ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರೀಂಕೋರ್ಟ್‌ಗೆ ಸಿಂಗ್ ಅರ್ಜಿ: ಸರ್ಕಾರದಿಂದ ನಿಯಮಾವಳಿ ಉಲ್ಲಂಘನೆ

Last Updated 19 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸರ್ಕಾರವು ತಮ್ಮ ಜನ್ಮ ದಿನಾಂಕ ನಿರ್ಧರಿಸುವಲ್ಲಿ ನಡಾವಳಿ ಮತ್ತು ಸಾಮಾನ್ಯ ನ್ಯಾಯದ ನಿಯಮಾವಳಿಯನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ಅವರು ಸುಪ್ರೀಂಕೋರ್ಟ್‌ಗೆ ಗುರುವಾರ ತಿಳಿಸಿದ್ದಾರೆ.

 ತಮ್ಮ ವಯಸ್ಸನ್ನು 1951ರ ಬದಲಿಗೆ 1950ರ ಮೇ 10 ಎಂದೇ ನಿಗದಿಪಡಿಸಿ, ಸರ್ಕಾರ ನಿರ್ಧಾರ ಕೈಗೊಂಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ 68 ಪುಟಗಳ ಅರ್ಜಿಯಲ್ಲಿ ಅವರು ಈ ವಾದ ಮಂಡಿಸಿದ್ದಾರೆ.

`ತಾವು ಆಗಿನ ಸೇನಾ ಮುಖ್ಯಸ್ಥರ ತಿಳಿವಳಿಕೆ ಮೇರೆಗೆ ಉತ್ತಮ ನಂಬಿಕೆಯಿಂದಲೇ 1950 ತಮ್ಮ ಜನ್ಮದಿನ ವರ್ಷವೆಂದು ತಿಳಿಸಿದ್ದೆ. ಸೇನಾ ಕಾರ್ಯದರ್ಶಿಗಳ ವಿಭಾಗದ ತೀರ್ಮಾನದೊಂದಿಗೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ~ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

`ಅಟಾರ್ನಿ ಜನರಲ್ ಅವರಿಂದಷ್ಟೇ ಅಭಿಮತ ಪಡೆದು, ಅತ್ಯಂತ ಹಿರಿಯ ಸೇನಾಧಿಕಾರಿಯನ್ನು ಏಕೆ ಅವಮಾನಿಸಲಾಗಿದೆ ಎಂಬುದರ ಬಗ್ಗೆ ಸರ್ಕಾರ ವಿವರಣೆ ನೀಡುವ ಅಗತ್ಯವಿದೆ~ ಎಂದು ಅವರು ಅರ್ಜಿಯಲ್ಲಿ ಹೇಳಿದ್ದಾರೆ.

ರಕ್ಷಣಾ ಸಚಿವಾಲಯವು ಸೇನಾಪಡೆದಾಖಲಾತಿಗಳನ್ನು ಕಾಪಾಡುವ ಅಧಿಕಾರಿಯಾದ ಅಡ್ಜುಟೆಂಟ್ ಜನರಲ್ ವಿಭಾಗದ ಮೇಲೆ ಸಂಶಯ ವ್ಯಕ್ತಪಡಿಸಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿರುವ ಅವರು, ಇದಕ್ಕೆ `ಸಚಿವಾಲಯ ಯಾವುದೇ ಸ್ಪಷ್ಟನೆ ನೀಡಿಲ್ಲ~ ಎಂದಿದ್ದಾರೆ.

 `ತಮ್ಮ ಜನ್ಮ ದಿನ 10.5.1951 ಎಂದು ದೃಢೀಕರಿಸಿ, ತಾವು ಪ್ರಮಾಣಪತ್ರ ಸಲ್ಲಿಸಿದರೂ, ಅದನ್ನು ನಿರಾಕರಿಸಲು ಯಾವುದೇ ಆಡಳಿತವು ಸರಿಯಾದ ಕಾರಣ ಹೇಳಿಲ್ಲ~ ಎಂದೂ ಅವರು ನುಡಿದಿದ್ದಾರೆ.

ಸರ್ಕಾರಿ ದಾಖಲಾತಿಗಳಲ್ಲಿರುವ ಜನ್ಮ ದಿನಾಂಕದ ಬದಲಿಗೆ, ಯುಪಿಎಸ್‌ಸಿ ಅರ್ಜಿಯಲ್ಲಿ ಭರ್ತಿ ಮಾಡುವಾಗ ಅಚಾತುರ್ಯದ ತಪ್ಪು ಆಗಿರುವುದಕ್ಕೆ ಏಕೆ ಅಷ್ಟೊಂದು ಮಹತ್ವ ನೀಡಲಾಗಿದೆ ಎಂಬುದನ್ನು ತಿಳಿದುಕೊಳ್ಳಲು ಸಂಬಂಧಿಸಿದವರು ವಿಫಲವಾಗಿರುವುದನ್ನೂ ಅವರು ಮನದಟ್ಟು ಮಾಡಿದ್ದಾರೆ.

ಮೇ 31ಕ್ಕೆ ನಿವೃತ್ತಿ: ಜನರಲ್ ಸಿಂಗ್ ತಮ್ಮ ಜನ್ಮ ದಿನಾಂಕವು 10.5.1950 ಎಂದೇ ಅಂತಿಮವಾಗಿ ನಿಗದಿಯಾದಲ್ಲಿ ಈ ವರ್ಷದ ಮೇ 31ರಂದು ಸೇವೆಯಿಂದ ನಿವೃತ್ತಿಯಾಗಬೇಕಿದೆ.

2008ರಲ್ಲಿ ಆಗಿನ ಸೇನಾ ಮುಖ್ಯಸ್ಥ ಜನರಲ್ ದೀಪಕ್ ಕಪೂರ್ ಅವರು ಪತ್ರದ ಮೂಲಕ ಆದೇಶ ನೀಡಿದ ಹಿನ್ನೆಲೆಯಲ್ಲಿ 1950 ಮೇ 10 ತಮ್ಮ ಜನ್ಮದಿನ ಎಂದು ಒಪ್ಪಿಕೊಂಡಿರುವುದಾಗಿ ಸಿಂಗ್ ವಿವರಣೆ ನೀಡಿದ್ದಾರೆ.

ಸೇನೆಯ ಅತ್ಯುನ್ನತ ಸಂಪ್ರದಾಯ ಪಾಲಿಸಬೇಕಾದ ಅನಿವಾರ್ಯದ ಹಿನ್ನೆಲೆಯಲ್ಲಿ ಆಗ ತಾವು ಹಾಗೆ ಒಪ್ಪಿಕೊಳ್ಳದೆ ಅನ್ಯಮಾರ್ಗ ಇರಲಿಲ್ಲ. ಆದರೆ ಹಿರಿಯ ಅಧಿಕಾರಿಗಳು 10.5.1951 ಅನ್ನು ಸೇವಾ ಹಿರಿತನಕ್ಕೆ ಪರಿಗಣಿಸುವುದಾಗಿ ಭರವಸೆಯೂ ಅದಕ್ಕೆ ಕಾರಣವಾಗಿತ್ತು. ಹಾಗಾಗಿ ಸಮಸ್ಯೆಯನ್ನು ತಾರ್ಕಿಕವಾಗಿ ಬಗೆಹರಿಸಿಕೊಳ್ಳುವ ವಿಶ್ವಾಸದಿಂದ ಹಿರಿಯ ಅಧಿಕಾರಿಯ ಆದೇಶಕ್ಕೆ ತಲೆಬಾಬೇಕಾಯಿತು ಎಂದು ವಿವರಿಸಿದ್ದಾರೆ.

ಅಲ್ಲದೆ, ಜನರಲ್ ಕಪೂರ್ ಅವರು ವೈಯಕ್ತಿಕವಾಗಿ ಜನ್ಮದಿನಾಂಕ ಗೊಂದಲವನ್ನು ನಿವಾರಣೆ ಮಾಡುವುದಾಗಿಯೂ ಆಶ್ವಾಸನೆ ನೀಡಿದ್ದರು. ಆದರೆ ಮೂರು ತಿಂಗಳ ನಂತರವೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ತಾವು 2008ರ ಜುಲೈ 1ರಂದು ಸೇನಾ ಮುಖ್ಯಸ್ಥರಿಗೆ ಪತ್ರ ಬರೆದು ವಿನಂತಿ ಮಾಡಿಕೊಂಡಿದ್ದಾಗಿಯೂ ತಿಳಿಸಿದ್ದಾರೆ.

2006 ಮತ್ತು 2007ರಲ್ಲಿ ಎಂಎಸ್ ವಿಭಾಗದ ಮುಖ್ಯಸ್ಥರಾದ ಲೆಫ್ಟಿನೆಂಟ್ ಜನರಲ್ ಖರೆ ಮತ್ತು ಲೆಫ್ಟಿನೆಂಟ್ ಜನರಲ್ ಗಂಗಾಧರನ್ ಅವರನ್ನು ಭೇಟಿ ಮಾಡಿ ಜನ್ಮ ದಿನಾಂಕದ ಗೊಂದಲಗಳ ಬಗ್ಗೆ ಮನವರಿಕೆ ಮಾಡಿ, ಗೊಂದಲ ನಿವಾರಣೆ ಮಾಡುವಂತೆ ಕೋರಿದ್ದಾಗಿ ಅರ್ಜಿಯಲ್ಲಿ ವಿವರಿಸಿದ್ದಾರೆ.

`ನಿವೃತ್ತಿ ವಯಸ್ಸನ್ನು ನಿರ್ಧರಿಸುವ ಹಕ್ಕು ಸರ್ಕಾರಕ್ಕೆ ಇದೆಯಾದರೂ, ಸೇನಾ ಮುಖ್ಯಸ್ಥರಿಗೆ ಘನತೆಯಿಂದ ನಿವೃತ್ತಿಯಾಗುವ ಹಕ್ಕಿದೆ~ ಎಂದು ಪ್ರತಿಪಾದಿಸಿದ್ದಾರೆ.

10.5.1951 ಅನ್ನೇ ತಮ್ಮ ಜನ್ಮದಿನ ಎಂದು ಪರಿಗಣಿಸಲು ಕಾನೂನು ಸಮ್ಮತವಾಗಿ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರಿಗೆ ತಾವು ನೀಡಿದ ಮನವಿಯನ್ನು ತಿರಸ್ಕರಿಸಿರುವುದು ತಮ್ಮ ಮೂಲಭೂತ ಹಕ್ಕನ್ನು ಉಲ್ಲಂಘಿಸುವ  ಕ್ರಮ ಎಂದು ಸಿಂಗ್ ಅರ್ಜಿಯಲ್ಲಿ ಬಣ್ಣಿಸಿದ್ದಾರೆ.

1951ನೇ ತಮ್ಮ ನಿಜವಾದ ಜನ್ಮದಿನ ವರ್ಷ ಎಂದು ಪರಿಗಣಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅವರು ನ್ಯಾಯಪೀಠದಲ್ಲಿ ಮನವಿ ಮಾಡಿದ್ದಾರೆ.

ಪ್ರತಿಕ್ರಿಯೆಗೆ ಪ್ರಧಾನಿ ಸಿಂಗ್ ನಿರಾಕರಣೆ
ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ಅವರ ಜನ್ಮ ದಿನಾಂಕ ವಿವಾದದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಪ್ರಧಾನಿ ಮನಮೋಹನ್ ಸಿಂಗ್ ಗುರುವಾರ ನಿರಾಕರಿಸಿದ್ದಾರೆ.

“ಇದೊಂದು ಸೂಕ್ಷ್ಮ ವಿಷಯವಾಗಿದೆ. ಇದರ ಬಗ್ಗೆ ಮಾತನಾಡಲು ನಾನು ಬಯಸುವುದಿಲ್ಲ” ಎಂದು ಅವರು ನವದೆಹಲಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT