ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಹಕ್ಕು ರಕ್ಷಣೆ ಸಾಧ್ಯವೇ? - ಸಚಿವ ಆಚಾರ್ಯ ಆತಂಕ

Last Updated 23 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಉಳಿವಿಗಾಗಿ ಹೋರಾಟ ನಡೆಸಲು ಪೈಪೋಟಿಯಲ್ಲಿ ತೊಡಗಿರುವ ಮಾಧ್ಯಮಗಳು ಮಾನವ ಹಕ್ಕುಗಳ ಕುರಿತು ಎಷ್ಟರ ಮಟ್ಟಿಗೆ ನ್ಯಾಯ ಒದಗಿಸುತ್ತವೆ ಎಂಬ ಪ್ರಶ್ನೆ ಎದ್ದಿದೆ~ ಎಂದು ಉನ್ನತ ಶಿಕ್ಷಣ ಸಚಿವ ಡಾ. ವಿ.ಎಸ್.ಆಚಾರ್ಯ ಆತಂಕ ವ್ಯಕ್ತಪಡಿಸಿದರು.

ರಾಜ್ಯ ಉನ್ನತ ಶಿಕ್ಷಣ ಮಂಡಳಿ ಮತ್ತು ತುಮಕೂರು ವಿಶ್ವವಿದ್ಯಾಲಯದ ಸಂವಹನ ಕಾರ್ಯಕ್ರಮಗಳ ಕೇಂದ್ರ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ `ಮಾಧ್ಯಮ ಮತ್ತು ಮಾನವ ಹಕ್ಕುಗಳು: ಜಾಗತಿಕ ಸಂದರ್ಭ~ ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಸುದ್ದಿಯನ್ನು ಬಿತ್ತರಿಸುವಾಗ ಅವು ರೋಚಕಗೊಳ್ಳದಂತೆ ಎಚ್ಚರ ವಹಿಸಬೇಕಿದೆ. ಆದರೆ ಮಾಧ್ಯಮಗಳು ವಾಣಿಜ್ಯೀಕರಣಕ್ಕೆ ಮಹತ್ವ ನೀಡುತ್ತಿರುವುದು ಪ್ರಜ್ಞಾವಂತ ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ. ಅದರಲ್ಲಿಯೂ ಮನರಂಜನಾ ಮತ್ತು ಸುದ್ದಿ ವಾಹಿನಿಗಳ ಸಂಖ್ಯೆ ಹೆಚ್ಚಿದ್ದು ಟಿಆರ್‌ಪಿ ಉಳಿಸಿಕೊಳ್ಳಲು ಮತ್ತು ಅದನ್ನು ಹೆಚ್ಚಿಸಿಕೊಳ್ಳಲು ಒತ್ತು ನೀಡುತ್ತಿವೆ. ಇದರಿಂದಾಗಿ ಅನಗತ್ಯ ಸುದ್ದಿಗಳಿಗೆ ಮಹತ್ವ ಹೆಚ್ಚಿದೆ~ ಎಂದರು.

`ಮಂಗಳೂರಿನ ಪಬ್ ದಾಳಿ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಮಾಧ್ಯಮಗಳು ಗೊಂದಲ ಸೃಷ್ಟಿ ಮಾಡುತ್ತಿವೆ. ಪಬ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ನೋಟಿಸ್ ನೀಡಿದಾಗ ಮಾಧ್ಯಮ ಸಂಸ್ಥೆಗಳು ಅದಕ್ಕೆ ಉತ್ತರ ನೀಡಲಿಲ್ಲ. ಇತ್ತೀಚೆಗೆ ಸಂಪುಟ ಸಭೆ ಬಳಿಕ ಪತ್ರಿಕಾಗೋಷ್ಠಿ ನಡೆಯುವಾಗ ನಾನು ಆಯ ತಪ್ಪಿ ಬಿದ್ದದ್ದನ್ನೇ ರೋಚಕವಾಗಿ ಪ್ರಸಾರ ಮಾಡಲಾಯಿತು~ ಎಂದು ಅಸಮಾಧಾನ ವ್ಯಕ್ತಪಡಿಸಿದರು.

`ಕಾಸಿಗಾಗಿ ಸುದ್ದಿಯಂತಹ ವಿದ್ಯಮಾನಗಳು ಮಾಧ್ಯಮದೊಳಗೂ ಹೊರಗೂ ಸಾಕಷ್ಟು ಚರ್ಚೆಯಾಗುತ್ತಿವೆ. ಮಾಧ್ಯಮಗಳಿಗೆ ಪ್ರತ್ಯೇಕ ಒಂಬುಡ್ಸ್‌ಮನ್ ಬಗ್ಗೆ ನಾನು ಸಲಹೆ ನೀಡಿದಾಗ ಅದು ಶಿಫಾರಸು ಎಂಬಂತೆ ಕೂಗು ಎಬ್ಬಿಸಲಾಯಿತು. ಆದರೆ ಈಗ ಒಂಬುಡ್ಸ್‌ಮನ್ ಅವಶ್ಯಕತೆ ಪರವಾಗಿ ಚರ್ಚೆಗಳು ನಡೆಯುತ್ತಿವೆ. ಇದು ಸ್ವಾಗತಾರ್ಹ ಬೆಳವಣಿಗೆ~ ಎಂದರು.

`ಶಾಲಾ ಕಾಲೇಜುಗಳ ಮಟ್ಟದಿಂದಲೇ ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕಿದ್ದು ಶಿಕ್ಷಣ ವ್ಯವಸ್ಥೆಯನ್ನು ಬದಲಿಸುವ ಅವಶ್ಯಕತೆ ಇದೆ. ಪಠ್ಯಕ್ರಮದಲ್ಲಿ ಮಾನವಹಕ್ಕುಗಳ ಬಗ್ಗೆ ಹೆಚ್ಚು ಚರ್ಚೆ ನಡೆಯುವಂತಾಗಲಿ~ ಎಂದು ಅವರು ಹೇಳಿದರು.

ಕೇರಳ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಜೆ.ವಿ.ವಿಳನಿಲಂ, `ಮಾಧ್ಯಮ ತನಿಖೆ ನಡೆಯುವಾಗ ಜನರ ಖಾಸಗಿ ಬದುಕನ್ನು ಗೌರವಿಸುವ ಅಗತ್ಯವಿದೆ. ಮಹಿಳೆಯರು ಪುರುಷರಷ್ಟೇ ಸಮಾನರು ಎಂಬುದನ್ನು ಅರಿಯಬೇಕಿದೆ. ಪ್ರಮುಖ ಮಾಧ್ಯಮಗಳು ಬಂಡವಾಳಶಾಹಿಗಳಾಗಿರುವುದರಿಂದ ಮಾನವ ಹಕ್ಕುಗಳ ಬಗ್ಗೆ ಅವುಗಳಿಗೆ ಕಾಳಜಿ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಸ್ಥಳೀಯ ಮಾಧ್ಯಮಗಳು ದನಿ ಇಲ್ಲದವರಿಗೆ ದನಿಯಾಗಬೇಕಿದೆ~ ಎಂದು ಹೇಳಿದರು.

`ಪತ್ರಿಕೆ ಟಿವಿಗಳು ಮಾತ್ರವಲ್ಲದೆ ವಿವಿಧ ಎಲೆಕ್ಟ್ರಾನಿಕ್ ಮಾಧ್ಯಮಗಳು ಸಮೂಹ ಸಂವಹನದಲ್ಲಿ ತೊಡಗಿರುವುದರಿಂದ ಸಂವಹನ ಎಂಬುದು ಕಂಪ್ಯೂನಿಕೇಷನ್ ಎಂಬಂತಾಗಿದೆ. ಬ್ಲಾಗ್, ವೆಬ್‌ಸೈಟ್ ಮತ್ತಿತರ ಸಾಮಾಜಿಕ ಮಾಧ್ಯಮಗಳು ಸಾಕಷ್ಟು ಪ್ರಭಾವಿಯಾಗಿವೆ~ ಎಂದರು.

ಇಲಾಖೆಯ ಪ್ರಧಾನ ಕಾರ್ಯದರ್ಶಿ ಲತಾ ಕೃಷ್ಣರಾವ್ ಮಾತನಾಡಿದರು. ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಸಿ.ಶರ್ಮ ಉಪಸ್ಥಿತರಿದ್ದರು.

`ಎನ್‌ಇಇಟಿ: ಕೇಂದ್ರಕ್ಕೆ 10 ದಿನಗಳ ಕಾಲಾವಕಾಶ~
`ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ಎನ್‌ಇಇಟಿ) ರಾಜ್ಯದಲ್ಲಿ ಅಳವಡಿಸಿಕೊಳ್ಳದೇ ಇರುವ ಕುರಿತು ಕೇಂದ್ರಕ್ಕೆ ಪತ್ರ ಬರೆಯಲಾಗಿದ್ದು ಉತ್ತರಕ್ಕಾಗಿ ಇನ್ನು ಹತ್ತುದಿನಗಳ ಕಾಲ ಕಾಯಲಾಗುವುದು~ ಎಂದು ಉನ್ನತ ಶಿಕ್ಷಣ ಸಚಿವ ವಿ.ಎಸ್. ಆಚಾರ್ಯ ತಿಳಿಸಿದರು.

ಸಮಾವೇಶದ ನಂತರ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅವರು `ಮುಖ್ಯಮಂತ್ರಿಗಳು ಈ ಸಂಬಂಧ ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದಾರೆ. ಅವರು ಒಪ್ಪದೆ ಇದ್ದರೆ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಲಿದೆ. ಪಠ್ಯಕ್ರಮದಲ್ಲಿ ವ್ಯತ್ಯಾಸಗಳಿರುವುದರಿಂದ ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ಹೆಚ್ಚಿನ ಹೊರೆಯಾಗುತ್ತದೆ. ಬದಲಿಗೆ 2014ರ ಶೈಕ್ಷಣಿಕ ವರ್ಷದಿಂದ ಅಳವಡಿಸಿಕೊಳ್ಳುವುದು ಸೂಕ್ತ~ ಎಂದು  ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT