ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರೆಯಾದ ಗಜಗಾತ್ರದ ಹೊಟ್ಟೆ

ಬಾಲಕನಿಗೆ ಯಕೃತ್ತಿನ ತೊಂದರೆ
Last Updated 17 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಯಾದಗಿರಿ: ಈ ಬಾಲಕನಿಗೆ 16 ವರ್ಷ. ಕೈಕಾಲು, ಮುಖ ಸೇರಿದಂತೆ ದೇಹದ ಅಂಗಾಂಗ­ಗಳೆಲ್ಲ ಸರಿಯಾಗಿಯೇ ಇವೆ. ಆದರೆ ಹೊಟ್ಟೆ ಮಾತ್ರ ದೊಡ್ಡದಾಗಿದ್ದು, ಬಾಲಕ ಹಾಗೂ ಪಾಲಕರಿಗೆ ಹೊರೆ­ಯಾಗಿ ಪರಿಣಮಿಸಿದೆ.

ತಾಲ್ಲೂಕಿನ ಸಾವೂರು ಗ್ರಾಮದ ಮರೆಪ್ಪ ಹಾಗೂ ಹುಸೇನಪ್ಪ ದಂಪತಿಯ ಎರಡನೇ ಪುತ್ರ ಮರಿಯಪ್ಪ 10 ವರ್ಷ­ಗಳಿಂದ ಗಜಗಾತ್ರದ ಹೊಟ್ಟೆ­ಯೊಂದಿಗೆ ಓಡಾಡುತ್ತಿದ್ದಾನೆ. ಆತನ ಪಾಲಕರು ಆಸ್ಪತ್ರೆಗಳಿಗೆ ಅಲೆದಾಡಿ ಸುಸ್ತಾಗಿದ್ದಾರೆ. ಕೈಯಲ್ಲಿದ್ದ ಹಣವೆಲ್ಲ ಖರ್ಚಾ­ಗಿದ್ದು, ಬಾಲಕನ ಚಿಕಿತ್ಸೆಗೆ ಹಣವಿಲ್ಲದೇ ದಿಕ್ಕು ತೋಚದಂತಾ­ಗಿದ್ದಾರೆ.

ಮರಿಯಪ್ಪ ಎರಡು ವರ್ಷದ ಬಾಲಕನಾಗಿದ್ದಾಗ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಆಗ ತಂದೆ ಮರೆಪ್ಪ, ಮಗನಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು. ಕೆಲ ತಿಂಗಳ ನಂತರ ಹೊಟ್ಟೆ ನೋವು ತೀವ್ರವಾಗುತ್ತ ಹೋಯಿತು. ಇದರ ಜೊತೆಗೆ ಹೊಟ್ಟೆ­ಯ ಗಾತ್ರವೂ ಹೆಚ್ಚಾಗುತ್ತ ಹೋಯಿತು.
ಇದರಿಂದಾಗಿ ಬಾಲಕ ಮರಿಯಪ್ಪ­ನನ್ನು ಹೈದರಾಬಾದ್‌ ಹಾಗೂ ಬೆಂಗಳೂರಿನ ಮಹಾವೀರ ಜೈನ್‌ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿನ ವೈದ್ಯರು ಹಲವಾರು ಪರೀಕ್ಷೆಗಳನ್ನು ಮಾಡಿ ಬಾಲಕ ಯಕೃತ್ತಿನ ತೊಂದರೆ­ಯಿಂದ ಬಳಲುತ್ತಿರುವುದನ್ನು ಪತ್ತೆ ಮಾಡಿದರು. ಇದಕ್ಕೆ ಕ್ರೋನಿಕ್‌ ಬಡ್‌ ಚೈರಿ ಸಿಂಡ್ರೋಮ್ (ಸಿಬಿಎಸ್‌) ಎಂದು ಹೇಳಲಾಗುತ್ತದೆ.

‘ಮಹಾವೀರ ಜೈನ್‌ ಆಸ್ಪತ್ರೆಯಲ್ಲಿ ಜುಲೈನಲ್ಲಿ ಚಿಕಿತ್ಸೆ ಕೊಡಿಸಿದ್ದೇವೆ. ಆದರೆ ರೋಗ ಗುಣಮುಖವಾಗುತ್ತಿಲ್ಲ. ಈಗಾಗಲೇ ₨ 7 ರಿಂದ ₨ 9 ಲಕ್ಷ ಖರ್ಚು ಮಾಡಿದ್ದೇವೆ. ನಾವು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು, ಇನ್ನೂ ಹೆಚ್ಚಿನ ಚಿಕಿತ್ಸೆ ಕೊಡಿಸಲು ಆಗುತ್ತಿಲ್ಲ. ಮಗನ ನೋವನ್ನೂ ನೋಡಲು ಆಗುತ್ತಿಲ್ಲ' ಎಂದು ಬಾಲಕನ ತಂದೆ ಮರೆಪ್ಪ ಕಣ್ಣೀರಿಡುತ್ತಾ ಹೇಳಿದರು.

ಬಾಲಕ ಮರಿಯಪ್ಪ ಎಲ್ಲರಂತೆ ಊಟ, ತಿಂಡಿ ಸೇವಿಸುತ್ತಿದ್ದು, ಎಲ್ಲವೂ ಸರಿಯಾಗಿಯೇ ಇದೆ. ಆದರೆ ನಡೆ­ದಾಡಲು, ಕುಳಿತುಕೊಳ್ಳಲು ತೊಂದರೆ ಆಗುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಲ್ಲಿಕಾರ್ಜುನ ಮುಕ್ಕಾ, ‘ಇದಕ್ಕೆ ಶಸ್ತ್ರಚಿಕಿತ್ಸೆ ಮಾಡಬಹುದಾಗಿದೆ. ಆದರೆ ಬಾಲಕನ ಸದ್ಯದ ಸ್ಥಿತಿಯನ್ನು ಪರೀಕ್ಷಿಸಿದ ನಂತರವಷ್ಟೇ ನಿಖರವಾಗಿ ಹೇಳಬಹು­ದಾಗಿದೆ. ಸೆ.25 ರಂದು ಇಲ್ಲಿಯ ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದ್ದು, ಶಿಬಿರದಲ್ಲಿ ಭಾಗವಹಿಸಲಿರುವ ತಜ್ಞ ವೈದ್ಯರಿಂದ ಪರೀಕ್ಷಿಸಬಹುದು. ಬಾಲಕ­ನನ್ನು ಶಿಬಿರಕ್ಕೆ ಕರೆ ತಂದರೆ ಮುಂದಿನ ಚಿಕಿತ್ಸೆಯ ಬಗ್ಗೆ ಕ್ರಮ ಕೈಗೊಳ್ಳ­ಬಹುದಾಗಿದೆ' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT