ಶುಕ್ರವಾರ, ಮಾರ್ಚ್ 5, 2021
30 °C
e–ಪುಸ್ತಕ

ಪೈಗಂಬರ ಮಹಮ್ಮದನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೈಗಂಬರ ಮಹಮ್ಮದನು

ಕನ್ನಡದಲ್ಲಿ ಕಥೇತರವಾದ ಗ್ರಂಥಗಳನ್ನು ರಚಿಸುವುದಕ್ಕೆ ದೊಡ್ಡ ಪರಂಪರೆಯೇ ಇದೆ. ಕಳೆದ ಶತಮಾನದ ಆರಂಭದ ದಶಕಗಳಿಂದಲೇ ಇದು ಆರಂಭವಾಗಿತ್ತು.ಹೊಸ ವಿಚಾರಗಳನ್ನು ಕನ್ನಡದಲ್ಲಿ ಒದಗಿಸುವುದಕ್ಕಾಗಿ ನಿರ್ದಿಷ್ಟ ವಿಷಯಗಳನ್ನು ಅಧ್ಯಯನ ಮಾಡಿ ಗ್ರಂಥ ರಚನೆ ಮಾಡಿದ ಮಹಾನುಭಾವರು ಅನೇಕರಿದ್ದರು. ಬೆಳ್ಳಾವೆ ವೆಂಕಟನಾರಣಪ್ಪನವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ‘ವಿಜ್ಞಾನ’ ಮಾಸಪತ್ರಿಕೆ  ಇದಕ್ಕೆ ಒಂದು ಉದಾಹರಣೆ ಮಾತ್ರ.ವೆಂಕಟನಾರಣಪ್ಪನವರು ತಮ್ಮ ಕಾಲಕ್ಕಿಂತ ಬಹಳ ಮುಂದೆ ಸಾಗಿದ್ದಾರೆಂಬುದಕ್ಕೆ ಸಾಕ್ಷಿಯಾಗುವಂತೆ 1930ರಲ್ಲಿ ಪ್ರವಾದಿ ಮುಹಮ್ಮದರ ಬಗ್ಗೆ ರಚನೆಯಾದ ಗ್ರಂಥವೇ ಸಾಕ್ಷಿ. ಇದರ ಕರ್ತೃ ಸಿ.ಕೆ. ವೆಂಕಟರಾಮಯ್ಯನವರು.ಈ ಪುಸ್ತಕವನ್ನು ಬರೆಯುವುದಕ್ಕೆ ಪ್ರೇರಣೆಯಾದವರು ವೆಂಕಟನಾರಣಪ್ಪನವರು. ಈ ಕೃತಿಯ ರಚನೆಯ ಉದ್ದೇಶವನ್ನು ವೆಂಕಟರಾಮಯ್ಯನವರು ಪ್ರಸ್ತಾವನೆಯಲ್ಲಿಯೇ ವಿವರಿಸಿದ್ದಾರೆ.ಹಿಂದೂಗಳು ಮತ್ತು ಮುಸ್ಲಿಮರ ಮಧ್ಯೆ ಸೌಹಾರ್ದವಿಲ್ಲದಿರುವುದರ ಕುರಿತು ಹೇಳುವ ಲೇಖಕರು ಇದಕ್ಕೆ ಕಾರಣವಾಗಿ ‘ಮಹಮ್ಮದೀಯರ ಮತ ಧರ್ಮಗಳ ಸಾರವನ್ನು ಹಿಂದೂಗಳೂ, ಸನಾತನ ಧರ್ಮದ ಸಾರವನ್ನು ಮಹಮ್ಮದೀಯರೂ ಅರಿತುಕೊಳ್ಳದೇ ಇರುವುದು ಇದಕ್ಕೆ ಮುಖ್ಯ ಕಾರಣವೆನ್ನಬಹುದು.

ಈ ನ್ಯೂನತೆಯನ್ನು ಪರಿಹರಿಸಿ, ಹಿಂದೂಗಳೂ ಮಹಮ್ಮದೀಯರು ಸೌಹಾರ್ದಭಾವದಿಂದಿರುವುದಕ್ಕೆ ಸಾಧಕವಾಗುವಂತೆ ಮಾಡಬೇಕಾದುದು ದೇಶ ವಾತ್ಸಲ್ಯವಿರುವವರೆಲ್ಲರ ಅವಶ್ಯ ಕರ್ತವ್ಯವಾಗಿದೆ’ ಎಂದು ಅಭಿಪ್ರಾಯಪಡುತ್ತಾರೆ.ಈ ಮಾತುಗಳು ಬಹುಶಃ ಇಂದಿಗೂ ನಿಜವೇ. ಆದರೆ ವೆಂಕಟರಾಮಯ್ಯನವರು ಮಾಡಿದಂಥ ಪ್ರಯತ್ನಗಳು ಈಗ ಕಡಿಮೆ, ಅಷ್ಟೇ ವ್ಯತ್ಯಾಸ. ಪ್ರವಾದಿ ಮುಹಮ್ಮದರ ಕುರಿತ ಆಳವಾದ ಅಧ್ಯಯನದಿಂದ ರೂಪುಗೊಂಡಿರುವ ‘ಪೈಗಂಬರ ಮಹಮ್ಮದನು’ ಎಂಬ ಪುಸ್ತಕ ಕನ್ನಡದಲ್ಲಿರುವ ಇಸ್ಲಾಮಿ ಸಾಹಿತ್ಯದ ಇತಿಹಾಸದಲ್ಲಿ ಒಂದು ಮುಖ್ಯ ಸ್ಥಾನವನ್ನು ಪಡೆಯುವ ಪುಸ್ತಕ.1930ರಲ್ಲಿ ಸತ್ಯಶೋಧನಾ ಪುಸ್ತಕ ಭಂಡಾರ ಪ್ರಕಟಿಸಿರುವ ಈ ಪುಸ್ತಕಕ್ಕೆ ಅಂದು ಒಂದು ರೂಪಾಯಿಗಳ ಬೆಲೆಯನ್ನಿಡಲಾಗಿತ್ತು. ಈಗ ಈ ಪುಸ್ತಕ ಆರ್ಕೈವ್ ತಾಣದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಲಭ್ಯವಿದೆ.

ಆಸಕ್ತರು ಇಲ್ಲಿರುವ ಕೊಂಡಿಯನ್ನು ಬಳಸಿಕೊಳ್ಳಬಹುದು: https://goo.gl/LeCaQB

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.