ಸೋಮವಾರ, ಮಾರ್ಚ್ 1, 2021
29 °C

ಮಿನಿಯ ಶಕ್ತಿ ಚಲಾಯಿಸಿಯೇ ಅನುಭವಿಸಬೇಕು...

ಜಯಸಿಂಹ ಆರ್. Updated:

ಅಕ್ಷರ ಗಾತ್ರ : | |

Deccan Herald

ಪುಟ್ಟದಾಗಿ ಕಾಣುವುದರಿಂದಲೇ ಮಿನಿ ಕಾರುಗಳಿಗೆ ಆ ಹೆಸರು ಬಂದಿರಬೇಕು. ಪಕ್ಕಾ ಟ್ರ್ಯಾಕ್‌ ರೇಸಿಂಗ್‌ಗೆ ಬಳಸುವುದರಿಂದ ಮಿನಿ ಕಾರುಗಳು ರೇಸಿಂಗ್‌ನಲ್ಲಿ ಹೆಚ್ಚು ಜನಪ್ರಿಯತೆ ಪಡೆದಿವೆ. ಈ ರೇಸಿಂಗ್‌ ಕಾರುಗಳಿಗೆ ಐಶಾರಾಮದ ಟಚ್ ಸಿಕ್ಕಿರುವುದರಿಂದ ಇದು ಉಳ್ಳವರ ರೇಸಿಂಗ್‌ ಕಾರೇ ಸರಿ. ಭಾರತದಲ್ಲಿ ಮಿನಿಯು ತನ್ನ ಮಿನಿ, ಮಿನಿ ಕಂಟ್ರಿಮನ್ ಕಾರುಗಳನ್ನು ಪೆಟ್ರೋಲ್ ಮತ್ತು ಡೀಸೆಲ್ ಅವತರಣಿಕೆಗಳಲ್ಲಿ ಮಾರಾಟ ಮಾಡುತ್ತಿದೆ. ಈ ಕಾರ್ ಅನ್ನು ಬೆಂಗಳೂರಿನ ರೇಸ್‌ ಟ್ರ್ಯಾಕ್‌ ಒಂದರಲ್ಲಿ ಓಡಿಸಲು ಈಚೆಗೆ ಕಾರ್ಯಕ್ರಮ ಆಯೋಜಿಸಿತ್ತು. ಕಂಪನಿಯ ಆಹ್ವಾನದ ಮೇರೆಗೆ ‘ಪ್ರಜಾವಾಣಿ’ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು.

ಅಂದಹಾಗೆ ಆ ಟ್ರ್ಯಾಕ್‌ ‘ಗೋ–ಕಾರ್ಟಿಂಗ್‌’ ವಾಹನಗಳ ಚಾಲನೆಗೆಂದು ರೂಪಿಸಿದ್ದ ಟ್ರ್ಯಾಕ್. ಹೀಗಾಗಿ ಅದು ತೀರಾ ಉದ್ದವಾಗಿರಲಿಲ್ಲ. ಎಂಟು ಕಠಿಣ ತಿರುವುಗಳಿದ್ದ ಇದರ ಉದ್ದ ಕೇವಲ 1.1 ಕಿ.ಮೀ.

ಈ ಕಾರ್‌ ಕೇವಲ 6.6 ಸೆಕ್ಂಡ್‌ಗಳಲ್ಲಿ 0–100 ಕಿ.ಮೀ/ಗಂಟೆ ವೇಗ ಮುಟ್ಟುತ್ತದೆ. ಸ್ಟಾರ್ಟ್‌ ಲೈನ್‌ನಿಂದ ಮೊದಲ ತಿರುವಿಗೆ ಇದ್ದ ಅಂತರ ಕೇವಲ 100 ಮೀಟರ್‌. ಈ ಅಂತರವನ್ನು ತಲುಪಲು ಕಾರ್‌ ತೆಗೆದುಕೊಂಡು ಸಮಯ ಕೇವಲ 4–5 ಸೆಕೆಂಡುಗಳು. ವೇಗ 80 ಕಿ.ಮೀ/ಗಂಟೆ ಮುಟ್ಟವಷ್ಟರಲ್ಲೇ ತಿರುವು ಎದುರಾಗಿತ್ತು. ವೇಗವನ್ನು ತುಸು ಕಡಿಮೆ ಮಾಡಿ ಕಾರಿನ ದಿಕ್ಕು ಬದಲಿಸಿದಾಕ್ಷಣ ಟೈರ್‌ಗಳು ರಸ್ತೆಗೆ ಉಜ್ಜುತ್ತಾ ಯುಟರ್ನ್‌ ತೆಗೆದುಕೊಂಡು ಮುಂದುವರೆಯಲಾಯಿತು. ಈ ಸಂದರ್ಭದಲ್ಲಿ ಒಂದಿನಿತೂ ಭಯವಾಗದಂತೆ ಮಿನಿ ವರ್ತಿಸಿತು. 180, 90 ಕೋನದಷ್ಟು ಕಡಿದಾಗಿದ್ದ ಎಂಟೂ ತಿರುವುಗಳನ್ನು ವೇಗದಲ್ಲೇ ಎದುರಿಸುವಷ್ಟು ಕಾರ್ ಸಮರ್ಥವಾಗಿದೆ. ಈ ತಿರುವುಗಳಲ್ಲಿ ಕಾರ್‌ ಹೆಚ್ಚು ವಾಲುತ್ತಿರಲಿಲ್ಲ. ಇದರಲ್ಲಿ ಹೆಚ್ಚು ಗಡುಸಾದ ಸಸ್ಪೆನ್ಷನ್‌ ಇದೆ. ಸಾಮಾನ್ಯ ಕಾರುಗಳಲ್ಲಿ ಅಷ್ಟು ವೇಗದಲ್ಲಿ ತಿರುವು ಪಡೆಯಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಎಲ್ಲಾ ಮಿನಿ ಕಾರುಗಳು ಸಂಪೂರ್ಣ ಭಿನ್ನವಾಗಿದ್ದು, ಚಾಲಕರಿಗೆ ಹೆಚ್ಚು ಆತ್ಮವಿಶ್ವಾಸ ನೀಡುತ್ತದೆ.

ಇನ್ನು ಕಾರ್‌ನಲ್ಲಿ ಟ್ರ್ಯಾಕ್ಷನ್‌ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಎಂಜಿನ್‌ ಡ್ರ್ಯಾಗ್‌ ಟ್ರ್ಯಾಕ್‌ ಕಂಟ್ರೋಲ್ ಸೌಲಭ್ಯಗಳಿರುತ್ತವೆ. ಪರ್ಫಾಮೆನ್ಸ್‌ ಕಾರ್‌ಗಳಲ್ಲೂ ಇರುತ್ತವೆ. ಈ ಎಲ್ಲಾ ಸೌಲಭ್ಯಗಳು ಚಾಲಕನ ಮಧ್ಯಪ್ರವೇಶ ಇಲ್ಲದೆ, ಅಗತ್ಯವಿದ್ದಾಗ ಸ್ವಯಂಚಾಲಿತವಾಗಿ ಕೆಲಸ ಮಾಡುತ್ತವೆ. ಆದರೆ ಅಗತ್ಯವಿದ್ದಾಗ ಚಾಲಕ ಸ್ವತಃ ಹ್ಯಾಂಡ್ ಬ್ರೇಕ್‌ ಬಳಸಿ ಕಾರನ್ನು ನಿಯಂತ್ರಿಸಲು ಅವಕಾಶವಿದೆ. ಪರ್ಫಾಮೆನ್ಸ್ ಕಾರುಗಳಲ್ಲಿ ಕಾರು ಚಾಲಕನ ನಿಯಂತ್ರಣ ಕಳೆದುಕೊಳ್ಳುವಾಗ ಇವೆಲ್ಲಾ ಉಪಯೋಗಕ್ಕೆ ಬರುತ್ತವೆ. ಈ ಎಲ್ಲಾ ಅಂಶಗಳನ್ನು ಟ್ರ್ಯಾಕ್‌ನಲ್ಲಿ ಪರೀಕ್ಷಿಸಲಾಯಿತು. ಈ ರೇಸ್‌ನ ಸೊಬಗು ಇರುವುದು ತಿರುವುಗಳಲ್ಲಿ ಕಾರ್‌ಗಳನ್ನು ಡ್ರಿಫ್ಟ್‌ ಮಾಡುವುದರಲ್ಲಿ. ಡ್ರಿಫ್ಟ್‌ ಅಂದರೆ ತಿರುವುಗಳಲ್ಲಿ ಹ್ಯಾಂಡ್‌ ಬ್ರೇಕ್‌ ಮೂಲಕ ನಿಯಂತ್ರಿಸಿ ಹಿಂದಿನ ಚಕ್ರಗಳು ಜಾರುವಂತೆ ಮಾಡುವುದು. ಹೀಗೆ ಮಾಡುವಾಗ ವೇಗವನ್ನು ಕಡಿಮೆ ಮಾಡದೆಯೇ ತಿರುವು ಪಡೆಯಬಹುದು.

ನಮಗೆ ನೀಡಲಾಗಿದ್ದ ಥ್ರೀ ಡೋರ್‌ ಮಿನಿಯಲ್ಲೂ ಡ್ರಿಫ್ಟ್‌ ಮಾಡಲಾಯಿತು. ಮೇಲೆ ಹೇಳಲಾದ ಎಲ್ಲಾ ಸೌಲಭ್ಯಗಳು ಇದ್ದಿದ್ದರಿಂದ ಕಾರು ತೀರಾ ವೇಗವಾಗಿ ಹೋಗುವಾಗಲೂ ರಸ್ತೆ ಬಿಟ್ಟು ಹೊರಕ್ಕೆ ಜಾರುತ್ತಿರಲಿಲ್ಲ. ಜತೆಗೆ ಆಟೊಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ಇರುವುದರಿಂದ ಚಾಲನೆ ಮತ್ತಷ್ಟು ಸುಲಭ. ಭಾರಿ ವೇಗದ ಲ್ಯಾಪ್‌ನಲ್ಲಿ ಎರಡು ಕಠಿಣ ತಿರುವುಗಳಲ್ಲಿ ರಸ್ತೆ ಬಿಟ್ಟು ಮಣ್ಣಿಗೆ ಇಳಿದರೂ, ಮಿನಿ ಚಾಲಕನ ನಿಯಂತ್ರಣದಲ್ಲೇ ಇತ್ತು.

***

ಎಬಿಎಸ್ ಟೆಸ್ಟ್...

ಈಗಿನ ಬಹುತೇಕ ಎಲ್ಲಾ ಕಾರುಗಳಲ್ಲಿ ಎಬಿಎಸ್ ಸೌಲಭ್ಯವಿರುತ್ತದೆ. ಎಬಿಎಸ್ ಅಂದರೆ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ. ವೇಗದ ಚಾಲನೆಯಿರಲಿ, ನಿಧಾನದ ಚಾಲನೆಯಿರಲಿ. ದಿಢೀರ್ ಎಂದು ಬ್ರೇಕ್ ಒತ್ತಿದಾಗ ಕಾರಿನ ಮುಂಬದಿಯ ಚಕ್ರಗಳು ಲಾಕ್‌ ಆಗುತ್ತವೆ. ಚಕ್ರಗಳು ಲಾಕ್ ಆದರೆ ಸ್ಟೀರಿಂಗ್ ತಿರುಗಿಸಲು ಸಾಧ್ಯವಿಲ್ಲ, ಅಂದರೆ ಕಾರಿನ ಚಲನೆಯ ದಿಕ್ಕನ್ನು ಬದಲಿಸಲು ಸಾಧ್ಯವಿಲ್ಲ. ಕಾರು ಮೊದಲು ಚಲಿಸುತ್ತಿದ್ದ ದಿಕ್ಕಿನಲ್ಲೇ ಚಕ್ರಗಳು ಸ್ಕಿಡ್ ಆಗುತ್ತಾ ಮುಂದೋಗುತ್ತದೆ. ಆಗ ಅಡೆತಡೆಗೆ, ಮುಂಬದಿಯ ವಾಹನಗಳಿಗೆ ಡಿಕ್ಕಿಯಾಗುವ ಅಪಾಯವಿರುತ್ತದೆ. ಹೀಗೆ ಚಕ್ರಗಳು ಲಾಕ್ ಆಗುವುದನ್ನು ತಪ್ಪಿಸಲು ಬಳಕೆಗೆ ಬಂದ ಸವಲತ್ತೇ ಆ್ಯಂಟಿ ಲಾಕ್‌ ಬ್ರೇಕಿಂಗ್ ಸಿಸ್ಟಂ.

ಸಾಮಾನ್ಯ ಸ್ಥಿತಿಯ ಬ್ರೇಕಿಂಗ್‌ನಲ್ಲಿ ಎಬಿಎಸ್ ಆ್ಯಕ್ಟಿವೇಟ್ ಆಗುವುದಿಲ್ಲ. ಹಾಗಿದ್ದಲ್ಲಿ ಎಬಿಎಸ್ ಆ್ಯಕ್ಟಿವೇಟ್ ಆಗುವಂತೆ ಮಾಡುವುದು ಹೇಗೆ?

ಮಿನಿ ಅರ್ಬನ್ ಡ್ರೈವ್‌ನಲ್ಲಿ ಅದಕ್ಕೂ ಒಂದು ಪ್ರಾಯೋಗಿಕ ತರಬೇತಿ ಆಯೋಜನೆ ಮಾಡಲಾಗಿತ್ತು.

ಟ್ರ್ಯಾಕ್‌ನಲ್ಲಿ ಟ್ರಾಫಿಕ್ ಡೈವರ್ಷನ್ ಕೋನ್‌ಗಳನ್ನು ಇಡಲಾಗಿತ್ತು. ಆ ಕೋನ್‌ಗಳು ತೋರಿಸುವ ದಿಕ್ಕಿಗೆ ಕಾರಿನ ದಿಕ್ಕನ್ನು ಬದಲಿಸಬೇಕಿತ್ತು. ಆದರೆ ಟ್ವಿಸ್ಟ್‌ ಇದ್ದದ್ದು ಅದರಲ್ಲೇ. ಸ್ಟಾರ್ಟ್‌ ಲೈನ್‌ನಿಂದ ಆರಂಭಿಸಿ ಸುಮಾರು ಪ್ರತಿಗಂಟೆಗೆ 80 ಕಿ.ಮೀ. ವೇಗ ತಲುಪುವಷ್ಟರಲ್ಲಿ ಆ ಕೋನ್‌ಗಳು ಅಡ್ಡ ಬರುತ್ತಿದ್ದವು. ಆಗ ದಿಢೀರ್ ಎಂದು ರಭಸವಾಗಿ ಬ್ರೇಕ್‌ ಒತ್ತಬೇಕಿತ್ತು. ರಭಸವಾಗಿ ಬ್ರೇಕ್ ಒತ್ತಿದಾಗ ಎಬಿಎಸ್ ಆ್ಯಕ್ಟಿವೇಟ್ ಆಗುತ್ತಿತ್ತು. ಆಗ ಕಾರಿನ ದಿಕ್ಕನ್ನು ಸುಲಭವಾಗಿ ಬದಲಿಸಲು ಅವಕಾಶ ಸಿಗುತ್ತಿತ್ತು. ಪ್ರತಿಯೊಬ್ಬರಿಗೂ ಆರು ಬಾರಿ ಎಬಿಎಸ್ ಟೆಸ್ಟ್ ಮಾಡಲು ಅವಕಾಶ ನೀಡಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.