ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳುಕುವ ಹೇಮಾವತಿ

Last Updated 16 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಸುತ್ತಲೂ ಗಾಳಿಗೆ ತೂಗಾಡುವ ಅಡಿಕೆ, ತೆಂಗು, ಕಬ್ಬು... ಇವುಗಳ ನಡುವೆ ಅಣೆಕಟ್ಟೆನಿಂದ ಧುಮುಕಿ ಜೋಗುಳ ಹಾಡುತ್ತ, ಬಳುಕುತ್ತಾ ಕಲ್ಲಿನ ಸಂದುಗಳಲ್ಲಿ ರಭಸವಾಗಿ ನುಗ್ಗುತ್ತಿದ್ದಾಳೆ ಹೇಮಾವತಿ. ಈಕೆಯ ಭೋರ್ಗರೆತ, ಕಾಕ್ರೀಟ್ ಕಾಡಿನ ಜನರಿಗೆ ಶಾಂತಿ, ಉಲ್ಲಾಸದ ಸಂಕೇತ.

ಇದು ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ತಾಲ್ಲೂಕಿನ ಹೇಮಗಿರಿ ಜಲಪಾತದ ರಮಣೀಯ ನೋಟ. ತಾಲ್ಲೂಕು ಕೇಂದ್ರದಿಂದ 10. ಕಿ.ಮೀ ದೂರದಲ್ಲಿದೆ ಈ ಜಲಪಾತ. ಮೈಸೂರು ರಾಜ್ಯದ ಅರಸರಾದ ಕೃಷ್ಣರಾಜೇಂದ್ರ ಒಡೆಯರು ಕ್ರಿ.ಶ. 1880ರಲ್ಲಿ ಹೇಮಾವತಿ ನದಿಗೆ ಅಣೆಕಟ್ಟೆಯನ್ನು ನಿರ್ಮಿಸಿ ಸ್ಥಳೀಯ ರೈತರ ಭೂಮಿಗೆ ನೀರುಣಿಸಿದ್ದಾರೆ. ಅಣೆಕಟ್ಟೆ ತುಂಬಿದ ನೀರು ಸಮತೋಲನವಾಗಿ ಧುಮುಕುತ್ತಾ ಕಿಲಕಿಲನೆ ಮುಗುಳುನಗೆಯ ಧ್ವನಿಗೈಯುವ ರಮ್ಯ ದೃಶ್ಯವೇ ಈ ಮನಮೋಹಕ ಜಲಧಾರೆ. ಈ ಅಣೆಕಟ್ಟೆಯ ಆಜುಬಾಜಿನ ಪರಿಸರದ ಸೊಬಗನ್ನು ಕಣ್ಣಾರೆ ಕಾಣುವುದೇ ಲೇಸು.

ಪ್ರಾಚೀನ ದೇಗುಲ
ವಿವಿಧ ಗಾತ್ರದ ಗಿರಿ ಸಮೂಹದ ತುದಿಯೊಂದರಲ್ಲಿ 125 ಸೋಪಾನ ಶ್ರೇಣಿಯ ಮೆಟ್ಟಿಲು ಹತ್ತಿದರೆ ಪ್ರಾಚೀನವೆನಿಸಿದ ಶ್ರಿ ಕಲ್ಯಾಣ ವೆಂಕಟರಮಣಸ್ವಾಮಿಯ ದೇಗುಲವಿದೆ. ಅಲ್ಲೇ ಪಕ್ಕದಲ್ಲಿ ಭೃಗಮಹರ್ಷಿಗಳು ಇಲ್ಲಿಯ ಗುಹೆಯೊಂದರಲ್ಲಿ ತಪಸ್ಸು ಮಾಡುತ್ತಿದ್ದರು ಎನ್ನುವ ಐತಿಹ್ಯವಿದೆ. ಇಲ್ಲಿ ವನ್ಯ ಸಮೃದ್ಧವಾದ ಸ್ವಾಭಾವಿಕ ಸನ್ನಿವೇಶದಿಂದಲೇ ಹೇಮಗಿರಿ ಪರಿಸರ ಶೋಭಿಸುತ್ತಿದೆ. ಈಗಂತೂ ಹೇಮೆ ವರ್ಷಧಾರೆಯಿಂದ ತುಂಬಿ ತುಳುಕುತ್ತಿದ್ದಾಳೆ. ಜನಜಂಗುಳಿಯಿಂದ ದೂರವಿರುವ ಈ ಗಿರಿಗೆ ಕೆ.ಆರ್.ಪೇಟೆಯಿಂದ ಬಸ್, ಆಟೋರಿಕ್ಷಾಗಳ ಸೌಲಭ್ಯವಿದೆ. ಪ್ರಚಾರದ ಕೊರತೆಯಿಂದ ಪ್ರಸಿದ್ಧಿಗೆ ಬಾರದ ಈ ಜಲಪಾತ ಇಂದು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT