್ಕೆ ಇಲ್ಲೊಂದು ಅವಕಾಶ ಸಿಕ್ಕಿದೆ. ಯಾವುದೇ ಹಿರಿಯ ನಾಗರಿಕರು ಇಲ್ಲಿ ಬಂದು ಸೇರಬಹುದು ಎಂದರು.ಇಲ್ಲಿಗೆ ಬರುವ ಸಲಹಾ ವೈದ್ಯ ಡಾ.ರಾಘವೇಂದ್ರ ಪ್ರಕಾರ, ಹಿರಿಯ ನಾಗರಿಕರಿಗೆ ವಯೋಸಹಜ ಸಮಸ್ಯೆಗಳು ಬರುತ್ತವೆ. ಅದರ ಕಾರಣ ಅವರಿಗೂ ಗೊತ್ತಿದೆ. ಅವರ ಮುಂದಿನ ಪೀಳಿಗೆಯವರೂ ಕೂಡಾ ಪ್ರೀತಿ, ಕಾಳಜಿ ತೋರಬೇಕಾದ ಅಗತ್ಯವಿದೆ.  ಭಿನ್ನಾಭಿಪ್ರಾಯಗಳು ಬಂದಾಗ ಜಿದ್ದಿಗೆ ಬೀಳುವ ಬದಲು ಒಂದು ಕಡೆ ರಾಜಿಯಾಗಬೇಕು. ಆಗ ಸಮಸ್ಯೆಗಳು ಉದ್ಭವಿಸಲಾರದು ಎನ್ನುತ್ತಾರೆ.

ಮಾಹಿತಿ ಹಾಗೂ ನೋಂದಣಿಗೆ: ಮೊಬೈಲ್‌: 8867304906***

ಹಿರಿಯ ನಾಗರಿಕರ ಭಾವನೆಗಳಿಗೆ ಅವಕಾಶ ಕಲ್ಪಿಸುವುದು ಬಹಳ ಗಂಭೀರವಾದ ವಿಷಯ. ಇಲ್ಲಿರುವ ಪ್ರತಿಯೊಬ್ಬರೂ ಸಂಪನ್ಮೂಲ ವ್ಯಕ್ತಿಗಳು. ಸಮಾಜ ಅವರನ್ನು ಬಳಸಿಕೊಳ್ಳಬೇಕು.

-ಬಸವರಾಜ ಆಕಳವಾಡಿ,  ಹಿರಿಯ ನಾಗರಿಕರ ಪಾಲನಾ ಕೇಂದ್ರದ ಸದಸ್ಯ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.