ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಿನ್ನ ವರ್ಗಗಳ ಗ್ರಾಹಕರನ್ನು ಸೆಳೆಯಲು ಪಂಚ್‌’

Last Updated 18 ಅಕ್ಟೋಬರ್ 2021, 13:26 IST
ಅಕ್ಷರ ಗಾತ್ರ

ಬೆಂಗಳೂರು: ‘ಮೊದಲ ಸಬ್–ಕಾಂಪ್ಯಾಕ್ಟ್‌ ಎಸ್‌ಯುವಿ ವಾಹನ’ ಎಂಬ ಹೆಗ್ಗಳಿಕೆಯನ್ನು ಹೊತ್ತಿರುವ ‘ಪಂಚ್’ ಕಾರಿನ ಮೂಲಕ ಹಲವು ವರ್ಗಗಳಿಗೆ ಸೇರಿದ ಗ್ರಾಹಕರನ್ನು ತನ್ನತ್ತ ಸೆಳೆಯುವ ಉದ್ದೇಶವನ್ನು ಟಾಟಾ ಮೋಟರ್ಸ್‌ ಹೊಂದಿದೆ.

‘ಕಾಂಪ್ಯಾಕ್ಟ್‌ ಎಸ್‌ಯುವಿ ವಾಹನಗಳಿಗಿಂತ ತುಸು ಚಿಕ್ಕದಾದ ಈ ಕಾರಿಗೆ ಸ್ಪರ್ಧಿಗಳು ಇಲ್ಲ. ಸಾಮಾನ್ಯವಾಗಿ ನಿರ್ದಿಷ್ಟ ವರ್ಗಕ್ಕೆ ಸೇರಿದ ಗ್ರಾಹಕರನ್ನು ಗುರಿಯಾಗಿ ಇರಿಸಿಕೊಂಡು ವಾಹನ ವಿನ್ಯಾಸ ರೂಪಿಸುವುದಿದೆ. ಆದರೆ, ಪಂಚ್‌ ಆ ರೀತಿಯ ವಾಹನ ಅಲ್ಲ. ಬೇರೆ ಬೇರೆ ವರ್ಗಗಳಿಗೆ ಸೇರಿದ ಗ್ರಾಹಕರನ್ನು ಸೆಳೆಯಲು ಈ ವಾಹನ ವಿನ್ಯಾಸಗೊಳಿಸಲಾಗಿದೆ’ ಎಂದು ಟಾಟಾ ಮೋಟರ್ಸ್‌ನ ಪ್ರಯಾಣಿಕ ಮತ್ತು ವಿದ್ಯುತ್ ಚಾಲಿತ ವಾಹನಗಳ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ವಿವೇಕ್ ಶ್ರೀವತ್ಸ ‘ಪ್ರಜಾವಾಣಿ’ಗೆ ತಿಳಿಸಿದರು.

ಮೊದಲ ಬಾರಿಗೆ ಕಾರು ಖರೀದಿಸುವವರನ್ನು ಸೆಳೆಯುವುದು ‘ಪಂಚ್‌’ನ ಮುಖ್ಯ ಗುರಿಗಳಲ್ಲಿ ಒಂದು. ಅಲ್ಲದೆ, ದೊಡ್ಡ ಕಾರೊಂದನ್ನು ಅದಾಗಲೇ ಹೊಂದಿರುವ ಒಂದು ಕುಟುಂಬಕ್ಕೆ ಎರಡನೆಯ ಕಾರು ಬೇಕು ಅನ್ನಿಸಿದಾಗ, ಇದನ್ನು ಆಯ್ಕೆ ಮಾಡಿಕೊಳ್ಳಬಹುದು.ಕೆಟ್ಟ ರಸ್ತೆಗಳಲ್ಲಿಯೂ ಇದನ್ನು ಆರಾಮವಾಗಿ ಬಳಸಬಹುದು. ಪ್ರೀಮಿಯಂ ಹ್ಯಾಚ್‌ ಕಾರು ಬಯಸುವವರಿಗೆ ಕೂಡ ಇದು ಒಳ್ಳೆಯ ಪರ್ಯಾಯ ಎಂದು ಅವರು ವಿವರಿಸಿದರು.

ದೇಶದ ವಾಹನ ಮಾರುಕಟ್ಟೆಯಲ್ಲಿ ಕಾಂಪ್ಯಾಕ್ಟ್‌ ಎಸ್‌ಯುವಿ ವಾಹನಗಳು ಹಲವು ಇವೆ. ಆದರೆ, ಸಬ್‌ ಕಾಂಪ್ಯಾಕ್ಟ್‌ ಎಸ್‌ಯುವಿ (ಅಂದರೆ, 3.99 ಮೀಟರ್‌ಗಿಂತ ಕಡಿಮೆ ಉದ್ದವಿರುವ ಕಾರು) ‘ಪಂಚ್‌’ ಮಾತ್ರ ಎಂದು ಅವರು ಹೇಳಿದರು.

ಈಗ ‘ಪಂಚ್‌’ನ ಪೆಟ್ರೋಲ್ ಆವೃತ್ತಿಯನ್ನು ಕಂಪನಿಯು ಬಿಡುಗಡೆ ಮಾಡಿದೆ. ಆದರೆ, ಮಾರುಕಟ್ಟೆಯಲ್ಲಿ ಬೇಡಿಕೆ ಆಧರಿಸಿ ಮುಂದಿನ ದಿನಗಳಲ್ಲಿ ಡೀಸೆಲ್ ಆವೃತ್ತಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇಲ್ಲದಿಲ್ಲ ಎಂದು ವಿವೇಕ್ ತಿಳಿಸಿದರು. ಮುಂದೆಇ.ವಿ. (ವಿದ್ಯುತ್ ಚಾಲಿತ) ಆವೃತ್ತಿ ಕೂಡ ಸಿದ್ಧವಾಗುವ ಸಾಧ್ಯತೆ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT