ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೈಕಮಾಂಡ್ ತೀರ್ಮಾನಕ್ಕೆ ಬದ್ಧ’

Last Updated 3 ಜನವರಿ 2014, 8:44 IST
ಅಕ್ಷರ ಗಾತ್ರ

ಬೀದರ್‌: ‘ಕರ್ನಾಟಕ ಜನತಾಪಕ್ಷ ಬಿಜೆಪಿ ಜೊತೆಗೆ ವಿಲೀನವಾಗಲು ಸಜ್ಜಾಗಿದೆ. ಆದರೆ ಬೀದರ್‌ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಸೇರಿದಂತೆ ಪಕ್ಷ ಅಧಿಕೃತವಾಗಿ ಉಮೇದುವಾರರನ್ನು ಘೋಷಿಸಿಲ್ಲ. ಹೈಕಮಾಂಡ್‌ ಈ ಬಗ್ಗೆ ತೀರ್ಮಾನಿಸಲಿದೆ’ ಎಂದು ಬಿಜೆಪಿ ಮುಖಂಡ ಶಿವಾನಂದ ಕಲ್ಲೂರು ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ. 9 ಮತ್ತು 10 ರಂದು ಬೆಂಗಳೂರಿನಲ್ಲಿ ಜಿಲ್ಲಾ ಘಟಕಗಳ ಕೋರ್‌ ಕಮಿಟಿಗಳ ಸಭೆಯನ್ನು ಕರೆಯಲಾಗಿದ್ದು, ಜಿಲ್ಲಾ ಘಟಕ ನೀಡುವ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಆಧರಿಸಿ ಹೈಕಮಾಂಡ್‌ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ ಎಂದು ತಿಳಿಸಿದರು.

ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ  ಶಿವರಾಜ ಗಂದಗೆ ಮಾತನಾಡಿ, ‘ಬೀದರ್‌ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ. ಅಭ್ಯರ್ಥಿ ಆಯ್ಕೆ ಕುರಿತು ಹೈಕಮಾಂಡ್‌ ತೆಗೆದುಕೊಳ್ಳುವ ತೀರ್ಮಾನಕ್ಕೆ ಜಿಲ್ಲಾ ಘಟಕ ಬದ್ಧವಾಗಿರುತ್ತದೆ’ ಎಂದು ಸ್ಪಷ್ಟಪಡಿಸಿದರು.

ಹಿಂದೆ ಬಿಜೆಪಿಯಲ್ಲಿಯೇ ಇದ್ದು, ಕೆಜೆಪಿಗೆ ತೆರಳಿದವರು ಮತ್ತೆ ಪಕ್ಷಕ್ಕೆ ಮರಳಿದ ಸಂದರ್ಭದಲ್ಲಿ ಲೋಕಸಭೆ ಚುನಾವಣೆಗೆ ಎಲ್ಲರೂ ಒಮ್ಮತದಿಂದ ಕೆಲಸ ಮಾಡುವುದು ಸಾಧ್ಯವಿದೆಯೇ ಎಂಬ ಪ್ರಶ್ನೆಗೆ, ‘ನಮಗೆ ಪಕ್ಷ ಮುಖ್ಯ. ಅಂಥ ಯಾವುದೇ ಗೊಂದಲ ಆಗುವುದಿಲ್ಲ’ ಎಂದು ಕಲ್ಲೂರು ಪ್ರತಿಕ್ರಿಯಿಸಿದರು.

‘ಯಡಿಯೂರಪ್ಪ ನೇತೃತ್ವದ ಕೆಜೆಪಿ ಇಡಿಯಾಗಿ ಪಕ್ಷದಲ್ಲಿ ವಿಲೀನವಾಗಲಿದೆ. ನಿರ್ದಿಷ್ಟವಾಗಿ ಯಾವುದೇ ವ್ಯಕ್ತಿಯ ಹೆಸರು ಬೇಡ. ಯಡಿಯೂರಪ್ಪ ಅವರನ್ನು ಪಕ್ಷ ಹೊರ ಹಾಕಿರಲಿಲ್ಲ. ಅವರಾಗೇ ಬಿಟ್ಟು ಹೋಗಿದ್ದರು. ಭ್ರಷ್ಟಾಚಾರ ಆರೋಪ  ಹಿನ್ನೆಲೆಯಲ್ಲಿ ಅವರ ರಾಜೀನಾಮೆಯನ್ನಷ್ಟೇ ಪಕ್ಷ ಪಡೆದಿತ್ತು’ ಎಂದು ಸಮರ್ಥಿಸಿಕೊಂಡರು.

ಓಟು ಕೊಡಿ–ನೋಟು ಕೊಡಿ ಅಭಿಯಾನ: ಬಿಜೆಪಿ ಪ್ರಧಾನಿ ಸ್ಥಾನದ ಅಭ್ಯರ್ಥಿ ನರೇಂದ್ರ ಮೋದಿ ಅವರ ಅಪೇಕ್ಷೆಯಂತೆ ಜಿಲ್ಲೆಯಲ್ಲಿಯೂ ಜನವರಿ ತಿಂಗಳಿನಲ್ಲಿ ‘ಓಟು ಕೊಡಿ –ನೋಟೂ ಕೊಡಿ’ ಅಭಿಯಾನ ಮತ್ತು ಜ. 15 ರಿಂದ ಫೆ. 28ರವರೆಗೂ ಕರಪತ್ರ ಹಂಚಿಕೆ ಆಂದೋಲನ ನಡೆಸಲಾಗುವುದು ಎಂದರು.

ಲೋಕಸಭೆ ಚುನಾವಣೆಯ ಸಿದ್ಧತೆ­ಯ ಭಾಗವಾಗಿ ರಾಜ್ಯದ ಎಲ್ಲ 28 ಕ್ಷೇತ್ರಗಳ ವ್ಯಾಪ್ತಿಯಲ್ಲಿಯೂ ಆಯ್ದ 500–600 ಕಾರ್ಯಕರ್ತರ ಕಾರ್ಯಾ­ಗಾರ ನಡೆಸುತ್ತಿದ್ದು, ಬಾಕಿ ಇರುವ 6 ಕ್ಷೇತ್ರಗಳ ವ್ಯಾಪ್ತಿಯಲ್ಲಿಯೂ ಆದಷ್ಟು ಶೀಘ್ರ ನಡೆಸಲಾಗುವುದು ಎಂದರು.
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಸಂಭವನೀಯ ಅಭ್ಯರ್ಥಿ­ಗಳ ಪಟ್ಟಿಯೊಂದಿಗೆ ಆಗಮಿಸಲು ಜಿಲ್ಲಾ ಘಟಕಗಳ ಅಧ್ಯಕ್ಷರಿಗೆ ಸೂಚನೆ ನೀಡಿದ್ದು, ಜ. 9 ಮತ್ತು 10ರಂದು ಬೆಂಗಳೂರಿನಲ್ಲಿ ಸಭೆಯನ್ನು ಕರೆಯ­ಲಾಗಿದೆ. ಅರ್ಹತೆ ಮತ್ತು ಜನಪ್ರಿಯತೆ ಆಧರಿಸಿ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಲಿದೆ ಎಂದರು.

ಸರ್ಕಾರದ ವಿರುದ್ಧ ಟೀಕೆ: ಭ್ರಷ್ಟಾಚಾರ ಆರೋಪವಿರುವ ಡಿ.ಕೆ.ಶಿವಕುಮಾರ್ ಮತ್ತು ರೋಷನ್ ಬೇಗ್‌ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿರುವ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರ ಕ್ರಮವನ್ನು ಖಂಡಿಸಿದ ಅವರು, ಈ ಇಬ್ಬರನ್ನೂ ಸಂಪುಟದಿಂದ ಕೈಬಿಡುವವರೆಗೂ ಪಕ್ಷ ಹೋರಾಟ ನಡೆಸಲಿದೆ ಎಂದರು.

ಆರೋಪ ಇದ್ದವರನ್ನು ಹೊರಗಿ­ಡುತ್ತೇವೆ ಎಂದಿದ್ದ ಸಿದ್ದರಾಮಯ್ಯ ಅವರೇ ಈಗ ಅವರನ್ನು ಸೇರಿಸಿ­ಕೊಂಡಿದ್ದಾರೆ. ಇತ್ತೀಚಿನ ಬೆಳವಣಿಗೆ­ಗಳು ಕಾಂಗ್ರೆಸ್‌ನ ಮುಖಂಡರ ನಡುವೆ ಸಮನ್ವಯದ ಕೊರತೆ ಇದೆ ಎಂಬುದನ್ನು­ಪುಷ್ಟಿಕರಿಸುತ್ತಿವೆ. ಕಾಂಗ್ರೆಸ್‌ ಸರ್ಕಾರ ಜನರ ನಿರೀಕ್ಷೆಗಳಿಗೆ ಸ್ಪಂದಿಸಲು ವಿಫಲವಾಗಿದೆ ಎಂದರು. ಪಕ್ಷದ ಮುಖಂಡರಾದ ಗುರುನಾಥ ಜ್ಯಾಂತಿಕರ, ಸುಚಿತ್ರಾ, ರಾಮಣ್ಣ, ಉಪೇಂದ್ರ ದೇಶಪಾಂಡೆ ಸುದ್ದಿಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT