ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸ್ಥಿರ ದ್ವಿತಳಿ ರೇಷ್ಮೆ ಉತ್ಪಾದನೆಗೆ ಬಜೆಟ್ ನಲ್ಲಿ ನೆರವು: ಸಿ.ಎಂ

Last Updated 24 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ರೇಷ್ಮೆ ಉದ್ಯಮ ಮತ್ತು ಬೆಳೆಗಾರರ ಸಮಸ್ಯೆಗಳ ಕುರಿತು ನನ್ನಲ್ಲಿ ಹೆಚ್ಚಿನ ತಿಳಿವಳಿಕೆಯಿಲ್ಲ. ಆದರೆ ಇದರ ಆಳ-ಅರಿವನ್ನು ಚೆನ್ನಾಗಿ ಬಲ್ಲ ರೇಷ್ಮೆ ತಜ್ಞರೊಂದಿಗೆ ಚರ್ಚೆ ನಡೆಸಿ, ಮುಂದಿನ ಬಜೆಟ್‌ನಲ್ಲಿ ಅಗತ್ಯವಿರುವ ಅನುದಾನ ನೀಡಲಾಗುವುದು~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಭರವಸೆ ನೀಡಿದರು.

ಭಾರತೀಯ ರೇಷ್ಮೆ ಒಕ್ಕೂಟವು ನಗರದ ಯವನಿಕ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ `ಸುಸ್ಥಿರ ದ್ವಿತಳಿ ರೇಷ್ಮೆ ಉತ್ಪಾದನೆ~ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

`ರೇಷ್ಮೆ ಇಲಾಖೆಯ ಸಮಸ್ಯೆಗಳನ್ನು ಚರ್ಚಿಸುವ ಸಲುವಾಗಿ ಜ.27ರಂದು ಬಜೆಟ್ ಪೂರ್ವಭಾವಿ ಸಭೆ ಕರೆಯಲಾಗಿದೆ. ಯಾವುದೇ ಬೆಳೆಯ ಬೆಲೆ ಕುಸಿತದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ರೈತರ ಹಿತಾಸಕ್ತಿಯನ್ನು ಕಾಪಾಡಿದ್ದು, ಮುಂದಿನ ದಿನಗಳಲ್ಲೂ ಈ ಪ್ರವೃತ್ತಿಯನ್ನು ಮುಂದುವರಿಸಲಿದೆ~ ಎಂದರು.

ರೇಷ್ಮೆ ಸಚಿವ ಬಿ.ಎನ್.ಬಚ್ಚೇಗೌಡ ಮಾತನಾಡಿ, `ರೇಷ್ಮೆ ಉದ್ಯಮದ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸುವ ಕೃಷಿಕರು, ವಿತರಕರು, ನೇಕಾರರು ಸೇರಿದಂತೆ ಎಲ್ಲರ ಹಿತಾಸಕ್ತಿಗೆ ಒತ್ತು ನೀಡಿದಾಗ ಮಾತ್ರ ಉದ್ಯಮ ಉಳಿಯುತ್ತದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಅವರು ಕ್ರಮ ಕೈಗೊಳ್ಳಬೇಕು~ ಎಂದು ಮನವಿ ಮಾಡಿದರು.

`ನೇಕಾರರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ನೀಡುತ್ತಿರುವಂತೆ ಸರ್ಕಾರವು ರೇಷ್ಮೆ ವಿತರಕರಿಗೂ ಶೇ 3ರಷ್ಟು ಬಡ್ಡಿಯಲ್ಲಿ ಸಾಲ ಒದಗಿಸಬೇಕು ಮತ್ತು ವಿದ್ಯುತ್ ದರದಲ್ಲಿ ಪ್ರತಿ ಯೂನಿಟ್‌ಗೆ ರೂ. 1.15 ಪೈಸೆ ಸಬ್ಸಿಡಿ ಒದಗಿಸುವ ಮೂಲಕ ವಿತರಕರಿಗೆ ಸಹಾಯ ನೀಡಬೇಕು~ ಎಂದು ಹೇಳಿದರು.

`ಚೀನಾದಲ್ಲಿ ವರ್ಷಕ್ಕೆ 1ಲಕ್ಷ ಟನ್ ರೇಷ್ಮೆ ಉತ್ಪಾದನೆಯಾಗುತ್ತಿದ್ದರೆ, ದೇಶದಲ್ಲಿ 16 ಸಾವಿರ ಟನ್ ರೇಷ್ಮೆ ಉತ್ಪಾದಿಸಲಾಗುತ್ತಿದೆ. ಚೀನಾಕ್ಕೆ ಹೋಲಿಸಿದರೆ ರೇಷ್ಮೆ ಬೆಳೆಯುವಲ್ಲಿ ಹಿಂದಿದ್ದೇವೆ. ನಲುಗುತ್ತಿರುವ ರೇಷ್ಮೆ ಉದ್ಯಮವನ್ನು ಸರಿಪಡಿಸಲು ನೂತನ ತಂತ್ರಜ್ಞಾನ ಬಳಕೆ ಮತ್ತು ಸಂಶೋಧನೆಯನ್ನು ನಿರಂತರವಾಗಿ ನಡೆಸಬೇಕು~ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸಿ.ನಾರಾಯಣ ಸ್ವಾಮಿ ಅವರು ವಿವಿಧ ಬೇಡಿಕೆಯುಳ್ಳ ಮನವಿ ಪತ್ರವನ್ನು ಸಲ್ಲಿಸಿದರು. ರೇಷ್ಮೆ ಇಲಾಖೆಯ ಆಯುಕ್ತರಾದ ಡಾ.ಎನ್.ನಾಗಲಾಂಬಿಕ ದೇವಿ ಇತರರು ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT