ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಪಶು ಆಹಾರ ದರ ಹೆಚ್ಚಿಸಲು ಚಿಂತನೆ'

ಸಿದ್ದಾಪುರ: ಅಡಿಕೆ ಹಾಳೆ, ಒಣ ಮೇವು ಘಟಕ ಉದ್ಘಾಟನೆ
Last Updated 15 ಡಿಸೆಂಬರ್ 2012, 9:54 IST
ಅಕ್ಷರ ಗಾತ್ರ

ಸಿದ್ದಾಪುರ: ಕರ್ನಾಟಕ ಹಾಲು ಮಹಾಮಂಡಳಕ್ಕೆ ಪಶು ಆಹಾರ ಮಾರಾಟದಿಂದ ಪ್ರಸಕ್ತ ಸಾಲಿನಲ್ಲಿ ರೂ. 41 ಕೋಟಿ ನಷ್ಟವಾಗಿದ್ದು, ಈ ಕುರಿತು ಬೆಂಗಳೂರಿನಲ್ಲಿ ತುರ್ತುಸಭೆ ನಡೆಯಲಿದ್ದು ಮುಂದಿನ ದಿನಗಳಲ್ಲಿ ಪಶು ಆಹಾರ ದರ ಹೆಚ್ಚಿಸಲು ಚಿಂತಿಸಲಾಗಿದೆ.

ರಾಜ್ಯದಲ್ಲಿ ಪಶು ಆಹಾರದ ಕಚ್ಚಾ ಸಾಮಗ್ರಿ ಕೊರತೆಯಿದ್ದು, ಹೊರರಾಜ್ಯಗಳಿಂದ ದುಬಾರಿ ದರ ನೀಡಿ ತರಿಸಬೇಕಿದೆ ಎಂದು ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ ಹೆಗ್ಡೆ ಹೇಳಿದರು.
ಸಿದ್ದಾಪುರ ಹಾಲುಡೇರಿ ಸಮೀಪದಲ್ಲಿ ಅಡಿಕೆ ಹಾಳೆ, ಒಣಮೇವು ನೂತನ ಸಂಸ್ಕರಣೆ ಘಟಕವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಹೈನುಗಾರಿಕೆಗೆ ನಾರು, ನಾರಿನ ಉತ್ಪನ್ನಗಳ ಅವಶ್ಯಕತೆ ಕುರಿತು ಅಧ್ಯಯನ ನಡೆಸಿ ಅಡಿಕೆ ಹಾಳೆಯನ್ನು ಯಂತ್ರದ ಮೂಲಕ ತುಂಡರಿಸಿ ಒಣ ಮೇವನ್ನಾಗಿ ಪರಿಷ್ಕರಿಸಿ ಪರ್ಯಾಯ ಪಶು ಆಹಾರವನ್ನು ಆವಿಷ್ಕರಿಸಲಾಗಿದೆ. ಈ ಯಂತ್ರ(ಘಟಕ)ವನ್ನು ಪ್ರಾಯೋಗಿಕ ಹಂತವಾಗಿ ಪುತ್ತೂರು ಸಮೀಪದ ಪಾಣಾಜೆ ಹಾಲು ಡೇರಿಯಲ್ಲಿ ಅಳವಡಿಸಿದ್ದು, ಮೇವು ಉತ್ಪಾದನೆ ಮಾಡಲಾಗಿದೆ.

ಈ ಮೇವಿನಿಂದ ಹಾಲಿನ ಬೆಣ್ಣೆ ಗುಣಮಟ್ಟ ಶೇ.10ರಷ್ಟು ಏರಿಕೆಯಾಗಿದ್ದು ಉತ್ಪಾದನೆ ವೆಚ್ಚವೂ ಕಡಿಮೆಯಾಗಿದೆ. ಘಟಕದಲ್ಲಿ ಉನ್ನತ ತಂತ್ರಜ್ಞಾನ ಅಳವಡಿಕೊಳ್ಳಲಾಗಿದೆ. 4 ಘಟಕಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದರು.

ಪಶು ಆಹಾರ ಕೊರತೆ ನೀಗಿಸಲು ಬೈಹುಲ್ಲು ಮತ್ತು ಒಣಮೇವಿನಿಂದ ಪಶು ಆಹಾರ ಬಿಲ್ಲೆಗಳನ್ನು ತಯಾರಿಸಲು ಯೋಜನೆ ಹಾಕಿಕೊಂಡಿದ್ದು, ಕಾರ್ಖಾನೆ ಸ್ಥಾಪನೆಗೆ ಹಾಸನ ಜಿಲ್ಲೆಯಲ್ಲಿ 2.5ಎಕರೆ ಜಾಗವನ್ನು ಕಾದಿರಿಸಲಾಗಿದೆ. ರಾಜ್ಯದ ಎಲ್ಲ ಒಕ್ಕೂಟಗಳು ನಷ್ಟದಲ್ಲಿದ್ದು ದ.ಕ. ಹಾಲು ಒಕ್ಕೂಟ ಮಾತ್ರ ಲಾಭ ಗಳಿಸುತ್ತಿದೆ. ರೈತರಿಗೆ ಪ್ರೋತ್ಸಾಹ ಧನ ಸೇರಿದಂತೆ ಉತ್ತಮ ಬೆಲೆ ನೀಡುತ್ತಿದೆ ಎಂದರು.

ಸಿದ್ದಾಪುರ ಡೇರಿ ಅಧ್ಯಕ್ಷ ಡಿ.ಗೋಪಾಲಕೃಷ್ಣ ಕಾಮತ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸಿದ್ದಾಪುರ, ಮಡಾಮಕ್ಕಿ, ಆಲ್ಬಾಡಿಬೆಳ್ವೆ, ಬಿದ್ಕ್‌ಲ್‌ಕಟ್ಟೆ, ಕಾಳಾವರ, ಕಂಡ್ಲೂರು, ಕೆರಾಡಿ, ಜಡ್ಕಲ್, ಮುದೂರು, ಶಂಕರನಾರಾಯಣ, ಹಳ್ಳಿಹೊಳೆ, ಹೊಸಂಗಡಿ, ಅಮಾಸೆಬೈಲು ಗ್ರಾ.ಪಂ ವ್ಯಾಪ್ತಿಯ ಸಂಘಗಳು ಘಟಕದ ಕಾರ್ಯವ್ಯಾಪ್ತಿಗೆ ಬರಲಿದ್ದು, ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ರಾಜ್ಯ 3ನೇ ಹಣಕಾಸು ಅನುಷ್ಠಾನ ಸಮಿತಿ ಕಾರ್ಯಪಡೆ ಅಧ್ಯಕ್ಷ ಎ.ಜಿ ಕೊಡ್ಗಿ, ದ.ಕ. ಹಾಲು ಒಕ್ಕೂಟ ನಿರ್ದೇಶಕರಾದ ಸಬ್ಲಾಡಿ ಮಂಜಯ್ಯ ಶೆಟ್ಟಿ, ಹದ್ದೂರು ರಾಜೀವ ಶೆಟ್ಟಿ, ದ.ಕ ಒಕ್ಕೂಟ ನಿರ್ದೇಶಕ ಜಯಲಕ್ಷ್ಮಿ ಪೂಜಾರಿ, ಜಾನಕಿ ಹಂದೆ, ಮುಕುಂದ ನಾಯ್ಕ, ಎ.ಜಗದೀಶ ಕಾರಂತ, ಒಕ್ಕೂಟ ಕೃಷಿ ನಿರ್ದೆಶಕ ಪ್ರಭಾಕರ ಎಸ್. ಇದ್ದರು. ಸಿದ್ದಾಪುರ ಡೇರಿ ಕಾರ್ಯದರ್ಶಿ ಜ್ಞಾನೆಂದ್ರ ಭಟ್ ಸ್ವಾಗತಿಸಿ, ವಿಸ್ತರಣಾಧಿಕಾರಿ ಕಾರ್ಯಕ್ರಮ ನಿರೂಪಿಸಿದರು. ದಕ್ಷಿಣ ಕನ್ನಡ ಹಾಲು ಒಕ್ಕೂಟ ಮಂಗಳೂರು, ಸಿದ್ದಾಪುರ ಹಾಲು ಡೇರಿ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT