ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ಯಾಂಕ್‌ನಲ್ಲಿ ಮಹಿಳೆ, ಮಕ್ಕಳ ಶವ!

ಕೊಲೆ ಆರೋಪ: ಪತಿ ಬಂಧನ
Last Updated 4 ಜನವರಿ 2014, 20:04 IST
ಅಕ್ಷರ ಗಾತ್ರ

ಬೆಂಗಳೂರು:  ಹನುಮಂತನಗರ ಸಮೀ­ಪದ ಶ್ರೀನಿವಾಸನಗರ­ದಲ್ಲಿ ಶುಕ್ರವಾರ ರಾತ್ರಿ ಗೃಹಿಣಿ ಮತ್ತು ಅವರ ಒಂದೂವರೆ ವರ್ಷದ ಅವಳಿ ಮಕ್ಕಳು ಅನುಮಾನಾ­ಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.

ಶ್ರೀನಿವಾಸನಗರದ ಆಶಾ (33), ಅವಳಿ ಮಕ್ಕಳಾದ ಅಹನಾ ಮತ್ತು ಆರಾಧ್ಯ ಸಾವನ್ನಪ್ಪಿದವರು. ‘ಪತ್ನಿ, ಮಕ್ಕಳನ್ನು ಟ್ಯಾಂಕ್‌ನ  (ಸಿಂಟೆಕ್ಸ್‌) ನೀರಿನಲ್ಲಿ ಮುಳುಗಿಸಿ ಬಳಿಕ ಆಕೆಯೂ ಟ್ಯಾಂಕ್‌ಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಆಶಾರ ಪತಿ ಹರೀಶ್ ಪೊಲೀಸ್‌ ವಿಚಾರಣೆಯಲ್ಲಿ ತಿಳಿಸಿದ್ದಾನೆ. ಆದರೆ, ‘ಮಗಳಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಅಳಿಯ, ಪತ್ನಿ–ಮಕ್ಕಳನ್ನು ಕೊಲೆ ಮಾಡಿ, ನಂತರ ಶವಗಳನ್ನು ಟ್ಯಾಂಕ್‌ಗೆ ಹಾಕಿದ್ದಾನೆ’ ಎಂದು ಆಶಾ ಪೋಷಕರು ಆರೋಪಿಸಿದ್ದಾರೆ.

ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರಾದ ಆಶಾ, ಮೂರು ವರ್ಷಗಳ ಹಿಂದೆ ನಗರಕ್ಕೆ ಬಂದು ಖಾಸಗಿ ಕಂಪೆನಿ­ಯೊಂದರಲ್ಲಿ ಪರಿಚಾರಕಿಯಾಗಿ ಕೆಲಸ ಮಾಡುತ್ತಿದ್ದರು. ಮನೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಕೆಲಸ ಮಾಡುತ್ತಿದ್ದ ಹರೀಶ್‌ ಜತೆ 2011ರಲ್ಲಿ ಅವರ ವಿವಾಹವಾಗಿತ್ತು.

‘ಮದುವೆ ಸಂದರ್ಭದಲ್ಲಿ ಹರೀಶ್‌ಗೆ 2.5 ಲಕ್ಷ ನಗದು ಹಾಗೂ 170 ಗ್ರಾಂ ಚಿನ್ನಾಭರಣಗಳನ್ನು ವರದಕ್ಷಿಣೆಯಾಗಿ ಕೊಟ್ಟಿದ್ದೆವು. ಶ್ರೀನಿವಾಸನಗರದ ನಾಲ್ಕು ಅಂತಸ್ತಿನ ಮನೆಯಲ್ಲಿ ಕೊನೆಯ ಮಹಡಿಯಲ್ಲಿ ವಾಸವಾಗಿದ್ದ ದಂಪತಿ, ಆರಂಭದಲ್ಲಿ ಅನ್ಯೋನ್ಯವಾಗಿಯೇ ಇದ್ದರು. ಆದರೆ, ಆಶಾ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ನಂತರ ಪತಿ ಹಾಗೂ ಅತ್ತೆ ನೆಲ್ಲೂರಮ್ಮ ಅವರಿಂದ ಸಮಸ್ಯೆ ಆರಂಭವಾಯಿತು’ ಎಂದು ಲಕ್ಷ್ಮೀ ಹೇಳಿದರು.

‘ಆಶಾ ಪ್ರತಿದಿನ ಕರೆ ಮಾಡಿ ‘ನನ್ನ ದುರಾದೃಷ್ಟಕ್ಕೆ ಅವಳಿ ಹೆಣ್ಣು ಮಕ್ಕಳು ಹುಟ್ಟಿವೆ. ಮಕ್ಕಳನ್ನು ಕಂಡರೆ ಮನೆಯಲ್ಲಿ ಯಾರಿಗೂ ಆಗುವುದಿಲ್ಲ. ಅತ್ತೆ ಮತ್ತು ಪತಿಯಿಂದ ಕಿರುಕುಳ ಹೆಚ್ಚಾಗಿದೆ’ ಎಂದು ಅಳಲು ತೋಡಿಕೊಳ್ಳುತ್ತಿದ್ದಳು. ಹೊಂದಿಕೊಂಡು ಹೋಗುವಂತೆ ನಾವು ಆಕೆಯನ್ನು ಸಮಾಧಾನಪಡಿಸಿದ್ದೆವು. ಈ ನಡುವೆ ಜೂಜು ಚಟಕ್ಕೆ ಬಿದ್ದ ಹರೀಶ್‌, ಐಪಿಎಲ್‌ ಕ್ರಿಕೆಟ್‌ಗೆ ಬೆಟ್ಟಿಂಗ್‌ ಕಟ್ಟಿ ರೂ. 7 ಲಕ್ಷ ಕಳೆದುಕೊಂಡಿದ್ದ. ಹೀಗಾಗಿ ಪತ್ನಿಗೆ ತವರು ಮನೆಯಿಂದ ಹಣ ತರುವಂತೆ ಪೀಡಿಸಲು ಆರಂಭಿಸಿದ್ದ’ ಎಂದು ಅವರು ಆರೋಪಿಸಿದರು.

‘ಶುಕ್ರವಾರ ರಾತ್ರಿ 10.48ಕ್ಕೆ ಕರೆ ಮಾಡಿದ ಹರೀಶ್, ‘ಪತ್ನಿ ಜಗಳವಾಡಿ ಊಟ ಮಾಡದೆ ಮಲಗಿದ್ದಾಳೆ’ ಎಂದು ದೂರಿದ. ಫೋನ್‌ ಕೊಡುವಂತೆ ಹೇಳಿದಾಗ ‘ಆಕೆ ಅಳುತ್ತಾ ಮಲಗಿದ್ದು, ಮಾತನಾಡಲು ನಿರಾಕರಿಸುತ್ತಿದ್ದಾಳೆ’ ಎಂದ. ಕೂಡಲೇ ಆಕೆಯ ಮೊಬೈಲ್‌ಗೆ ಕರೆ ಮಾಡಿದರೆ ಯಾರೂ ಕರೆ ಸ್ವೀಕರಿಸಲಿಲ್ಲ. ಆದರೆ, 12.15ಕ್ಕೆ ಪುನಃ ಕರೆ ಮಾಡಿದ ಹರೀಶ್‌, ‘ಪತ್ನಿ, ಮಕ್ಕಳನ್ನು ಟ್ಯಾಂಕ್‌ಗೆ ಹಾಕಿ ನಂತರ ತಾನೂ ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಹೇಳಿದ. ವಿಷಯ ತಿಳಿದು ಮನೆಗೆ ಹೋಗುವ ವೇಳೆಗಾಗಲೇ ಆತ ಶವಗಳನ್ನು ತೆಗೆದುಕೊಂಡು ಬಂದು ಕೋಣೆಯ ಹಾಸಿಗೆ ಮೇಲೆ ಹಾಕಿದ್ದ’ ಎಂದು ಮೃತರ ಅಕ್ಕ ಲಕ್ಷ್ಮೀ ವಿವರಿಸಿದರು.

‘ತಂಗಿಯ ಮುಖ, ಕುತ್ತಿಗೆ ಹಾಗೂ ಬಲಕಿವಿ ಮೇಲೆ ಗಾಯದ ಗುರುತುಗಳಿದ್ದವು. ಆತನೇ ಕೊಲೆ ಮಾಡಿ ಪತ್ನಿ ಮಕ್ಕಳನ್ನು ನೀರಿನ ಟ್ಯಾಂಕ್‌ಗೆ ಹಾಕಿದ್ದಾನೆ. ಪೊಲೀಸರು ಕೂಡಲೇ ಆತನನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು’ ಎಂದು ಒತ್ತಾಯಿಸಿದರು.

ನೀರಿನ ಟ್ಯಾಂಕ್‌ನಲ್ಲಿ ಆತ್ಮಹತ್ಯೆ ವಿರಳ:
ನೀರಿನ ತೊಟ್ಟಿಯಲ್ಲಿ ಆಕಸ್ಮಿಕವಾಗಿ ಬೀಳುವ ಅಥವಾ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ಸಾಕಷ್ಟಿವೆ. ಆದರೆ, ಮಹಡಿಯಲ್ಲಿರುವ ನೀರಿನ ಟ್ಯಾಂಕ್‌ನಲ್ಲಿ (ಸಿಂಟೆಕ್ಸ್‌) ಬಿದ್ದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ತೀರಾ ವಿರಳ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಆಶಾ ಅವರ ಮನೆಯ ಟ್ಯಾಂಕ್‌ 2,500 ಲೀಟರ್‌ ನೀರು ಹಿಡಿಯುವ ಸಾಮರ್ಥ್ಯ ಹೊಂದಿದ್ದು, ಆರು ಅಡಿಯಷ್ಟು ಎತ್ತರವಿದೆ. ಅದರ ಬಳಿ ಹೋಗಲು ಮಹಡಿಯಿಂದ ನಾಲ್ಕೂವರೆ ಅಡಿ ಎತ್ತರದ ಕಬ್ಬಿಣದ ಮೆಟ್ಟಿಲು ಹತ್ತಬೇಕು. ಅಲ್ಲದೇ ಆ ಟ್ಯಾಂಕ್‌ನ ಸುತ್ತಲೂ ಕಬ್ಬಿಣದ ಸರಳುಗಳನ್ನು (ಗ್ರಿಲ್‌) ಹಾಕಲಾಗಿದೆ. ಹೀಗಾಗಿ ಆಶಾ ಇಬ್ಬರು ಮಕ್ಕಳನ್ನು ಎತ್ತಿಕೊಂಡು ಮೇಲೆ ಹತ್ತಿರುವ ಸಾಧ್ಯತೆ ತೀರಾ ಕಡಿಮೆ. ಒಂದು ವೇಳೆ ಅವರು ಟ್ಯಾಂಕ್‌ನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರೂ, ಹರೀಶ್‌ ಒಬ್ಬರಿಂದ ಶವಗಳನ್ನು ಹೊರತಗೆಯಲು ಸಾಧ್ಯವೇ ಇಲ್ಲ’ ಎಂದು ತನಿಖಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

‘ವಿಷಯ ತಿಳಿದು ರಾತ್ರಿ ಮನೆಗೆ ತೆರಳಿದಾಗ ಟ್ಯಾಂಕ್‌ನಲ್ಲಿ ಮೂರು ಅಡಿಯಷ್ಟು ಮಾತ್ರ ನೀರಿತ್ತು ಎಂದು ಮೃತರ ಕುಟುಂಬ ಸದಸ್ಯರು ಹೇಳಿದ್ದಾರೆ. ಆಶಾ ಅಷ್ಟು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರಲು ಸಾಧ್ಯವಿಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಸ್ಥಳ ಪರಿಶೀಲಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಡಲಾಗಿದ್ದು, ವರದಿ ಬಂದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ’ ಎಂದು ಅವರು ಮಾಹಿತಿ ನೀಡಿದರು.

ಆರೋಪಿ ಬಂಧನ
‘ಪೊಲೀಸರು ಹಾಗೂ ಕುಟುಂಬ ಸದಸ್ಯರು ಸ್ಥಳಕ್ಕೆ ಹೋಗುವ ವೇಳೆಗಾಗಲೇ ಹರೀಶ್‌, ಶವಗಳನ್ನು ಟ್ಯಾಂಕ್‌ನಿಂದ ಹೊರಗೆ ತೆಗೆದಿದ್ದ. ಘಟನೆ ಸಂಬಂಧ ಆಶಾ ಅವರ ಸಹೋದರ ದೂರು ಕೊಟ್ಟಿದ್ದು ವರದಕ್ಷಿಣೆ ಕಿರುಕುಳದಿಂದ ಸಂಭವಿಸಿದ ಸಾವು (ಐಪಿಸಿ 498ಎ) ಹಾಗೂ ಕೊಲೆ (ಐಪಿಸಿ 302) ಪ್ರಕರಣ ದಾಖಲಿಸಿಕೊಂಡು ಹರೀಶ್‌ನನ್ನು ಬಂಧಿಸಲಾಗಿದೆ. ಆಶಾ ಹಾಗೂ ಮಕ್ಕಳು ಸಾವನ್ನಪ್ಪಿದ ಪರಿ ಹಾಗೂ ಶವ ಪತ್ತೆಯಾದ ರೀತಿಯನ್ನು ಗಮನಿಸಿದರೆ ಕೊಲೆಯ ಶಂಕೆ ವ್ಯಕ್ತ­ವಾಗಿದೆ. ಆರೋಪಿಯನ್ನು ವಿಚಾ­ರಣೆ ನಡೆಸಿದ ಬಳಿಕ ಸತ್ಯಾಂಶ ಗೊತ್ತಾ­ಗಲಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಎಚ್‌.ಎಸ್‌.ರೇವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT