ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸಭೆ: ಟ್ರ್ಯಾಕ್ಟರ್ ಖರೀದಿದಾರರ ಹಣ ವಾಪಸ್‌ಗೆ ಸೂಚನೆ

Last Updated 8 ಅಕ್ಟೋಬರ್ 2011, 9:10 IST
ಅಕ್ಷರ ಗಾತ್ರ

ದಾವಣಗೆರೆ: ಮಹಿಂದ್ರಾ ಕಂಪೆನಿಯಿಂದ ಜೂ. 30, 2011ರ ನಂತರ ಟ್ರ್ಯಾಕ್ಟರ್ ಖರೀದಿಸಿರುವ ರೈತರಿಗೆ ರೂ. 7 ಸಾವಿರ ಹಣ ವಾಪಸ್ ನೀಡಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಮಹಿಂದ್ರಾ ಕಂಪೆನಿ ಷೋರೂಮ್ ಮಾಲೀಕರಿಗೆ ಸೂಚಿಸಿದರು.

ನಗರದ ಎಲ್ಲಾ ಟ್ರ್ಯಾಕ್ಟರ್ ಕಂಪೆನಿಯವರು ಖರೀದಿದಾರರಿಂದ ನಿಗದಿತ ದರಕ್ಕಿಂತ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ರೈತರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸುವಂತೆ ಒತ್ತಾಯಿಸಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತರು ಏರ್ಪಡಿಸಿದ್ದ ದಿಢೀರ್ ಸಭೆಯಲ್ಲಿ ಚರ್ಚಿಸಿದ ನಂತರ ಅವರು ಈ ಸೂಚನೆ ನೀಡಿದರು.

ಇದಕ್ಕೆ ಒಪ್ಪದ ರೈತರು, 2005ರಿಂದ 2011ರವರೆಗೆ ರೈತರು ಖರೀದಿಸಿರುವ ಟ್ರ್ಯಾಕ್ಟರ್ ಬೆಲೆಯನ್ನು ತನಿಖೆಗೊಳಪಡಿಸಬೇಕು. ಷೋರೂಮ್ ಮಾಲೀಕರು ನಕಲಿ ದರಪಟ್ಟಿ ನೀಡುವ ಮೂಲಕ ರೈತರಿಗೆ ಮೋಸ ಮಾಡುತ್ತಿದ್ದಾರೆ. ಕನಿಷ್ಠ ಎಂದರೂ ರೂ. 30ರಿಂದ ರೂ. 40 ಸಾವಿರದವರೆಗೆ ಹೆಚ್ಚುವರಿ ಲಾಭ ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೇ ರೈತರಿಗೆ ಟ್ರ್ಯಾಕ್ಟರ್ ಸಾಲ ನೀಡುವಲ್ಲಿಯೂ ಪಿಎಲ್‌ಡಿ ಬ್ಯಾಂಕ್‌ನಲ್ಲಿ ಲಂಚ ಪಡೆಯುತ್ತಿದ್ದಾರೆ. ಇದೆಲ್ಲವನ್ನೂ ಸಮಗ್ರವಾಗಿ ತನಿಖೆಗೊಳಪಡಿಸಿ ರೈತರಿಗೆ ನ್ಯಾಯ ದೊರಕಿಸಬೇಕು ಎಂದು ರೈತರು ಪಟ್ಟು ಹಿಡಿದರು.

ರೈತರನ್ನು ಸಮಾಧಾನಪಡಿಸಿದ ಜಿಲ್ಲಾಧಿಕಾರಿ,  ಮಹಿಂದ್ರಾ ಕಂಪೆನಿಯ 275 ಮಾಡಲ್ ಟ್ರ್ಯಾಕ್ಟರ್‌ಗಳನ್ನು ಹಿಮಾಚಲದಿಂದ ತರಿಸಲಾಗುತ್ತಿದೆ. ಹಾಗಾಗಿ, ಸಾರಿಗೆ ವೆಚ್ಚವಾಗಿ ಕಂಪೆನಿ ರೂ. 7 ಸಾವಿರದಷ್ಟು ಹೆಚ್ಚುವರಿ ಹಣ ಪಡೆದಿದೆ.
 
ಅದನ್ನು ರೈತರಿಗೆ ಹಿಂದಿರುಗಿಸುವಂತೆ ಸೂಚಿಸಲಾಗಿದೆ. ಅದಕ್ಕೆ ಕಂಪೆನಿ ಷೋರೂಮ್ ಮಾಲೀಕರು ಒಪ್ಪಿಗೆ ಸೂಚಿಸಿದ್ದಾರೆ. ಉಳಿದಂತೆ ಅ. 18ರಂದು ನಗರದ 14 ಷೋರೂಮ್ ಮಾಲೀಕರು, ಕಂಪೆನಿ ಪ್ರತಿನಿಧಿಗಳನ್ನು, ರೈತ ಮುಖಂಡರ ಸಮ್ಮುಖದಲ್ಲಿ ಸಭೆ ನಡೆಸಿ ಚರ್ಚಿಸುವ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ್, ಪಿಎಲ್‌ಡಿ ಬ್ಯಾಂಕ್ ವ್ಯವಸ್ಥಾಪಕ ಸುಬ್ರಹ್ಮಣ್ಯ, ರೈತ ಮುಖಂಡರಾದ ಆವರಗೆರೆ ರುದ್ರಮುನಿ, ಹೊನ್ನೂರು ಮುನಿಯಪ್ಪ, ಹಾಳೂರು ನಾಗರಾಜ್, ಕೊಂಡಜ್ಜಿ ಶಿವಕುಮಾರ್ ಚಿಕ್ಕನಹಳ್ಳಿ ಮಲ್ಲೇಶಪ್ಪ, ಬುಳ್ಳಾಪುರ ಹನುಮಂತಪ್ಪ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT