ಬುಧವಾರ, ಜೂನ್ 3, 2020
27 °C

88.48 ಕೋಟಿ ರೂ ಬೇನಾಮಿ ಆಸ್ತಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬದ ಸದಸ್ಯರು ಬೇನಾಮಿ ಹೆಸರಿನಲ್ಲಿ ರೂ 88.48 ಕೋಟಿ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಸ್ಫೋಟಕ ವಿಷಯ ಶನಿವಾರ ವಕೀಲರಿಬ್ಬರು ಮುಖ್ಯಮಂತ್ರಿ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಮೊಕದ್ದಮೆಯಲ್ಲಿದೆ.ಬೇನಾಮಿದಾರರು ಎಂದು ಹೆಸರಿಸಲಾಗಿರುವ ಎಲ್ಲರೂ ಡಿನೋಟಿಫಿಕೇಷನ್ ಆದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಸ್ತಿಯನ್ನು ಖರೀದಿಸಿದ್ದಾರೆ. ಈ ಎಲ್ಲ ವ್ಯಕ್ತಿಗಳೂ ಆಸ್ತಿ ಖರೀದಿಗೆ ನಗರದ ಬ್ಯಾಂಕ್ ಒಂದರ ಒಂದೇ ಖಾತೆಯಿಂದ ಹಣ ಸಂದಾಯ ಮಾಡಿರುವುದನ್ನು ಈ ಆರೋಪಕ್ಕೆ ಪ್ರಬಲ ಸಾಕ್ಷಿಯನ್ನಾಗಿ ಅರ್ಜಿದಾರರು ನೀಡಿದ್ದಾರೆ.ಜಸ್ಟೀಸ್ ಲಾಯರ್ಸ್ ಫೋರಂನ ಸಿರಾಜಿನ್ ಬಾಷಾ ಮತ್ತು ಕೆ.ಎನ್.ಬಾಲರಾಜ್ ‘ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988’ ಕಾಯ್ದೆಯ ವಿಶೇಷ ನ್ಯಾಯಾಲದಲ್ಲಿ ಸಲ್ಲಿಸಿರುವ ಎರಡನೇ ಮೊಕದ್ದಮೆಯಲ್ಲಿ, ಏಳು ವ್ಯಕ್ತಿಗಳನ್ನು ಮುಖ್ಯಮಂತ್ರಿ ಕುಟುಂಬದ ಬೇನಾಮಿದಾರರು ಎಂದು ಹೆಸರಿಸಲಾಗಿದೆ. ಇದರಿಂದಾಗಿ ಪ್ರಕರಣ ಮತ್ತಷ್ಟು ಕುತೂಹಲ ಪಡೆದುಕೊಂಡಿದೆ.ಶಿವಮೊಗ್ಗ ತಾಲ್ಲೂಕು ಕುಂಸಿಯ ಎಂ.ಮಂಜುನಾಥ್, ಅವರ ಪತ್ನಿ ಎನ್.ಅಕ್ಕಮಹಾದೇವಿ, ಹೊನ್ನಾಳಿ ತಾಲ್ಲೂಕಿನ ಎನ್.ಎಸ್.ಮಹಾಬಲೇಶ್ವರ, ಬೆಂಗಳೂರಿನ ಜಯನಗರ 4ನೇ ‘ಟಿ’ಬ್ಲಾಕ್‌ನ ವಿ.ಮಂಜುನಾಥ್, ವಿ.ಪ್ರಕಾಶ್, ವಿ.ಅನಿಲ್‌ಕುಮಾರ್ ಮತ್ತು ಪುಟ್ಟೇನಹಳ್ಳಿಯ ಕೆ.ಶಿವಪ್ಪ ಎಂಬುವರನ್ನು ಮುಖ್ಯಮಂತ್ರಿ ಕುಟುಂಬದ ಬೇನಾಮಿದಾರರು ಎಂದು ಕ್ರಿಮಿನಲ್ ಮೊಕದ್ದಮೆಯಲ್ಲಿ ಉಲ್ಲೇಖಿಸಲಾಗಿದೆ. ಏಳು ಜನರನ್ನೂ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.ಬಿಡಿಎಯಿಂದ ಬೇನಾಮಿದಾರರಿಗೆ?: ಶನಿವಾರ ದಾಖಲಿಸಿರುವ ಎರಡನೇ ಕ್ರಿಮಿನಲ್ ಮೊಕದ್ದಮೆಯಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಸಬಾ ಹೋಬಳಿಯ ಅರಕೆರೆ ಗ್ರಾಮದಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ 2.05 ಎಕರೆ ಭೂಮಿಯನ್ನು ಕಾನೂನುಬಾಹಿರವಾಗಿ ಡಿನೋಟಿಫೈ ಮಾಡಲಾಗಿದೆ. ಡಿನೋಟಿಫಿಕೇಷನ್ ಬಳಿಕ ಮುಖ್ಯಮಂತ್ರಿಯವರ ಕುಟುಂಬದ ಸದಸ್ಯರ ಬೇನಾಮಿದಾರರು ಅದನ್ನು ಖರೀದಿಸಿದ್ದಾರೆ ಎಂಬ ಆರೋಪ ಮೊಕದ್ದಮೆಯಲ್ಲಿದೆ. ‘ಅರೆಕೆರೆ ಗ್ರಾಮದ 2.05 ಎಕರೆ ಭೂಮಿಯನ್ನು 2010ರ ಆಗಸ್ಟ್ 7ರಂದು ಅಕ್ರಮವಾಗಿ ಡಿನೋಟಿಫೈ ಮಾಡಲಾಗಿದೆ.

ಈ ಭೂಮಿಯ ಒಟ್ಟು ಮಾರುಕಟ್ಟೆ ಮೌಲ್ಯ 46.50 ಕೋಟಿ ರೂಪಾಯಿ. ಈ ಪೈಕಿ 25.39 ಕೋಟಿ ರೂಪಾಯಿ ಮೌಲ್ಯದ 1.07 ಎಕರೆಯನ್ನು ಬಳಿಕ ಯಡಿಯೂರಪ್ಪ ಕುಟುಂಬದ ಪರವಾಗಿ ಬೇನಾಮಿದಾರರಾದ ಎನ್.ಅಕ್ಕಮಹಾದೇವಿ ಮತ್ತು ಮಹಾಬಲೇಶ್ವರ ಖರೀದಿಸಿದ್ದಾರೆ. ಮತ್ತೊಬ್ಬ ಬೇನಾಮಿದಾರ ವಿ.ಪ್ರಕಾಶ್ ‘ಜಿಪಿಎ’ ಮೂಲಕ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾರೆ’ ಎಂಬ ಆರೋಪ ದೂರಿನಲ್ಲಿದೆ.ಬೆಂಗಳೂರು ದಕ್ಷಿಣ ತಾಲ್ಲೂಕಿನ ದೇವರಚಿಕ್ಕನಹಳ್ಳಿಯ ಸರ್ವೇ ನಂಬರ್ 51/1ರಲ್ಲಿ 1.07 ಎಕರೆ ಭೂಮಿಯನ್ನು ಬಿಡಿಎ 1994ರಲ್ಲಿ ಸ್ವಾಧೀನಪಡಿಸಿಕೊಂಡು ಎಇಸಿಎಸ್ ಬಡಾವಣೆ ನಿರ್ಮಿಸಿತ್ತು. ಆದರೆ ಅದನ್ನು ಅಕ್ರಮವಾಗಿ 2010ರ ಮೇ 26ರಂದು ಡಿನೋಟಿಫಿಕೇಷನ್ ಮಾಡಲಾಗಿದೆ. ಬಳಿಕ 25 ಗುಂಟೆ ಭೂಮಿಯನ್ನು ಮುಖ್ಯಮಂತ್ರಿಯವರ ಸಹಚರರಾದ ಎಂ.ಮಂಜುನಾಥ್ ಮತ್ತು ವಿ.ಅನಿಲ್‌ಕುಮಾರ್ ಖರೀದಿಸಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಅರ್ಕಾವತಿ ಬಡಾವಣೆಗಾಗಿ ಗೆದ್ದಲಹಳ್ಳಿಯ ಸರ್ವೇ ನಂಬರ್ 42/1ಎ2, 42/4-ಎ2 ಮತ್ತು 42/2ಬಿಗಳಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ 4 ಎಕರೆ ಭೂಮಿಯನ್ನು ಅಕ್ರಮವಾಗಿ 2010ರ ಸೆಪ್ಟೆಂಬರ್ 1ರಂದು ಡಿನೋಟಿಫೈ ಮಾಡಲಾಗಿದೆ. ಬಳಿಕ ಅದನ್ನು ವಿ.ಮಂಜುನಾಥ್, ಕೆ.ಶಿವಪ್ಪ ಖರೀದಿಸಿದ್ದಾರೆ ಎಂಬ ಆರೋಪವೂ ಇದೆ.ಮೂರು ಡಿನೋಟಿಫಿಕೇಷನ್ ಪ್ರಕರಣಗಳಲ್ಲಿ ಬೇನಾಮಿದಾರರ ಮೂಲಕ ಮುಖ್ಯಮಂತ್ರಿ ಕುಟುಂಬದ ಸದಸ್ಯರು ರೂ 88.48 ಕೋಟಿ ಅಕ್ರಮ ಆಸ್ತಿ ಗಳಿಸಿದ್ದಾರೆ. ಇಷ್ಟು ದೊಡ್ಡ ಮೊತ್ತದ ಬಿಡಿಎ ಆಸ್ತಿ ಯಡಿಯೂರಪ್ಪ ಅವರ ಸಹಚರರ ಹೆಸರಿಗೆ ಅಕ್ರಮವಾಗಿ ವರ್ಗಾವಣೆ ಆಗಿದೆ. ಆದರೆ ಈ ವ್ಯಕ್ತಿಗಳಿಗೆ ಇಷ್ಟು ದೊಡ್ಡ ಮೊತ್ತದ ಆಸ್ತಿ ಖರೀದಿಸುವ ಆರ್ಥಿಕ ಸಾಮರ್ಥ್ಯವೇ ಇಲ್ಲ. ಇದೇ ವ್ಯಕ್ತಿಗಳು ಇತರೆ ಡಿನೋಟಿಫಿಕೇಷನ್ ಪ್ರಕರಣಗಳಲ್ಲೂ ಮುಖ್ಯಮಂತ್ರಿ ಕುಟುಂಬಕ್ಕೆ ಬೇನಾಮಿದಾರರಾಗಿದ್ದಾರೆ ಎಂಬ ಅಂಶವಿದೆ.ಮೊಕದ್ದಮೆಯಲ್ಲಿ ಬೇನಾಮಿದಾರ ಎಂದು ಹೆಸರಿಸಲಾಗಿರುವ ಎಂ.ಮಂಜುನಾಥ್ ಮುಖ್ಯಮಂತ್ರಿಯವರ ನಿಕಟವರ್ತಿ. ವಿ.ಅನಿಲ್‌ಕುಮಾರ್ ಮುಖ್ಯಮಂತ್ರಿಗಳ ಕಿರಿಯ ಪುತ್ರ ಬಿ.ವೈ.ವಿಜಯೇಂದ್ರ ಅವರ ಸಹಚರ ಎಂಬ ವಿಷಯವನ್ನೂ ದೂರಿನಲ್ಲಿ ತಿಳಿಸಿದ್ದಾರೆ.ಒಂದೇ ಖಾತೆಯಿಂದ ಹಣ: ಮೂರು ಡಿನೋಟಿಫಿಕೇಷನ್ ಪ್ರಕರಣಗಳಲ್ಲಿ ಬಿಡಿಎ ಸ್ವಾಧೀನದಿಂದ ಕೈಬಿಟ್ಟ ಭೂಮಿಯನ್ನು ಖರೀದಿಸಿರುವವರು ಪಾವತಿಸಿರುವ ಮೊತ್ತದಲ್ಲಿ ಬಹುಪಾಲು ಒಂದೇ ಬ್ಯಾಂಕ್ ಖಾತೆಯಿಂದ ವರ್ಗಾವಣೆ ಆಗಿದೆ. ಅದು ಮುಖ್ಯಮಂತ್ರಿಯವರ ಕುಟುಂಬದ ಬೇನಾಮಿ ಖಾತೆಯೇ ಆಗಿದೆ ಎಂದು ಉಲ್ಲೇಖಿಸಿದ್ದಾರೆ.ಈ ಎಲ್ಲ ಪ್ರಕರಣಗಳಲ್ಲೂ ಭಾರತ್ ಕೋ ಆಪರೇಟಿವ್ ಬ್ಯಾಂಕ್ (ಮುಂಬೈ)ನ ಕೆ.ಎಚ್.ರಸ್ತೆ ಶಾಖೆಯ ಒಂದೇ ಖಾತೆಯಿಂದ ಹಣ ಪಾವತಿ ಆಗಿದೆ. ಈ ಕುರಿತ ದಾಖಲೆಗಳನ್ನು ಅರ್ಜಿದಾರರಾದ ಸಿರಾಜಿನ್ ಬಾಷಾ ಮತ್ತು ಬಾಲರಾಜ್ ನ್ಯಾಯಾಲಯದ ಮುಂದಿಟ್ಟಿದ್ದಾರೆ.‘ಹಗರಣ: 300 ಕೋಟಿ ಲಾಭ’ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಕುಟುಂಬದವರು ಭೂ ಹಗರಣದಲ್ಲಿ ಒಟ್ಟು 300 ಕೋಟಿ ರೂಪಾಯಿ ಲಾಭ ಮಾಡಿಕೊಂಡಿದ್ದಾರೆ ಎಂದು ವಕೀಲರಾದ ಸಿರಾಜಿನ್ ಬಾಷಾ ಮತ್ತು ಕೆ.ಎನ್. ಬಾಲರಾಜ್ ಅವರು ದೂರಿನಲ್ಲಿ ತಿಳಿಸಿದ್ದಾರೆ ಎಂದು ರಾಜಭವನದ ಮಾಹಿತಿ ತಿಳಿಸಿದೆ.ವಕೀಲರು ಮಾಹಿತಿ ಹಕ್ಕು ಕಾಯ್ದೆಯಡಿ ಈ ಸಂಬಂಧ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ವಕೀಲರು ನೀಡಿದ ದಾಖಲೆಗಳು ಮತ್ತು ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಪಡೆದ ದಾಖಲೆಗಳನ್ನು ಪರಿಶೀಲಿಸಿ, ಹೋಲಿಕೆ ನಡೆಸಿದ ಬಳಿಕ ಮುಖ್ಯಮಂತ್ರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅನುಮತಿ ನೀಡಲಾಗಿದೆ ಎಂದು ರಾಜಭವನದ ಪ್ರಕಟಣೆ ತಿಳಿಸಿದೆ.ಕೆ.ಆರ್.ಪುರ ಬಳಿಯಿರುವ ರಾಚೇನಹಳ್ಳಿಯಲ್ಲಿ 1.12 ಎಕರೆ ಹಾಗೂ 16 ಗುಂಟೆ ಡಿನೋಟಿಫಿಕೇಷನ್‌ನಿಂದ 26.64 ಕೋಟಿ ರೂಪಾಯಿ, ಅಗ್ರಹಾರದಲ್ಲಿ 2.05 ಎಕರೆ ಡಿನೋಟಿಫಿಕೇಷನ್‌ನಿಂದ ರೂ 14.6 ಕೋಟಿ, ಕೆಂಪಾಪುರದಲ್ಲಿ 33 ಗುಂಟೆ ಜಮೀನಿನಿಂದ ರೂ 2.75 ಕೋಟಿ, ಶ್ರೀರಾಮಪುರದಲ್ಲಿ 11.25 ಎಕರೆ ಜಮೀನಿನಿಂದ ರೂ 50 ಕೋಟಿ ಮತ್ತು ನಾಗರಬಾವಿಯಲ್ಲಿ 5.13 ಎಕರೆ ಜಮೀನು ಡಿನೋಟಿಫಿಕೇಷನ್‌ನಿಂದ ರೂ 115 ಕೋಟಿ ರೂಪಾಯಿ ಲಾಭ ಮಾಡಿಕೊಂಡಿದ್ದಾರೆ ಎಂದು ವಕೀಲರು ತಮ್ಮ ದೂರಿನಲ್ಲಿ ತಿಳಿಸಿದ್ದರು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.