ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಬ್ಬೂರು ಘಟಕ: ಆತಂಕದಲ್ಲಿ 14 ಹಳ್ಳಿಗಳು

Last Updated 26 ಜೂನ್ 2012, 8:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ಗಬ್ಬೂರು ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೊಳಚೆ ನೀರು ಶುದ್ಧೀಕರಣ ಘಟಕದಿಂದಾಗಿ ತಾಲ್ಲೂಕಿನ 14 ಹಳ್ಳಿಗಳ ರೈತರಿಗೆ ನಿತ್ಯದ ಅನ್ನದ ಮಾರ್ಗ ಎನಿಸಿರುವ ಕರ್ಕಿ ಹಳ್ಳ ಶಾಶ್ವತವಾಗಿ ಬತ್ತಿ ಹೋಗುವ ಭೀತಿ ಮೂಡಿದೆ.

ಉಣಕಲ್ ಭಾಗದಿಂದ ಹುಬ್ಬಳ್ಳಿಯ ಹೃದಯ ಭಾಗದ ಪ್ರಮುಖ ಪ್ರದೇಶಗಳ ಮೂಲಕ ಗಬ್ಬೂರಿನತ್ತ ಕರ್ಕಿಹಳ್ಳ ಹಾಗೂ ಸವಳ ಹಳ್ಳ ಹರಿಯುತ್ತಿವೆ. ಎರಡೂ ಹಳ್ಳಗಳಿಗೆ ನಗರದ ಕೊಳಚೆ ನೀರು ಹರಿದುಬಿಡುವುದರಿಂದ ಬಹುತೇಕ ದೊಡ್ಡ ಚರಂಡಿಗಳಾಗಿ ಮಾರ್ಪಟ್ಟಿವೆ.

ಈ ಕೊಳಚೆ ನೀರು ಬಳಸಿ ಸುತ್ತಲಿನ ಜಂಗ್ಲಿಪೇಟೆ, ಗಬ್ಬೂರು, ಹಳೇ ಹುಬ್ಬಳ್ಳಿ, ಅಯೋಧ್ಯಾ ಗ್ರಾಮ, ಅಗ್ರಹಾರ, ತಿಮ್ಮಸಾಗರ, ಬಿಡ್ನಾಳ, ಕಟ್ನೂರ, ಮಾವನೂರ, ಬುಡರಶಿಂಗಿ, ಗಿರಿಯಾಲ, ಅದರಗುಂಚಿ ಹಾಗೂ ಕೊಟಗೊಂಡಹುಣಸಿ ಗ್ರಾಮಸ್ಥರು ತಮ್ಮ ಜಮೀನುಗಳಲ್ಲಿ ಕಬ್ಬು, ಬಾಳೆ, ಪೇರಲ, ಚಿಕ್ಕು, ಮಾವು, ತೆಂಗು, ಗೋಧಿ, ಮೆಕ್ಕೆಜೋಳ ಹಾಗೂ ಕಾಯಿಪಲ್ಲೆಗಳನ್ನು ಬೆಳೆಯುತ್ತ್ದ್ದಿದಾರೆ.

ಮಳೆಗಾಲದಲ್ಲಿ ಮಳೆ ಆಶ್ರಯಿಸಿ ಬೆಳೆ ಬೆಳೆದರೂ ಬೇಸಿಗೆಯಲ್ಲಿ ಮಾತ್ರ ಈ ಗ್ರಾಮಗಳಿಗೆ ಕೊಳಚೆ ನೀರೇ ಜೀವನಾಡಿ. ಇಲ್ಲಿ ಬೆಳೆಯುವ ಹಣ್ಣು ಹಾಗೂ ಕಾಯಿಪಲ್ಲೆ ಬಹುತೇಕ ಹುಬ್ಬಳ್ಳಿಯ ಮಾರುಕಟ್ಟೆಯಲ್ಲಿ ಬಿಕರಿಯಾಗಿ ಗ್ರಾಮಸ್ಥರ ಆದಾಯ ಮೂಲವಾಗಿದೆ.

ಸಂಸ್ಕರಣಾ ಘಟಕ: ಕರ್ಕಿ ಹಾಗೂ ಸವಳ ಹಳ್ಳಗಳ ಕೊಳಚೆ ನೀರನ್ನು ಸಂಸ್ಕರಿಸಿ ಮರು ಬಳಕೆ ಮಾಡುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ವತಿಯಿಂದ ಗಬ್ಬೂರಿನಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕ (ವೇಸ್ಟ್ ವಾಟರ್ ಪ್ಲಾಂಟ್) ಆರಂಭಿಸಲಾಗುತ್ತಿದೆ. ಘಟಕದ ನಿರ್ಮಾಣ ಕಾಮಗಾರಿ ಈಗಾಗಲೇ ಭಾಗಶಃ ಪೂರ್ಣಗೊಂಡಿದೆ.

ಹೀಗೆ ಎರಡೂ ಹಳ್ಳಗಳ ನೀರು ಸಂಸ್ಕರಣೆಗೊಂಡ ನಂತರ ಉಳಿಯುವ ನೀರನ್ನು ಸವಳ ಹಳ್ಳಕ್ಕೆ ಮಾತ್ರ ಹರಿದು ಬಿಡುವ ವ್ಯವಸ್ಥೆ ಮಾಡಿರುವುದು ರೈತರ ಭೀತಿಗೆ ಕಾರಣವಾಗಿದೆ. ಇದರಿಂದ ಕರ್ಕಿ ಹಳ್ಳಕ್ಕೆ ನೀರಿನ ಮೂಲ ಇಲ್ಲದಂತಾಗಿ ನೂರಾರು ಎಕರೆ ಪೈರು ನಾಶವಾಗುವ ಆತಂಕ ರೈತರಿಗೆ ಎದುರಾಗಿದೆ.

ಈ ಭಾಗದ ಶೇ 75ರಷ್ಟು ರೈತರು ಕರ್ಕಿ ಹಳ್ಳದ ನೀರನ್ನು ಅವಲಂಬಿಸಿದ್ದಾರೆ. ಸವಳ ಹಳ್ಳ ಅವಲಂಬಿತರು ಕಡಿಮೆ ಪ್ರಮಾಣದಲ್ಲಿದ್ದಾರೆ. ಕೊಳಚೆ ನೀರು ಶುದ್ಧೀಕರಣ ಘಟಕದ ಯೋಜನೆ ರೂಪಿಸುವಾಗ ನೀರನ್ನು ಕರ್ಕಿ ಹಳ್ಳಕ್ಕೆ ಬಿಡದೆ ಸವಳ ಹಳ್ಳಕ್ಕೆ ಬಿಡುವಂತೆ ಮಾಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. `ನಮ್ಮ ಅನ್ನದ ಮೂಲವಾದ ಕರ್ಕಿಹಳ್ಳಕ್ಕೆ ಕುತ್ತು ತಂದಿರುವ ಸಂಸ್ಕರಣಾ ಘಟಕ ಬೇಕಿಲ್ಲ. ಅದರಿಂದ ನಮಗೇನೂ ಉಪಯೋಗವಿಲ್ಲ. ಈಗಲಾದರೂ ಸಂಬಂಧಿಸಿದವರು ಘಟಕದ ಯೋಜನಾ ನಕ್ಷೆ ಬದಲಾಯಿಸಿ ಎರಡೂ ಹಳ್ಳಗಳಿಗೆ ಜೀವ ನೀಡುವ ವ್ಯವಸ್ಥೆ ಮಾಡಲಿ~ ಎನ್ನುತ್ತಾರೆ ಗಬ್ಬೂರಿನ ರೈತರಾದ ಶಂಕರಪ್ಪ ಗಿರಿಯಾಲ ಹಾಗೂ ನಿಂಗಪ್ಪ ಕಳ್ಳೀಮನಿ.  ಕರ್ಕಿ ಹಳ್ಳದ ಉಳಿವಿಗಾಗಿ ಹೋರಾಟಕ್ಕೆ ಮುಂದಾಗಿರುವ 14 ಹಳ್ಳಿಗಳ ರೈತರು ಜಂಗ್ಲಿಪೇಟೆಯ ಬಸವೇಶ್ವರ ರೈತ ಸೇವಾ ಸಂಘದ ನೇತೃತ್ವದಲ್ಲಿ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.

ಶೆಟ್ಟರ್‌ಗೆ ಮನವಿ...
ಕೊಳಚೆ ನೀರು ಸಂಸ್ಕರಣಾ ಘಟಕದಲ್ಲಿ ಉಳಿದ ನೀರನ್ನು ಕರ್ಕಿ ಹಳ್ಳಕ್ಕೆ ಹರಿಸುವಂತೆ ಒತ್ತಾಯಿಸಿ ಜಂಗ್ಲಿಪೇಟೆಯ ಬಸವೇಶ್ವರ ರೈತ ಸೇವಾ ಸಂಘದ ಅಧ್ಯಕ್ಷ ಶಿವಾನಂದ ಬಸಪ್ಪ ಹೊಸೂರು ನೇತೃತ್ವದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ರೈತರು ಮನವಿ ಸಲ್ಲಿಸಿದರು.   ಈಗ ಏಕಾಏಕಿ ನೀರು ನಿಲ್ಲಿಸಿದರೆ ತೊಂದರೆ ಯಾಗ ಲಿದ್ದು, ತಪ್ಪಿಸುವಂತೆ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT