ಹಾಂಗ್ಝೌ: ಏಷ್ಯನ್ ಕ್ರೀಡಾಕೂಟದ ಟೇಬಲ್ ಟೆನಿಸ್ನಲ್ಲಿ ಭಾರತದ ಸುತೀರ್ಥಾ ಮುಖರ್ಜಿ ಮತ್ತು ಐಹಿಕಾ ಮುಖರ್ಜಿ ಅವರ ಅಮೋಘ ಓಟಕ್ಕೆ ಕಂಚಿನ ಪದಕದೊಂದಿಗೆ ತೆರೆಬಿತ್ತು.
ಸೋಮವಾರ ನಡೆದ ಮಹಿಳೆಯರ ಡಬಲ್ಸ್ ವಿಭಾಗದ ಸೆಮಿಫೈನಲ್ನಲ್ಲಿ ಭಾರತದ ಜೋಡಿ 3–4 ರಿಂದ ಉತ್ತರ ಕೊರಿಯಾದ ಸುಯಾಂಗ್ ಚಾ– ಸುಗಿಯಾಂಗ್ ಪಾಕ್ ಎದುರು ಸೋತಿತು. ಆದರೂ ಈ ವಿಭಾಗದಲ್ಲಿ ಇದೇ ಮೊದಲ ಬಾರಿ ಕಂಚು ಗೆದ್ದು ಐತಿಹಾಸಿಕ ಸಾಧನೆ ಮಾಡಿತು.
ಸುತೀರ್ಥಾಮತ್ತು ಐಹಿಕಾ ಅವರು ಕ್ವಾರ್ಟರ್ಫೈನಲ್ನಲ್ಲಿ ಚೀನಾದ ವಿಶ್ವಚಾಂಪಿಯನ್ ಜೋಡಿ ಮೆಂಗ್ ಚೆನ್ ಮತ್ತು ಯಿದಿ ವಾಂಗ್ ಅವರಿಗೆ ಆಘಾತ ನೀಡಿತ್ತು.
ಸೆಮಿಫೈನಲ್ನಲ್ಲಿ ದಿಟ್ಟವಾಗಿ ಹೋರಾಡಿದರೂ 11-7, 8-11, 11-7, 8-11, 9-11, 11-5, 2-1 ರಿಂದ ಪರಾಭವಗೊಂಡರು. ಇದರೊಂದಿಗೆ ಏಷ್ಯನ್ ಗೇಮ್ಸ್ನ ಟಿಟಿಯಲ್ಲಿ ಭಾರತದ ಸವಾಲಿಗೆ ತೆರೆಬಿತ್ತು.
2018ರ ಕೂಟದಲ್ಲಿ ಪುರುಷರ ಮತ್ತು ಮಹಿಳೆಯರ ತಂಡ ವಿಭಾಗಗಳಲ್ಲಿ ಭಾರತ ಕಂಚು ಜಯಿಸಿತ್ತು. ಈ ಬಾರಿ ಮಹಿಳೆಯರ ಡಬಲ್ಸ್ನಲ್ಲಿ ಅಂತಹದೇ ಸಾಧನೆ ಮಾಡಿದೆ.
‘ಎದುರಾಳಿಗಳು ತೋರಿದಂತಹ ತಾಳ್ಮೆಯನ್ನು ತೋರಲು ನಾವು ವಿಫಲರಾದೆವು. ಕೊನೆಯ ಗೇಮ್ನಲ್ಲಿ ಅಲ್ಪ ಒತ್ತಡಕ್ಕೆ ಸಿಲುಕಿದೆವು. ಕೊರಿಯಾದ ಆಟಗಾರ್ತಿಯರು ಆಕ್ರಮಣಕಾರಿಯಾಗಿ ಆಡಿ ಪಾಯಿಂಟ್ ಗಿಟ್ಟಿಸಿಕೊಂಡರು’ ಎಂದು ಸುತೀರ್ಥಾ ಪ್ರತಿಕ್ರಿಯಿಸಿದರು.
ಏಳನೇ ಹಾಗೂ ನಿರ್ಣಾಯಕ ಗೇಮ್ನ ಆರಂಭದಲ್ಲೇ ಕೊರಿಯಾದ ಜೋಡಿ 6–1 ರಿಂದ ಮೇಲುಗೈ ಪಡೆಯಿತು. ಆ ಬಳಿಕ ಮರುಹೋರಾಟ ನಡೆಸಲು ಭಾರತದ ಆಟಗಾರ್ತಿಯರು ವಿಫಲರಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.