ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಧಾನ್ಯಗಳ ತಿನಿಸಿಗೆ `ವಂದೇ ಮಾತರಂ'

ರಸಾಸ್ವಾದ
Last Updated 15 ಜುಲೈ 2013, 19:59 IST
ಅಕ್ಷರ ಗಾತ್ರ

ನವಣೆ, ಸಾವೆ, ಹಾರಕ, ಕೊರ್ಲು... ಹೀಗೆ ವಿವಿಧ ಸಿರಿಧಾನ್ಯಗಳಿಂದ ಮಾಡಿದ ಪಾಯಸ, ಬಿಸಿಬೇಳೆಭಾತ್, ಪೊಂಗಲ್, ರೊಟ್ಟಿ ಇನ್ನಿತರೆ ಆಹಾರದ ರುಚಿಯನ್ನು ವಾರಕ್ಕೆ ಮೂರು ಬಾರಿ ಗ್ರಾಹಕರಿಗೆ ಪರಿಚಯಿಸುತ್ತಿರುವ ಹೋಟೆಲ್ ನಗರದಲ್ಲಿದೆ. ಇಲ್ಲಿ ಬಹುರಾಷ್ಟ್ರೀಯ ಕಂಪೆನಿಗಳ ಪಾನೀಯಗಳಿಲ್ಲ. ರುಚಿಗಾಗಿ ಹಾಕುವ ಪುಡಿಗಳಾಗಲೀ ಬಣ್ಣಗಳನ್ನಾಗಲೀ ಬಳಸದೆ ಆಹಾರ ಸಿದ್ಧಪಡಿಸಲಾಗುತ್ತದೆ. ಅದಕ್ಕೆಂದೇ ವಿವಿಧ ಬಡಾವಣೆಗಳಿಂದ ಗ್ರಾಹಕರು ಜಮಾಯಿಸುತ್ತಾರೆ.

ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ `ವಂದೇ ಮಾತರಂ' ಇಂಥ ವಿವಿಧ ಬಗೆಯ ಆಹಾರ ಪರಿಚಯಿಸುತ್ತಿರುವ ಹೋಟೆಲ್. ಒಂದೂವರೆ ವರ್ಷದ ಹಿಂದೆ ಆರಂಭವಾದ ಹೋಟೆಲ್ ಇದುವರೆಗೂ ರುಚಿಯಲ್ಲಾಗಲೀ, ಗುಣಮಟ್ಟದಲ್ಲಾಗಲೀ ಎಂದೂ ಹಿಂದೆ ಬಿದ್ದಿಲ್ಲವಂತೆ. ಕೆಂಪಕ್ಕಿ ಮೊಸರನ್ನ, ಮೂಡೆ ಇಡ್ಲಿ, ಪನ್ನೀರ್ ಪಸಂದ್, ಪನ್ನೀರ್ ಟಿಕ್ಕಾ, ತಂದೂರಿ, ಚೈನೀಸ್, ದಕ್ಷಿಣ ಹಾಗೂ ಉತ್ತರ ಭಾರತದ ಊಟವೂ ಲಭ್ಯ. ಅಂದಂದಿನ ತಿಂಡಿಗಳ ನಮೂನೆಗಳ ಪ್ರದರ್ಶನವನ್ನು ಕಾಣಬಹುದು.

ದೇಶಭಕ್ತಿ ಮೂಡಿಸಲು...
ಫಾರ್ಮಸಿಯಲ್ಲಿ ಡಿಪ್ಲೊಮಾ ಮಾಡಿರುವ ಕೆ.ಆರ್. ನಾಗೇಶ್ ಈ ಹೋಟೆಲನ್ನು ಒಂದೂವರೆ ವರ್ಷಗಳ ಹಿಂದೆ ಆರಂಭಿಸಿದರು. ದೇಶಭಕ್ತರಾದ ಇವರು ಹೋಟೆಲ್‌ಗೆ `ವಂದೇ ಮಾತರಂ' ಎಂದು ನಾಮಕರಣ ಮಾಡಿದರು. ಒಮ್ಮೆ ಗುಜರಾತಿನ ನಿವೃತ್ತ ಸೈನಿಕರೊಬ್ಬರು ಹೋಟೆಲ್‌ಗೆ ಬಂದು `ವಂದೇ ಮಾತರಂ' ಎಂದವರೇ ನಾಗರಾಜ್ ಅವರಿಗೆ ವಂದಿಸಿ, ನಿಮ್ಮ ದೇಶಭಕ್ತಿ ಹೀಗೆಯೇ ಮುಂದುವರಿಯಲಿ ಎಂದು ಹಾರೈಸಿದ ಕ್ಷಣವನ್ನು ನಾಗೇಶ್ ಇಂದಿಗೂ ನೆನಪು ಮಾಡಿಕೊಳ್ಳುತ್ತಾರೆ.

“ದೇಶಕ್ಕಾಗಿ ಎಷ್ಟೋ ಮಂದಿ ಪ್ರಾಣತ್ಯಾಗ ಮಾಡಿದ್ದಾರೆ. ಸ್ವಾತಂತ್ರ್ಯ ದಿನದಂದೋ ಅಥವಾ ಗಣರಾಜ್ಯೋತ್ಸವದಂದೋ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪು ಮಾಡಿಕೊಂಡು ಸುಮ್ಮನಾಗುತ್ತೇವೆ. ಆದ್ದರಿಂದ ದಿನಕ್ಕೆ ಒಮ್ಮೆಯಾದರೂ ದೇಶವನ್ನು ನೆನಪು ಮಾಡಿಕೊಳ್ಳಲೆಂದು ಹೋಟೆಲ್‌ಗೆ `ವಂದೇ ಮಾತರಂ' ಹೆಸರು ಇಡಲಾಯಿತು” ಎಂದು ಹೆಮ್ಮೆಯಿಂದ ಹೇಳುತ್ತಾರೆ ನಾಗೇಶ್.

ನೂರು ಬಗೆ ದೋಸೆ

ಇಲ್ಲಿ ದಿನಕ್ಕೆ 15ಕ್ಕೂ ಹೆಚ್ಚು ಬಗೆಯ ದೋಸೆಗಳ ಮೆನು ಇರುತ್ತದೆ. ಆಂಧ್ರದ `ಉಲ್ಲಿಪಾಯಿ' ದೋಸೆ, ಪೆಸರಟ್ಟು, ನೀರುದೋಸೆ, ಮೆಂತ್ಯದೋಸೆ, ಪೈನಾಪಲ್ ದೋಸೆ, ಸ್ಪ್ರಿಂಗ್, ಬಿಸ್ಕತ್ ದೋಸೆ, ಹೆಸರುಕಾಳು ದೋಸೆ ಹಾಗೂ ಹಣ್ಣಿನ ದೋಸೆಗಳು ಗಮನ ಸೆಳೆಯುವಂಥವು. ಹೆಂಚಿಗೆ ಹಾಕಿದ ದೋಸೆಯನ್ನು ಮಡಚಿ ಬಿಸ್ಕತ್ ರೀತಿ ಕತ್ತರಿಸಿ ಕೊಡುವುದೇ `ಬಿಸ್ಕತ್ ದೋಸೆ'. ಅದಕ್ಕೆ ಹೆಚ್ಚು ಬೇಡಿಕೆ. ಒಟ್ಟು ನೂರು ವಿಧದ ದೋಸೆಗಳ ರುಚಿಯನ್ನು ಹೋಟೆಲ್ ಪರಿಚಯಿಸಿದೆ.

`ನಮ್ಮಲ್ಲಿ ಬೆಲೆ ಹೆಚ್ಚಿಲ್ಲ. ನಮ್ಮ ಉದ್ದೇಶ ಆರೋಗ್ಯಕರ ಆಹಾರವನ್ನು ಕೊಡುವುದು. ಅಂದರೆ ವೈದ್ಯರು ಸಲಹೆ ಮಾಡುವ ಗೋಧಿ, ಜೋಳ, ನವಣೆ, ಸಜ್ಜೆ ಹಾಗೂ ಸಾವೆಯ ಆಹಾರವನ್ನು ಮೆನುವಿನಲ್ಲಿ ಮುಖ್ಯವಾಗಿ ಸೇರಿಸಿದ್ದೇವೆ. ಸದ್ಯ ವಾರಕ್ಕೆ ಮೂರು ದಿನ ಈ ಕಿರುಧಾನ್ಯಗಳ ಬಿಸಿಬೇಳೆಭಾತ್, ಪಾಯಸ, ರೊಟ್ಟಿ ಹಾಗೂ ಪೊಂಗಲ್ ಮಾಡುತ್ತಿದ್ದೇವೆ. ಈ ಧಾನ್ಯಗಳಿಗೆ ಪ್ರತಿ ಕೆ.ಜಿ.ಗೆ 80ರಿಂದ 90 ರೂಪಾಯಿ ಬೆಲೆ ಇರುವುದರಿಂದ ಮೂರು ದಿನ ಮಾಡುತ್ತಿದ್ದೇವೆ. ಗ್ರಾಹಕರ ಪ್ರತಿಕ್ರಿಯೆ ಆಧರಿಸಿ ವಾರಪೂರ್ತಿ ಕಿರುಧಾನ್ಯಗಳ ಆಹಾರ ಮಾಡುತ್ತೇವೆ' ಎನ್ನುತ್ತಾರೆ ಮಾಲೀಕ ನಾಗೇಶ್.

ಬೆಳಿಗ್ಗೆ 7ರಿಂದ ರಾತ್ರಿ 10.30ರವರೆಗೆ ಹೋಟೆಲ್ ತೆರೆದಿರುತ್ತದೆ.
ಸ್ಥಳ: ವಂದೇ ಮಾತರಂ, ನಂ 149/ಎ, ವೆಸ್ಟ್ ಆಫ್ ಕಾರ್ಡ್ ರಸ್ತೆ (ಇಸ್ಕಾನ್ ಪಕ್ಕ), ರಾಜಾಜಿನಗರ. ಮಾಹಿತಿಗೆ: 99029 22155.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT