ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗಾಗಿ ಮುಗಿಯದ ಗಿರಿಜನರ ಹೋರಾಟ

Last Updated 7 ಏಪ್ರಿಲ್ 2011, 8:45 IST
ಅಕ್ಷರ ಗಾತ್ರ

ಚಾಮರಾಜನಗರ: ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ದಶಕ ಉರುಳಿದರೂ ಈ ಗಿರಿಜನರು ಕೊಳವೆ ಬಾವಿಯ ದರ್ಶನ ಕಂಡಿಲ್ಲ! -ಇಂಥ ದೃಶ್ಯ ನೋಡಬೇಕಿದ್ದರೆ ಜಿಲ್ಲೆಯ ಬಿಳಿಗಿರಿರಂಗನಬೆಟ್ಟದ ಹುಲಿ ರಕ್ಷಿತಾರಣ್ಯದಲ್ಲಿರುವ ಸೋಲಿಗರ ಪೋಡುಗಳಿಗೆ ಭೇಟಿ ನೀಡಬೇಕು. ಪ್ರಸ್ತುತ ಬೇಸಿಗೆಯ ಧಗೆ ಹೆಚ್ಚುತ್ತಿದೆ. ಗಿರಿಜನರ ಪೋಡುಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ತಲೆದೋರುವ ಭೀತಿ ಎದುರಾಗಿದೆ. ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಯಡಿ ಗಿರಿಜನರಿಗೆ ಕೇವಲ ಭೂಮಿಯ ಹಕ್ಕುಪತ್ರ ಮಾತ್ರ ಸಿಕ್ಕಿದೆ. ಕುಡಿಯುವ ನೀರು, ರಸ್ತೆ ಹಾಗೂ ಶಾಲಾ ಸೌಲಭ್ಯ ಇಂದಿಗೂ ಮರೀಚಿಕೆಯಾಗಿದೆ.

ಬಿಆರ್‌ಟಿ ಹುಲಿ ರಕ್ಷಿತಾರಣ್ಯದ ಮಧ್ಯದೊಳಗೆ ಕೆರೆದಿಂಬ, ಗೊಂಬೆಗಲ್ಲು, ಮೊಣಕೈಪೋಡು ಬರುತ್ತಿವೆ. ಇಲ್ಲಿ ಸೋಲಿಗರೇ ವಾಸವಾಗಿದ್ದಾರೆ. ಇಂದಿಗೂ ಅವರಿಗೆ ಹಳ್ಳಕೊಳ್ಳ ಹಾಗೂ ಅವುಗಳ ಪಕ್ಕದಲ್ಲಿರುವ ಗುಂಡಿಗಳೇ ಕುಡಿಯುವ ನೀರಿನ ಆಸರೆಯಾಗಿವೆ. ನೆಲ್ಲಿಕದ್ರು, ಕಡಕಲಕಿಂಡಿ, ಬಿಸಿಲುಕೆರೆ ಪೋಡು, ಪುರಾಣಿಪೋಡಿನ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.

ಕೆರೆದಿಂಬದಲ್ಲಿ 35 ಕುಟುಂಬಗಳಿದ್ದು, 300 ಜನಸಂಖ್ಯೆಯಿದೆ. ಗೊಂಬೆಗಲ್ಲು ಪೋಡಿನಲ್ಲಿ 28 ಕುಟುಂಬಗಳಿದ್ದು, 250 ಜನರಿದ್ದಾರೆ. ಮೊಣಕೈಪೋಡಿನಲ್ಲಿ 13 ಕುಟುಂಬಗಳಿದ್ದು, ಅಲ್ಲಿರುವ ಗಿರಿಜನರ ಸಂಖ್ಯೆ 50. ಕಡಕಲಕಿಂಡಿಯಲ್ಲಿ 13 ಕುಟುಂಬಗಳಿದ್ದು, 80 ಗಿರಿಜನರಿದ್ದಾರೆ. ನೆಲ್ಲಿಕದ್ರು ಪೋಡಿನಲ್ಲಿ 45 ಕುಟುಂಬಗಳಿದ್ದು, 350 ಜನರಿದ್ದಾರೆ. ಆದರೆ, ಇಲ್ಲಿರುವ ಎಲ್ಲರೂ ಗುಂಡಿಗಳನ್ನೇ ಕುಡಿಯುವ ನೀರಿಗೆ ಆಶ್ರಯಿಸಿದ್ದಾರೆ. ಈ ಪೋಡುಗಳಿಗೆ ಕೊಳವೆ ಬಾವಿಯ ಸೌಕರ್ಯವಿಲ್ಲ.

ಗುಂಡಿಗಳಲ್ಲಿ ನೀರು ಬಸಿದು ಹೋದ ವೇಳೆ ಸಣ್ಣಪುಟ್ಟ ಕೆರೆಗಳತ್ತ ನೀರಿಗಾಗಿ ಗಿರಿಜನರು ಹೋಗಬೇಕಿದೆ. ಇದಕ್ಕಾಗಿ ಮನೆಗಳಿಂದ ಹತ್ತಾರು ಕಿ.ಮೀ. ಸಂಚರಿಸಬೇಕು. ಆ ವೇಳೆ ಕಾಡುಪ್ರಾಣಿಗಳ ಉಪಟಳ ಎದುರಾಗುವುದು ಸಾಮಾನ್ಯ. ಕೆರೆಗಳ ಬಳಿಗೆ ದಣಿವಾರಿಸಿಕೊಳ್ಳಲು ಪ್ರಾಣಿಗಳು ಬರುವುದರಿಂದ ಪ್ರಾಣಭಯದಿಂದ ನೀರು ಸಂಗ್ರಹಿಸಬೇಕು. ಕೆರೆಗಳಲ್ಲೂ ನೀರು ಬತ್ತಿದರೆ ಗಿರಿಜನರ ಪಾಡುಹೇಳತೀರದು. ನಿಂತಲ್ಲೇ ನೀರಿರುವ ಪ್ರದೇಶಗಳತ್ತ ಓಡುವಂತಹ ದಯನೀಯ ಸ್ಥಿತಿ ನಿರ್ಮಾಣವಾಗಲಿದೆ.

ಪುರಾಣಿಪೋಡು ಬಿಳಿಗಿರಿರಂಗನಬೆಟ್ಟಕ್ಕೆ ಹೋಗುವ ಹಾದಿಯಲ್ಲಿಯೇ ಇದೆ. ಇಲ್ಲಿ 115 ಕುಟುಂಬಗಳಿದ್ದು, ಸುಮಾರು 600 ಜನಸಂಖ್ಯೆಯಿದೆ. ಸದ್ಯಕ್ಕೆ 2 ಕೊಳವೆ ಬಾವಿ ಕೊರೆಯಿಸಲಾಗಿದೆ. ಆದರೆ, ಅಲ್ಲಿ ಲಭಿಸಿರುವ ನೀರು ಸಾಕಾಗುತ್ತಿಲ್ಲ. ಜನರ ಅಗತ್ಯಕ್ಕೆ ಅನುಗುಣವಾಗಿ ನೀರು ಪೂರೈಸುವ ಶಾಶ್ವತ ಯೋಜನೆ ಸಹ ರೂಪಿಸಿಲ್ಲ.

ಹಕ್ಕುಪತ್ರ ಸಿಕ್ಕಿಲ್ಲ: ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಯಡಿ ಅರಣ್ಯದೊಳಗಿರುವ ಗಿರಿಜನರಿಗೆ ಮೂಲ ಸೌಲಭ್ಯ ಕಲ್ಪಿಸಬೇಕು. ಆದರೆ, ಜಿಲ್ಲೆಯ 700ಕ್ಕೂ ಹೆಚ್ಚು ಗಿರಿಜನರಿಗೆ ಇನ್ನೂ ಭೂ ಹಕ್ಕುಪತ್ರ ಸಿಕ್ಕಿಲ್ಲ. ಸಂಬಂಧಪಟ್ಟ ಇಲಾಖೆಯಿಂದಲೂ ಭೂಮಿಯ ಸಮೀಕ್ಷೆ ಸಹ ನಡೆದಿಲ್ಲ.

ಇಂದಿಗೂ ಕೆರೆದಿಂಬ, ಮೊಣಕೈಪೋಡು ಹಾಗೂ ಗೊಂಬೆಗಲ್ಲಿನಲ್ಲಿ ಸೋಲಿಗರು ಬಾಣೆಹುಲ್ಲಿನಿಂದ ನಿರ್ಮಿಸಿರುವ ಗುಡಿಸಲುಗಳಲ್ಲೇ ವಾಸವಾಗಿದ್ದಾರೆ. ಅದೇ ಅವರ ಕಲ್ಪನೆಯಲ್ಲಿ ಮನೆ. ಕನಿಷ್ಠ ಹೆಂಚು ಬಳಸಲು ಅವಕಾಶ ನೀಡುವುದರೊಂದಿಗೆ ಮನೆ ನಿರ್ಮಿಸಿ ಕೊಡುವ ಪ್ರಯತ್ನ ಸಾಕಾರಗೊಂಡಿಲ್ಲ. ರಸ್ತೆ, ಆರೋಗ್ಯ ಸೇವೆಗೆ ಪರದಾಡುವುದು ತಪ್ಪಿಲ್ಲ.

‘ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಯಡಿ ಗಿರಿಜನರಿಗೆ ಸೌಲಭ್ಯ ಕಲ್ಪಿಸುವುದು ಅಧಿಕಾರಿಗಳ ಹೊಣೆ. ಆದರೆ, ಕುಡಿಯುವ ನೀರಿನ ಸಮಸ್ಯೆ ತಲೆದೋರಿದರೂ ಬಗೆಹರಿಸುವುದು ಕಷ್ಟ. ಕನಿಷ್ಠ ಗ್ರಾಮ ಪಂಚಾಯಿತಿಮಟ್ಟದಿಂದ ಸೌರ ವಿದ್ಯುತ್ ದೀಪದ ವ್ಯವಸ್ಥೆ ಕಲ್ಪಿಸಬೇಕು. ಈಗಾಗಲೇ, ಪುಣಜನೂರು ಗ್ರಾ.ಪಂ.ನಿಂದ ಕೆಲವು ಪೋಡುಗಳಿಗೆ ಸೌರ ವಿದ್ಯುತ್ ದೀಪ ನೀಡಲಾಗಿದೆ. ಬುಡಕಟ್ಟು ಜನರು ಹೆಚ್ಚು ವಾಸಿಸುವ ಗ್ರಾ.ಪಂ.ಗಳಲ್ಲಿ ಇಂಥ ಸೌಲಭ್ಯ ಕಲ್ಪಿಸಲು ಸ್ಥಳೀಯ ಜನಪ್ರತಿನಿಧಿಗಳು ಮುಂದಾಗಬೇಕು’ ಎಂದು ಒತ್ತಾಯಿಸುತ್ತಾರೆ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಸಿ. ಮಾದೇಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT