ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಸುಮ್ಮನೆ ಕುಳಿತಿಲ್ಲ - ಪ್ರಣವ್ ತೀಕ್ಷ್ಣ ಪ್ರತಿಕ್ರಿಯೆ

Last Updated 16 ಜೂನ್ 2012, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): `ಆರ್ಥಿಕ ಸುಧಾರಣೆ ಕ್ರಮ ಕೈಗೊಂಡ ನಂತರ ಕೇಂದ್ರ ಸರ್ಕಾರವೇನೂ ಸುಮ್ಮನೆ ಕುಳಿತಿಲ್ಲ. ಇದೇ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸಹ ಆರ್ಥಿಕ ಪರಿಸ್ಥಿತಿ ಸುಧಾರಿಸಲೆಂದೇ ಸೋಮವಾರ ಬಡ್ಡಿದರ ಕಡಿತಗೊಳಿಸಲಿದೆ~ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ದೇಶದ ಆರ್ಥಿಕ ಪರಿಸ್ಥಿತಿಯ ಹಿನ್ನಡೆ ಮತ್ತು `ಸ್ಟಾಂಡರ್ಡ್ ಅಂಡ್ ಪೂರ್~ನ ಋಣಾತ್ಮಕ ರೇಟಿಂಗ್ ಹಿನ್ನೆಲೆಯಲ್ಲಿ  ದೇಶದ ಉದ್ಯಮ ವಲಯ ಖಾರವಾಗಿ ಪ್ರತಿಕ್ರಿಯಿಸಿರುವುದಕ್ಕೆ ಪ್ರತಿಯಾಗಿ ಪ್ರಣವ್ ಮುಖರ್ಜಿ ಅವರು ಶನಿವಾರ ಈ ಪ್ರತ್ಯುತ್ತರ ನೀಡಿದರು.

`ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜೂನ್ 18ರಂದು ಪ್ರಕಟಿಸಲಿರುವ ಮಧ್ಯಂತರ ತ್ರೈಮಾಸಿಕ ಹಣಕಾಸು ನೀತಿಯಲ್ಲಿ ಅಲ್ಪಾವಧಿ ಬಡ್ಡಿ ದರ ತಗ್ಗಿಸುವ ವಿಶ್ವಾಸ ಇದೆ~ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದರು.

ಮಂದಗತಿಯ `ಜಿಡಿಪಿ~, ಹಣದುಬ್ಬರ ಹೆಚ್ಚಳ, ವಿತ್ತೀಯ ಕೊರತೆ ಇತ್ಯಾದಿ ನಕಾರಾತ್ಮಕ ಸಂಗತಿಗಳು ದೇಶದ ಆರ್ಥಿಕ ಪ್ರಗತಿಗೆ ತೊಡಕಾಗಿವೆ. ಸರ್ಕಾರವೂ ಕೈಕಟ್ಟಿ ಕುಳಿತಿಲ್ಲ. ಆರ್ಥಿಕ ಚೇತರಿಕೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಶನಿವಾರ ಇಲ್ಲಿ ನಡೆದ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಅಸೋಚಾಂ) ಸಭೆಯಲ್ಲಿ ಅಭಿಪ್ರಾಯಪಟ್ಟರು.

`ಆರ್‌ಬಿಐ~ ಅತ್ಯಂತ ಗೌರವಯುತ ಹಣಕಾಸು ನಿಗಾ ಸಂಸ್ಥೆ. ಸರ್ಕಾರ ವಿತ್ತೀಯ ನೀತಿ ಸರಿಹೊಂದಿಸುವಂತೆ,  `ಆರ್‌ಬಿಐ~ ಕೂಡ ಈ ಬಾರಿ ಹಣಕಾಸು ನೀತಿ ಸರಿಹೊಂದಿಸುವ ವಿಶ್ವಾಸ ಇದೆ~ ಎಂದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಯೂರೋಪ್ ಬಿಕ್ಕಟ್ಟು, ಡಾಲರ್ ಎದುರು ರೂಪಾಯಿ ಅಪಮೌಲ್ಯ ಇತ್ಯಾದಿ ಬೆಳವಣಿಗೆಗಳು ಆರ್ಥಿಕತೆಯ ಮೇಲೆ ಪರಿಣಾಮ ಬೀರಿವೆ.

ಒಬ್ಬ ಹಣಕಾಸು ಸಚಿವನಾಗಿ ನಾನು ವಾಸ್ತವಾಂಶ ಅಲ್ಲಗಳೆಯುವುದಿಲ್ಲ. ಆದರೆ, ಇತ್ತೀಚೆಗೆ ಸಾಲ ಮೌಲ್ಯ ಮಾಪನ ಸಂಸ್ಥೆ `ಎಸ್ ಅಂಡ್‌ಪಿ~ ನೀಡಿರುವ  ವರದಿಯಲ್ಲಿರುವಂತೆನೂ ಪರಿಸ್ಥಿತಿ ಬಿಗಡಾಯಿಸಿಲ್ಲ. ದೇಶದ ಆರ್ಥಿಕ ಮೂಲಾಂಶಗಳು ಭದ್ರವಾಗಿವೆ.  ಸರ್ಕಾರ ಕೈಕಟ್ಟಿ ಕುಳಿತಿಲ್ಲ ಎಂದು ಅವರು ಉದ್ಯಮ ವಲಯದ ಟೀಕೆಗಳಿಗೆ ಉತ್ತರ ನೀಡಿದರು.

ಪ್ರಸಕ್ತ ಹಣಕಾಸು ವರ್ಷದಲ್ಲಿ (2012-13) ಸಬ್ಸಿಡಿ ಮೊತ್ತವನ್ನು `ಜಿಡಿಪಿ~ಯ ಶೇ 2ಕ್ಕೆ ತಗ್ಗಿಸುವ ಕುರಿತು ಸರ್ಕಾರ ಯೋಜನೆ ರೂಪಿಸಿದೆ. ಈ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ ್ಙ1.79 ಲಕ್ಷ ಕೋಟಿಗಳಷ್ಟು ಸಬ್ಸಿಡಿ ನಿಗದಿಪಡಿಸಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ (2011-12) ಇದು ್ಙ2.08 ಲಕ್ಷ ಕೋಟಿಗಳಷ್ಟಿತ್ತು ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT