ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಪಾಲು ಹೇಮಾಗೆ ಬಿಜೆಪಿಯಲ್ಲಿ ತೀವ್ರ ಅತೃಪ್ತಿ

Last Updated 19 ಫೆಬ್ರುವರಿ 2011, 17:55 IST
ಅಕ್ಷರ ಗಾತ್ರ

ನವದೆಹಲಿ: ಸಿನಿಮಾ ಲೋಕದಲ್ಲಿ ಒಂದು ಕಾಲದಲ್ಲಿ ಡ್ರೀಮ್‌ಗರ್ಲ್ ಎನ್ನಿಸಿಕೊಂಡಿದ್ದ  ನಟಿ ಹೇಮಾಮಾಲಿನಿ ಅವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಆರಿಸಿ ಕಳುಹಿಸುವ ಕೆಲವೇ ಬಿಜೆಪಿ ವರಿಷ್ಠರ ತೀರ್ಮಾನ ಹೈಕಮಾಂಡ್‌ನಲ್ಲೂ ಅಸಮಾಧಾನ ಹುಟ್ಟುಹಾಕಿದೆ.

ಯಡಿಯೂರಪ್ಪ ಅವರನ್ನು ಕಡೆಗಣಿಸಿ ಹೇಮಾಮಾಲಿನಿ ಹೆಸರು ಅಂತಿಮಗೊಳಿಸಿರುವುದು ಸೂಕ್ತ ಕ್ರಮವಲ್ಲ ಎಂದು ಕೆಲವು ಬಿಜೆಪಿ ಮುಖಂಡರು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಹಗರಣಗಳ ಸುಳಿಗೆ ಸಿಕ್ಕಿ ದುರ್ಬಲವಾಗಿರುವ ಯಡಿಯೂರಪ್ಪ ಅವರ ಅಸಹಾಯಕ ಪರಿಸ್ಥಿತಿಯನ್ನು ದುರ್ಬಳಕೆ ಮಾಡಲಾಗಿದೆ ಎಂದಿದ್ದಾರೆ.

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಮುಂದೆ ಆಟ ನಡೆಸಲಿ ಎಂದು ಸವಾಲು  ಹಾಕಿದ್ದಾರೆ. ಗುಜರಾತಿನಿಂದಲೂ ರಾಜ್ಯಸಭೆ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕೇಂದ್ರ ಬಿಜೆಪಿ ಅಭ್ಯರ್ಥಿಗಳನ್ನು ಹೇರಲಿ ಎಂದು ಕಿಡಿ ಕಾರಿದ್ದಾರೆ. ಆದರೆ  ಮೋದಿ ಅವರು ಬಲಿಷ್ಠರಾಗಿರುವುದರಿಂದ ಇಂತಹ ಪ್ರಸ್ತಾಪ ಮಾಡಲು ವರಿಷ್ಠರು ಎರಡೆರಡು ಬಾರಿ ಯೋಚನೆ ಮಾಡಬೇಕಾಗುತ್ತದೆ. ಆ ಕಾರಣದಿಂದಾಗಿ ಯಡಿಯೂರಪ್ಪ ಅವರ ಅಸಹಾಯಕತೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದೂ ವ್ಯಾಖ್ಯಾನಿಸಿದ್ದಾರೆ.

ಯಡಿಯೂರಪ್ಪ ಅವರು ಕಳೆದ ಎರಡು ವರ್ಷಗಳಿಂದ ಅನೇಕ ಸಮಸ್ಯೆಗಳಲ್ಲಿ ಸಿಲುಕಿಕೊಂಡಿದ್ದು, ಅದರಿಂದ ಹೊರಬರಲು ಯತ್ನಿಸುತ್ತಿರುವ ಸಂದರ್ಭದಲ್ಲಿ, ಪುನಃ ವರಿಷ್ಠರನ್ನು ಎದುರು ಹಾಕಿಕೊಳ್ಳಲು ಮನಸ್ಸು ಮಾಡುತ್ತಿಲ್ಲ.
ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಆರ್ಥಿಕ ಸಲಹೆಗಾರರಾಗಿದ್ದ ಜಗದೀಶ್ ಶೆಟ್ಟಿಗಾರ್ ಅವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಮಾಡುವಂತೆ ಕೋರಿದ್ದರು. ಆದರೆ 1992ರಿಂದಲೂ ವರಿಷ್ಠರು ಅವರ ಬೇಡಿಕೆಯನ್ನು ನಿರ್ಲಕ್ಷಿಸುತ್ತಲೇ ಬಂದಿರುವುದಾಗಿ ಶೆಟ್ಟಿಗಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲೂ ಕೇಂದ್ರ ಬಿಜೆಪಿ ವರಿಷ್ಠರ ನಿರ್ಧಾರ ಗುಂಪುಗಾರಿಕೆ ಬಲಪಡಿಸಿದೆ. ಕೆ.ಎಸ್. ಈಶ್ವರಪ್ಪ ಹೇಮಾಮಾಲಿನಿ ಅವರನ್ನು ಬೆಂಬಲಿಸಿದ್ದಾರೆ. ಯಡಿಯೂರಪ್ಪ ಧನಂಜಯ ಕುಮಾರ್ ಹೆಸರನ್ನು ಪ್ರಸ್ತಾಪ ಮಾಡಿದ್ದಾಗಿ ತಿಳಿಸಿದ್ದಾರೆ. ಈಚೆಗೆ 2 ಸಲ ದೆಹಲಿಗೆ ಬಂದಿದ್ದಾಗ ಮುಖ್ಯಮಂತ್ರಿ ಕುಮಾರ್ ಹೆಸರನ್ನು ಪ್ರಸ್ತಾಪಿಸಿದ್ದರು. ಈಗಾಗಲೇ ಬಿಜೆಪಿ ಒಂದು ಸ್ಥಾನವನ್ನು ವೆಂಕಯ್ಯ ನಾಯ್ಡು ಅವರಿಗೆ ಬಿಟ್ಟುಕೊಟ್ಟಿದೆ. ಸತತ ಮೂರು ಅವಧಿಯಿಂದ ಆಯ್ಕೆ ಆಗುತ್ತಿದ್ದಾರೆ. ಈಗ ಮತ್ತೊಂದು ಸ್ಥಾನ ಹೇಮಾಮಾಲಿನಿ ಪಾಲಾಗಿದೆ. ಇವರಿಂದ ರಾಜ್ಯಕ್ಕೆ ಆಗುತ್ತಿರುವ ಲಾಭವಾದರೂ ಏನು ಎಂಬ ಪ್ರಶ್ನೆ ಎದ್ದಿದೆ.

ಹೊರಗಿನ ಅಭ್ಯರ್ಥಿಗಳನ್ನು ಆಮದು ಮಾಡಿಕೊಳ್ಳುವುದರಲ್ಲಿ ಉಳಿದ ಪಕ್ಷಗಳು ಹಿಂದೆ ಬಿದ್ದಿಲ್ಲ. ಹಿಂದೆ ಜನತಾ ಪಕ್ಷ- ದಳ ರಾಂಜೇಠ್ಮಲಾನಿ ಹಾಗೂ ಎಂ.ಎ.ಎಂ. ರಾಮಸ್ವಾಮಿ ಅವರನ್ನು ರಾಜ್ಯಸಭೆಗೆ ಕಳುಹಿಸಿತ್ತು. ಹಾಲಿ ಸದಸ್ಯ ರಾಜೀವ್ ಚಂದ್ರಶೇಖರ್ ಹೊರಗಿನವರೆಂದು ವ್ಯಾಖ್ಯಾನಿಸಲಾಗುತ್ತಿದೆ. ಆದರೆ, 30 ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಎಂಬ ವಾದ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT