ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ, ಅಭಿವೃದ್ಧಿಗೆ ಒತ್ತು

Last Updated 24 ಜನವರಿ 2012, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಎರಡು ವರ್ಷಗಳ ಕಾಲ ಅನುಸರಿಸಿದ ಕಠಿಣ ಹಣಕಾಸು ನೀತಿ ಕೈಬಿಟ್ಟಿರುವ ಭಾರತೀಯ ರಿಸರ್ವ್ ಬ್ಯಾಂಕ್, ಈಗ ಸಾಲಗಳ ಬಡ್ಡಿ ದರ  ಇಳಿಸುವ ಮತ್ತು ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಲು ಮುಂದಾಗಿದೆ.

 ಮಂಗಳವಾರ ಇಲ್ಲಿ ಪ್ರಕಟಿಸಲಾದ ತನ್ನ ಹಣಕಾಸು ನೀತಿಯ 3ನೇ ತ್ರೈಮಾಸಿಕ ಪರಾಮರ್ಶೆಯಲ್ಲಿ, ಎಲ್ಲರ ನಿರೀಕ್ಷೆಗೆ ವ್ಯತಿರಿಕ್ತವಾಗಿ ನಗದು ಮೀಸಲು ಅನುಪಾತವನ್ನು (ಸಿಆರ್‌ಆರ್)  ಶೇ 0.50ರಷ್ಟು ತಗ್ಗಿಸಿ, ಬ್ಯಾಂಕಿಂಗ್ ವ್ಯವಸ್ಥೆಗೆ ರೂ.32 ಸಾವಿರ ಕೋಟಿಗಳಷ್ಟು ಮೊತ್ತವು ಹರಿದು ಬರುವಂತೆ ಮಾಡಿದೆ.

ಕೇಂದ್ರೀಯ ಬ್ಯಾಂಕ್‌ನ ಈ ನಡೆಯನ್ನು ಉದ್ಯಮಿಗಳು, ಬ್ಯಾಂಕ್ ಮುಖ್ಯಸ್ಥರು ಸ್ವಾಗತಿಸಿದ್ದಾರೆ. ಮುಂಬೈ ಷೇರುಪೇಟೆಯೂ ಸಕಾರಾತ್ಮಕವಾಗಿ ಸ್ಪಂದಿಸಿದೆ.

ಅಲ್ಪಾವಧಿ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡುವ ಗೋಜಿಗೆ ಆರ್‌ಬಿಐ ಹೋಗಿಲ್ಲ. ಆದರೆ, ವಾಣಿಜ್ಯ ಬ್ಯಾಂಕ್‌ಗಳು ತನ್ನಲ್ಲಿ ಠೇವಣಿ ಇರಿಸುವ ಮೀಸಲು ಮೊತ್ತವನ್ನು (ಸಿಆರ್‌ಆರ್) ಶೇ 6ರಿಂದ ಶೇ 5.5ಕ್ಕೆ ಇಳಿಸಿ ಅಚ್ಚರಿ ಮೂಡಿಸಿದೆ.  ಇದು ಈ ತಿಂಗಳ 28ರಿಂದಲೇ ಜಾರಿಗೆ ಬರಲಿದ್ದು, ವಿವಿಧ ಬಗೆಯ ಸಾಲ ವಿತರಿಸಲು ಬ್ಯಾಂಕ್‌ಗಳ ಬಳಿ ಈಗ  32 ಸಾವಿರ ಕೋಟಿಗಳಷ್ಟು ನಗದು ಲಭ್ಯವಾಗಿರಲಿದೆ.

ಬ್ಯಾಂಕ್‌ಗಳ ಬಳಿ ಹಣದ ಲಭ್ಯತೆ ಪ್ರಮಾಣ ಹೆಚ್ಚಿದರೂ ಅದರಿಂದ ಸಾಲಗಾರರ ಸಮಾನ ಮಾಸಿಕ ಕಂತಿನ (ಇಎಂಎಸ್) ಮೊತ್ತವು ತಕ್ಷಣಕ್ಕೆ ಕಡಿಮೆಯಾಗುವ ಸಾಧ್ಯತೆಗಳಿಲ್ಲ. ಹಣದುಬ್ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ, ನೀತಿ ನಿರೂಪಣಾ ಬಡ್ಡಿ ದರಗಳನ್ನು ಇಳಿಸುವುದು ಅಪ್ರಬುದ್ಧ ನಿಲುವಾಗಲಿದೆ ಎಂದು `ಆರ್‌ಬಿಐ~ ಗವರ್ನರ್ ಡಿ. ಸುಬ್ಬರಾವ್ ಅಭಿಪ್ರಾಯಪಟ್ಟಿದ್ದಾರೆ.
 
ವರಮಾನ ವೃದ್ಧಿಯ ಕ್ರಮಗಳ ಅನುಪಸ್ಥಿತಿ ಹಿನ್ನೆಲೆಯಲ್ಲಿ, ಬಡ್ಡಿ ದರ ಕಡಿತ ಮಾಡಲು ಸಾಧ್ಯವಿಲ್ಲ. ಬಜೆಟ್‌ನಲ್ಲಿ ವಿತ್ತೀಯ ಕೊರತೆಗೆ ಕಡಿವಾಣ ಹಾಕುವ ಪ್ರಯತ್ನಗಳಿಗೆ ಹೆಚ್ಚಿನ ಚಾಲನೆ ದೊರೆಯಬೇಕಾಗಿದೆ. ಕೇಂದ್ರ ಸರ್ಕಾರವು ತನ್ನ ವಿತ್ತೀಯ ಕೊರತೆಗೆ ಕಡಿವಾಣ ಹಾಕದಿದ್ದರೆ ಬಡ್ಡಿ ದರ ಕಡಿತ ಸಾಧ್ಯವಿಲ್ಲ ಎಂದೂ ಅವರು ಎಚ್ಚರಿಸಿದ್ದಾರೆ.

ಆರ್ಥಿಕ ಬೆಳವಣಿಗೆಯು ಕುಸಿತ ಕಾಣುತ್ತಿರುವ ಹಿನ್ನೆಲೆಯಲ್ಲಿ, `ಆರ್‌ಬಿಐ~  ಈಗ ಹಣದುಬ್ಬರ ನಿಯಂತ್ರಣ ಬದಲಿಗೆ ಆರ್ಥಿಕ ವೃದ್ಧಿಯತ್ತ ಗಮನ ಕೇಂದ್ರೀಕರಿಸಿದೆ.

ಆಹಾರ ಹಣದುಬ್ಬರ ತೀವ್ರ ಇಳಿಕೆ ದಾಖಲಿಸಿದ್ದರೂ, ಬಡ್ಡಿ ದರಗಳನ್ನು ಇಳಿಸುವ ಬಗ್ಗೆ ಎಚ್ಚರಿಕೆಯ ಧೋರಣೆ ತಳೆದಿದೆ. ಇದುವರೆಗೆ ಗರಿಷ್ಠ ಬಡ್ಡಿ ದರದ ಒತ್ತಡಕ್ಕೆ ಒಳಗಾಗಿರುವ ಸಾಲಗಾರರು ಇನ್ನು ಮುಂದೆ ಸಮಾಧಾನದ ನಿಟ್ಟುಸಿರು ಬಿಡಬಹುದು. ಹೆಚ್ಚುವರಿ ಹಣದ ಲಭ್ಯತೆ ಕಾರಣಕ್ಕೆ  ಗ್ರಾಹಕರನ್ನು ಆಕರ್ಷಿಸಲು ಬ್ಯಾಂಕ್‌ಗಳು ವಿವಿಧ ಬಗೆಯ ಸಾಲಗಳ ಮೇಲಿನ ಬಡ್ಡಿ  ದರಗಳನ್ನು ಇಳಿಸುವ ಸಾಧ್ಯತೆಗಳು ಇವೆ.

ಆರ್ಥಿಕ ವೃದ್ಧಿ ದರ: 2011-12ನೇ  ಸಾಲಿನ ಆರ್ಥಿಕ ವೃದ್ಧಿ ದರವು ಈ ಮೊದಲಿನ ಶೇ 7.6ರ ಬದಲಿಗೆ ಶೇ 7ರಷ್ಟು ಇರಲಿದೆ ಎಂದೂ `ಆರ್‌ಬಿಐ~ ಅಂದಾಜಿಸಿದೆ.

`ಸಿಆರ್‌ಆರ್~ ಕಡಿತವು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹಣದ ಲಭ್ಯತೆ ಹೆಚ್ಚಿಸಲಿದೆ. ಸಾಲಗಳ ಬಡ್ಡಿ ದರವನ್ನೂ ತಗ್ಗಿಸಲಿದೆ. ಇದರಿಂದಾಗಿ ಆರ್ಥಿಕ ಅಭಿವೃದ್ಧಿದರ ಏರಿಕೆ ಕಾಣಲಿದೆ  ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಆರ್. ಗೋಪಾಲನ್ ಪ್ರತಿಕ್ರಿಯಿಸಿದ್ದಾರೆ.

ಬಡ್ಡಿ ಹೊರೆ:ತಕ್ಷಣಕ್ಕೆ ತಗ್ಗದು
 `ಸಿಆರ್‌ಆರ್~ ಕಡಿತವು ಬ್ಯಾಂಕ್ ಬಡ್ಡಿ ದರ ಇಳಿಸಲು ಖಂಡಿತವಾಗಿಯೂ  ಉತ್ತೇಜನ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಎಸ್. ಸಿ. ಸಿನ್ಹಾ ಅವರು ಕೂಡ ಇದೇ ಬಗೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಗೃಹ, ವಾಹನ ಖರೀದಿ ಮತ್ತು ಉದ್ದಿಮೆ - ವಹಿವಾಟು ಸಾಲಗಳ ಮೇಲಿನ ಬಡ್ಡಿ ದರಗಳನ್ನು ತಕ್ಷಣಕ್ಕೆ ಇಳಿಸುವುದಿಲ್ಲ ಎಂದು ಬಹುತೇಕ ಬ್ಯಾಂಕ್‌ಗಳು ತಿಳಿಸಿವೆ.

ಬ್ಯಾಂಕ್‌ಗಳ ಬಳಿ ಹೆಚ್ಚುವರಿಯಾಗಿ ಲಭ್ಯ ಇರುವ ರೂ. 32 ಸಾವಿರ ಕೋಟಿಗಳಿಂದಾಗಿ ಬಡ್ಡಿ ದರಗಳು ಕಡಿಮೆಯಾಗಲಿವೆ ಎಂದು ಪ್ರಧಾನಿ ಆರ್ಥಿಕ ಸಲಹಾ ಸಮಿತಿ ಅಧ್ಯಕ್ಷ ಸಿ. ರಂಗರಾಜನ್ ಹೇಳಿದ್ದಾರೆ. 2010ರ ಮಾರ್ಚ್ ತಿಂಗಳಿನಿಂದೀಚೆಗೆ ಚಿಲ್ಲರೆ ಮತ್ತು ಉದ್ದಿಮೆ ವಹಿವಾಟಿನ ಸಾಲಗಳ ಮೇಲಿನ ಬಡ್ಡಿ ದರಗಳು ದುಬಾರಿಯಾಗಿ ಪರಿಣಮಿಸಿವೆ. ಆದರೆ, ಸ್ಥಿರ ಠೇವಣಿ ಮೇಲಿನ ಬಡ್ಡಿ ದರಗಳ ಮಾತ್ರ ಶೇ 3.75ರಷ್ಟು ಹೆಚ್ಚಳಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT