ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಬಿಎಸ್ಪಿಯಿಂದ ಹಿಂದುಳಿದವರ ಅಭಿವೃದ್ಧಿ'

Last Updated 4 ಏಪ್ರಿಲ್ 2013, 6:33 IST
ಅಕ್ಷರ ಗಾತ್ರ

ಹುಮನಾಬಾದ್: ಅಲ್ಪಸಂಖ್ಯಾತರು ಹಾಗೂ ಹಿಂದುಳಿದವರ ಅಭಿವೃದ್ಧಿ ಕೇವಲ ಬಿಎಸ್ಪಿ ಪಕ್ಷದಿಂದ ಮಾತ್ರ ಸಾಧ್ಯ ಎಂದು ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಅಭಿಪ್ರಾಯಪಟ್ಟರು.   ಪಟ್ಟಣದಲ್ಲಿ ಬುಧವಾರ ಆಯೋಜಿಸಿದ್ದ ಚುನಾವಣಾ ಪ್ರಚಾರ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ವಿವಿಧ ದಲಿತ ಸಮುದಾಯಗಳು ಮತ್ತು ಮುಸ್ಲಿಂ ಬಾಂಧವರನ್ನು ಕಾಂಗ್ರೆಸ್ ಪಕ್ಷ ಓಟ್ ಬ್ಯಾಂಕ್ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದು, ಸಂಬಂಧಪಟ್ಟವರು ಈಗಲೂ ಜಾಗೃತಗೊಳ್ಳದಿದ್ದಲ್ಲಿ ಭವಿಷ್ಯವಿಡೀ ಗುಲಾಮಗಿರಿ ಮಾಡುವುದರಲ್ಲೆ ಕಳೆಯಬೇಕಾಗುತ್ತದೆ ಎಂದರು.

ಸಿದ್ದರಾಮಯ್ಯ, ಡಾ. ಜಿ. ಪರಮೇಶ್ವರ ರಾಜ್ಯದ ಮುಖ್ಯಮಂತ್ರಿ ಆಗುವುದಕ್ಕೆ ಪಕ್ಷಗಳು ಅವಕಾಶ ನೀಡುವುದಿಲ್ಲ. ಇದೂ ಗೊತ್ತಿದ್ದೂ, ಕೆ.ಎಚ್. ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪಕ್ಷವನ್ನು ಹವಾನಿಯಂತ್ರಿತ ಮನೆ ಎಂಬ ಭ್ರಮೆಯಲ್ಲಿ ಉಳಿದಿರುವುದು ದುರ್ದೈವದ ಸಂಗತಿ ಎಂದು ನುಡಿದರು.
ಹುಮನಾಬಾದ್ ಕುಟುಂಬ ರಾಜಕೀಯಕ್ಕೆ ಈ ಚುನಾವಣೆ ಅಂತಿಮ ಎಂದರು.  ಮತ ನಮ್ಮ ಸಂವಿಧಾನ ಬದ್ಧ ಹಕ್ಕು ಅದನ್ನು ಹಣ ಹೆಂಡಕ್ಕೆ ಮಾರಿಕೊಳ್ಳುವುದು ಹೆತ್ತ ತಾಯಿಯನ್ನು ಮಾರಿಕೊಂಡಂತೆ ಯಾವುದೇ ಕಾರಣಕ್ಕೂ ಅಂಥ ಹೊಲಸಿಗೆ ಕೈ ಹಾಕಬಾರದು. ಹುಮನಾಬಾದ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಗೆಲುವು ಖಚಿತ ಎಂದು ತಿಳಿದರು.

ಪಕ್ಷದ ಹುಮನಾಬಾದ್ ವಿಧಾನಸಭಾ ಕ್ಷೇತ್ರದ ಘೋಷಿತ ಅಭ್ಯರ್ಥಿ ಅಂಕುಶ ಗೋಖಲೆ ಮಾತನಾಡಿ, ಜನರ ಮತ ಪಡೆದ ಪಾಟೀಲ ಪರಿವಾರ ಹುಮನಾಬಾದ್‌ನಲ್ಲಿ ಅರ್ಧಕ್ಕೂ ಹೆಚ್ಚು ಸರ್ಕಾರಿ ಭೂಮಿ ಕಬಳಿಸಿದ್ದು ಬಿಟ್ಟರೇ ಜನತೆಗಾಗಿ ಮಾಡಿದ್ದು ಶೂನ್ಯಸಾಧನೆ ಎಂದರು. ಕ್ಷೇತ್ರದ ಅಸಂಖ್ಯಾತ ವಿದ್ಯಾವಂತ ನಿರುದ್ಯೋಗಿಗಳು ಉದ್ಯೋಗವಿಲ್ಲದೇ ಬೀದಿಯಲ್ಲಿ ಅಡ್ಡಾಡುತ್ತಿದ್ದಾರೆ ಆ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಂಡಿಲ್ಲ ಎಂದರು.

ಬೀದರ್ ನಗರ ಸೇರಿದಂತೆ ಹುಮನಾಬಾದ್ ಮೊದಲಾದ ಕಡೆಗಳಲ್ಲಿ ರಸ್ತೆ ವಿಸ್ತರಣೆ ಕೈಗೊಂಡು ಅಭಿವೃದ್ಧಿ ಮಾಡಿದ ಕೀರ್ತಿ ದಕ್ಷ ಜಿಲ್ಲಾಧಿಕಾರಿ  ಹರ್ಷಗುಪ್ತ ಅವರಿಗೆ ಸಲ್ಲುತ್ತದೆ. ಆದರೇ ಅದನ್ನು ತಾನೇ ಮಾಡಿರುವುದಾಗಿ ಹೇಳಿಕೊಳ್ಳುತ್ತಿರುವುದು ನೋವಿನ ಸಂಗತಿ ಎಂದರು. ತಮ್ಮ ಅಧಿಕಾರದ ದುರ್ಬಳಕೆ ಮಾಡಿಕೊಂಡು ವಿಸ್ತರಣೆ ಆಗಬೇಕಾಗಿದ್ದ  ಪ್ರವಾಸಿ ಮಂದಿರದಿಂದ- ಕೆ.ಇ.ಬಿ ಬೈಪಾಸ್ ವರೆಗಿನ ರಸ್ತೆಯನ್ನು ಮೊಟಕುಗೊಳಿಸಿದ್ದಾರೆ ಎಂದು ಗೋಖಲೆ ನೇರ ಆಪಾದಿಸಿದರು.

ಪಕ್ಷದ ರಾಜ್ಯ ಉಪಾಧ್ಯಕ್ಷ ಸಮದ್ ಸಿದ್ದಿಕಿ, ಪ್ರಧಾನ ಕಾರ್ಯದರ್ಶಿ ಮಹಾದೇವ ಧನ್ನಿ, ದತ್ತು ಸೂರ್ಯವಂಶಿ, ಜಿಲ್ಲಾ ಅಧ್ಯಕ್ಷ ವಿಠಲನಾಯಕ್, ಪ್ರಧಾನ ಕಾರ್ಯದರ್ಶಿ ಜಿಲಾನಿ ಪಟೇಲ, ಜಮೀಲ್ ಅಹ್ಮದ್, ದೇವೀಂದ್ರ ಗದ್ದಾರ, ದೇವಿದಾಸ ಸೂರ್ಯವಂಶಿ, ಸ್ಯಾಮವೆಲ್ ಬಸನೋರ್, ಲಿಂಗಪ್ಪ ಗೋಖಲೆ, ಬಕ್ಕಪ್ಪ ದಂಡಿನ್, ಮೆಹತಾಬ-ಅಲಿ, ಸುನೀತಾ ಭೋಲಾ, ಲಕ್ಷ್ಮೀಬಾಯಿ ಹೊಕ್ರಾಣೆ, ತುಕಾರಾಮ ಧಡ್ಡೆ, ಘಾಳೆಪ್ಪ ಮಾಸ್ತರ್ ಮೊದಲಾದವರು ಇದ್ದರು. 
ಜಿಲ್ಲಾ ಉಪಾಧ್ಯಕ್ಷ ಸುದರ್ಶನ ಮಾಳಗೆ ನಿರೂಪಿಸಿದರು. ತಾಲ್ಲೂಕು ಅಧ್ಯಕ್ಷ ಶಂಕರ ಪ್ರೀಯಾ ಸ್ವಾಗತಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT