ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೌರ್ಯದ ತಣ್ಣನೆ ಆವೃತ್ತಿ

Last Updated 27 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಹಸಿರಿನಿಂದ ಆವೃತವಾದ ಫಾರ್ಮ್‌ಹೌಸ್‌ನಲ್ಲಿ ಮಂದಸ್ಮಿತರಾಗಿ ಕುಳಿತಿದ್ದರು ಅಗ್ನಿಶ್ರೀಧರ್. ಅವರ ಕಥೆ- ಚಿತ್ರಕಥೆಯ `ಕಳ್ಳರ ಸಂತೆ~ ಚಿತ್ರ ಎರಡು ರಾಜ್ಯಪ್ರಶಸ್ತಿಗಳನ್ನು ಪಡೆದ ಸಂಭ್ರಮ ಅವರಲ್ಲಿ ಕಾಣುತ್ತಿತ್ತು. ಜೊತೆಗೆ ತಮ್ಮ ಕಾದಂಬರಿಯನ್ನು ಸಿನಿಮಾ ರೂಪಕ್ಕಿಳಿಸುವ ಬಹುದಿನಗಳ ಕನಸು ಸಾಕಾರಗೊಳ್ಳುತ್ತಿರುವ ಸಂತಸವನ್ನು ಗಡ್ಡ ಉಬ್ಬಿಸಿದ್ದ ಅವರ ನಗುವೇ ಸಾರುತ್ತಿತ್ತು.

ನೈಜ ಘಟನೆಯನ್ನು ಆಧರಿಸಿ ವಿಶಿಷ್ಟವಾಗಿ ಹೆಣೆದ ಕಾದಂಬರಿಯನ್ನು ಸಿನಿಮಾ ಆಗಿಸುತ್ತಿರುವ ಹಂಬಲ ಶ್ರೀಧರ್ ಅವರಲ್ಲಿತ್ತು. ಆದರೆ ಎರಡು ಮುಖ್ಯ ಪಾತ್ರಗಳ ನಡುವಿನ ಸಂಭಾಷಣೆಗೆ ಒತ್ತು ನೀಡುವ ಈ ಕಥೆಯನ್ನು ಸಿನಿಮಾ ಮಾಡುವುದು ಸುಲಭವಲ್ಲ ಎಂಬ ಭಯವೂ ಅವರನ್ನು ಕಾಡುತ್ತಿತ್ತು.

ರಾಜೇಂದ್ರಸಿಂಗ್ ಬಾಬು ಅವರಂತಹ ನಿರ್ದೇಶಕರು ಚಿತ್ರ ನಿರ್ದೇಶಿಸಲು ಒಲವು ತೋರಿಸಿದ್ದರೂ ಅದು ಕೈಗೂಡಿರಲಿಲ್ಲ. ಕೊನೆಗೆ ಪುಸ್ತಕವನ್ನು ಚಿತ್ರಕಥೆಯನ್ನಾಗಿಸಲು ಕೈ ಜೋಡಿಸಿದ ಸುಮನಾ ಕಿತ್ತೂರು ತಾವೇ ನಿರ್ದೇಶನ ಮಾಡುತ್ತೇನೆ ಎಂದು ಪಟ್ಟು ಹಿಡಿದರು. ಹೀಗೆ, ತಮ್ಮ ಪುಸ್ತಕ `ಎದೆಗಾರಿಕೆ~ ಅದೇ ಹೆಸರಿನಲ್ಲಿ ಚಿತ್ರರೂಪ ತಳೆಯುತ್ತಿರುವ ಬಗೆಯನ್ನು ಶ್ರೀಧರ್ ವಿವರಿಸಿದರು.

ಅಪರಾಧ ಜಗತ್ತಿನ ಸುತ್ತ ಸುತ್ತುವ ಈ ಕಥೆ ಹಿಮಕಂದರಗಳಲ್ಲಿ ಸಿಕ್ಕಿಬಿದ್ದ ಎಸ್ಕಿಮೋಗಳ ಕಥೆಯನ್ನು ನೆನಪಿಸುತ್ತದೆ. ಸಾಯುವ ಗಳಿಗೆಯ ಕಥಾನಕವಿದು. ಕೊಲೆ ಮಾಡಲಿರುವ ವೃತ್ತಿಪರ ಕೊಲೆಗಡುಕ ಮತ್ತು ಕೊಲೆಯಾಗಲಿರುವ ವ್ಯಕ್ತಿ ಇಬ್ಬರೂ ಒಟ್ಟಿಗೆ ಕುಳಿತು ಮಾತನಾಡುತ್ತ ಒಬ್ಬರೊಳಗೊಬ್ಬರು ಬೇರು ಬಿಟ್ಟುಕೊಳ್ಳುತ್ತಾ ಹೋಗುವ ಸನ್ನಿವೇಶವೇ ಚಿತ್ರದ ಕಥಾವಸ್ತು.

ನೇರವಾಗಿ ಸಾವಿಗೆ ಮುಖಾಮುಖಿಯಾಗುವ ವ್ಯಕ್ತಿ ಅದನ್ನು ಎದುರಿಸಲು ಯಾವ್ಯಾವ ತಂತ್ರಗಳನ್ನು ಪ್ರಯೋಗಿಸುತ್ತಾನೆ ಎಂಬ ಕುತೂಹಲ ಚಿತ್ರಕಥೆಯಲ್ಲಿದೆ ಎಂದರು.

ಅಂದಹಾಗೆ, ಈ ಚಿತ್ರವನ್ನು ಯಾವ ವರ್ಗಕ್ಕೆ ಸೇರಿಸುವುದು ಎಂಬ ಗೊಂದಲ ಶ್ರೀಧರ್ ಅವರನ್ನು ತೀವ್ರವಾಗಿ ಕಾಡುತ್ತಿದೆ. ಇದು ಗಿರೀಶ್ ಕಾಸರವಳ್ಳಿ ಚಿತ್ರದಂತೆ ಪರಿಪೂರ್ಣ ಕಲಾತ್ಮಕವೂ ಅಲ್ಲದ, ಯೋಗರಾಜ್ ಭಟ್ ಚಿತ್ರದಂತೆ ಸಂಪೂರ್ಣ ಕಮರ್ಷಿಯಲ್ ಕೂಡ ಅಲ್ಲದ ಚಿತ್ರ ಎಂಬ ಘೋಷಣೆಯನ್ನು ಅವರು ಮಾಡಿದರು.

ಚಿತ್ರಕಥೆ ಬರೆಯುವಾಗಲೇ ಈ ಚಿತ್ರವನ್ನು ನಾನೇ ನಿರ್ದೇಶಿಸಬೇಕೆಂಬ ಹಂಬಲವಿತ್ತು. ಪುಸ್ತಕದ ಪದಗಳಲ್ಲಿ ಕಟ್ಟಿಕೊಟ್ಟ ಸನ್ನಿವೇಶಗಳನ್ನು ದೃಶ್ಯವಾಗಿ ಮೂಡಿಸುವುದು ಸುಲಭವಲ್ಲ. ನೈಜ ಘಟನೆ ಆಧರಿಸಿರುವುದರಿಂದ ಈ ಚಿತ್ರ ಮಾಡುವುದು ತಪಸ್ಸು ಮಾಡಿದಂತೆ ಎಂದರು ಸುಮನಾ ಕಿತ್ತೂರು.

ಮೂಲ ಕಥೆಗೆ ಧಕ್ಕೆ ಬಾರದಂತೆ ಚಿತ್ರದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ತುಕಾರಾಂ ಎಂಬ ಹೊಸ ಪಾತ್ರ ಸೃಷ್ಟಿಸಲಾಗಿದೆ. ಈ ಪಾತ್ರವನ್ನು ಅಚ್ಯುತ್‌ರಾವ್ ನಿರ್ವಹಿಸಲಿದ್ದಾರೆ.

ಮುತ್ತಪ್ಪ ರೈ ಆಗಿ ಶಶಿಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ಶ್ರೀಧರ್ ಪಾತ್ರವನ್ನು ಅತುಲ್ ಕುಲಕರ್ಣಿ, ಬಚ್ಚನ್ ಪಾತ್ರವನ್ನು ಸೃಜನ್ ಲೋಕೇಶ್, ಕಾಲಿಯಾ ಪಾತ್ರವನ್ನು ಶರತ್ ಲೋಹಿತಾಶ್ವ ನಿರ್ವಹಿಸಲಿದ್ದಾರೆ.

ಕೆಲವು ವರ್ಷಗಳ ಹಿಂದೆಯೇ ಈ ಪಾತ್ರವನ್ನು ಮಾಡುವ ಆಫರ್ ನಟ ಆದಿತ್ಯ ಅವರಿಗೆ ಬಂದಿತ್ತಂತೆ. ಶ್ರೀಧರ್ ತಮ್ಮ ಪಾತ್ರ ಹೀಗೆ ಇರುತ್ತದೆ ಎಂದು ವಿವರಿಸುವಾಗಲೇ ಆದಿತ್ಯ ನರ್ವಸ್ ಆಗಿದ್ದರಂತೆ. ಇದುವರೆಗಿನ ಪಾತ್ರಗಳೆಲ್ಲಾ ಫಿಕ್ಷನಲ್ ಆಗಿದ್ದರಿಂದ ಸ್ವಾತಂತ್ರ್ಯವಿತ್ತು. ಆದರೆ ಈ ಚಿತ್ರದಲ್ಲಿ ಚೌಕಟ್ಟಿನ ಮಿತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದರು ಆದಿತ್ಯ.

`ಎದೆಗಾರಿಕೆ~ ಪುಸ್ತಕ ಓದಿ ರೋಮಾಂಚನಗೊಂಡಿದ್ದ ನಟಿ ಭಾವನಾಗೆ ನಾಯಕಿಯಾಗಿ ನಟಿಸುತ್ತಿರುವುದು ಸಾಕಷ್ಟು ಖುಷಿ ನೀಡಿದೆ. ನಾವು ನೋಡದಿರುವ ಜಗತ್ತಿನ ಭಾವನೆಗಳನ್ನು ಈ ಚಿತ್ರ ಪರಿಚಯಿಸಲಿದೆ ಎಂಬ ವಿಶ್ವಾಸ ಅವರದು.

ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿರುವ ಯಮುನಾಮೂರ್ತಿ ಮತ್ತು ಶರತ್ ಲೋಹಿತಾಶ್ವ ಅವರಿಗೂ ಕಥೆ ಸಾಕಷ್ಟು ರೋಮಾಂಚನ ಉಂಟುಮಾಡಿದೆಯಂತೆ. ಬೆಂಗಳೂರು, ಸಕಲೇಶಪುರ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT