ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ನಿಲ್ದಾಣದಲ್ಲಿ ಕನ್ನಡ ಡಿಂಡಿಮ!

Last Updated 9 ಏಪ್ರಿಲ್ 2013, 6:31 IST
ಅಕ್ಷರ ಗಾತ್ರ

ಹೂವಿನಹಡಗಲಿ: ತಹರೇವಾರಿ ಜಾಹೀರಾತು, ರಂಗುರಂಗಿನ ಭಿತ್ತಿ ಪತ್ರಗಳಿಂದ ತುಂಬಿ ಹೋಗಿದ್ದ ಹೂವಿನಹಡಗಲಿ ಬಸ್ ನಿಲ್ದಾಣದಲ್ಲೆಗ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ರಾಷ್ಟ್ರಕವಿಗಳ ಚಿತ್ರಗಳು ರಾರಾಜಿಸುತ್ತಿವೆ. ಬಸ್ ನಿಲ್ದಾಣದಲ್ಲಿ  ಕಣ್ಣಾಯಿಸಿದ ಕಡೆಯೆಲ್ಲಾ ಈಗ ಕನ್ನಡದ ಕಂಪು ಕಾಣುವಂತಾಗಿದೆ.

ನಿಲ್ದಾಣದ ಗೋಡೆಗಳ ಮೇಲೆ ಕನ್ನಡದ ಶ್ರೇಷ್ಠ ದಾರ್ಶನಿಕ ಶರಣರ, ಸಂತರ ಹಿತ ನುಡಿಗಳು, ವಚನಗಳ ಸಾಲುಗಳು, ಹಿತೋಕ್ತಿಗಳು ಮನಸ್ಸಿಗೆ ಮುದ ನೀಡುತ್ತವೆ.

ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕುವೆಂಪು, ದ.ರಾ. ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ, ವಿ.ಕೃ.ಗೋಕಾಕ್, ಡಾ. ಯು.ಆರ್. ಅನಂತಮೂರ್ತಿ, ಗಿರೀಶ ಕಾರ್ನಾಡ್, ಡಾ. ಚಂದ್ರಶೇಖರ ಕಂಬಾರ ಹಾಗೂ ರಾಷ್ಟ್ರಕವಿಗಳಾದ ಜಿ.ಎಸ್. ಶಿವರುದ್ರಪ್ಪ, ಎಂ. ಗೋವಿಂದ ಪೈ ಅವರ ಭಾವಚಿತ್ರಗಳನ್ನು ಅಳವಡಿಸಲಾಗಿದೆ. ಕನ್ನಡದ ಹಿರಿಮೆ ಗರಿಮೆ ಕೊಂಡಾಡುವಂತಹ ಗೋಡೆ ಬರಹಗಳು ಗಮನ ಸೆಳೆಯುತ್ತಿವೆ.

ಪ್ರಯಾಣಿಕರನ್ನು  ಸೆಳೆಯಲು ಈಶಾನ್ಯ ಸಾರಿಗೆ ಸಂಸ್ಥೆ ಕೈಗೊಂಡಿರುವ ವಿನೂತನ ಪ್ರಯತ್ನಕ್ಕೆ ಸಾರ್ವಜನಿಕರ ಮೆಚ್ಚುಗೆಯೂ ವ್ಯಕ್ತವಾಗಿದೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್. ಶಿವಮೂರ್ತಿ, ಕನ್ನಡದ ಕಾಳಜಿ ಹಾಗೂ ಸದಭಿರುಚಿಯ ಹಿನ್ನೆಲೆಯಲ್ಲಿ ಬಸ್ ನಿಲ್ದಾಣಗಳಲ್ಲಿ ಕನ್ನಡ ಸಂಸ್ಕೃತಿಯ ಮಾಹಿತಿ ಪ್ರಸಾರ ಕೈಗೊಂಡಿದ್ದಾರೆ.

ಘಟಕ ವ್ಯವಸ್ಥಾಪಕ ಸಿ. ಚಾಮರಾಜ, `ಬಸ್ ನಿಲ್ದಾಣದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ರಾಷ್ಟ್ರಕವಿಗಳ ಪೋಟೊ ಅಳವಡಿಸಿರುವುದು ನಿಜಕ್ಕೂ ಪ್ರಯಾಣಿಕರ ಮೇಲೆ ಪರಿಣಾಮ ಬೀರಿದೆ. ಎಷ್ಟೋ ಜನರಿಗೆ ನಾಡಿನ ವಿದ್ವಾಂಸರು, ಸಾಹಿತಿಗಳ ಪರಿಚಯವೇ ಇರುವುದಿಲ್ಲ. ಮಹಾತ್ಮರ ನುಡಿಮುತ್ತುಗಳನ್ನು ವಿದ್ಯಾರ್ಥಿ ಯುವಜನರು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲಿ ಎಂಬುದು ಸಂಸ್ಥೆಯ ಉದ್ದೇಶವಾಗಿದೆ' ಎಂದು ಹೇಳಿದರು.

ಬಸ್ ನಿಲ್ದಾಣದಲ್ಲಿ ಗ್ರಂಥಾಲಯ: ಬಸ್‌ಗಾಗಿ ಕಾಯುವ ಪ್ರಯಾಣಿಕರ ಅತ್ಯಮೂಲ್ಯ ಸಮಯವನ್ನು ಓದಿನ ಜೊತೆ ಕಳೆಯುವಂತಾಗಲಿ ಎಂಬ ಆಶಯದಿಂದ ಸದ್ಯದಲ್ಲೇ ಹೂವಿನಹಡಗಲಿ ಬಸ್ ನಿಲ್ದಾಣದಲ್ಲಿ  ಗ್ರಂಥಾಲಯ ತೆರೆಯುವುದಾಗಿ ಘಟಕ ವ್ಯವಸ್ಥಾಪಕ ಚಾಮರಾಜ ತಿಳಿಸಿದರು. ಅಮೂಲ್ಯವಾದ ಗ್ರಂಥಗಳು, ನಾಡಿನ ಶ್ರೇಷ್ಠ ಲೇಖಕರ ಕೃತಿಗಳು, ದಿನಪತ್ರಿಕೆ, ವಾರ ಪತ್ರಿಕೆ ಒಳಗೊಂಡ ಸುಸಜ್ಜಿತವಾದ ಗ್ರಂಥಾಲಯವನ್ನು ಬಸ್ ನಿಲ್ದಾಣದಲ್ಲಿ ತೆರೆಯುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT