ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಂಗೆ ಜ್ವರಕ್ಕೆ ಇಬ್ಬರು ಬಲಿ?

Last Updated 21 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮತ್ತೆ ಡೆಂಗೆ ಜ್ವರದ ಭೀತಿ ಕಾಣಿಸಿಕೊಂಡಿದ್ದು, ನಗರದ ಉತ್ತರಹಳ್ಳಿಯ ಗೌಡನಪಾಳ್ಯ ನಿವಾಸಿ ಹಂಸಕುಮಾರಿ ಮತ್ತು ವಿಜಿನಾಪುರದ ವಿಷ್ಣು ಎಂಬುವವರು ಡೆಂಗೆ ಜ್ವರದಿಂದ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.

ಹಂಸಕುಮಾರಿ (22) ಸೇಂಟ್‌ಜಾನ್ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ. ಆದರೆ, ಬಿಬಿಎಂಪಿಯು ಈ ಸಾವು ಅಂಗಾಂಗ ವೈಫಲ್ಯದಿಂದ ಸಂಭವಿಸಿದೆ ಎಂದು ಧೃಢಪಡಿಸಿದೆ.  ಇನ್ನೂ ವಿಷ್ಣು (16) ಇಂದಿರಾನಗರದಲ್ಲಿರುವ ಚಿನ್ಮಯಿ ಮಿಷನ್ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ. 

  ಗಾರ್ಮೆಂಟ್ಸ್ ಕಾರ್ಖಾನೆಯೊಂದರಲ್ಲಿ ಉದ್ಯೋಗಿಯಾಗಿದ್ದ ಹಂಸಕುಮಾರಿ ಅವರು ಮೂರು ವಾರಗಳಿಂದ ವಿಪರೀತ ಜ್ವರದಿಂದ ಬಳಲುತ್ತಿದ್ದರು. ಮನೆಯ ಸಮೀಪವೊಂದರ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದಿದ್ದರು. ಆನಂತರ ಜ್ವರ ತೀವ್ರವಾಗಿದ್ದರಿಂದ, ಉತ್ತರಹಳ್ಳಿಯ ಮುಖ್ಯರಸ್ತೆಯಲ್ಲಿರುವ ಸಿ.ಎಸ್.ಆಸ್ಪತ್ರೆಗೆ ದಾಖಲಾಗಿದ್ದರು.

ಆ ಸಂದರ್ಭದಲ್ಲಿ ಡೆಂಗೆ ನೆಗೆಟೀವ್ ಎಂದು ವೈದ್ಯರು ವರದಿ ನೀಡಿದ್ದರು. ಆದರೆ, ಟೈಫಾಯಿಡ್, ಮೂತ್ರ ಸೋಂಕಿನಿಂದ ಬಳಲುತ್ತಿದ್ದರಿಂದ ಚಿಕಿತ್ಸೆಗೆ ಸೆಂಟ್ ಜಾನ್ಸ್ ಆಸ್ಪತ್ರೆಗೆ ಶಿಫಾರಸು ಮಾಡಲಾಗಿತ್ತು. 
 `ಡೆಂಗೆ ಜ್ವರದಿಂದ ಸಾವು ಸಂಭವಿಸಿಲ್ಲ. ಈ ಪ್ರಕರಣದ ಕುರಿತು ಸೇಂಟ್ ಜಾನ್ ಆಸ್ಪತ್ರೆಯನ್ನು ಸಂಪರ್ಕಿಸಲಾಗಿತ್ತು. ಅಂಗಾಂಗ ವೈಫಲ್ಯದಿಂದ ಸಾವು ಸಂಭವಿಸಿದೆ ಎಂಬ ಮಾಹಿತಿ ಬಂದಿದೆ. ಅಲ್ಲದೇ ಸಿ.ಎಸ್. ಆಸ್ಪತ್ರೆಯಲ್ಲೂ ಡೆಂಗೆ ನೆಗೆಟೀವ್ ಎಂದು ವರದಿಯಾಗಿತ್ತು. ಹಾಗಾಗಿ ಇದು ಡೆಂಗೆಯಲ್ಲ~ ಎಂದು ಪಾಲಿಕೆಯ ನೋಡಲ್ ಅಧಿಕಾರಿ (ಡೆಂಗೆ ಜ್ವರ) ಆನಂದ್ ತಿಳಿಸಿದರು.

 ವಿಷ್ಣು ಮೂರು ದಿನಗಳಿಂದ ಜ್ವರ, ವಾಂತಿ ಬೇಧಿ, ಹೊಟ್ಟೆ ನೋವಿನಿಂದ ಬಳಲುತ್ತಿದ್ದು ಡೆಂಗೆ ಶಾಕ್ ಸಿಂಡ್ರೋಮ್ ಮತ್ತು ಡೆಂಗೆ ಜ್ವರದಿಂದ ಬಳಲಿದ್ದರಿಂದ ಮೃತಪಟ್ಟಿದ್ದಾರೆ ಎಂದು ಚಿನ್ಮಯಿ ಮಿಷನ್ ಆಸ್ಪತ್ರೆ ವರದಿ ತಿಳಿಸಿದೆ. ಅವರು ಡೆಂಗೆ ಕಾಯಿಲೆ ದೃಢೀಕರಣಕ್ಕೆ ವಿಕ್ಟೋರಿಯಾ ಆಸ್ಪತ್ರೆಗೆ ರಕ್ತ ಮಾದರಿಯ ಕಳುಹಿಸಿರುವುದಿಲ್ಲ . ಇದರಿಂದ  ಡೆಂಗೆ ಜ್ವರದಿಂದ ಮೃತಪಟ್ಟಿರುವುದು ಸಂಶಯ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಮುಂಜಾಗ್ರತಾ ಕ್ರಮಗಳು
ನಿಂತ ನೀರಿನಲ್ಲಿ ಸೊಳ್ಳೆ ಉತ್ಪತ್ತಿಯಾಗುವುದರಿಂದ ಮನೆ ಸುತ್ತಲೂ ನೀರು ನಿಲ್ಲದಂತೆ ಎಚ್ಚರ ವಹಿಸಿ. ನೀರು ಶೇಖರಣಾ ತೊಟ್ಟಿಗಳ ಶುಚಿತ್ವ ಪಾಲಿಸಿ ಮತ್ತು ಭದ್ರವಾಗಿ ಮುಚ್ಚಳ ಹಾಕಿರಿ.  ಮನೆಯ ಕಿಟಕಿ, ಬಾಗಿಲುಗಳಿಗೆ ಸೊಳ್ಳೆ ಪರದೆಯನ್ನು ಅಳವಡಿಸುವುದು. ಮಲಗುವಾಗ ತಪ್ಪದೇ ಸೊಳ್ಳೆ ಪರದೆ ಬಳಸುವುದು. ಬಿಸಾಡಿದ ಮಡಿಕೆ, ಕುಡಿಕೆ, ಬಾಟಲಿಗಳು, ಪ್ಲಾಸ್ಟಿಕ್ ಡಬ್ಬಗಳಲ್ಲಿ ನೀರು ಶೇಖರಣೆಯಾಗದಂತೆ ಎಚ್ಚರವಹಿಸಿ.

ಜ್ವರದ ಲಕ್ಷಣಗಳು ಕಂಡುಬಂದಲ್ಲಿ ಸಮೀಪದ ಪಾಲಿಕೆ ಆಸ್ಪತ್ರೆಗಳಿಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯುವುದು. ಸೊಳ್ಳೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ದೂರುಗಳಿದ್ದಲ್ಲಿ ಸಾರ್ವಜನಿಕರು ಪಾಲಿಕೆಯ ನಿಯಂತ್ರಣ ಕೊಠಡಿ ಸಹಾಯವಾಣಿ ಸಂಖ್ಯೆ 22660000, 22221188 ಸಂಪರ್ಕಿಸುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT