ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧ,ಅಂಬೇಡ್ಕರ್ ಬೆಳಕಲ್ಲಿ ವಿವೇಕಾನಂದರನ್ನು ನೋಡಿ

Last Updated 23 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಸ್ವಾಮಿ ವಿವೇಕಾನಂದ ಅವರನ್ನು ಬುದ್ಧ ಮತ್ತು ಅಂಬೇಡ್ಕರ್ ಅವರ ಬೆಳಕಿನಡಿಯಲ್ಲಿ ನೋಡಿದರೆ ಮಾತ್ರ ಅರ್ಥವಾಗುತ್ತಾರೆ~ ಎಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ಹೇಳಿದರು.

ದಲಿತ ಸಂಘರ್ಷ ಸಮಿತಿ (ಭೀಮ ವಾದ)ಯು ನಗರದ ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ಏರ್ಪಡಿಸಿದ್ದ `ವೀರ ಸನ್ಯಾಸಿ, ಶೂದ್ರ ಸನ್ಯಾಸಿ ಸ್ವಾಮಿ ವಿವೇಕಾನಂದ~ ಇವ ನಮ್ಮವ... ಎಂಬ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ನಾವು ವಿದ್ಯಾರ್ಥಿಗಳಾಗಿದ್ದಾಗ ಭಗತ್‌ಸಿಂಗ್, ಸುಭಾಷ್‌ಚಂದ್ರ ಬೋಸ್ , ಸ್ವಾಮಿ ವಿವೇಕಾನಂದ ಅವರು ತುಂಬ ಪರಿಣಾಮ ಬೀರಿದ್ದರು. ನಮಗೂ ಸ್ವಲ್ಪ ಕ್ರಾಂತಿ ಮಾಡುವ ಹುಚ್ಚಿತ್ತಲ್ಲ, ಅಲ್ಲದೆ, ಇವರು ಆರ್‌ಎಸ್ಸೆಸ್ಸೆನ ಕಟ್ಟಾಳುಗಳೆಂದು ನಾವು ತಿಳಿದುಕೊಂಡಿದ್ದೆವು~ ಎಂದು ತಮ್ಮ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿದ್ದುದನ್ನು ನವಿರಾಗಿ ವಿವರಿಸಿದರು.

`ನಿಜ ಅರ್ಥದಲ್ಲಿ ನನಗೆ ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ ಪರಿಚಯ ವಾಗಿದ್ದು ಕುವೆಂಪು ಅವರು ಬರೆದ `ಯಾರಿವನು~ ಪುಸ್ತಕ ಓದಿದ ನಂತರವೇ, ಅವರು ಶೂದ್ರ ಸನ್ಯಾಸಿ ಎಂದು ಅದು ವರೆಗೂ ನನಗೆ ತಿಳಿದಿರಲಿಲ್ಲ.  ಅವರು ಶೂದ್ರ ಎಂಬ ಕಾರಣಕ್ಕೆ ಪೌರೋಹಿತ್ಯ ವರ್ಗದವರು ಅವರಿಗೆ ಸನ್ಯಾಸ ದೀಕ್ಷೆ ನೀಡುವುದನ್ನು ವಿರೋಧಿಸಿತ್ತು ಎಂಬುದು ಕೂಡ ನನಗೆ ತಿಳಿದಿರಲಿಲ್ಲ~ ಎಂದು ಹೇಳಿದರು.

`ಪ್ರಜಾವಾಣಿಯಲ್ಲಿ ಪ್ರಕಟವಾದ ವಿವೇಕಾನಂದರ ಬಗೆಗಿನ ಲೇಖನದಲ್ಲಿ ವಿವೇಕಾನಂದರು ಒಬ್ಬ ವ್ಯಕ್ತಿಯಾಗಿದ್ದರು. ಅವರಿಗೂ ಸಹ ಮಾನವ ಸಹಜ ಕಾಯಿಲೆಗಳು, ಅಭ್ಯಾಸಗಳು ಇದ್ದವು ಎಂದು ವಿವರಿಸಲಾಗಿತ್ತು. ಆದರೆ, ಕೆಲವರು ತಮ್ಮ ಸುಳ್ಳಿನ ಪೊರೆ ಕಳಚುತ್ತೆ ಎಂಬ ಭಯದಿಂದ ಪತ್ರಿಕಾ ಕಚೇರಿ ಮುಂದೆ ಹೋಗಿ ಪ್ರತಿಭಟನೆ ನಡೆಸಿ ರುವುದು ಅಕ್ಷಮ್ಯವಾಗಿದೆ~ ಎಂದರು.

`ಸ್ವಾಮಿ ವಿವೇಕಾನಂದರು ಮತೀಯ ವಾದಿಗಳಾಗಿರಲಿಲ್ಲ. ಅವರು ಎಲ್ಲ ಧರ್ಮವನ್ನು ಅರ್ಥ ಮಾಡಿಕೊಂಡರು. ಹಿಂದೂ ಧರ್ಮದಲ್ಲಿನ ಪೌರೋಹಿತ್ಯ ಶಾಹಿಯನ್ನು ಖಂಡಿಸಿದರು. ಕಂದಾಚಾರ ಮತ್ತು ಮೌಢ್ಯವನ್ನು ವಿರೋಧಿಸಿದರು~ ಎಂದು ಹೇಳಿದರು. `ದುರಂತವೆಂದರೆ, ವಿವೇಕಾನಂದರ ನಿಜ ವ್ಯಕ್ತಿತ್ವವನ್ನು ತಿರುಚಿ ಬಿಂಬಿಸಲಾಗುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲಂತೂ ಶಾಲೆ- ಶಾಲೆಗಳಿಗೆ ಹೋಗಿ ಅಲ್ಲಿ ಮಕ್ಕಳ ಮೇಲೆ ತಮ್ಮ ಆರ್‌ಎಸ್ಸೆಸ್ಸ್ ಪ್ರಭಾವವನ್ನು ಬೀರಿ, ಮಕ್ಕಳಲ್ಲಿ ಮತೀಯ ಭಾವನೆ ಹುಟ್ಟಿಸಲು ಪ್ರಯತ್ನ ಮಾಡುತ್ತಿದ್ದಾರೆ~ ಎಂದು ಕಿಡಿ ಕಾರಿದರು.

`ವಿವೇಕಾನಂದರ ಗುರು ರಾಮಕೃಷ್ಣ ಪರಮಹಂಸರು ಜಾತ್ಯತೀತರಾಗಿದ್ದರು.  ಅವರು ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿ, ನಂತರ ಇಸ್ಲಾಂ ಧರ್ಮಕ್ಕೆ ಮತಾಂತರ ಗೊಂಡಿದ್ದರು. ಇವರ ಶಿಷ್ಯರಾದ ಸ್ವಾಮಿ ವಿವೇಕಾನಂದರು ಮತೀಯವಾದಿ ಆಗಲು ಹೇಗೆ ಸಾಧ್ಯ~ ಎಂದು ಅವರು ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ಹಾಡುಗಾರ ಬಾನಂದೂರು ಕೆಂಪಯ್ಯ, ಸಮಿತಿಯ ರಾಜ್ಯ ಸಂಚಾಲಕ ಆರ್.ಮೋಹನ್‌ರಾಜ್ ಮತ್ತಿತರರು ಉಪಸ್ಥಿತರಿದ್ದರು.

ವಿವೇಕಾನಂದರು ಹೀಗಿದ್ದರು...
ವಿವೇಕಾನಂದರು ರಾಜಸ್ತಾನಕ್ಕೆ ಹೋಗಿದ್ದಾಗ ಅಲ್ಲಿ ಮೂರು ದಿನಗಳ ಕಾಲ ಧರ್ಮದ ಬಗೆಗೆ ಸತತವಾಗಿ  ಚರ್ಚೆ ಮಾಡುತ್ತಾರೆ. ಅವರ ಊಟದ ಬಗ್ಗೆ ಯಾರೂ ಕೇಳುವುದಿಲ್ಲ. ಆಗ ಅಲ್ಲಿಯೇ ಇದ್ದ ಒಬ್ಬ ಚಮ್ಮಾರ, ನೀವು ಮೂರು ದಿನದಿಂದ ಏನೂ ತಿಂದಿಲ್ಲ. ನನ್ನ ಬಳಿ ರೊಟ್ಟಿಯಿದೆ. ಆದರೆ ಅದನ್ನು ನೀವು ಹೇಗೆ ತಿನ್ನುತ್ತೀರಿ? ನಾನು ಒಬ್ಬ ಅಸ್ಪೃಶ್ಯ. ನಿಮಗೆ ಸ್ವಲ್ಪ ಹಿಟ್ಟು ತಂದುಕೊಡುವೆ. ಅದರಿಂದ ರೊಟ್ಟಿ ಮಾಡಿಕೊಂಡು ತಿನ್ನುವಿರಾ ಎಂದು ಕೇಳುತ್ತಾನೆ.

ಆಗ ವಿವೇಕಾನಂದರು ಇಲ್ಲ ನನಗೆ ನಿನ್ನಲ್ಲಿರುವ ರೊಟ್ಟಿಯನ್ನೇ ಕೊಡು ಅಂತ ಕೇಳಿ ಪಡೆದು ತೃಪ್ತಿಯಿಂದ ತಿಂದರು. ಆಗ ಅಲ್ಲಿಗೆ ಆಗಮಿಸುವ ಧರ್ಮ ಜಿಜ್ಞಾಸಕರೊಬ್ಬರು, ನಿಮಗೆ ಇದು ಶೋಭೆ ತರುವುದಿಲ್ಲ ಸ್ವಾಮೀಜಿ  ಎಂದಾಗ, ನೀವು ಮೂರು ದಿನಗಳಿಂದ ನಾನು ಊಟ ಮಾಡಿರುವೇನೋ ಇಲ್ಲವೊ ಎಂದು ಕೇಳಲಿಲ್ಲ. ರೊಟ್ಟಿ ಕೊಟ್ಟ ಅವನು ಈಗ ನನ್ನ ದೃಷ್ಟಿಯಲ್ಲಿ ಶ್ರೇಷ್ಠನಾಗಿದ್ದಾನೆ~ ಎನ್ನುತ್ತಾರೆ.

ಹೀಗೆ ಸ್ವಾಮಿ ವಿವೇಕಾನಂದರ ಅನೇಕ ದೃಷ್ಟಾಂತಗಳು ಅವರ ವ್ಯಕ್ತಿತ್ವವನ್ನು ಬಿಂಬಿಸುತ್ತವೆ ಎಂದು ಅನೇಕ ಚಿತ್ರಣಗಳ ಮೂಲಕ ಸಿ.ಎಚ್.ದ್ವಾರಕಾನಾಥ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT