ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ವಾಹನಗಳ ರಿಟೇಲ್ ಮಾರಾಟ ಇಳಿಕೆ: ಕಾರಣ ಏನು?

ಭಾರತೀಯ ವಾಹನ ವಿತರಕರ ಒಕ್ಕೂಟದ ಮಾಹಿತಿ
Published 6 ನವೆಂಬರ್ 2023, 15:45 IST
Last Updated 6 ನವೆಂಬರ್ 2023, 15:45 IST
ಅಕ್ಷರ ಗಾತ್ರ

ನವದೆಹಲಿ: ವಾಹನಗಳ ರಿಟೇಲ್ ಮಾರಾಟವು ಕಳೆದ ವರ್ಷದ ಅಕ್ಟೋಬರ್‌ಗೆ ಹೋಲಿಸಿದರೆ ಈ ವರ್ಷದ ಅಕ್ಟೋಬರ್‌ನಲ್ಲಿ ಶೇ 7.73ರಷ್ಟು ಇಳಿಕೆ ಕಂಡಿದೆ ಎಂದು ಭಾರತೀಯ ವಾಹನ ವಿತರಕರ ಒಕ್ಕೂಟವು (ಎಫ್‌ಎಡಿಎಇ) ಸೋಮವಾರ ತಿಳಿಸಿದೆ.

2022ರ ಅಕ್ಟೋಬರ್‌ನಲ್ಲಿ 22.95 ಲಕ್ಷ ವಾಹನಗಳು ಮಾರಾಟ ಆಗಿದ್ದವು. 2023ರ ಅಕ್ಟೋಬರ್‌ನಲ್ಲಿ  21.17 ಲಕ್ಷಕ್ಕೆ ಇಳಿಕೆ ಕಂಡಿದೆ. ದ್ವಿಚಕ್ರ ವಾಹನ ಮಾರಾಟದಲ್ಲಿ ಇಳಿಕೆ ಕಂಡಿರುವುದೇ ಇದಕ್ಕೆ ಕಾರಣ ಎಂದು ಅದು ಹೇಳಿದೆ.

ಅಕ್ಟೋಬರ್ 14ರವರೆಗೆ ಪಿತೃಪಕ್ಷ ಇದ್ದಿದ್ದರಿಂದ ಹೊಸ ವಾಹನ ಖರೀದಿ ಆಗಿಲ್ಲ. ಹೀಗಾಗಿ ಕಳೆದ ವರ್ಷದ ಅಕ್ಟೋಬರ್‌ಗೆ ಹೋಲಿಸಿದರೆ ಈ ವರ್ಷದ ಅಕ್ಟೋಬರ್‌ನಲ್ಲಿ ಮಾರಾಟ ಶೇ 8ರಷ್ಟು ಇಳಿಕೆ ಆಗಿದೆ. ಆದರೆ, ಈ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ ಮಾರಾಟವು ಶೇ 13ರಷ್ಟು ಏರಿಕೆ ಆಗಿದೆ ಎಂದು ಒಕ್ಕೂಟದ ಅಧ್ಯಕ್ಷ ಮನಿಷ್‌ ರಾಜ್ ಸಿಂಘಾನಿಯಾ ಹೇಳಿದ್ದಾರೆ.

ಹಬ್ಬದ ಋತುವಿನಲ್ಲಿ ಎಲ್ಲ ವಿಭಾಗಗಳೂ ಉತ್ತಮ ಬೆಳವಣಿಗೆ ಕಾಣುತ್ತಿವೆ. ಈ ಬಾರಿಯ ನವರಾತ್ರಿಯಲ್ಲಿ ರಿಟೇಲ್ ಮಾರಾಟ ಶೇ 18ರಷ್ಟು ಹೆಚ್ಚಾಗಿದೆ. 2017ರ ನವರಾತ್ರಿಯಲ್ಲಿ ಆಗಿದ್ದ ಮಾರಾಟಕ್ಕಿಂತಲೂ ಹೆಚ್ಚಾಗಿದೆ. ಟ್ರ್ಯಾಕ್ಟರ್‌ ಹೊರತುಪಡಿಸಿ ಉಳಿದೆಲ್ಲ ವಿಭಾಗಗಳ ಮಾರಾಟ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.

ದೀಪಾವಳಿಯ ಹಬ್ಬ ಮತ್ತು ಹೊಸ ಮಾದರಿಗಳ ಬಿಡುಗಡೆಯು ಬೇಡಿಕೆಯನ್ನು ಹೆಚ್ಚಿಸುತ್ತಿದೆ. ಕಳೆದ ವರ್ಷ ವಾಹನಗಳ ಲಭ್ಯತೆಯು ಬೇಡಿಕೆಯಷ್ಟು ಇರಲಿಲ್ಲ. ಈ ಬಾರಿ ಆ ಸಮಸ್ಯೆ ಇಲ್ಲ. ಹೀಗಾಗಿ ಪ್ರಯಾಣಿಕ ವಾಹನ ಮಾರುಕಟ್ಟೆಯು ಉತ್ತಮ ಬೆಳವಣಿಗೆ ಹಾದಿಯಲ್ಲಿದೆ ಎಂದು ಹೇಳಿದ್ದಾರೆ.

ಹಬ್ಬದ ದಿನಗಳಲ್ಲಿ ಹೊಸ ವಾಹನಗಳಿಗೆ ಬುಕಿಂಗ್‌ ಹೆಚ್ಚಾಗಬಹುದು. ಆದರೆ, ವರ್ಷಾಂತ್ಯದ ರಿಯಾಯಿತಿ ಕೊಡುಗೆಯು ತಕ್ಷಣದ ಮಾರಾಟವನ್ನು ಕಡಿಮೆ ಮಾಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎಂದಿದ್ದಾರೆ.

ಮುನ್ನೋಟ: ವರ್ಷಾಂತ್ಯ ಸಮೀಪಿಸುತ್ತಿದೆ. ಹೀಗಾಗಿ ಅಲ್ಪಾವಧಿಯಲ್ಲಿ ವಾಹನ ವಲಯದ ಮಾರಾಟದ ಮುನ್ನೋಟವು ಮಿಶ್ರಫಲ ಎದುರಿಸುವ ನಿರೀಕ್ಷೆ ಇದೆ. ಹಬ್ಬದ ಋತು ಮತ್ತು ಬಿತ್ತನೆ ಅವಧಿಯು ದ್ವಿಚಕ್ರ ವಾಹನ ಮಾರಾಟವನ್ನು ಹೆಚ್ಚಿಸುವ ನಿರೀಕ್ಷೆ ಇದೆ. ವಾಣಿಜ್ಯ ವಾಹನ ವಿಭಾಗವು ಸಹ ಹಬ್ಬದ ಅವಧಿ ಮತ್ತು ನಿರ್ಮಾಣ ಚಟವಟಿಕೆಗಳಿಂದಾಗಿ ನವೆಂಬರ್‌ನಲ್ಲಿ ಉತ್ತಮ ಮಾರಾಟ ಕಾಣುವ ಅಂದಾಜು ಮಾಡಲಾಗಿದೆ. ಆದರೆ, ಪ್ರಯಾಣಿಕ ವಾಹನ ವಿಭಾಗದ ಬೆಳವಣಿಗೆಯು ಬಹಳ ಸೂಕ್ಷ್ಮವಾಗಿರಲಿದೆ. ದೀಪಾವಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ವಾಹನಗಳು ಮಾರಾಟ ಆಗದಿದ್ದರೆ ವಿತರಕರ ಬಳಿ ಹೆಚ್ಚಿನ ವಾಹನಗಳು ಉಳಿಯಲಿದ್ದು, ಅವರಿಗೆ ಒತ್ತಡ ಹೆಚ್ಚಾಗಲಿದೆ ಎಂದು ಸಿಂಘಾನಿಯಾ ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT