ಮಂಗಳವಾರ, ಮೇ 18, 2021
30 °C
ರಾಮನಗರ ಜಿಲ್ಲಾ ಪಂಚಾಯಿತಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಕೊಕ್ಕೊ

7 ವರ್ಷಗಳಲ್ಲಿ 14 ಅಧ್ಯಕ್ಷರು!

ಎಸ್‌. ಸಂಪತ್ Updated:

ಅಕ್ಷರ ಗಾತ್ರ : | |

ರಾಮನಗರ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದು ಇನ್ನೂ ಏಳು ವರ್ಷ ಕೂಡ ಇನ್ನೂ ಪೂರೈಸಿಲ್ಲ. ಅಷ್ಟರಲ್ಲಿಯೇ ಇಲ್ಲಿನ ಜಿಲ್ಲಾ ಪಂಚಾಯಿತಿ 14 ಅಧ್ಯಕ್ಷರನ್ನು ಕಂಡಿದೆ. ಪ್ರಸ್ತುತ 2ನೇ ಅವಧಿಯಲ್ಲಿ ಬಾಕಿ ಇರುವ ಅಲ್ಪಾವಧಿಗೆ 15ನೇ ಅಧ್ಯಕ್ಷ ಸ್ಥಾನ ಅಲಂಕರಿಸಲು ಕೆಲವರು ತುದಿಗಾಲಲ್ಲಿ ನಿಂತಿದ್ದಾರೆ! 2007ರ ಆಗಸ್ಟ್‌ನಲ್ಲಿ ಜಿಲ್ಲೆಯಾದ ರಾಮನಗರಕ್ಕೆ 2007ರ ನವೆಂಬರ್‌ನಲ್ಲಿ ಜಿಲ್ಲಾ ಪಂಚಾಯಿತಿ ಅಸ್ತಿತ್ವಕ್ಕೆ ಬಂದಿತು. ಇಷ್ಟು ಕಡಿಮೆ ಅವಧಿಯಲ್ಲಿ 14 ಅಧ್ಯಕ್ಷರನ್ನು ನೋಡಿರುವ ರಾಮನಗರದ ಜನ ಸರಾಸರಿ ಆರು ತಿಂಗಳಿಗೊಬ್ಬರು ಅಧ್ಯಕ್ಷರನ್ನು ಕಂಡಿದ್ದಾರೆ.ಈಗ ಅಸ್ತಿತ್ವದಲ್ಲಿರುವ ಜಿಲ್ಲಾಪಂಚಾಯಿತಿ 2011ರ ಫೆಬ್ರುವರಿಯಲ್ಲಿ ರಚನೆಯಾಯಿತು.  2014 ಫೆಬ್ರುವರಿ ವೇಳೆಗೆ ಎಂಟು ಅಧ್ಯಕ್ಷರು (ಮೂವರು ಪ್ರಭಾರ) ಆಡಳಿತ ನಡೆಸಿದ್ದು, ಉಳಿದಿರುವ ಎರಡು– ಮೂರು ತಿಂಗಳಿಗೆ ಒಂಬತ್ತು ಮತ್ತು 10ನೇ ಅಧ್ಯಕ್ಷರು ಬರುವ ಸಾಧ್ಯತೆಗಳು ಇವೆ. ಇದನ್ನು ಗಮನಿಸಿದರೆ 36 ತಿಂಗಳ ಅವಧಿಯಲ್ಲಿ ಒಬ್ಬೊಬ್ಬರಿಗೆ ಸರಾಸರಿ ನಾಲ್ಕು ತಿಂಗಳು ಮಾತ್ರ ಅಧಿಕಾರ ದೊರೆತಿದೆ.ರಾಮನಗರ ಜಿಲ್ಲಾ ಪಂಚಾಯಿತಿಯಲ್ಲಿ 22 ಸದಸ್ಯರಿದ್ದು, ಅದರಲ್ಲಿ ಜೆಡಿಎಸ್‌ನ 12 ಹಾಗೂ ಕಾಂಗ್ರೆಸ್‌ನ 10 ಮಂದಿ ಇದ್ದಾರೆ. ಇದಲ್ಲಿ ಒಬ್ಬರ ಸದಸ್ಯತ್ವ ಕುರಿತು ಹೈಕೋರ್ಟ್‌ನಲ್ಲಿ ವ್ಯಾಜ್ಯ ಇದೆ. ಕಾಯ್ದೆಯ ಪ್ರಕಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಧಿ 20 ತಿಂಗಳು. ಅಂದರೆ ಐದು ವರ್ಷಗಳಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವನ್ನು ತಲಾ ಮೂರು ಮಂದಿ ನಿರ್ವಹಿಸಬಹುದು.ರಾಮನಗರ ಜಿಲ್ಲಾ ಪಂಚಾಯಿತಿಯ ಮೊದಲ 20 ತಿಂಗಳ ಅವಧಿ ಸಾಮಾನ್ಯ ಮಹಿಳೆ ಪ್ರವರ್ಗಕ್ಕೆ ಮೀಸಲಾಗಿತ್ತು.  ಆಡಳಿತ ಪಕ್ಷ ಜೆಡಿಎಸ್‌ನಲ್ಲಿ ಆಗಿದ್ದ ಆಂತರಿಕ ಒಡಂಬಡಿಕೆ ಅಥವಾ ಹೊಂದಾಣಿಕೆ ಸೂತ್ರದಂತೆ ಈ ಅವಧಿಯನ್ನು ಪಕ್ಷದ ಮೂವರು ಸದಸ್ಯರಿಗೆ ಏಳು, ಏಳು ಮತ್ತು ಆರು ತಿಂಗಳಂತೆಹಂಚಿಕೆ ಮಾಡಲಾಗಿತ್ತು. ಹಾಗಾಗಿ ಈ ಅವಧಿಯಲ್ಲಿ ಮೂವರು ಅಧ್ಯಕ್ಷ ಸ್ಥಾನ ಅಲಂಕರಿಸಿದ್ದರು. ಪಂಚಾಯತ್‌ ರಾಜ್‌ ನಿಯಮದ ಪ್ರಕಾರ ಅಧ್ಯಕ್ಷ ಸ್ಥಾನಕ್ಕೆ ಮತ್ತೊಬ್ಬರು ಆಯ್ಕೆ ಆಗುವ ತನಕ ಉಪಾಧ್ಯಕ್ಷರು ಪ್ರಭಾರ ಅಧ್ಯಕ್ಷರಾಗಿರುತ್ತಾರೆ. ಹಾಗಾಗಿ ಇಲ್ಲಿನ ಉಪಾಧ್ಯಕ್ಷರಿಗೆ ಎರಡು ಬಾರಿ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ಚಲಾಯಿಸುವ ಅವಕಾಶವೂ ದೊರೆಯಿತು. ಜಿಲ್ಲೆಯಲ್ಲಿ ಎದುರಾದ ಉಪ ಚುನಾವಣೆಗಳು, ನೀತಿ ಸಂಹಿತೆ ಹಾಗೂ ಅಧ್ಯಕ್ಷ ಸ್ಥಾನದಲ್ಲಿಯೇ ಮುಂದುವರೆಯಬೇಕು ಎಂಬ ಅಧಿಕಾರದ ಲಾಲಸೆಯಿಂದ ಕೆಲವರು ಪಕ್ಷದ ಆಂತರಿಕ ಹೊಂದಾಣಿಕೆಗೂ ಸೊಪ್ಪು ಹಾಕದೆ ಕೆಲ ತಿಂಗಳು ಹೆಚ್ಚಾಗಿಯೇ ಅಧಿಕಾರ ಚಲಾಯಿಸಿರುವುದೂ ಉಂಟು. ಇದರಿಂದ ನಿಗದಿತ ಅವಧಿಯ ಕೊನೆಯಲ್ಲಿ ಅಧಿಕಾರಕ್ಕೆ ಬಂದವರು ಅತಿ ಕಡಿಮೆ ಅವಧಿಗೆ ಅಧ್ಯಕ್ಷರಾಗಿದ್ದೂ ಇದೆ.2011ರಲ್ಲಿ ಮೊದಲ ಅವಧಿಯ ಮೊದಲ ಅಧ್ಯಕ್ಷರಾಗಿ ಕಲ್ಪನಾ ಮಲ್ಲಿಕಾರ್ಜುನೇ ಗೌಡ ಅವರು 9 ತಿಂಗಳು ಆಡಳಿತ ನಡೆಸಿದರು. ನಂತರ ಪ್ರಭಾರ ಅಧ್ಯಕ್ಷೆಯಾಗಿ ಮಾದೇವಿ (ಉಪಾಧ್ಯಕ್ಷೆ) 1 ತಿಂಗಳು 2 ದಿನ, ಅಧ್ಯಕ್ಷರಾಗಿ ಯು.ಪಿ.ನಾಗೇಶ್ವರಿ 9 ತಿಂಗಳು ಆಡಳಿತ ನಡೆಸಿದರು. ಈ ಅವಧಿಯಲ್ಲಿ ಅವರು ಒಮ್ಮೆ ರಾಜೀನಾಮೆ ನೀಡಿ, ಹಿಂಪಡೆದ ದಾಖಲೆಯನ್ನೂ ಮಾಡಿದರು. ಮತ್ತೆ ಪ್ರಭಾರ ಅಧ್ಯಕ್ಷೆಯಾಗಿ ಮಾದೇವಿ 12 ದಿನ ಆಡಳಿತ ನಡೆಸಿದರೆ, ಬಿ.ವಿ.ಹಂಸಕುಮಾರಿ ಅವರು ಅಧ್ಯಕ್ಷರಾಗಿದ್ದದ್ದು ಕೇವಲ 1 ತಿಂಗಳು 16 ದಿನ ಮಾತ್ರ.ಇನ್ನು ಎರಡನೇ 20 ತಿಂಗಳ ಅವಧಿಯ ಅಧ್ಯಕ್ಷ ಸ್ಥಾನವನ್ನು ಸರ್ಕಾರ ಬಿಸಿಎಂ (ಎ) ಪ್ರವರ್ಗಕ್ಕೆ ಮೀಸಲಿರಿಸಿತು. ಪುನಃ ಜೆಡಿಎಸ್‌ ವರಿಷ್ಠರು ಸದಸ್ಯರೊಂದಿಗೆ ಮಾತುಕತೆ ನಡೆಸಿ ಸಂಧಾನ ಸೂತ್ರವನ್ನು ರಚಿಸಿದರು. ಅದರಂತೆ ಈ ಅವಧಿಯನ್ನು  ಮತ್ತೆ ಎರಡು ಏಳು ತಿಂಗಳ ಮತ್ತು ಒಂದು ಆರು ತಿಂಗಳ ಅವಧಿಯನ್ನಾಗಿ ವಿಭಜಿಸಲಾಗಿದೆ ಎಂಬುದು ಪಕ್ಷದ ಒಳಗನ್ನು ಬಲ್ಲವರು ಹೇಳುತ್ತಿದ್ದಾರೆ.ಎರಡನೇ ಅವಧಿಯಲ್ಲಿ ಮೊದಲು ಅಧ್ಯಕ್ಷ ಸ್ಥಾನ ಪಡೆದ ಕೆ.ಮುದ್ದುರಾಜ್‌ ಯಾದವ್‌ ಅವರು ಒಂಬತ್ತು ತಿಂಗಳು ಆಡಳಿತ ನಡೆಸಿ ರಾಜೀನಾಮೆ ನೀಡಿದರು. ಉಪಾಧ್ಯಕ್ಷೆ ಎಸ್.ಬಿ.ಗೌರಮ್ಮ ಅವರು 16 ದಿನಗಳ ಮಟ್ಟಿಗೆ ಪ್ರಭಾರ ಅಧ್ಯಕ್ಷ ಸ್ಥಾನ ಅಲಂಕರಿಸಿದರು. ಆ ನಂತರ 2013ರ ಜುಲೈನಲ್ಲಿ ಅಧ್ಯಕ್ಷರಾದ ಎಚ್‌.ಸಿ.ರಾಜಣ್ಣ ಅವರು ಏಳು ತಿಂಗಳಿಂದ ಈ ಹುದ್ದೆಯಲ್ಲಿದ್ದಾರೆ. ಪಕ್ಷದ ಆಂತರಿಕ ಒಡಂಬಡಿಕೆಗೆ ಬದ್ಧರಾಗಲು ಅವರು ರಾಜೀನಾಮೆಗೆ ಒಲ್ಲದ ಮನಸ್ಸಿನಿಂದಲೇ ಸಿದ್ಧರಾಗಿದ್ದಾರೆ. ಬಾಕಿ ಅವಧಿಯ ಅಧ್ಯಕ್ಷ ಸ್ಥಾನ ಅಲಂಕರಿಸಲು ಸದಸ್ಯೆ ಸುಧಾರಾಜು ಅವರು ಸನ್ನದ್ಧರಾಗಿದ್ದಾರೆ.ರಾಜ್ಯದ ರಾಜಕೀಯದಲ್ಲಿ ರಾಮನಗರಕ್ಕೆ ತನ್ನದೇ ಆದ ಸ್ಥಾನಮಾನ ಇದೆ. ಪ್ರತಿಷ್ಠಿತ ರಾಜಕಾರಣಿಗಳು ಇಲ್ಲಿಂದ ವಿಧಾನಸಭೆ, ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಕೆಂಗಲ್‌ ಹನುಮಂತಯ್ಯ, ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿದ್ದಾರೆ. ದೇವೇಗೌಡರು ಪ್ರಧಾನಿಯೂ ಆಗಿದ್ದರು. ಕನಕಪುರ, ಚನ್ನಪಟ್ಟಣ, ಮಾಗಡಿಯಿಂದ ಪ್ರಭಾವಿ ಮುಖಂಡರು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ, ಸಲ್ಲಿಸುತ್ತಲೂ ಇದ್ದಾರೆ.ರಾಮನಗರ ಜಿಲ್ಲಾ ಪಂಚಾಯಿತಿಯ ಆಡಳಿತ ಪಕ್ಷದ ಎಲ್ಲ ಸದಸ್ಯರೂ ಕೆಲ ದಿನಗಳಾದರೂ ಅಧ್ಯಕ್ಷ ಸ್ಥಾನ ಅಲಂಕರಿಸಿ ಮಾಜಿ ಅಧ್ಯಕ್ಷರು ಎಂದು ಹೇಳಿಕೊಳ್ಳುವ ಆಸೆಯುಳ್ಳವರೇ. ಅದಕ್ಕಾಗಿ ಕನಿಷ್ಠ ಒಂದು ತಿಂಗಳು ಅಧಿಕಾರ ಸಿಕ್ಕರೂ ಸಾಕು ಎಂಬುದು ಅವರ ನಿಲುವು.  ಎಲ್ಲ ಸದಸ್ಯರನ್ನೂ ಸಂತೃಪ್ತಗೊಳಿಸುವ ನಿಟ್ಟಿನಲ್ಲಿ ಪಕ್ಷದ ಮುಖಂಡರು ಮತ್ತು ವರಿಷ್ಠರು ನಿರತರಾಗಿದ್ದಾರೆ. ಇನ್ನೂ ಮೂರನೇ ಅವಧಿಯ 20 ತಿಂಗಳ ಆಡಳಿತದಲ್ಲಿ ಎಷ್ಟು ಸದಸ್ಯರು ಅಧ್ಯಕ್ಷ ಸ್ಥಾನ ಅಲಂಕರಿಸುತ್ತಾರೋ ಎಂಬ ಆತಂಕ ಜಿಲ್ಲೆಯ ಜನರಲ್ಲಿದೆ.20 ತಿಂಗಳು ಪೂರೈಸಿದವರು

ರಾಮನಗರ ಜಿಲ್ಲಾ ಪಂಚಾಯಿತಿಯಲ್ಲಿ 20 ತಿಂಗಳ ಅವಧಿಯನ್ನು ಪೂರ್ಣಗೊಳಿಸಿರುವ ಒಬ್ಬ ಅಧ್ಯಕ್ಷರಿದ್ದಾರೆ. ಅವರ ಹೆಸರು ಸಿ. ವೈರಮುಡಿ. ರಾಮನಗರ ಜಿಲ್ಲಾಪಂಚಾಯಿತಿ ರಚನೆಯಾದಾಗ ಮೊದಲ ಅವಧಿಗೆ ಇವರು ಅಧ್ಯಕ್ಷರಾಗಿದ್ದರು. ಇವರ ನಂತರ ಯಾರಿಗೂ ಈ ಭಾಗ್ಯ ದೊರೆತಿಲ್ಲ.ದಯವಿಟ್ಟು ಕ್ಷಮಿಸಿ'

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಪದವಿಯ ಕೊಕ್ಕೊ ಆಟದ ಬಗ್ಗೆ ಪ್ರಶ್ನಿಸಿದರೆ ಈಗಿನ ಅಧ್ಯಕ್ಷರು ಎಚ್‌.ಸಿ.ರಾಜಣ್ಣ ಮೊದಲು ಹೇಳುವುದು ‘ದಯವಿಟ್ಟು ಕ್ಷಮಿಸಿ’. ಆಮೇಲೆ ಅವರು ತೊಂದರೆಗಳನ್ನು ಹೇಳಲಾರಂಭಿಸುತ್ತಾರೆ. ‘ಪಂಚಾಯತ್ ಅಧ್ಯಕ್ಷರು ಒಂದೆರಡು ಸಾಮಾನ್ಯ ಸಭೆ ಮತ್ತು ಕೆಡಿಪಿ ಸಭೆಗೆ ಸೀಮಿತವಾದರೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಹೇಗೆ ಸಾಧ್ಯವಾಗುತ್ತದೆ. ಅಧ್ಯಕ್ಷರಾಗಿ ವ್ಯವಸ್ಥೆ ತಿಳಿದುಕೊಳ್ಳಲು ಕನಿಷ್ಠ 6 ತಿಂಗಳು ಸಮಯ ಬೇಕಾಗುತ್ತದೆ. ಆದರೆ ಇದಕ್ಕೂ ಮೊದಲೇ ರಾಜೀನಾಮೆ ನೀಡಬೇಕಾದ ಸನ್ನಿವೇಶಗಳನ್ನು ನಾವೇ ಸೃಷ್ಟಿ ಮಾಡಿಕೊಂಡಿದ್ದೇವೆ. ಈ ಹೊಂದಾಣಿಕೆ ಸೂತ್ರಗಳ ಫಲಾನುಭವಿಯಾಗಿ ಅಧ್ಯಕ್ಷನಾಗಿರುವ ನಾನು ಇಷ್ಟನ್ನು ಬಿಟ್ಟರೆ ಬೇರೆ ಹೇಳುವ ಸ್ಥಿತಿಯಲ್ಲಿ ಇಲ್ಲ’ ಎಂದು ಮತ್ತೊಮ್ಮೆ  ‘ದಯವಿಟ್ಟು ಕ್ಷಮಿಸಿ’ ಎಂದು ಮಾತು ಮುಗಿಸುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.