ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಮುಖ ಖಾತೆ ಬದಲಿಗೇ ಒತ್ತು

Last Updated 19 ಜನವರಿ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ಅಸಮರ್ಥರನ್ನು ಕೈಬಿಡದೆ, ಮೂವರು ಹೊಸಬರನ್ನು ಸೇರ್ಪಡೆ ಮಾಡಿ, ಮೂವರಿಗೆ ಬಡ್ತಿ ನೀಡಿ ಬುಧವಾರ ಸಂಪುಟ ಪುನರ್‌ರಚಿಸಿದ ಪ್ರಧಾನಿ ಮನಮೋಹನ್‌ಸಿಂಗ್ ಸಚಿವರ ಖಾತೆಗಳಲ್ಲಿ ಭಾರಿ (37) ಬದಲಾವಣೆ ಮಾಡಿದ್ದಾರೆ.

ಉತ್ತರ ಪ್ರದೇಶದ ಬೇನಿ ಪ್ರಸಾದ್ ವರ್ಮಾ, ಪಂಜಾಬ್‌ನ ಅಶ್ವಿನಿ ಕುಮಾರ್ ಹಾಗೂ ಕೇರಳದ ಕೆ.ಸಿ.ವೇಣುಗೋಪಾಲ್ ಅವರಿಗೆ ಅದೃಷ್ಟ ಒಲಿದಿದ್ದು, ರಾಜ್ಯ ಮಂತ್ರಿಗಳಾಗಿ ಸೇರ್ಪಡೆಯಾಗಿದ್ದಾರೆ. ವರ್ಮಾ 96ರಲ್ಲಿ ‘ಸಂಯುಕ್ತ ರಂಗ’ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿದ್ದರು. ಈಗ ಸ್ವತಂತ್ರ ನಿರ್ವಹಣೆ ಹೊಣೆ ಹೊತ್ತಿದ್ದಾರೆ.

ಸಂಪುಟ ದರ್ಜೆ ನೀಡದ ಬಗ್ಗೆ ಅವರು ಅಸಮಾಧಾನಗೊಂಡಿದ್ದು ಆರಂಭದಲ್ಲೇ ಅಪಸ್ವರ ಕೇಳಿಬಂದಿದೆ. ಪುನರ್ರಚನೆ ‘ನಿರಾಶದಾಯಕ’ ಎಂಬ ಪ್ರತಿಕ್ರಿಯೆಗಳು ರಾಜಕೀಯ ವಲಯದಿಂದ ಕೇಳಿ ಬರುತ್ತಿದೆ.

ಶ್ರೀಪ್ರಕಾಶ್ ಜೈಸ್ವಾಲ್ ಮತ್ತು ಸಲ್ಮಾನ್ ಖುರ್ಷಿದ್ ಮತ್ತು ಎನ್‌ಸಿಪಿಯ ಪ್ರಫುಲ್ ಪಟೇಲ್ ಅವರಿಗೆ ಬಡ್ತಿ ನೀಡಲಾಗಿದೆ. ಪರಿಸರ ಹಾಗೂ ಅರಣ್ಯ ಇಲಾಖೆಯಲ್ಲಿ ಅತ್ಯಂತ ಸಮರ್ಥ ರೀತಿಯಲ್ಲಿ ಕೆಲಸ ಮಾಡುತ್ತಿರುವ ಜೈರಾಂ ರಮೇಶ್ ಅವರಿಗೆ ಸಂಪುಟ ದರ್ಜೆ ಯೋಗ ಸಿಗಲಿಲ್ಲ. ಅವರಿಗೆ ಬಡ್ತಿ ಗೌರವ ದೊರೆಯಲಿದೆ ಎಂದು ನಂಬಲಾಗಿತ್ತು.

ಅನಿರೀಕ್ಷಿತ ಬೆಳವಣಿಗೆಯಲ್ಲಿ ಜೈಪಾಲ್‌ರೆಡ್ಡಿ ಅವರನ್ನು ನಗರಾಭಿವೃದಿಯಿಂದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಗೆ ಕದಲಿಸಲಾಗಿದೆ. ಮುರುಳಿ ದೇವ್ರಾ ಅವರಿಂದ ಈ ಖಾತೆ ಕಸಿದು ‘ಕಾರ್ಪೋರೇಟ್ ವ್ಯವಹಾರ’ಗಳ ಹೊಣೆ ವಹಿಸಲಾಗಿದೆ. ಇದನ್ನು ದೇವ್ರಾ ಅವರಿಗಾದ ಹಿನ್ನಡೆ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

ನಿರೀಕ್ಷೆಯಂತೆ ಕರ್ನಾಟಕದ ಎಸ್. ಎಂ.ಕೃಷ್ಣ ಅವರನ್ನು ಮಹತ್ವದ ವಿದೇಶಾಂಗ ಖಾತೆಯಲ್ಲಿ ಮುಂದುವರಿಸಲಾಗಿದೆ. ಕೃಷ್ಣ ಬದಲಾವಣೆ ಕುರಿತು ಉತ್ತರ ಭಾರತದ ಮಾಧ್ಯಮಗಳು ಸಾಕಷ್ಟು ಗುಲ್ಲೆಬ್ಬಿಸಿದ್ದವು. ಹಣಕಾಸು, ಗೃಹ, ರಕ್ಷಣೆ, ವಿದೇಶಾಂಗ, ವಾಣಿಜ್ಯ, ರೈಲ್ವೆ ಖಾತೆಗಳನ್ನು ಮುಟ್ಟುವ ಗೋಜಿಗೆ ಪ್ರಧಾನಿ ಮತ್ತು ಸೋನಿಯಾ ಗಾಂಧಿ ಹೋಗಿಲ್ಲ.

ಚಿದಂಬರಂ ಖಾತೆ ಬದಲಾಗಬಹುದೆಂದು ಭಾವಿಸಲಾಗಿತ್ತು. ಆದರೆ, ಹಾಗಾಗಲಿಲ್ಲ. ಸಂಪುಟದಿಂದ ಹೊರ ಹೋಗಬಹುದು ಎಂದು ಊಹಿಸಲಾಗಿದ್ದ ಸಿ. ಪಿ. ಜೋಷಿ ಅವರಿಗೆ ರಸ್ತೆ ಸಾರಿಗೆ-ಹೆದ್ದಾರಿಯಂಥ ಪ್ರಮುಖ ಖಾತೆ ಸಿಕ್ಕಿದೆ. ಈ ಖಾತೆಯಲ್ಲಿದ್ದ ಕಮಲ್‌ನಾಥ್ ಅವರನ್ನು ನಗರಾಭಿವೃದ್ಧಿ ಇಲಾಖೆಗೆ ವರ್ಗಾಯಿಸಲಾಗಿದೆ.

ಸಂಪುಟ ದರ್ಜೆ ಸ್ಥಾನಮಾನ ಪಡೆದ ಪ್ರಫುಲ್ ಪಟೇಲ್ ಅವರಿಗೆ ನಾಗರಿಕ ವಿಮಾನಯಾನದಿಂದ ಬೃಹತ್ ಕೈಗಾರಿಕೆಗೆ ಬದಲಾವಣೆ ಮಾಡಲಾಗಿದೆ. ಬಡ್ತಿ ಪಡೆದ ಮತ್ತೊಬ್ಬ ಸಚಿವ ಶ್ರೀಪ್ರಕಾಶ್ ಜೈಸ್ವಾಲ್ ಅವರನ್ನು ಕಲ್ಲಿದ್ದಲು ಖಾತೆಯಲ್ಲೇ ಉಳಿಸಲಾಗಿದೆ. ಸಲ್ಮಾನ್ ಖುರ್ಷಿದ್ ಅವರಿಗೆ ಕಾರ್ಪೋರೇಟ್ ವ್ಯವಹಾರದಿಂದ ಮುಕ್ತಿಗೊಳಿಸಿ ಜಲ ಸಂಪನ್ಮೂಲ ಖಾತೆ ನೀಡಲಾಗಿದೆ.

ಎನ್‌ಸಿಪಿ ಮುಖಂಡ ಶರದ್ ಪವಾರ್ ಗ್ರಾಹಕ ವ್ಯವಹಾರ, ಆಹಾರ, ನಾಗರಿಕ ಸರಬರಾಜು ಖಾತೆಗಳನ್ನು ಬಿಟ್ಟುಕೊಟ್ಟಿದ್ದಾರೆ. ಸದ್ಯದಲ್ಲೇ ಆರಂಭವಾಗಲಿರುವ ವಿಶ್ವಕಪ್ ಕ್ರಿಕೆಟ್ ಹೊಣೆಗಾರಿಕೆ ಹಿನ್ನೆಲೆಯಲ್ಲಿ ಪವಾರ್ ಹೊರೆ ಕಡಿಮೆ ಮಾಡಿಕೊಂಡಿದ್ದಾರೆ. ಇವರನ್ನು ಹೊರತುಪಡಿಸಿದರೆ ಉಳಿದ ಮಿತ್ರ ಪಕ್ಷಗಳ ಸಚಿವರ ಖಾತೆಗಳು ಬದಲಾವಣೆ ಆಗಿಲ್ಲ.

ಎ. ರಾಜಾ ರಾಜೀನಾಮೆಯಿಂದ ತೆರವಾದ ದೂರ ಸಂಪರ್ಕ ಖಾತೆಯನ್ನು ಹೆಚ್ಚುವರಿಯಾಗಿ ಪಡೆದಿರುವ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಅವರನ್ನು ಎರಡೂ ಖಾತೆಗಳಲ್ಲೂ ಮುಂದುವರಿಸಲಾಗಿದೆ. ವಿಜ್ಞಾನ- ತಂತ್ರಜ್ಞಾನ ಖಾತೆಗಳನ್ನು ವಾಪಸ್ ಪಡೆಯಲಾಗಿದೆ. ಬಿ. ಕೆ.  ಹಂಡಿಕ್ ಅವರನ್ನು ಗಣಿಯಿಂದ ಬಿಡುಗಡೆಗೊಳಿಸಿ ‘ಈಶಾನ್ಯ ಪ್ರಾಂತ್ಯ ಅಭಿವೃದ್ಧಿ’ ಖಾತೆ  ಬಿಡಲಾಗಿದೆ.

ನೂತನ ಸಚಿವರಾದ ಬೇನಿ ಪ್ರಸಾದ್ ವರ್ಮಾ ಅವರಿಗೆ ಉಕ್ಕು ಖಾತೆ ಕೊಡಲಾಗಿದೆ. ಅಶ್ವಿನಿ ಕುಮಾರ್ ಅವರಿಗೆ ಸಂಸದೀಯ ವ್ಯವಹಾರ, ಯೋಜನೆ, ವಿಜ್ಞಾನ- ತಂತ್ರಜ್ಞಾನ ಮತ್ತಿತರ ಖಾತೆ ನೀಡಲಾಗಿದೆ. ಕೆ. ಸಿ. ವೇಣುಗೋಪಾಲ್ ಅವರನ್ನು ಇಂಧನ ಖಾತೆಗೆ ನೇಮಿಸಲಾಗಿದೆ.

ಕಾಮನ್ವೆಲ್ತ್ ಕ್ರೀಡಾಕೂಟದ ಹಗರಣದ ಗೊಂದಲದ ಹಿನ್ನೆಲೆಯಲ್ಲಿ ಕ್ರೀಡಾ ಸಚಿವ ಎಂ. ಎಸ್. ಗಿಲ್ ಅವರನ್ನು ಅಂಕಿಸಂಖ್ಯೆ ಹಾಗೂ ಕಾರ್ಯಕ್ರಮ ಅನುಷ್ಠಾನದಂಥ ಪ್ರಮುಖವಲ್ಲದ ಖಾತೆ ನೀಡಿ ಪಕ್ಕಕ್ಕೆ ಸರಿಸಲಾಗಿದೆ.

‘ಇದೊಂದು ಸಣ್ಣ ಪುನರ್ರಚನೆ’ ಎಂದು ಪ್ರಧಾನಿ ಹೇಳಿದ್ದು, ಕಾಂಗ್ರೆಸ್ ಮಿತ್ರ ಪಕ್ಷವಾದ ಡಿಎಂಕೆ ಮತ್ತು ಟಿಎಂಸಿಗೆ ಹೊಸದಾಗಿ ಯಾವುದೇ ಸ್ಥಾನಗಳು ಸಿಕ್ಕಿಲ್ಲ. ಬರುವ ಬಜೆಟ್ ಅಧಿವೇಶನದ ಬಳಿಕ ಮತ್ತೊಮ್ಮೆ ಪುನರ್ರಚನೆಯ ಕಸರತ್ತಿಗೆ ಕೈಹಾಕಲಿದ್ದು, ಆಗ ಭಾರಿ ಬದಲಾವಣೆ ಮಾಡುವುದಾಗಿ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ಸಂಜೆ 5ಕ್ಕೆ ನಡೆದ ಸಮಾರಂಭದಲ್ಲಿ ಪ್ರತಿಭಾ ಪಾಟೀಲ್ ಪ್ರಮಾಣ ವಚನ ಬೋಧಿಸಿದರು. ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ಮನಮೋಹನ್‌ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.

ಹೊಸಬರ ಸೇರ್ಪಡೆಯೊಂದಿಗೆ ಯುಪಿಎ ಸರ್ಕಾರದ ಮಂತ್ರಿಗಳ ಸಂಖ್ಯೆ 81ಕ್ಕೆ ಏರಿದೆ. ಇವರಲ್ಲಿ 35 ಸಂಪುಟ ದರ್ಜೆ, ಉಳಿದವರು ರಾಜ್ಯ ಸಚಿವರು. ಆರು ಮಂದಿ ಸ್ವತಂತ್ರ ನಿರ್ವಹಣೆ ಹೊಣೆ ಹೊತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT