ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹಮಂಡಳಿ ವಿರುದ್ಧ ಗದ್ದೆಗಿಳಿದು ರೈತರ ಪ್ರತಿಭಟನೆ

Last Updated 13 ಅಕ್ಟೋಬರ್ 2011, 9:00 IST
ಅಕ್ಷರ ಗಾತ್ರ

ಭಟ್ಕಳ: ತಾಲ್ಲೂಕಿನ ಮುರ್ಡೇಶ್ವರ ಹೋಬಳಿ, ಬೈಲೂರು, ಬಸ್ತಿಮಕ್ಕಿ ಗ್ರಾಮಗಳಲ್ಲಿ ವಸತಿ ಯೋಜನೆಗಾಗಿ ಕರ್ನಾಟಕ ಗೃಹ ಮಂಡಳಿಯು ಭೂ ಸ್ವಾಧೀನಕ್ಕೆ ಮುಂದಾಗಿರುವುದನ್ನು ವಿರೋಧಿಸಿ ರೈತರು ಗದ್ದೆಗಿಳಿದು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.

ಈ ಮೇಲಿನ ಮೂರು ಗ್ರಾಮಗಳಲ್ಲಿ 83 ವಿವಿಧ ಸರ್ವೆ ನಂಬರ್‌ಗಳ ಒಟ್ಟು 60 ಎಕರೆಗೂ ಹೆಚ್ಚು ಜಮೀನನ್ನು ಗೃಹಮಂಡಳಿಯು ಸ್ವಾಧೀನ ಪ್ರಕ್ರಿಯೆಗೆ ಮುಂದಾಗಿದೆ. ಈ ಭೂಮಿಗಳು ರೈತರ ಕುಟುಂಬಗಳಿಗೆ ಅನ್ನ ನೀಡುವ ಫಲವತ್ತಾದ ಭೂಮಿಗಳಾಗಿದೆ. ಇಂಥಹ ಭೂಮಿಯನ್ನು ಗೃಹಮಂಡಳಿಯು ಬಲವಂತವಾಗಿ ವಶಪಡಿಸಿಕೊಳ್ಳಲು ಮುಂದಾಗಿದೆ ಎಂದು ಆರೋಪಿಸಿದ ಪ್ರತಿಭಟನಾ ನಿರತ ರೈತರು ಯಾವುದೇ ಕಾರಣಕ್ಕೂ ಭೂಮಿಯನ್ನು ಬಿಟ್ಟು ಕೊಡುವುದಿಲ್ಲ ಎಂದರು.

ಬೈಲೂರಿನ ಬಸ್ತಿಮಕ್ಕಿ ಮಜಿರೆಯು ಸಮುದ್ರದಂಚಿನಲ್ಲಿ ಇರುವುದರಿಂದ ಸಿ.ಆರ್.ಝೆಡ್ ವ್ಯಾಪ್ತಿಗೆ ಬರುತ್ತದೆ. ಇದರಿಂದ ಇಲ್ಲಿನ ನಿವಾಸಿಗಳಿಗೆ ತೆರವಿನ ಭಯ ಕಾಡುತ್ತಿದೆ. ಈಗಾಗಲೆ ಸಾಕಷ್ಟು ಭೂಮಿಯನ್ನು ರೈತರು ರಾಷ್ಟ್ರೀಯ ಹೆದ್ದಾರಿ, ಕೊಂಕಣ ರೈಲ್ಚೆ ಸೇರಿದಂತೆ ಹಲವು ಯೋಜನೆಗಳ ಹೆಸರಿನಲ್ಲಿ ಭೂಮಿಯನ್ನು ಕಳೆದುಕೊಂಡಿದ್ದಾರೆ ಎಂದು ಅವರು ಹೇಳಿದರು.

ಈಗ ಗೃಹ ಮಂಡಳಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಕೃಷಿಭೂಮಿಯನ್ನು 300ಕ್ಕೂ ಹೆಚ್ಚು ಕುಟುಂಬಗಳು ಅವಲಂಬಿಸಿದೆ ಎಂದು ಅವರು ಹೇಳಿದರು.

ಭೂ ಸ್ವಾಧೀನದಿಂದ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡ ರೈತರು, ಭೂ ಸ್ವಾಧೀನದ ಬಗ್ಗೆ ಜನಪ್ರತಿನಿಧಿಗಳ, ಹಿರಿಯ ಅಧಿಕಾರಿಗಳ, ಸರ್ಕಾರದ ಗಮನ ಸೆಳೆಯಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಒಂದು ವೇಳೆ ರೈತರ ಹಿತಾಸಕ್ತಿಯನ್ನು ಕಡೆಗಣಿಸಿ ಗೃಹಮಂಡಳಿ ಬಲವಂತವಾಗಿ ಭೂ ಸ್ವಾಧೀನಕ್ಕೆ ಮುಂದಾದರೆ ಉಗ್ರ ಹೋರಾಟವನ್ನು ನಡೆಸುವುದಾಗಿ ಪ್ರತಿಭಟನಾ ನಿರತ ರೈತರು ಎಚ್ಚರಿಸಿದರು.

ಬೈಲೂರು ಗ್ರಾ.ಪಂ.ಅಧ್ಯಕ್ಷ ಮೋಹನ ನಾಯ್ಕ, ಉಪಾಧ್ಯಕ್ಷ ಕೃಷ್ಣ ನಾಯ್ಕ,ಮಹಾಬಲೇಶ್ವರ ಹೆಗಡೆ, ಮಂಜಪ್ಪ ದೇವಾಡಿಗ, ಮಾದೇವ ದೇವಾಡಿಗ, ಶಿವಾನಂದ ದೈಮನೆ, ಈಶ್ವರ ದೊಡ್ಮನೆ, ಸತೀಶ ಶೇಟ್,ಮಾದೇವ ನಾಯ್ಕ, ಗಣಪತಿ ನಾಯ್ಕ, ಜಯಂತ ಮೊಗೇರ, ರೋಹಿದಾಸ ಮೊಗೇರ್, ಮಹಿಳೆಯರೂ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಭೀಮಪ್ಪ ಕಡಾಡಿಗೆ `ಕನ್ನಡ ಜ್ಯೋತಿ~ ಪ್ರಶಸ್ತಿ

ಕಲ್ಲೋಳಿ (ಮೂಡಲಗಿ): ಇಲ್ಲಿಯ ಭೀಮಪ್ಪ ಸತ್ತೆಪ್ಪ ಕಡಾಡಿ ಅವರಿಗೆ ಗೋಕಾಕದ ನಮಸ್ಕಾರ ಸಾಂಸ್ಕೃತಿಕ ಕಲಾ ಸಂಸ್ಥೆಯ 2010-11ನೇ ಸಾಲಿನ `ಕನ್ನಡ ಜ್ಯೋತಿ~ ಪ್ರಶಸ್ತಿ ಸಂದಿದೆ.

ಪಾರಿಜಾತ ನಾಟಕದಲ್ಲಿ ಪಾತ್ರ ಮಾಡಿ `ಪಾರಿಜಾತ ಭೀಮಪ್ಪ~ ಎಂದು ಕರೆಸಿಕೊಂಡಿರುವ ಇವರು ಸಾಮಾಜಿಕ, ಶೈಕ್ಷಣಿಕ, ಸಹಕಾರಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಬಸವರಾಜ ಹಿರೇಮಠ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT