ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತನ ಆತ್ಮಹತ್ಯೆ ಪ್ರಕರಣ: ತಹಸೀಲ್ದಾರ್, ಕೃಷಿ ಅಧಿಕಾರಿಗೆ ಮುತ್ತಿಗೆ

Last Updated 19 ನವೆಂಬರ್ 2011, 6:00 IST
ಅಕ್ಷರ ಗಾತ್ರ

ದೇವದುರ್ಗ: ತಾಲ್ಲೂಕಿನ ಕೊಪ್ಪರ ಗ್ರಾಮದ ರೈತ ಬಸಪ್ಪ ಹಿರೇಕುರುಬರ್ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಶುಕ್ರವಾರ ಮೃತನ ಸ್ವಗ್ರಾಮ ಕೊಪ್ಪರಕ್ಕೆ ತಹಸೀಲ್ದಾರ್ ವೈ.ಎಸ್.ಮಲ್ಲಿಕಾರ್ಜುನ ಮತ್ತು ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಪ್ಪ ಅವರನ್ನು ರೈತರು ಮತ್ತು ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಕಳೆದ ಒಂದು ತಿಂಗಳ ಹಿಂದೆಯೇ ನಾರಾಯಣಪುರ ಬಲದಂಡೆ ಯೋಜನೆಯ 16ನೇ ಉಪಕಾಲುವೆಗೆ ನೀರು ಹರಿಯದೆ ಇರುವ ಬಗ್ಗೆ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರ ನೀಡಿದರೂ ಕ್ರಮಕ್ಕೆ ಮುಂದಾಗದೆ ಇರುವುದರಿಂದ ಒಬ್ಬ ರೈತನ ಜೀವ ಹೋಗಬೇಕಾಯಿತು. ಅಂದು ಪರಿಹಾರ ಕಂಡುಕೊಂಡಿದ್ದರೆ ಇಂದು ರೈತನ ಜೀವ ಉಳಿಸಿಕೊಳ್ಳಬಹುದಾಗಿತ್ತು. ಇದಕ್ಕೆಲ್ಲ ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದ್ದು, ಅವರನ್ನು ಗ್ರಾಮಕ್ಕೆ ಕರೆತರುವವರೆಗೂ ನಿಮ್ಮನ್ನು ಇಲ್ಲಿಂದ ಬಿಡುವುದಿಲ್ಲ ಎಂದು ಬಿಜೆಪಿ ಪಕ್ಷದ ರೈತ ಮೋರ್ಚಾ ಅಧ್ಯಕ್ಷ ಶರಣಗೌಡ ಕೊಪ್ಪರ ಅವರ ನೇತೃತ್ವದಲ್ಲಿ ಇತರ ರೈತರು ಆಗ್ರಹಿಸಿದರು.

ಈ ವರ್ಷ ಕಾಲುವೆಗೆ ನೀರು ಬಿಟ್ಟ ದಿನದಿಂದ ಇಲ್ಲಿವರಿಗೂ 16ನೇ ಉಪಕಾಲುವೆಗೆ ಸರಿಯಾಗಿ ನೀರು ಹರಿದಿಲ್ಲ. ಈ ಬಗ್ಗೆ ಕಳೆದ ಒಂದು ತಿಂಗಳ ಹಿಂದೆಯೇ ನೂರಾರು ಜನ ರೈತರು ನೀರಾವರಿ ಇಲಾಖೆಗೆ ತೆರಳಿ ಮನವಿ ಪತ್ರ ನೀಡಿದರೂ ಇಂದಿಗೂ ಇತ್ತಕಡೆ ಸುಳಿಯದೆ ಇರುವುದರಿಂದ ಸಾವಿರಾರೂ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ ಎಂದು ರೈತರು ಆರೋಪಿಸಿದರು.

ಭರವಸೆ: ಕೊಪ್ಪರ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ಪ್ರಕಾಶ ಪಾಟೀಲ ಜೇರಬಂಡಿ ಅವರು ಮಧ್ಯಪ್ರವೇಶಿಸುವ ಮೂಲಕ ರೈತರನ್ನು ಸಮಾಧಾನಗೊಳಿಸಿ, ಕೂಡಲೇ ನೀರಾವರಿ ಇಲಾಖೆಯ ಅಧಿಕಾರಿಗಳ ಸಭೆಯನ್ನು ಕರೆದು 16ನೇ ಉಪಕಾಲುವೆಯ ಎಲ್ಲ ಉಪಕಾಲುವೆಗಳಗೆ ನೀರು ಹರಿಯುವಂತೆ ತಕ್ಷಣ ಕ್ರಮಕೈಗೊಳ್ಳಲಾಗುವುದು ಮತ್ತು ಮೃತನ ಕುಟುಂಬಕ್ಕೆ ಸರ್ಕಾರದ ವತಿಯಿಂದ ಪರಿಹಾರ ಕುರಿತು ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದು ಸ್ಥಳದಲ್ಲಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ವಾಪಸ್ ಪಡೆಯಲಾಯಿತು.

ಪರಿಹಾರ: ಜಿಲ್ಲಾ ಪಂಚಾಯಿತಿ ಸದಸ್ಯ ಪ್ರಕಾಶ ಪಾಟೀಲ ಅವರು ತಮ್ಮ ಸ್ವಂತದಿಂದ ಮೃತನ ಕುಟುಂಬಕ್ಕೆ ಐದು ಸಾವಿರ ರೂಪಾಯಿ ನೀಡಿದರು.

ತಹಸೀಲ್ದಾರ್ ವೈ.ಎಸ್.ಮಲ್ಲಿಕಾರ್ಜುನ, ಗ್ರಾಪಂ ಅಧ್ಯಕ್ಷ ಸಿದ್ದಲಿಂಗಪ್ಪಗೌಡ ಪಿಎಸ್‌ಐ ಪುಲ್ಲಯ್ಯ ರಾಠೋಡ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT