ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರರಹಿತ ದಂಡ (ಚಿತ್ರ: ದಂಡಂ ದಶಗುಣಂ)

Last Updated 16 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಪ್ರೇಮ ಕಥನಗಳು ಹಾಗೂ ರೌಡಿ - ಪೊಲೀಸ್ ಕಥೆಗಳು ಸಿನಿಮಾದವರ ಪಾಲಿಗೆ ಸದಾ ಆಕರ್ಷಕ. ಹತ್ತಾರು ವರ್ಷಗಳಿಂದ ಪ್ರೇಮದ ನವಿರುತನ ಹಾಗೂ ನೆತ್ತರ ಹಿಂಸೆಯ ಕಥೆಗಳನ್ನು ನಿರಂತರವಾಗಿ ಹೇಳುತ್ತಿರುವುದು ಚಿತ್ರಕರ್ಮಿಗಳಿಗೆ ಬೇಸರ ತಂದಂತಿಲ್ಲ. ಇಂಥ ಚಿತ್ರಗಳಿಗೆ ಪ್ರೇಕ್ಷಕ ಕೂಡ ಒಗ್ಗಿಹೋದಂತಿದೆ. ಹಾಗಾಗಿಯೇ, ಚಿತ್ರವೊಂದರ ಕಥೆಗಿಂತಲೂ ನಿರೂಪಣೆಯೇ ಮುಖ್ಯವೆಂದು ಭಾವಿಸುವವರ ಸಂಖ್ಯೆ ಈಚಿನ ದಿನಗಳಲ್ಲಿ ಹೆಚ್ಚಾಗಿರುವುದು. ಹೀಗೆ, ನಿರೂಪಣೆಯನ್ನು ಬಂಡವಾಳವಾಗುಳ್ಳ ಚಿತ್ರ ‘ದಂಡಂ ದಶಗುಣಂ’.

‘ದಂಡಂ ದಶಗುಣಂ’ ಚಿತ್ರದ ಮೂಲ ತಮಿಳಿನ ‘ಕಾಕ ಕಾಕ’. ಈ ಚಿತ್ರ ತೆಲುಗಿನಲ್ಲಿ ‘ಘರ್ಷಣ’ ಎನ್ನುವ ಶೀರ್ಷಿಕೆಯಲ್ಲಿ ರೂಪುಗೊಂಡಿತ್ತು. ಈ ಎರಡೂ ಚಿತ್ರಗಳನ್ನು ನಿರ್ದೇಶಿಸಿದವರು ಗೌತಮ್ ಮೆನನ್. ಕನ್ನಡದ ‘ದಂಡಂ ದಶಗುಣಂ’ ಚಿತ್ರದ ನಿರ್ದೇಶಕ ಕೆ.ಮಾದೇಶ.

ದುಷ್ಟರನ್ನು ಮಟ್ಟ ಹಾಕುವುದನ್ನೇ ಬದುಕಿನ ಗುರಿಯನ್ನಾಗಿಸಿಕೊಂಡ ಪೊಲೀಸ್ ಅಧಿಕಾರಿಯೊಬ್ಬನ ಕಥೆ ‘ದಂಡಂ ದಶಗುಣಂ’. ಬಹುತೇಕ ಚಿತ್ರಗಳಲ್ಲಿ ನಾಯಕನದು ಏಕಾಂಗಿ ಹೋರಾಟವಾಗಿರುತ್ತದೆ. ಆದರಿಲ್ಲಿ ನಾಯಕನಿಗೆ ಬೆಂಬಲವಾಗಿ ಸಹಮನಸ್ಕ ಪೊಲೀಸ್ ಅಧಿಕಾರಿಗಳ ತಂಡವಿದೆ. ಅನಾಥನಾದ ನಾಯಕ ಪೊಲೀಸ್ ವೃತ್ತಿಯನ್ನೇ ಉಸಿರಾಡುತ್ತಿರುವಾಗ ಆತನ ಬದುಕಿನಲ್ಲಿ ತರುಣಿಯೊಬ್ಬಳ ಪ್ರವೇಶವಾಗುತ್ತದೆ. ಪ್ರೇಮ ಮತ್ತು ಪೊಲೀಸ್ ವೃತ್ತಿ ಎರಡನ್ನೂ ನಿಭಾಯಿಸುವಾಗ ನಾಯಕ ಎದುರಿಸುವ ತವಕತಲ್ಲಣಗಳು ‘ದಂಡಂ ದಶಗುಣಂ’ ಚಿತ್ರದ ಕಥೆ.

ಸಿನಿಮಾದಲ್ಲಿ ಎದ್ದುಕಾಣುವುದು ಕಥೆಯನ್ನು ನಿರೂಪಿಸಿರುವ ತಂತ್ರ. ಉಸಿರು ಬಿಗಿಹಿಡಿದಂತಹ ಭಾವ ಇಡೀ ಚಿತ್ರವನ್ನು ಆವರಿಸಿಕೊಂಡಿದೆ. ಆ ಬಿಸಿಯನ್ನು ಪ್ರೇಮಕಥನದ ನಿರೂಪಣೆಯಲ್ಲೂ ಉಳಿಸಿಕೊಂಡಿರುವುದು ನಿರ್ದೇಶಕರ ಅಗ್ಗಳಿಕೆ. ಇಲ್ಲಿನದು ರಮ್ಯ ಪ್ರೇಮವಲ್ಲ, ಪ್ರಬುದ್ಧ ಪ್ರೇಮ. ಇಂಥದೊಂದು ಸಂಕೀರ್ಣ ನಿರೂಪಣೆಯ ಕಥನವನ್ನು ಕನ್ನಡದಲ್ಲಿ ರೂಪಿಸುವ ಸವಾಲಿನಲ್ಲಿ ನಿರ್ದೇಶಕ ಮಾದೇಶ ಸಾಕಷ್ಟು ಯಶಸ್ವಿಯಾಗಿದ್ದಾರೆ. ಆದರೆ ಮೂಲದ ತೀವ್ರತೆ ಕನ್ನಡದಲ್ಲಿ ಕಡಿಮೆಯಾಗಿದೆ. ಇದಕ್ಕೆ ನಾಯಕ ಚಿರಂಜೀವಿ ಸರ್ಜಾ ಹಾಗೂ ನಾಯಕಿ ರಮ್ಯಾ ಅವರ ಕೊಡುಗೆಯೂ ಇದೆ. ತಮಿಳಿನ ಸೂರ್ಯ - ಜ್ಯೋತಿಕಾ ಹಾಗೂ ತೆಲುಗಿನಲ್ಲಿ ವೆಂಕಟೇಶ್ - ಅಸಿನ್ ಜೋಡಿ ಏರಿದ ಎತ್ತರ ಕನ್ನಡದ ಜೋಡಿಗೆ ದಕ್ಕಿಲ್ಲ. ನಾಯಕ ನಾಯಕಿಗಿಂತಲೂ ಖಳನಟನಾಗಿ ರವಿಶಂಕರ್ ಅಭಿನಯ ಎದ್ದುಕಾಣುವಂತಿದೆ.

ಇಡೀ ಚಿತ್ರ ನಡೆಯುವುದು ನಾಯಕನ ಸ್ವಗತದ ನೆನಪುಗಳಲ್ಲಿ. ಈ ಸ್ವಗತ ಪರಿಣಾಮಕಾರಿಯಾಗಬೇಕಾದರೆ ಧ್ವನಿ ಅತ್ಯಂತ ಮುಖ್ಯ. ಆದರೆ, ಚಿರಂಜೀವಿ ಅವರಿಗೆ ದೊರೆತಿರುವ ಎರವಲು ಶಾರೀರ ಕೂಡ ಪಾತ್ರದ ಅಗತ್ಯಗಳನ್ನು ಸಂಪೂರ್ಣವಾಗಿ ಪೂರೈಸಿಲ್ಲ. ಹರಿಕೃಷ್ಣ ಅವರ ಸಂಗೀತ, ಮನೋಹರ್ ಅವರ ಛಾಯಾಗ್ರಹಣ ಕೂಡ ಮೂಲಕ್ಕೆ ಸಾಕಷ್ಟು ನಿಷ್ಠವಾಗಿವೆ. ಕನ್ನಡ ಚಿತ್ರವನ್ನಷ್ಟೇ ನೋಡಿದವರಿಗೆ ಸಹನೀಯ ಅನ್ನಿಸಬಹುದಾದ ಚಿತ್ರವಿದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT