ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಕಾರ್‌ ಖರೀದಿಗೆ ‘ಕಾರ್‌ಪಾಲ್‌’

Last Updated 18 ಡಿಸೆಂಬರ್ 2019, 19:31 IST
ಅಕ್ಷರ ಗಾತ್ರ

ಹೊಸ ಕಾರ್‌ ಖರೀದಿಸುವ ನಿರ್ಧಾರಕ್ಕೆ ಬಂದಾಗ, ಯಾವ ಕಂಪನಿಯ, ಯಾವ ಮಾದರಿಯ ಕಾರ್‌ ಖರೀದಿಸಬೇಕು ಎನ್ನುವ ಗೊಂದಲವು ಸಹಜವಾಗಿಯೇ ಎಲ್ಲರನ್ನೂ ಕಾಡುತ್ತದೆ. ಸ್ನೇಹಿತರು, ಬಂಧು ಬಳಗದವರನ್ನು ಕೇಳಿದರೆ ಅವರೆಲ್ಲ ನೀಡುವ ಸಲಹೆಗಳು ಬಹುತೇಕ ಸಂದರ್ಭಗಳಲ್ಲಿ ಖರೀದಿದಾರನ ಅಭಿರುಚಿಗೆ ಹೊಂದಾಣಿಕೆ ಆಗದೆ ಹೋಗುವ ಸಾಧ್ಯತೆ ಇರುತ್ತದೆ. ಕಾರ್‌ಗಳಿಗೆ ಸಂಬಂಧಿಸಿದಂತೆ ಪ್ರತಿಯೊಬ್ಬರ ಇಷ್ಟಾನಿಷ್ಟಗಳು ಬೇರೆ,ಬೇರೆ ಆಗಿರುವುದರಿಂದ ವೈವಿಧ್ಯಮಯ ಕಾರ್ ಪ್ರಪಂಚದಿಂದ ಅವರವರ ಅಗತ್ಯ ಪೂರೈಸುವ ಕಾರ್‌ ಖರೀದಿಸುವುದು ಸವಾಲಿನ ಕೆಲಸ ಆಗಿರುತ್ತದೆ. ಅನೇಕರಲ್ಲಿ ಕಾರ್‌ ಖರೀದಿಸಲು ಉದ್ದೇಶ ಖಚಿತವಾಗಿರುತ್ತದೆ. ಆದರೆ ಯಾವುದನ್ನು ಖರೀದಿ ಮಾಡಬೇಕು ಎನ್ನುವ ಗೊಂದಲ ಕೊನೆಗೊಳ್ಳುವುದಿಲ್ಲ. ಕಾರ್‌ ಖರೀದಿಸುವವರ ಬಜೆಟ್‌, ಮುಂಗಡ ಪಾವತಿಸುವ ಮೊತ್ತ, ತಿಂಗಳ ಸಮಾನ ಕಂತು (ಇಎಂಐ) ಭರಿಸುವ ಸಾಮರ್ಥ್ಯ, ಸಾಲ ಮರುಪಾವತಿ ಅವಧಿಯ ಆಯ್ಕೆ ಇವೆಲ್ಲವನ್ನೂ ಪರಿಗಣಿಸಬೇಕಾಗುತ್ತದೆ. ಜತೆಗೆ ಕಾರ್‌ನ ಬಣ್ಣ, ಅದರಲ್ಲಿ ಇರುವ ಸೌಲಭ್ಯಗಳು, ವ್ಯಕ್ತಿಗತ ಬಳಕೆ ಇಲ್ಲವೆ ಕುಟುಂಬದ ಸದಸ್ಯರಿಗೂ ಪ್ರಯೋಜನ ಆಗಬೇಕು – ಹೀಗೆ ಪ್ರತಿಯೊಬ್ಬರೂ ವಿಭಿನ್ನ ನೆಲೆಯಲ್ಲಿ ಆಲೋಚಿಸುತ್ತಾರೆ. ಕೆಲವರು ರೋಚಕ ಚಾಲನಾ ಅನುಭವ ಇಷ್ಟಪಟ್ಟರೆ, ಇನ್ನೂ ಕೆಲವರು ಸುರಕ್ಷತೆಗೆ ಒಲವು ತೋರುತ್ತಾರೆ. ಕಾರ್‌ನಲ್ಲಿ ಇರುವ ಅತ್ಯಾಧುನಿಕ ಸೌಲಭ್ಯಗಳು, ಇನ್ಫೊಟೇನ್‌ಮೆಂಟ್‌ಗಳು ಹಲವರಿಗೆ ಇಷ್ಟವಾಗುತ್ತವೆ.

ಈ ನೆಲೆಯಲ್ಲಿಯೇ ವಾರಾಂತ್ಯದಲ್ಲಿ ಬೇರೆ, ಬೇರೆ ಕಾರ್‌ಗಳನ್ನು ಮಾರಾಟ ಮಾಡುವ ಷೋರೂಂಗಳಿಗೆ ತೆರಳಿ ಟೆಸ್ಟ್‌ ಡ್ರೈವ್‌ ಮಾಡುತ್ತಾರೆ. ಐದಾರು ವಾರಗಳ ಕಾಲ ಬೇರೆ, ಬೇರೆ ಮಾದರಿಯ ಕಾರ್‌ಗಳನ್ನು ಪರೀಕ್ಷಾರ್ಥ ಚಾಲನೆ ಮಾಡಿದ ನಂತರವೂ ತಮಗೆ ಯಾವ ಕಾರ್‌ ಹೆಚ್ಚು ಸೂಕ್ತವಾಗಲಿದೆ ಎನ್ನುವ ಅನುಮಾನವು ಅನೇಕರಲ್ಲಿ ಹಾಗೆಯೇ ಉಳಿದಿರುತ್ತದೆ. ಖರೀದಿದಾರರ ಇಂತಹ ಉಭಯ ಸಂಕಟ ಮತ್ತು ಗೊಂದಲಗಳನ್ನೆಲ್ಲ ದೂರ ಮಾಡುವ ಉದ್ದೇಶದಿಂದಲೇ ಚೆನ್ನೈನ ವಿಘ್ನೇಶ್‌ ರಾಮಕೃಷ್ಣನ್‌ ಅವರು ಈ ನವೋದ್ಯಮ ಕಾರ್‌ಪಾಲ್‌ (CarPal) ಆರಂಭಿಸಿದ್ದಾರೆ.

ಖರೀದಿದಾರರ ಅಭಿರುಚಿ, ಆದ್ಯತೆ ಮತ್ತು ಹಣಕಾಸು ಸಾಮರ್ಥ್ಯ ಆಧರಿಸಿ ಆನ್‌ಲೈನ್‌ನಲ್ಲಿ ಪೂರ್ಣ ಪ್ರಮಾಣದ ಸಲಹೆ ನೀಡುವ ಸ್ಟಾರ್ಟ್‌ಅಪ್‌ ಇದಾಗಿದೆ. ಹಳೆಯ ಕಾರ್‌ಗಳನ್ನು ಹೊಸ ಕಾರ್‌ಗೆ ವಿನಿಮಯ ಮಾಡಿಕೊಳ್ಳುವುದಕ್ಕೂ ಕಾರ್‌ಪ್ಯಾಲ್‌ ನೆರವಾಗುತ್ತದೆ. ಕಾರ್‌ ಖರೀದಿ ಅನುಭವವು ಅಡಚಣೆಗಳಿಂದ ಮುಕ್ತವಾದ, ಮಾರಾಟಗಾರರ ಒತ್ತಡ ಇಲ್ಲದ ಮತ್ತು ಅನಗತ್ಯ ಫೋನ್‌ ಕರೆಗಳ ಕಿರಿಕಿರಿ ಮುಕ್ತವಾದ ಸಲಹೆ ನೀಡುವ ತಾಣವೂ ಇದಾಗಿದೆ. ಖರೀದಿದಾರರು ಮುಂಗಡವಾಗಿ ₹ 500 ಪಾವತಿಸಿ ಸಲಹೆ ಪಡೆಯಬಹುದು. ಕಾರ್‌ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಈ ಮೊತ್ತವನ್ನು ಗ್ರಾಹಕರಿಗೆ ಮರಳಿಸಲಾಗುವುದು.

"ಖರೀದಿಸಲು ಇಚ್ಛಿಸುವ ಕಾರ್‌ನ ಟೆಸ್ಟ್‌ ಡ್ರೈವ್‌ಗೆ ಷೋರೂಂಗಳಿಗೆ ಅಲೆದಾಡಬೇಕಾದ ಅಗತ್ಯವೂ ಇಲ್ಲಿ ಇರುವುದಿಲ್ಲ. ಖರೀದಿದಾರರ ಮನೆ ಅಥವಾ ಕಚೇರಿಗೆ ಟೆಸ್ಟ್ ಡ್ರೈವ್‌ ಕಾರ್‌ ತಲು‍ಪಿಸುವ ವ್ಯವಸ್ಥೆ ಇಲ್ಲಿದೆ. ‘ಖರೀದಿ ಬೆಲೆಗೆ ಸಂಬಂಧಿಸಿದಂತೆ ಡೀಲರ್‌ಗಳ ಜತೆ ಚೌಕಾಸಿ ನಡೆಸುವ ಅಗತ್ಯವೂ ಇಲ್ಲಿ ಇರುವುದಿಲ್ಲ. ಅತ್ಯುತ್ತಮ ಬೆಲೆಗೆ ಕಾರ್‌ ಖರೀದಿಸಿ ಕೊಡಲಾಗುವುದು. ಬುಕಿಂಗ್‌ ಮಾಡಿದ ನಂತರ ಹೆಚ್ಚು ವಿಳಂಬ ಇಲ್ಲದೇ ಕಾರ್‌ ವಿತರಿಸಲಾಗುವುದು’ ಎಂದು ಕಂಪನಿಯ ಸಿಇಒ ವಿಘ್ನೇಶ್‌ ರಾಮಕೃಷ್ಣನ್‌ ಅವರು ಭರವಸೆ ನೀಡುತ್ತಾರೆ.

‘ಪ್ರೀಮಿಯಂ ಹ್ಯಾಚ್‌ಬ್ಯಾಕ್‌, ಕಾಂಪಾಕ್ಟ್‌ ಸೆಡಾನ್‌, ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ (ಎಸ್‌ಯುವಿ), ರೆಗ್ಯುಲರ್‌ ಸೆಡಾನ್‌– ಹೀಗೆ ವಿವಿಧ ಬಗೆಯ ಕಾರ್‌ಗಳಲ್ಲಿ ಖರೀದಿದಾರರು ಆಯ್ಕೆ ಮಾಡುವ ಮಾನದಂಡಗಳನ್ನು ಆಧರಿಸಿ ಇಲ್ಲಿ ಸೂಕ್ತವಾದ ಕಾರು ಖರೀದಿಸಲು ಮಾರ್ಗದರ್ಶನ ಮಾಡುವ ವ್ಯವಸ್ಥೆ ಇಲ್ಲಿದೆ. ಕಾರ್‌ ಖರೀದಿಗೆ ತೆಗೆದುಕೊಳ್ಳುವ ದೀರ್ಘಾವಧಿ ಸಮಯವನ್ನೂ ಇದು ಕಡಿಮೆ ಮಾಡಲಿದೆ. ಹಣಕಾಸು ಸೌಲಭ್ಯ ಪಡೆಯಲು ಮತ್ತು ಹಳೆ ಕಾರ್‌ ವಿನಿಮಯಕ್ಕೂ ಇಲ್ಲಿ ಅವಕಾಶ ಇದೆ. ಇದರಿಂದ ಡೀಲರ್‌ಗಳ ಬಳಿ ಇರುವ ಕಾರ್‌ಗಳ ಸಂಗ್ರಹವೂ ಬೇಗನೆ ಕರಗಲಿದೆ’ ಎಂದು ವಿಘ್ನೇಶ್ ಹೇಳುತ್ತಾರೆ.
ಮಹೀಂದ್ರಾ ಮತ್ತು ಮಹೀಂದ್ರಾದಲ್ಲಿ ಕೆಲಸ ಮಾಡಿರುವ ವಿಘ್ನೇಶ್‌ ಅವರು 2017ರಲ್ಲಿ ಆರಂಭಿಸಿದ ಈ ಆನ್‌ಲೈನ್‌ ನೆರವು ತಾಣವು (trycarpal.com) ಕ್ರಮೇಣ ಕಾರ್‌ ಖರೀದಿದಾರರ ಮೆಚ್ಚುಗೆಗೆ ‍ಪಾತ್ರವಾಗುತ್ತಿದೆ. ಕಾರ್‌ ತಯಾರಿಕಾ ಕಂಪನಿಗಳು ಮತ್ತು ಡೀಲರ್‌ಗಳ ಜತೆಗಿನ ಸಹಯೋಗದಲ್ಲಿ ಈ ಸ್ಟಾರ್ಟ್‌ಅಪ್‌ ಕಾರ್ಯನಿರ್ವಹಿಸುತ್ತಿದೆ.

ಅಂತರ್ಜಾಲ ತಾಣದಲ್ಲಿ ಬೆಲೆ ಚೌಕಾಸಿ ಮಾಡಿದ ನಂತರ ರಿಯಾಯ್ತಿ ಪಡೆದು ಖರೀದಿಗೆ ಬುಕಿಂಗ್‌ ಮಾಡಿದ ನಂತರ ಕಾರ್‌ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಕಮಿಷನ್‌ ಮತ್ತು ಲಾಭ ಹಂಚಿಕೆ ಆಧಾರದ ಮೇಲೆ ಇದು ವಹಿವಾಟು ನಡೆಸುತ್ತಿದೆ. ಈ ವಹಿವಾಟು ಶೇ 5 ರಿಂದ ಶೇ 10ರಷ್ಟು ಏರಿಕೆಯಾಗುತ್ತಿದೆ. ಖರೀದಿದಾರರಿಗೆ ಕೆಲವು ಮೌಲ್ಯವರ್ಧಿತ ಸೇವೆಗಳನ್ನೂ ಇದು ಒದಗಿಸುತ್ತಿದೆ. ಅಂತರ್ಜಾಲ ತಾಣದಲ್ಲಿ ನೋಂದಣಿ ಮಾಡಿಕೊಂಡಿರುವ ಖರೀದಿದಾರರ ಸಂಖ್ಯೆಯು ದಿನೇ ದಿನೇ ಹೆಚ್ಚಳಗೊಳ್ಳುತ್ತಿದೆ. ದೇಶಿ ಕಾರ್‌ ಮಾರುಕಟ್ಟೆಯಲ್ಲಿ ಇದೊಂದು ವಿಶಿಷ್ಟ ಪ್ರಯತ್ನವಾಗಿದೆ. ಮಹಾನಗರಗಳಲ್ಲಿನ ವಹಿವಾಟಿನ ಜತೆಗೆ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿಯೂ ಖರೀದಿದಾರರಿಂದ ಬೇಡಿಕೆ ಕಂಡು ಬರುತ್ತಿದೆ. ಅಲ್ಲಿ ವಹಿವಾಟು ವಿಸ್ತರಣೆಗೂ ವಿಪುಲ ಅವಕಾಶಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT