ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿಗಾಗಿ ನಿಲ್ಲದ ಹೋರಾಟ: ಪರಮಶಿವಯ್ಯ

Last Updated 15 ಡಿಸೆಂಬರ್ 2012, 10:52 IST
ಅಕ್ಷರ ಗಾತ್ರ

ಕೋಲಾರ: ರಾಜ್ಯದ ಬಯಲು ಸೀಮೆಗೆ ಶಾಶ್ವತ ನೀರಾವರಿ ಯೋಜನೆ ರೂಪಿಸಲು ಸರ್ಕಾರ ಉತ್ಸುಕವಾಗಿದ್ದರೂ; ಯೋಜನೆ ಅನುಷ್ಠಾನವಾಗುವ ತನಕ ಹೋರಾಟ ಮುಂದುವರೆಯಬೇಕು ಎಂದು ಜಲತಜ್ಞ ಡಾ.ಜಿ.ಎಸ್.ಪರಮಶಿವಯ್ಯ ಹೇಳಿದರು.

ನಗರದಲ್ಲಿ ಜನಪರ ವೇದಿಕೆ ಶುಕ್ರವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಈಚೆಗೆ ಬೆಂಗಳೂರಿನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿ, ತಾವು ತಯಾರಿಸಿದ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ. ಯೋಜನೆ ಜಾರಿ ಸಂದರ್ಭ ಪರಿಸರ, ಅರಣ್ಯ ಇಲಾಖೆ ಕೂಡ ಸಹಕಾರ ನೀಡಬೇಕು ಎಂದರು.

ಪಶ್ಚಿಮ ಘಟ್ಟಗಳಿಂದ ಸುಮಾರು 2500 ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರಕ್ಕೆ ಹರಿದುಹೋಗುತ್ತಿದೆ. ಘಟ್ಟದ ಹಳ್ಳಕೊಳ್ಳಗಳಲ್ಲಿರುವ 1100 ಟಿಎಂಸಿ ನೀರನ್ನು ಒಂಬತ್ತು ಜಿಲ್ಲೆಗಳ 50 ತಾಲ್ಲೂಕುಗಳ ಕೆರೆಗಳಿಗೆ ಹರಿಸಬಹುದು. ಅದರ ಪೈಕಿ 614 ಟಿಎಂಸಿ ನೀರನ್ನು ಗುರುತ್ವಾಕರ್ಷಣೆ ಮೂಲಕ ಯಂತ್ರಗಳ ಸಹಾಯವಿಲ್ಲದೆ ಹರಿಸಬಹುದು. ಇದರಿಂದ 1.54 ಕೋಟಿ ಎಕರೆ ಜಮೀನು ನೀರಾವರಿ ಸೌಕರ್ಯ ಪಡೆದುಕೊಳ್ಳುತ್ತದೆ ಎಂದು ಅವರು ಹೇಳಿದರು.

ಬಯಲು ಸೀಮೆ ಸಂಪದ್ಭರಿತವಾಗಬೇಕು. ಒಂಬತ್ತು ಜಿಲ್ಲೆಗಳ ರೈತರು ಶಾಶ್ವತ ನೀರಾವರಿ ಸೌಲಭ್ಯ ಪಡೆಯಬೇಕು. ಜಿಲ್ಲೆಯ ಕೊನೆ ಭಾಗದಲ್ಲಿರುವ ನಂಗಲಿ ಗ್ರಾಮದವರೆವಿಗೂ ನೇತ್ರಾವತಿ ನದಿ ನೀರು ಸಿಗುವ ಪರಿಸ್ಥಿತಿ ಬರಬೇಕು ಎಂದು ಪರಮಶಿವಯ್ಯ ತಿಳಿಸಿದರು.

ಯೋಜನೆಯನ್ನು ಸರ್ಕಾರ ಜಾರಿಗೆ ತರಲು ಸನ್ನದ್ಧವಾಗಿರುವುದು ಸಮಾಧಾನಕರ ಸಂಗತಿ. ಮುಖ್ಯ ಎಂಜಿನಿಯರ್ ನೇಮಕ ಸುಮಾರು ಹದಿನೈದು ದಿನಗಳಲ್ಲಿ ಆಗಲಿದೆ. ಯೋಜನೆಗೆ ಹಣಕಾಸು ಕೊರತೆ ಇಲ್ಲ ಎಂದು ಸರ್ಕಾರ ಈಗಾಗಲೇ ತಿಳಿಸಿದೆ. ಆದಷ್ಟು ಶೀಘ್ರವಾಗಿ ಯೋಜನೆ ಕಾರ್ಯಗತಗೊಳ್ಳಲು ಸರ್ಕಾರ ಪ್ರಯತ್ನಿಸಬೇಕು ಎಂದರು.

ಜಿಲ್ಲೆಯಲ್ಲಿ ಬರದ ಹಿನ್ನಲೆಯಲ್ಲಿ ಅಂತರ್ಜಲ ಹೆಚ್ಚಿಸುವುದು ಅತ್ಯವಶ್ಯಕ. ಎಲ್ಲ ಕೆರೆಗಳ ತೂಬುಗಳನ್ನು ಮುಚ್ಚಿ ಎರಡು ವರ್ಷ ನೀರನ್ನು ಕೆರೆಯಲ್ಲಿಯೇ ಉಳಿಸಬೇಕು. ಇದರಿಂದ ಅಂತರ್ಜಲ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಪರಮಶಿವಯ್ಯ ತಿಳಿಸಿದರು.

ರಾಜ್ಯ ಪ್ರಾಂತ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಬಯ್ಯೊರೆಡ್ಡಿ ಮಾತನಾಡಿ, ಮಂಗಳೂರಿನಲ್ಲಿ ಡಾ.ಪರಮಶಿವಯ್ಯ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕುಮಾರಧಾರಾ, ನೇತ್ರಾವತಿ ನದಿ ನೀರು ವ್ಯರ್ಥವಾಗಿ ಸಮುದ್ರಕ್ಕೆ ಹರಿದು ಹೋಗುತ್ತಿದ್ದುದನ್ನು ಗಮನಿಸಿ ತಯಾರಿಸಿದ ವರದಿ ಒಂಬತ್ತು ಜಿಲ್ಲೆಗಳ ಜನತೆಗೆ ವರವಾಗುತ್ತಿದೆ. ಕೋಟ್ಯಂತರ ಜನರಿಗೆ ಜೀವಜಲ ದೊರಕಲಿದೆ ಎಂದರು.

ಜನಪರ ವೇದಿಕೆ ಸಂಚಾಲಕ ಗಾಂಧಿನಗರ ನಾರಾಯಣಸ್ವಾಮಿ, ಡಾ.ವೆಂಕಟಾಚಲ, ಸಿಐಟಿಯು ಸಂಘಟನೆಯ ಅರ್ಜುನನ್ ಮಾತನಾಡಿದರು. ಗೀತಾ ಸ್ವಾಗತಿಸಿದರು. ಪಿ.ಆರ್.ಸೂರಿ ವಂದಿಸಿದರು. ಸಂಪಂಗಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT