ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಯಕ್ತ ವಸ್ತು ವ್ಯಕ್ತವಾದಾಗ...

Last Updated 7 ಜೂನ್ 2011, 19:30 IST
ಅಕ್ಷರ ಗಾತ್ರ

ಗೆಲಾಕ್ಸಿಗಳ ಅಧ್ಯಯನ ನಡೆಸುವವರಿಗೆ ಎದುರಾದ ಸಮಸ್ಯೆ ಅದರ ಆವರ್ತನೆಯ ಕುರಿತಾದದ್ದು. ಸುರುಳಿಗಳು ಸುತ್ತುವ ಸೂತ್ರವನ್ನು ಅರ್ಥೈಸಲು ಬಹಳ ಕಷ್ಟಪಡಬೇಕಾಯಿತು.

ಅದು ಬುಗುರಿಯಂತೆ ತಿರುಗುತ್ತಿದೆಯೇ ಅಥವಾ ಗ್ರಹಗಳು ಸೂರ್ಯನನ್ನು ಸುತ್ತುವಂತೆ ಕೆಪ್ಲರ್ ನಿಯಮಗಳನ್ನು ಅನ್ವಯಿಸಬಹುದೇ? ಎರಡೂ ಒಪ್ಪಾಗಲಿಲ್ಲ.

ಕೊನೆಗೆ ಸುರುಳಿಗಳ ಆಚೆಯೂ ಸಾಕಷ್ಟು ದ್ರವ್ಯರಾಶಿ ಹರಡಿದೆ ಎಂಬ ತಿಳಿವಳಿಕೆ ಮೂಡಿತು. ಆದರೆ ಅದು ಕಾಣುತ್ತಿಲ್ಲವಾದ್ದರಿಂದ ಅದನ್ನು `ಅವ್ಯಕ್ತ~ ವಸ್ತು `ಡಾರ್ಕ್ ಮ್ಯೋಟರ್~ ಎಂದು ಕರೆಯಲಾಯಿತು. ಬೇರೆ ಬೇರೆ ವರ್ಗದ ಗೆಲಾಕ್ಸಿಗಳಲ್ಲಿ ಈ ಅವ್ಯಕ್ತ ವಸ್ತು ಹೇಗೆ ಹಂಚಿಕೆಯಾಗಿರಬಹುದು ಎಂಬ ಅಧ್ಯಯನ ನಡೆಯಿತು.
 
ಕುಬ್ಜ ಎಂಬ ಪುಟ್ಟ ಗೆಲಾಕ್ಸಿಗಳಲ್ಲಿ ಬಹುಶಃ ಇರಲಾರದು ಎಂಬ ಅಂಶ ಈ ಸಂದರ್ಭದಲ್ಲಿ ಬೆಳಕಿಗೆ ಬಂದಿತು.ಇತ್ತೀಚೆಗೆ ಇಂತಹ ಕುಬ್ಜ ಗೆಲಾಕ್ಸಿಯೊಂದು ಹೊಸ ವಿಷಯವನ್ನು ತೋರಿಸಿಕೊಟ್ಟಿತು. ಸೆಂಟಾರಸ್ (ಕಿನ್ನರ) ಎಂಬ ನಕ್ಷತ್ರಪುಂಜದಲ್ಲಿಯ `ಎನ್‌ಜಿಸಿ 5291~ ಎಂಬ ಕುಬ್ಜ ಗೆಲಾಕ್ಸಿಗೆ ಶಂಖ ಅಂದರೆ `ಸೀಶೆಲ್ ಗೆಲಾಕ್ಸಿ~ ಎಂಬ ಹೆಸರಿದೆ.

ಶಂಖದ ಆಕಾರದಲ್ಲಿಯೇ ಇರುವ ಪುಟ್ಟ ನೆಬ್ಯುಲಾ ಇದಕ್ಕೆ ಕಾರಣ. ಇದು ಸುಮಾರು 200 ಜ್ಯೋತಿರ್ವರ್ಷ ದೂರದಲ್ಲಿದೆ. `ವಿಎಲ್‌ಎ~ ಅಂದರೆ ವೆರಿ ಲಾರ್ಜ್ ಆರೆ ಎಂಬ ರೇಡಿಯೋ ದೂರದರ್ಶಕ ಇದರ ವಿಸ್ತತ ಚಿತ್ರವನ್ನು ಒದಗಿಸಿತು.

ಡಾಪ್ಲರ್ ಪರಿಣಾಮವನ್ನು ಬಳಸಿ ಇಡೀ ನೆಬ್ಯುಲಾ ಭಾಗದ ನಕ್ಷೆ ಬಿಡಿಸುವುದು ಸಾಧ್ಯವಾಯಿತು. ಶಂಖದ ಆಕಾರ ಒಂದು ಪುಟ್ಟ ಭಾಗ ಮಾತ್ರ. ಸುಮಾರು 360 ದಶಲಕ್ಷ ವರ್ಷಗಳ ಹಿಂದೆ ಎರಡು ಗೆಲಾಕ್ಸಿಗಳು ಸಂರ್ಘಸಿದ ಕಾರಣ ಬೃಹದಾಕಾರದ ರಚನೆಯೊಂದು ಉಂಟಾಗಿದೆ ಎಂದು ತಿಳಿಯಿತು.
 
ಘರ್ಷಣೆಯ ನಂತರ ಎರಡೂ ಗೆಲಾಕ್ಸಿಗಳ ವಸ್ತು ಬೆರೆತು ಮರುಹಂಚಿಕೆ ನಡೆದಿರಬೇಕು ಎಂದು ಊಹಿಸಬಹುದು. ಈ ಕಾರಣ ಬೇರೆ ಬೇರೆ `ಎನ್‌ಜಿಸಿ~ ಸಂಖ್ಯೆಗಳನ್ನು ಪಡೆದ ರಚನೆಗಳು ಅಲ್ಲಲ್ಲೇ ಗಂಟು ಗಂಟಾಗಿ ಕಾಣುತ್ತವೆ.
 
ಈ ಎಲ್ಲವೂ ಸೇರಿ ದೊಡ್ಡ ಸಂಕೀರ್ಣವೇ ಆಗಿದೆ. ಈ ವರ್ಗದ ಗೆಲಾಕ್ಸಿಗಳಲ್ಲಿ ಅವ್ಯಕ್ತ ವಸ್ತು ಬಹುಶಃ ಇಲ್ಲ. ಆದರೆ ಈ ಸಂಕಿರ್ಣದಲ್ಲಿ ವ್ಯಕ್ತ ವಸ್ತುವಿನ ಎರಡರಷ್ಟು ದ್ರವ್ಯರಾಶಿ ಅವ್ಯಕ್ತವಾಗಿದೆ ಎಂದು ಕಂಡಿತು.
 
ಇತರ ದೊಡ್ಡ ಗೆಲಾಕ್ಸಿಗಳಲ್ಲಿ ಇರುವ ಅವ್ಯಕ್ತ ವಸ್ತುವಿಗಿಂತ (ಇದಕ್ಕೆ ನಾನ್ - ಬೇರಿಯೋನಿಕ್ ಎಂದು ಹೆಸರು) ಇದು ಭಿನ್ನವಾಗಿದೆ. ಬಹುಶಃ ಬಹಳ ತಣ್ಣಗಿರುವ ಹೈಡ್ರೋಜನ್ ಅಣುಗಳು ಎಂಬ ಹೊಸ ಅಂಶ ಪತ್ತೆಯಾಗಿದೆ.ನಮ್ಮ ಆಕಾಶಗಂಗೆಯಲ್ಲಿ ಅವ್ಯಕ್ತ ವಸ್ತು ಕೇಂದ್ರದ ಸುತ್ತ ಗೋಳಾಕಾರದಂತೆ ಹರಡಿದೆ.

ಆದರೆ ಈ ಗೆಲಾಕ್ಸಿಯಲ್ಲಿ ಅದು ತಟ್ಟೆಯಾಕಾರದ ಬಿಲ್ಲೆಯ ಭಾಗದಲ್ಲಿಯೇ ಹರಡಿದೆ. ಇದು ಹೇಗೆ ಎಂಬುದು ಇನ್ನೊಂದು ಪ್ರಶ್ನೆ.

360 ಮಿಲಿಯನ್ ವರ್ಷಗಳ ಹಿಂದೆ ಎರಡು ಗೆಲಾಕ್ಸಿಗಳು ಘರ್ಷಿಸಿ ಮೂರು ಹೊಸ ಗೆಲಾಕ್ಸಿಗಳನ್ನು ರೂಪಿಸಿರಬಹುದು ಎಂಬ ಹೊಸ ಸಿದ್ಧಾಂತದಿಂದ ಅವ್ಯಕ್ತ ವಸ್ತುವಿನ ಕುರಿತ ವಿವಾದಕ್ಕೆ ಹೊಸ ತಿರುವು ಸಿಕ್ಕಿದೆ. ಆದರೆ ಈ ಎಲ್ಲ ಕಲಬೆರಕೆಯ ಮೂಲ ಏನು? ವಸ್ತುವಿನ ರಚನೆಯಲ್ಲಿ  ಘರ್ಷಣೆ ಅವಶ್ಯಕವೇ? ಇಂತಹ ಪ್ರಶ್ನೆಗಳನ್ನು ಇದು ಹುಟ್ಟು ಹಾಕಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT