ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಿಳಿಯಲಿವೆ ಬೌನ್ಸ್‌ ಎಲೆಕ್ಟ್ರಿಕ್‌ ಬೈಕ್‌

ರಾಜ್ಯದ ಎಲ್ಲ ನಗರಗಳಲ್ಲಿ ಸೇವೆ ಪ್ರಾರಂಭಿಸಲು ನಿರ್ಧಾರ
Last Updated 11 ಫೆಬ್ರುವರಿ 2020, 19:26 IST
ಅಕ್ಷರ ಗಾತ್ರ

ಬೆಂಗಳೂರು:ಬೈಕ್‌ಗಳನ್ನು ಬಾಡಿಗೆ ನೀಡುವ ಮೂಲಕ ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಹೊಸ ಪ್ರಯೋಗದಲ್ಲಿ ತೊಡಗಿಸಿಕೊಂಡಿರುವ ಬೌನ್ಸ್‌ ಕಂಪನಿ, ಈಗ ಸ್ವತಃ ಎಲೆಕ್ಟ್ರಿಕ್‌ ಬೈಕ್‌ಗಳನ್ನು ಅಭಿವೃದ್ಧಿಗೊಳಿಸುತ್ತಿದೆ.

‘ನಗರದಲ್ಲಿ 20 ಸಾವಿರ ಬೌನ್ಸ್‌ ಬೈಕ್‌ಗಳು ಸೇವೆ ನೀಡುತ್ತಿವೆ.ಒಂದು ಬೈಕನ್ನು ದಿನಕ್ಕೆ 8ರಿಂದ 10 ಜನ ಬಳಸುತ್ತಿದ್ದಾರೆ. ಒಟ್ಟು 11.13 ಲಕ್ಷ ಲೀಟರ್‌ ಇಂಧನ ಉಳಿಸಲು ಬೌನ್ಸ್‌ ನೆರವಾಗಿದೆ. ಇದರಿಂದ ವಾಯುಮಾಲಿನ್ಯ ಸಾಕಷ್ಟು ಕಡಿಮೆಯಾಗಿದೆ’ ಎಂದು ಕಂಪನಿಯ ಸಹಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಅನಿಲ್‌ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಸದ್ಯ ಟಿವಿಎಸ್‌ನ ಬೈಕ್‌ಗಳ ಮೂಲಕ ಸೇವೆ ನೀಡಲಾಗುತ್ತಿದೆ. ಈಗ ಬೌನ್ಸ್‌ನ ತಂತ್ರಜ್ಞರೇ ಎಲೆಕ್ಟ್ರಿಕ್‌ ಬೈಕ್‌ ಅಭಿವೃದ್ಧಿ ಪಡಿಸುತ್ತಿದ್ದು, ಶೀಘ್ರದಲ್ಲಿ ಇವುಗಳ ಮೂಲಕ ಸೇವೆ ಆರಂಭಿಸಲಿದ್ದೇವೆ’ ಎಂದು ಹೇಳಿದರು.

‘ಎಲೆಕ್ಟ್ರಿಕ್‌ ವಾಹನಗಳ ಬಳಕೆ ಆರಂಭದಲ್ಲಿ ದುಬಾರಿ ಎನಿಸಿದರೂ, ಹೆಚ್ಚು ಬಾಳಿಕೆ ಬರುತ್ತದೆ. ದೀರ್ಘಾವಧಿ ಲೆಕ್ಕ ಹಾಕಿದರೆ ವೆಚ್ಚವೂ ಕಡಿಮೆಯಾಗುತ್ತದೆ. ಅಲ್ಲಲ್ಲಿ ಚಾರ್ಜಿಂಗ್‌ ಪಾಯಿಂಟ್‌ಗಳನ್ನು ಮಾಡಲಾಗುತ್ತದೆ. ಸುಲಭವಾಗಿ ಬ್ಯಾಟರಿ ಬದಲಿಸಬಲ್ಲ ವ್ಯವಸ್ಥೆ ಮಾಡಲಾಗಿದೆ. ಪೆಟ್ರೋಲ್‌, ಡೀಸೆಲ್‌ ಹಾಕಿಕೊಂಡಷ್ಟೇ ಸುಲಭವಾಗಿ ಬ್ಯಾಟರಿಗಳನ್ನು ಬದಲಿಸಬಹುದು ಅಥವಾ ಹೊಸ ಬ್ಯಾಟರಿ ಹಾಕಿಕೊಳ್ಳಬಹುದು’ ಎಂದರು.

ರಾಜ್ಯದೆಲ್ಲೆಡೆ ವಿಸ್ತರಣೆ:‘ಬೌನ್ಸ್‌ ಬೈಕ್‌ ಸೇವೆಯನ್ನು ಮೈಸೂರು, ಮಂಗಳೂರು, ಹುಬ್ಬಳ್ಳಿ–ಧಾರವಾಡ, ಶಿವಮೊಗ್ಗದಲ್ಲಿ ಪ್ರಾರಂಭಿಸಲಾಗಿದೆ. ರಾಜ್ಯದ ಎಲ್ಲ ಎರಡು ಮತ್ತು ಮೂರನೇ ಹಂತದ ನಗರಗಳು ಹಾಗೂ ಪ್ರವಾಸಿ ತಾಣಗಳಲ್ಲಿ ಸೇವೆ ಪ್ರಾರಂಭಿಸಲು ನಿರ್ಧರಿದ್ದೇವೆ’ ಎಂದು ಅನಿಲ್ ಹೇಳಿದರು.

‘ಯುರೋಪ್‌ನಲ್ಲಿಯೂ ಈ ಸೇವೆ ಪ್ರಾರಂಭಿಸುವ ಉದ್ದೇಶವಿದ್ದು, ಈ ಕುರಿತು ಮಾತುಕತೆ ನಡೆಯುತ್ತಿದೆ’ ಎಂದು ಅವರು ತಿಳಿಸಿದರು.

***

* 2 ಕೋಟಿ -ಸವಾರರು ಬೌನ್ಸ್‌ ಬೈಕ್‌ ಸವಾರಿ ಮಾಡಿರುವ ಸಂಖ್ಯೆ

* 25 ಲಕ್ಷ -ಬೈಕ್‌ ಸೇವೆ ಬಳಸಿರುವ ಸವಾರರ ಸಂಖ್ಯೆ

* 42% -ಮೆಟ್ರೊ ರೈಲು ಸಂಪರ್ಕ ಪಡೆಯಲು ಬೈಕ್ ಬಳಸಿರುವವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT