ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರಿನಲ್ಲಿ ವಿಜೃಂಭಣೆಯ ಶೋಭಾಯಾತ್ರೆ

Last Updated 26 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಚಿಕ್ಕಮಗಳೂರು:  ಸಂಘಪರಿವಾರದ ನೇತೃತ್ವದಲ್ಲಿ ಹಮ್ಮಿಕೊಂಡಿರುವ ದತ್ತ ಜಯಂತಿ ಪ್ರಯುಕ್ತ ದತ್ತ ಮಾಲಾಧಾರಿಗಳು ಬುಧವಾರ ನಗರದಲ್ಲಿ ವಿಜೃಂಭಣೆಯ ಶೋಭಾಯಾತ್ರೆ ನಡೆಸಿದರು.

ಕೇಸರಿ ಪಂಚೆ, ಕೇಸರಿ ಶಾಲು ಧರಿಸಿದ್ದ ದತ್ತ ಮಾಲಾಧಾರಿಗಳು ಕೈಯಲ್ಲಿ ಭಗವಧ್ವಜ ಹಿಡಿದು, ದತ್ತ ಭಜನೆ ಮಾಡುತ್ತಾ ಹೆಜ್ಜೆ ಹಾಕಿದರು. ಹಳ್ಳಿವಾದ್ಯದ ನಿನಾದಕ್ಕೆ ಯುವಕರು ಉತ್ಸಾಹದಿಂದ ನೃತ್ಯ ಮಾಡಿದರು. ಶೋಭಾಯಾತ್ರೆ ಸಾಗುತ್ತಿದ್ದಾಗ ಇಡೀ ಎಂ.ಜಿ.ರಸ್ತೆ ಸಂಪೂರ್ಣ ಕೇಸರಿಮಯವಾಗಿತ್ತು.

ಹೂವಿನ ಅಲಂಕೃತ ವಾಹನದಲ್ಲಿ ಪ್ರತಿಷ್ಠಾಪಿಸಿದ್ದ ದತ್ತ ಮೂರ್ತಿ ಮತ್ತು ಗ್ರಾಮ ದೇವತೆಗಳನ್ನು ಮೆರವಣಿಗೆ ಮಾಡಲಾಯಿತು. ನಗರದ ಪ್ರಮುಖ ರಸ್ತೆ, ವೃತ್ತಗಳು ಕೇಸರಿ ವರ್ಣದ ಸ್ವಾಗತ ಬ್ಯಾನರ್, ಕಟೌಟ್, ಬಂಟಿಂಗ್ಸ್‌ಗಳಿಂದ ಅಲಂಕೃತಗೊಂಡಿದ್ದವು. 9 ಗ್ರಾಮ ದೇವತೆಗಳ ಅಡ್ಡೆ ಮತ್ತು ಪುರಾಣ, ಇತಿಹಾಸ ಪುರುಷರ ಛದ್ಮವೇಷ ಧರಿಸಿದ ಪುಟಾಣಿಗಳ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡವು.

ಚಂಡೆ, ನಾದಸ್ವರ, ಕಹಳೆ, ಹಳ್ಳಿವಾದ್ಯ, ಸೋಮನ ಕುಣಿತ, ವೀರಗಾಸೆ, ವೀರಭದ್ರ ಕುಣಿತ, ಪೂಜಾ ಕುಣಿತ, ಕಳಸ ಬೇಡರ ಪಡೆ, ಗೊರವರ ಕುಣಿತ ಇನ್ನಿತರ  ಜಾನಪದ ಕಲಾ ತಂಡಗಳು ಮೆರವಣಿಗೆಗೆ ರಂಗೇರಿಸಿದವು. ರಸ್ತೆಯ ಇಕ್ಕೆಲಗಳಲ್ಲಿ ಎತ್ತರದ ಕಟ್ಟಡಗಳ ಮೇಲೆ ನಿಂತು ಜನತೆ ಶೋಭಾಯಾತ್ರೆ ಕಣ್ತುಂಬಿಕೊಂಡರು.

ಕಳೆದ ಬಾರಿ ಭಕ್ತರ ಸಂಖ್ಯೆ ವಿರಳವಾಗಿ ಶೋಭಾಯಾತ್ರೆ ಕಳೆಗುಂದಿತ್ತು. ದತ್ತ ಗುಹೆ ದುರಸ್ತಿಯಾಗಿ, ಪಾದುಕೆ ಪುನರ್ ಪ್ರತಿಷ್ಠಾಪನೆಯಾದ ನಂತರ ನಡೆಯುತ್ತಿರುವ ಮೊದಲ ದತ್ತ ಜಯಂತಿಗೆ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ.

ಶೋಭಾಯಾತ್ರೆ ಸಾಗುವ ಮಾರ್ಗದುದ್ದಕ್ಕೂ ಶ್ವಾನದಳದಿಂದ ತಪಾಸಣೆ ನಡೆಸಿ, ಯಾತ್ರೆ ಮುಂದೆ ಸಾಗಲು ಪೊಲೀಸರು ಅನುವು ಮಾಡಿಕೊಟ್ಟರು. ಬಸವನಹಳ್ಳಿ ರಸ್ತೆ, ಎಂ.ಜಿ.ರಸ್ತೆ, ಹನುಮಂತಪ್ಪ ವೃತ್ತ ಹಾಗೂ ಕೆ.ಎಂ.ರಸ್ತೆಯ ಕೆಲವು ಕಡೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬುಧವಾರ ಸಂತೆ ದಿನವಾಗಿದ್ದರಿಂದ ಸಾರ್ವಜನಿಕರು ಮತ್ತು ವಾಹನ ಚಾಲಕರು ಪರದಾಡಿದರು.

ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ, ಬಜರಂಗದಳ ರಾಷ್ಟ್ರೀಯ ಸಹ ಸಂಚಾಲಕ ರಾಜೇಶ್ ಪಾಂಡೆ, ಬಿಜೆಪಿ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ವಿ.ಸುನಿಲ್ ಕುಮಾರ್, ಬಜರಂಗದಳ ರಾಜ್ಯ ಸಂಚಾಲಕ ಸೂರ್ಯನಾರಾಯಣ, ಮುಖಂಡರಾದ ಶಿವಶಂಕರ್, ಯೋಗೀಶ್ ರಾಜ್ ಅರಸ್, ಪ್ರೇಮ್‌ಕಿರಣ್, ನಗರಸಭೆ ಅಧ್ಯಕ್ಷ ಸಿ.ಆರ್. ಪ್ರೇಮ್‌ಕುಮಾರ್, ಎಚ್.ಡಿ. ತಮ್ಮಯ್ಯ, ಟಿ.ರಾಜಶೇಖರ್, ಬಿ. ರಾಜಪ್ಪ, ವರಸಿದ್ದಿ ವೇಣುಗೋಪಾಲ್ ಇನ್ನಿತರರು ಪಾಲ್ಗೊಂಡಿದ್ದರು.

ಪಡಿ ಸ್ವೀಕಾರ: ಶೋಭಾಯಾತ್ರೆಗೂ ಮುನ್ನ ಸಚಿವ ಸಿ.ಟಿ.ರವಿ ಮತ್ತು ಸಂಘಪರಿವಾರದ ಮಾಲಾಧಾರಿಗಳು ಸಂಪ್ರದಾಯದಂತೆ ಐದು ಮನೆಗಳಿಗೆ ಭೇಟಿ ನೀಡಿ ಪಡಿ ಬೇಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT