ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತೂರು; ಅಖಿಲ ಭಾರತ ಪ್ರತಿನಿಧಿ ಸಮಾವೇಶ ಇಂದಿನಿಂದ . ಆರ್‌ಎಸ್‌ಎಸ್ ನಾಯಕ ಸಮಾಗಮ-ಕಟ್ಟೆಚ್ಚರ

Last Updated 11 ಮಾರ್ಚ್ 2011, 9:55 IST
ಅಕ್ಷರ ಗಾತ್ರ

ಪುತ್ತೂರು: ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು ವಠಾರದಲ್ಲಿ ಶುಕ್ರವಾರದಿಂದ 3 ದಿನಗಳ ಅಖಿಲ ಭಾರತ ಪ್ರತಿನಿಧಿ ಸಭಾ ಸಮಾವೇಶ ನಡೆಯಲಿದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ 900ಕ್ಕೂ ಅಧಿಕ ಪ್ರಮುಖರು ಗುರುವಾರ ಸಂಜೆ ವೇಳೆಗೆ ಪುತ್ತೂರಿಗೆ ಆಗಮಿಸಿದ್ದಾರೆ. ಆರ್‌ಎಸ್‌ಎಸ್ ಮೂಲದ ವಿವಿಧ ಘಟಕಗಳ ಪ್ರಮಖ ನಾಯಕರ ಸಮಾಗಮ ವರ್ಷದ ಬಳಿಕ ಇದೀಗ ಪುತ್ತೂರಿನಲ್ಲಿ ಆಗುತ್ತಿದೆ. ಈ ಮಧ್ಯೆ ಗುರುವಾರ ನಡೆದ ಸಂಘ ಪರಿವಾರದ ಬೈಠಕ್ ಮಾಹಿತಿ ಒಂದಿಷ್ಟೂ ಸೋರಿಕೆಯಾಗದಂತೆಯೂ ನಿಗಾ ವಹಿಸಲಾಗಿದೆ.

ಆರ್‌ಎಸ್‌ಎಸ್ ಪರಿವಾರದ ವಿಶ್ವ ಮಟ್ಟದ ನಾಯಕರ ಸಮಾಗಮ ಹಿನ್ನೆಲೆಯಲ್ಲಿ ಬಂದೋಬಸ್ತ್ ವ್ಯವಸ್ಥೆ ಬಿಗಿಗೊಳಿಸಲಾಗಿದೆ. ಕಾಲೇಜು ಆವರಣಕ್ಕೆ ಅನಪೇಕ್ಷಿತರು ಆಗಮಿಸದಂತೆ ಎಚ್ಚರ ವಹಿಸಲಾಗಿದೆ. ರಾಷ್ಟ್ರೀಯ ನಾಯಕರ ಬೆಂಗಾವಲಿಗೆ ಆಗಮಿಸಿರುವ ವಿಶೇಷ ಭದ್ರತಾ ಸಿಬ್ಬಂದಿ ಜತೆಗೆ ಸ್ಥಳೀಯ ಪೊಲೀಸರೂ ಭದ್ರತಾ ಕೆಲಸ ನಿರ್ವಹಿಸುತ್ತಿದ್ದಾರೆ.
 

ತೊಗಾಡಿಯಾ ಆಗಮನ: ವಿಶ್ವ ಹಿಂದೂ ಪರಿಷತ್ ಅಂತರರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್‌ಬಾಯ್ ತೊಗಾಡಿಯಾ ಅವರು ವಿಶೇಷ ಭದ್ರತೆಯೊಂದಿಗೆ ರೈಲಿನಲ್ಲಿ ಗುರುವಾರ ಬೆಳಿಗ್ಗೆ ಆಗಮಿಸಿದ್ದು, ಆರ್‌ಎಸ್‌ಎಸ್ ಕಾರ್ಯಕರ್ತರು ಅವರನ್ನು ಪುತ್ತೂರು ನಿಲ್ದಾಣದಲ್ಲಿ ಸಂಭ್ರಮದಿಂದ ಬರಮಾಡಿಕೊಂಡರು. ಬಳಿಕ ಅವರನ್ನು ವಿವೇಕಾನಂದ ವಿದ್ಯಾಸಂಸ್ಥೆ ವಾಹನದಲ್ಲಿ ಕಾಲೇಜು ಆವರಣದಲ್ಲಿನ ಆರ್‌ಎಸ್‌ಎಸ್ ಬಿಡಾರಕ್ಕೆ ಕರೆದೊಯ್ಯಲಾಯಿತು. ಕಾಲೇಜು ಸಭಾಂಗಣದಲ್ಲಿ ನಡೆದ ಪ್ರಾಂತೀಯ ಬೈಠಕ್‌ನಲ್ಲಿ ತೊಗಾಡಿಯಾ ಪಾಲ್ಗೊಂಡರು ಎಂದು ಮೂಲಗಳು ತಿಳಿಸಿವೆ.

ಇಂದು ಆರಂಭ: ಅಖಿಲ ಭಾರತ ಪ್ರತಿನಿಧಿ ಸಭೆ ಶುಕ್ರವಾರ ಬೆಳಿಗ್ಗೆ 8.30ಕ್ಕೆ ಉದ್ಘಾಟನೆಗೊಳ್ಳಲಿದೆ. ಸಂಘ ಪರಿವಾರದ ರಾಷ್ಟ್ರೀಯ-ಅಂತರರಾಷ್ಟ್ರೀಯ ನಾಯಕರೆಲ್ಲರೂ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಪುತ್ತೂರಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ನಾಯಕರ ಭದ್ರತಾ ವ್ಯವಸ್ಥೆಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರೇ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿರುವುದೂ ಗುರುವಾರ ಕಂಡುಬಂದಿತು.

ಬೈಠಕ್‌ನಲ್ಲಿ ಪ್ರಮುಖರು; ‘ಅಜೆಂಡಾ’ಕ್ಕೆ ಅಂತಿಮ ರೂಪ
ಅಖಿಲ ಭಾರತ ಪ್ರತಿನಿಧಿ ಸಭೆಯ ‘ಅಜೆಂಡಾ’ಕ್ಕೆ ಅಂತಿಮ ರೂಪ ನೀಡಲಾಗಿದ್ದು, ಈ ಕುರಿತು ಗುರುವಾರದ ಬೈಠಕ್‌ನಲ್ಲಿ ಗಂಭೀರ ಚರ್ಚೆ- ಚಿಂತನೆ ನಡೆಯಿತು. ಸಂಘ ಪರಿವಾರದ ವಿವಿಧ ಸಂಘಟನೆಗಳ ಪ್ರಾಂತವಾರು ಬೈಠಕ್‌ನಲ್ಲಿ ಸಂಘಟನೆಗಳ ಸಾಧನೆ ಮತ್ತು ನ್ಯೂನತೆಗಳ ಕುರಿತು ಆತ್ಮಾವಲೋಕನವೂ ನಡೆಯಿತು. ಅಲ್ಲದೆ ಮುಂದಿನ ಕಾರ್ಯಯೋಜನೆಗಳ ಕುರಿತು ಸಂಘಟನೆ ಪ್ರಮುಖರಿಗೆ ಮಾರ್ಗದರ್ಶನ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ನಿಲುವಿನ ಚಿಂತನೆ: ದೇಶದ ಆಂತರಿಕ ಮಾಹಿತಿ ವಿದೇಶಗಳಿಗೆ ಗೂಡಚಾರರ ಮೂಲಕ ಸೋರಿಕೆ, ವಿದೇಶಿ ಮೂಲದ ಭಯೋತ್ಪಾದನೆ ಮತ್ತು ಆಂತರಿಕ ಭಯೋತ್ಪಾದನೆ, ಗೋಹತ್ಯಾ ನಿಷೇಧ ಕಾನೂನು ಜಾರಿ ಇತ್ಯಾದಿ ವಿಚಾರಗಳ ಬಗ್ಗೆ ಸಂಘ ಪರಿವಾರದ ನಿಲುವಿನ ಕುರಿತು ಬೈಠಕ್‌ನಲ್ಲಿ ಚರ್ಚೆಯಾಯಿತು. ದೇಶದ ವಿವಿಧ ರಾಜ್ಯಗಳಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರಗಳ ಕಾರ್ಯ ವೈಖರಿ ಕುರಿತೂ ಬೈಠಕ್‌ನಲ್ಲಿ ಆತ್ಮಾವಲೋಕನ ನಡೆದಿದೆ ಎಂಬ ಮಾಹಿತಿ ಇದೆ. ಆದರೆ, ಯಾವುದೇ ಮಾಹಿತಿ ಭೈಠಕ್ ನಡೆದ ಕಾಲೇಜು ಆವರಣದಿಂದ ಹೊರಹೋಗದಂತೆ ಗೌಪ್ಯವಾಗಿಡಲಾಗಿದೆ.

ಪ್ರಮುಖರ ಆಗಮನ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ ಮೋಹನ್ ಭಾಗವತ್, ಸಹ ಸರಸಂಘ ಚಾಲಕ ಸುರೇಶ್ ಜೋಷಿ, ವಿಶ್ವ ಹಿಂದೂ ಪರಿಷತ್ ಅಂತತರಾಷ್ಟ್ರೀಯ ಕಾರ್ಯಾಧ್ಯಕ್ಷ ಅಶೋಕ್ ಸಿಂಘಾಲ್, ವಿಶ್ವ ಹಿಂದೂ ಪರಿಷತ್ ಅಂತರರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್‌ಬಾಯ್ ತೊಗಾಡಿಯಾ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹಕಾರ್ಯವಾಹರಾದ ಸುರೇಶ್ ಸೋನಾ, ದತ್ತಾತ್ರೇಯ ಹೊಸಬಾಳೆ, ಅಖಿಲ ಭಾರತ ಬೌದ್ಧಿಕ್ ಪ್ರಮುಖ್ ಭಾಗಯ್ಯ, ರಾಜ್ಯ ಕಾರ್ಯವಾಹ ಮೈ.ಚ.ಜಯದೇವ್, ಪ್ರಾಂತ ಪ್ರಚಾರಕ್ ರಾಮುಬಾಹು ಅಲದಿಕರ್, ಸಂಘಟನೆಯ ಪ್ರಮುಖ ಸೀತಾರಾಮ ಕೆದಿಲಾಯ ಸೇರಿದಂತೆ ಸಂಘ ಪರಿವಾರದ 500ಕ್ಕೂ ಅಧಿಕ ಮಂದಿ ಪ್ರಮುಖರು ಗುರುವಾರದ ಬೈಠಕ್‌ನಲ್ಲಿ ಪಾಲ್ಗೊಂಡಿದ್ದರು ಎಂದು ಮೂಲಗಳು ವಿವರ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT