ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ಗತ್ತಿನ ‘ಕ್ಲಾಸಿಕ್ 350 ಸಿಗ್ನಲ್ಸ್‌’

Last Updated 5 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ರಾಯಲ್ ಎನ್‌ಫೀಲ್ಡ್ ಸಂಸ್ಥೆ ಹೊಸ ‘ಕ್ಲಾಸಿಕ್ 350 ಸಿಗ್ನಲ್ಸ್’ ಸೇವಾ ಆವೃತ್ತಿ ಬೈಕ್ ಬಿಡುಗಡೆ ಮಾಡಿದೆ. ರೆಟ್ರೋ ಲುಕ್‌ನೊಂದಿಗೆ ನವೀನ ತಂತ್ರಜ್ಞಾನ ಹೊಂದಿರುವ ಈ ಬೈಕ್, ಪಡ್ಡೆ ಹುಡುಗರ ಆಕರ್ಷಕ ವಾಹನವಾಗಲಿದೆ.

ಆರು ದಶಕಗಳಿಂದ ನಿರಂತರವಾಗಿ ಭಾರತೀಯ ಸೇನೆಯ ಸಹಯೋಗದೊಂದಿಗೆ ಈ ಸಂಸ್ಥೆಯ ಬೈಕ್‌ಗಳು ದೇಶದ ಗಡಿಭಾಗದಲ್ಲಿ ಗಸ್ತು ತಿರುಗುತ್ತಿವೆ. ಅದರ ನೆನಪಿಗಾಗಿ ಮತ್ತು ಯೋಧರಿಗೆ ಗೌರವ ಅರ್ಪಿಸುವ ಸಲುವಾಗಿ ‘ಸಿಗ್ನಲ್ಸ್‌’ ಆವೃತ್ತಿಯ ಸೇನಾ ಬೈಕ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ.

ಬಣ್ಣವೇ ಪ್ರಧಾನ ಇದು ಸೇನಾ ವಿಧಾನ: ಭಾರತೀಯ ಸೇನಾ ಪಡೆಯ ಪ್ರೇರಣೆಯೊಂದಿಗೆ ಹೊಸ ರಾಯಲ್ ಎನ್‌ಫೀಲ್ಡ್‌ ಕ್ಲಾಸಿಕ್‌ 350 ಸಿಗ್ನಲ್ಸ್‌ ಬೈಕ್‌ಗಳು ಎರಡು ಕಲರ್‌ ಸ್ಕೀಂನೊಂದಿಗೆ ರಸ್ತೆಗಳಿದಿದ್ದು, ಸೇನಾ ಬಣ್ಣದಿಂದ ಕಂಗೊಳಿಸುತ್ತಿದೆ. ಏರೋ ಬೋರ್ನ್‌ ಬ್ಲೂ ಬಣ್ಣದ ಬೈಕ್‌ಗಳು ಭಾರತೀಯ ವಾಯುಪಡೆಗೆ ಗೌರವ ಸೂಚಕವಾಗಿದ್ದರೆ, ಸ್ಟ್ರಾಮ್‌ ರೈಡರ್ ಸ್ಯಾಂಡ್‌ ಬಣ್ದದ ಬೈಕ್‌ಗಳು ಬಿಎಸ್‌ಎಫ್‌ ಯೋಧರನ್ನು ಸ್ಮರಿಸುವ ಪ್ರತೀಕವಾಗಿದೆ.

ಈ ಬೈಕ್‌ನ ವಿನ್ಯಾಸದಲ್ಲಿ ರೆಟ್ರೋ ಶೈಲಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದ್ದು, ವೀಲ್ ನ ರೀಮ್‌ಗಳು, ಎಂಜಿನ್‌ ಕವರ್‌, ಹ್ಯಾಂಡಲ್‌ ಬಾರ್‌ ಸೇರಿದಂತೆ ಹೆಡ್‌ಲ್ಯಾಪ್‌ನ ಬ್ರಿಜೆಲ್‌ಗೂ ಬ್ಲಾಕ್‌ ಮ್ಯಾಟ್‌ ಪೇಂಟ್‌ನ ಹೊದಿಕೆ ನೀಡಿ ಕಲರ್‌ ಥೀಮ್‌ನಲ್ಲಿ ಸಮನ್ವಯತೆ ಕಾಪಾಡಿಕೊಳ್ಳಲಾಗಿದೆ.

ಫ್ಯೂಯೆಲ್‌ ಎಷ್ಟಿದೆ ನೋಡಿ: ಇದೇ ಮೊದಲ ಬಾರಿಗೆ 350 ಸಿಸಿ ಎಂಜಿನ್‌ ವಿಭಾಗದ ಬೈಕ್‌ಗಳಲ್ಲಿ ಫ್ಯೂಯೆಲ್‌ ಇಂಡಿಕೇಟರ್‌ ಪ್ಯಾನಲ್‌ (ಇಂಧನ ಪ್ರಮಾಣ ಸೂಚಕ) ನೀಡಲಾಗಿದೆ. 13.5 ಲೀಟರ್‌ ಸಾಮರ್ಥ್ಯದ ಪೆಟ್ರೋಲ್‌ ಟ್ಯಾಂಕ್‌ನಲ್ಲಿ ಎಷ್ಟು ಪ್ರಮಾಣದ ಇಂಧನ ಲಭ್ಯವಿದೆ ಎಂಬ ಮಾಹಿತಿ ಸುಲಭವಾಗಿ ಬೈಕರ್‌ಗಳು ತಿಳಿಯಬಹುದಾಗಿದೆ. ಈ ಬೈಕ್‌ನಲ್ಲಿ ನಗರದ ಟ್ರಾಫಿಕ್‌ ನಡುವೆಯೂ ಪ್ರತಿ ಲೀಟರ್‌ಗೆ 40 ಕಿ.ಮೀ ದೂರದಷ್ಟು ಇಂಧನ ಕ್ಷಮತೆ ಪಡೆಯಬಹುದು ಎಂಬುದು ತಜ್ಞರ ಅಭಿಪ್ರಾಯ

ಸೇನಾ ಲಾಂಛನ ವೀರ ಯೋಧರಿಗೆ ನಮನ: ಸಿಗ್ನಲ್ಸ್‌ ಬೈಕ್‌ನ ಟ್ಯಾಂಕ್‌ನ ಮೇಲೆ ವಿಶೇಷ ಸಂಖ್ಯೆಗಳು ಮತ್ತು ಸಂಕೇತಗಳಿವೆ. ಇದು ಭಾರತೀಯ ಸೇನಾ ಪರಂಪರೆಯನ್ನು ನೆನಪಿಸುತ್ತದೆ. ಮೊದಲ ಬಾರಿಗೆ 1949ರಲ್ಲಿ ಭಾರತೀಯ ಸೇನೆಗೆ ಎನ್‌ಫೀಲ್ಡ್‌ ಬೈಕ್‌ಗಳು ಸೇರ್ಪಡೆಯಾದ ಕಾರಣ ಟ್ಯಾಂಕ್‌ನ ಬಲಭಾಗದಲ್ಲಿ ‘49‘ ಎಂಬ ಸಂಖ್ಯೆ ಇದೆ. ಎಡ ಭಾಗದಲ್ಲಿ ಗಡಿ ಭಾಗದಲ್ಲಿ ಗಸ್ತು ತಿರುಗಲು ಈ ಬೈಕ್‌ ಉಪಯೋಗಿಸಿದ ಸೇನಾ ಪ್ಲಟೂನ್ ಲಾಂಛನವಿದೆ. ಈ ಸಂಖ್ಯೆಗಳು ತ್ರಿವರ್ಣ ಬಣ್ಣದಲ್ಲಿರುವುದರಿಂದ ಹೆಚ್ಚು ಶೋಭೆ ತಂದಿದೆ. ಹಿಂಬದಿಯಲ್ಲಿ ‘TP 20' ಎಂಬ ನಂಬರ್‌ ಇದ್ದು ಇದು ಟ್ರೂಪ್‌ ಸಂಖ್ಯೆನ್ನು ಪ್ರತಿನಿಧಿಸುತ್ತದೆ.

ಅಷ್ಟೇ ಅಲ್ಲದೆ, ಟ್ಯಾಂಕ್‌ನ ಮೇಲೆ ಪ್ರೊಡಕ್ಷನ್‌ ನಂಬರ್‌ ಇದ್ದು, ಪ್ರತಿ ಬೈಕ್‌ ಸಹ ಪ್ರತ್ಯೇಕ ಪ್ರೊಡಕ್ಷನ್‌ ನಂಬರ್ ಹೊಂದಿರುತ್ತದೆ.

ಹೆಚ್ಚಿದ ಅಕ್ಸೆಸರಿಸ್‌ ಸುರಕ್ಷತೆಗಾಗಿ ಎಬಿಎಸ್‌: ಸುರಕ್ಷಾ ಸೌಲಭ್ಯಗಳಲ್ಲಿ ಹೆಚ್ಚಿನ ಸುಧಾರಣೆಯನ್ನು ಸಿಗ್ನಲ್ಸ್‌ ಬೈಕ್‌ನಲ್ಲಿ ಕಾಣಬಹುದು. ಮೊದಲ ಬಾರಿಗೆ 350 ಸಿಸಿ ಬೈಕ್‌ನ ವರ್ಗದಲ್ಲಿ ಎರಡೂ ಚಕ್ರಗಳಿಗೂ ಡ್ಯುಯಲ್‌ ಚಾನೆಲ್‌ ಎಬಿಎಸ್‌ (ಆ್ಯಂಟಿ ಲಾಕ್‌ ಬ್ರೇಕಿಂಗ್‌ ಸಿಸ್ಟಮ್) ಬ್ರೇಕಿಂಗ್‌ ಸಿಸ್ಟಮ್ ಅಳವಡಿಸಲಾಗಿದೆ. ಅಡ್ವೆಂಚರ್‌ ರೈಡ್‌ಗಳಿಗಾಗಿಯೇ ವಿಶೇಷವಾಗಿ ಹೆವಿ ಡ್ಯೂಟಿ ಮಿಲಿಟರಿ ಪ್ಯಾನಿಯರ್ಸ್‌, ಸ್ಟೀಲ್‌ ಎಂಜಿನ್‌ ಗಾರ್ಡ್‌, ವೀಂಡ್‌ಶಿಲ್ಡ್‌ ಕಿಟ್‌, ಅಲ್ಯುಮಿನಿಯಂ ಚಕ್ರಗಳು ಸೇರಿಂದತೆ 40 ಹೆಚ್ಚುವರಿ ಬಿಡಿಭಾಗಗಳನ್ನು ಈ ಆವೃತ್ತಿಯ ಬೈಕ್‌ಗಳಿಗಾಗಿ ಕಂಪನಿ ಸಿದ್ಧಪಡಿಸಿದೆ. ಎಲ್ಲ ಬಿಡಿಭಾಗಗಳಿಗೂ 2 ವರ್ಷ ಕಂಪನಿ ವಾರಂಟಿ ಇದೆ.

ಒಟ್ಟಿನಲ್ಲಿ ಸುರಕ್ಷೆತೆಗೆ ಹೆಚ್ಚಿನ ಒತ್ತು ನೀಡುತ್ತಿರುವ ಆರ್‌ಇ ಸಂಸ್ಥೆಯು ಮುಂಬರುವ ದಿನಗಳಲ್ಲಿ ಪ್ರತಿ ಬೈಕಿನಲ್ಲೂ ಹೊಸ ಸುರಕ್ಷಾ ಸೌಲಭ್ಯಗಳನ್ನು ಪರಿಚಯಿಸುವ ಇರಾದೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT