ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ ಸಾಗಬೇಕಿರುವ ಹಾದಿ

Last Updated 22 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕಳೆದ ಮೂರು ದಶಕಗಳಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ (ಎಚ್‌ಡಿಐ) ಭಾರತ  ಉತ್ತಮ ಪ್ರಗತಿ ಸಾಧಿಸಿದೆ ಎನ್ನುತ್ತದೆ 2013ರ ಮಾನವ ಅಭಿವೃದ್ಧಿ ವರದಿ. ಆದರೆ 2013ರ ವರ್ಷದಲ್ಲಿ ಮಾತ್ರ 187 ರಾಷ್ಟ್ರಗಳ ಪೈಕಿ ಭಾರತದ ಸ್ಥಾನ ಈ ಸೂಚ್ಯಂಕದಲ್ಲಿ 136ರಲ್ಲಿದೆ. ಮಧ್ಯ ಆಫ್ರಿಕಾದ ಈಕ್ವೆಟೋರಿಯಲ್ ಗಿನಿ ಕೂಡಾ ಇದೇ ಸ್ಥಾನ ಪಡೆದುಕೊಂಡಿದೆ.

ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ (ಯುಎನ್‌ಡಿಪಿ), ಇತ್ತೀಚೆಗೆ ಬಿಡುಗಡೆ ಮಾಡಿರುವ ಈ ವರದಿಯಲ್ಲಿ ವ್ಯಕ್ತವಾಗಿರುವ ಮತ್ತೊಂದು ಅಂಶ ಎಂದರೆ ಶ್ರೀಲಂಕಾ ಕೂಡ ನಮಗಿಂತ ಅಭಿವೃದ್ಧಿಯಲ್ಲಿ ಮೇಲ್ಮೈ ಸಾಧಿಸಿದ್ದು 92ನೇ ಸ್ಥಾನ ಪಡೆದುಕೊಂಡಿದೆ. ಯುಎನ್‌ಡಿಪಿ ಯ ಈ ವರದಿಯ ಶೀರ್ಷಿಕೆ `ದಕ್ಷಿಣದ ಉತ್ಕರ್ಷ: ಬಹುತ್ವದ ವಿಶ್ವದಲ್ಲಿ ಮಾನವ ಪ್ರಗತಿ'.

ಕಳೆದ ಕೆಲವು ವರ್ಷಗಳಲ್ಲಿ ಜಾಗತಿಕ `ದಕ್ಷಿಣ' ಪ್ರವರ್ಧಮಾನಕ್ಕೆ ಬರುತ್ತಿರುವುದನ್ನು ಪ್ರಮುಖ ಬೆಳವಣಿಗೆಯಾಗಿ ಗುರುತಿಸಿರುವುದು ಈ ವರದಿಯ ಬಹು ಮುಖ್ಯ ಅಂಶ ಎನ್ನಬಹುದು. ವಾಸ್ತವವಾಗಿ 2008-09ರ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಬೆಳವಣಿಗೆ ಸ್ಥಗಿತವಾಗಿತ್ತು. ಆದರೆ ಅಭಿವೃದ್ಧಿಶೀಲ ಆರ್ಥಿಕತೆಗಳ ಬೆಳವಣಿಗೆ ಮುಂದುವರಿಯಿತು.

ಕಳೆದ ಒಂದು ದಶಕದಲ್ಲಿ ಚೀನಾ, ಭಾರತ, ಬ್ರೆಜಿಲ್ ಸೇರಿದಂತೆ ಅನೇಕ ರಾಷ್ಟ್ರಗಳು ಪ್ರಗತಿಯತ್ತ ಹೆಜ್ಜೆ ಹಾಕಿವೆ ಎಂಬುದನ್ನು  ಈ ವರದಿ ಎತ್ತಿ ಹೇಳಿದೆ. ನಿಜಕ್ಕೂ ದಕ್ಷಿಣ ರಾಷ್ಟ್ರಗಳು ಪ್ರವರ್ಧಮಾನಕ್ಕೆ ಬರುವುದೆಂಬುದೇ ಗಣನೀಯ ಬೆಳವಣಿಗೆ. ಏಕೆಂದರೆ ವಿಶ್ವದ ಜನಸಂಖ್ಯೆಯ ಬಹುತೇಕರು ಈ ರಾಷ್ಟ್ರಗಳಲ್ಲೇ ವಾಸಿಸುತ್ತಿದ್ದಾರೆ. ಇದು ಭವಿಷ್ಯದ ಪ್ರಪಂಚದಲ್ಲಿ ದೂರಗಾಮಿ ಪರಿಣಾಮಗಳನ್ನು ಬೀರುವಂತಹದ್ದು. ಈ ರಾಷ್ಟ್ರಗಳಲ್ಲಿ ವಿಭಿನ್ನ ಬಗೆಗಳ ವ್ಯವಸ್ಥೆಗಳು ಹಾಗೂ ಪರಿಸರಗಳಿವೆ. ಆದರೆ ಎದುರಿಸಬೇಕಾಗಿರುವ ಸವಾಲುಗಳು ಮಾತ್ರ ಒಂದೇ. ಪ್ರವರ್ಧಮಾನಕ್ಕೆ ಬರುತ್ತಿರುವ ವಿಶ್ವದ ಹೊಸ ವಾಸ್ತವಗಳಿಗೆ ಸ್ಪಂದಿಸುವ ನೀತಿಗಳನ್ನು ರೂಪಿಸುವುದು ಈ ರಾಷ್ಟ್ರಗಳಲ್ಲಿ ಸದ್ಯದ ತುರ್ತಾಗಿದೆ.

ಆರೋಗ್ಯ, ಶಿಕ್ಷಣ ಹಾಗೂ ಆದಾಯದ ಅಳತೆಗೋಲುಗಳಲ್ಲಿ ಮಾನವ ಅಭಿವೃದ್ಧಿಯನ್ನು ಅಳೆಯುವ ಈ ಕ್ರಮ ಸಾಮಾಜಿಕ ವಲಯದ ಸಾಧನೆಗಳಿಗೆ ಕನ್ನಡಿ ಹಿಡಿಯುತ್ತದೆ. ಲಿಂಗ ಅಸಮಾನತೆ ಸೂಚ್ಯಂಕದಲ್ಲಿ, ಅಂಕಿ ಅಂಶಗಳು ಲಭ್ಯವಿರುವ 148 ರಾಷ್ಟ್ರಗಳ ಪೈಕಿ ಭಾರತದ ಸ್ಥಾನ 132ರಲ್ಲಿದೆ ಎಂಬ ಮತ್ತೊಂದು ಅಂಶವನ್ನೂ ಭಾರತ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಕಾರ್ಮಿಕ ಮಾರುಕಟ್ಟೆ, ಪ್ರಜನನ ಆರೋಗ್ಯ ಹಾಗೂ ಸಬಲೀಕರಣದಂತಹ ಮೂರು ಮುಖ್ಯ ವಿಚಾರಗಳಲ್ಲಿ ಪುರುಷರು ಹಾಗೂ ಮಹಿಳೆಯರ ಸಾಧನೆಗಳಲ್ಲಿನ ಅಸಮಾನತೆಗಳನ್ನು ಈ ಸೂಚ್ಯಂಕ ದಾಖಲಿಸುತ್ತದೆ.

ಭಾರತದ ಸಂಸತ್ತಿನಲ್ಲಿ ಮಹಿಳಾ ಪ್ರಾತಿನಿಧ್ಯ ಕೇವಲ ಶೇ 10.9. ಹಾಗೆಯೇ ಪ್ರತಿ ಒಂದು ಲಕ್ಷ ಹೆರಿಗೆಗಳಲ್ಲಿ 200 ಮಹಿಳೆಯರು ಹೆರಿಗೆ ಸಂಬಂಧಿ ಕಾರಣಗಳಿಗಾಗಿ ಸಾಯುತ್ತಾರೆ. ಕಾರ್ಮಿಕ ಮಾರುಕಟ್ಟೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕೇವಲ ಶೇ 29ರಷ್ಟಿದೆ. ಆದರೆ ಪುರುಷರ ಪಾಲ್ಗೊಳ್ಳುವಿಕೆ ಪ್ರಮಾಣ ಶೇ 80.7. ಹೀಗಾಗಿ ಈ ವಲಯಗಳ ಸುಧಾರಣೆಗೆ ಭಾರತ ಕ್ರಮಿಸಬೇಕಿರುವ ಹಾದಿ ಇನ್ನೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT