ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಟಾರ್‌ ಸಿಟಿಯಲ್ಲಿ ‘ವಾಹನಗಳ ಹಬ್ಬ’

ಕುತೂಹಲ ಮೂಡಿಸಿರುವ ಡೆಟ್ರಾಯಿಟ್ ಆಟೊ ಶೋ
Last Updated 16 ಜನವರಿ 2019, 19:45 IST
ಅಕ್ಷರ ಗಾತ್ರ

‘ಆಟೊ ಶೋ’ ಗಳೆಂದರೆ ವಾಹನ ಪ್ರಿಯರ ಮನದಲ್ಲಿ ಎಲ್ಲಿಲ್ಲದ ಕುತೂಹಲ ತಂದೊಡ್ಡುತ್ತದೆ. ವಾಹನಗಳನ್ನು ಖರೀದಿಸದಿದ್ದರೂ ಪರವಾಗಿಲ್ಲ, ‘ಹೊಸ ಮಾದರಿಗಳನ್ನೊಮ್ಮೆ’ ಶೊನಲ್ಲಿ ನೋಡಿಬಿಡಬೇಕು. ಮನತಣಿಸಿಕೊಳ್ಳಬೇಕು. ಹೀಗೆಂದುಕೊಂಡೇ ಶೋಗೆ ಭೇಟಿ ಕೊಡುವ ಗ್ರಾಹಕರು, ಹೊಸ ವಾಹನಗಳೆದುರು ನಿಂತು, ಯಾವಾಗ ಖರೀದಿಸಬಹುದೆಂದು ಮನದಲ್ಲೇ ‘ಆಕ್ಷನ್‌ ಪ್ಲಾನ್’ ಸಿದ್ಧ ಮಾಡಿಕೊಳ್ಳುತ್ತಾರೆ.

ಅಂಥ ಮನತಣಿಸುವ, ವಾಹನಪ್ರಿಯರಿಗೆ ಕುತೂಹಲ ಹುಟ್ಟಿಸುವ ಅಂತರರಾಷ್ಟ್ರೀಯಮಟ್ಟದ ಆಟೊ ಶೋ ಉತ್ತರ ಅಮೆರಿಕದ ಡೆಟ್ರಾಯಿಟ್‌ನಲ್ಲಿ ಜನವರಿ 19ರಿಂದ ಆರಂಭವಾಗಲಿದೆ. ‘ಮೋಟಾರ್ ಸಿಟಿ’ ಎಂದೇ ಗುರುತಿಸಿಕೊಂಡಿರುವ ಈ ಸಿಟಿ ಈಗ ಆಟೊ ಶೋ ನೊಂದಿಗೆ ಜಾಗತಿಕ ಮಟ್ಟದಲ್ಲಿ ಸುದ್ದಿಯಲ್ಲಿದೆ.

ಅತ್ಯಾಧುನಿಕ ಮಾದರಿ ವಾಹನಗಳನ್ನು ಪ್ರದರ್ಶಿಸಿ–ಜನರಿಗೆ ಪರಿಚಯಿಸಲು ವಾಹನ ತಯಾರಿಕಾ ಸಂಸ್ಥೆಗಳು ತುದಿಗಾಲಲ್ಲಿವೆ. ಜನವರಿ 19ರಿಂದ ಪ್ರದರ್ಶನ ಆರಂಭವಾಗಲಿದ್ದು, 24ರವರೆಗೆ ಮುಂದುವರಿಯಲಿದೆ. ನವ ನವೀನ ತಂತ್ರಜ್ಞಾನ, ವಿಶೇಷ ವಿನ್ಯಾಸದ ವಾಹನಗಳು ಮೇಳದಲ್ಲಿ ಭಾಗವಹಿಸುತ್ತಿವೆ. ಸ್ಪೋರ್ಟಿ ವಾಹನ, ಸಾಹಸಪ್ರಿಯರಿಗಾಗಿ ಕಾರುಗಳು ಈ ಮೇಳದಲ್ಲಿರಲಿವೆ. ಹೀಗಾಗಿ ವಾಹನಪ್ರಿಯರಲ್ಲಿ ಮೇಳದ ಬಗ್ಗೆ ನಿರೀಕ್ಷೆ ದುಪ್ಪಟ್ಟಾಗಿದೆ.

ಫೋರ್ಡ್‌ ಮತ್ತು ವೋಕ್ಸವೇಗನ್ ಸಂಸ್ಥೆಗಳು ಹೊಸ ಯೋಜನೆ ಘೋಷಿಸುವ ಮೂಲಕ ಸಂಚಲನ ಮೂಡಿಸಬಹುದು ಎಂಬ ಕುತೂಹಲ ಒಂದೆಡೆಯಿದ್ದರೆ, ವಿವಿಧ ಕಾರು ಉತ್ಪಾದನಾ ಸಂಸ್ಥೆಗಳು ಯಾವುದೆಲ್ಲ ಮಾದರಿ ವಾಹನಗಳನ್ನು ಪ್ರಸ್ತುತಪಡಿಸಲಿವೆ ಎಂಬುದರ ಬಗ್ಗೆ ಮತ್ತೊಂದೆಡೆ ಚರ್ಚೆಯು ಆರಂಭಗೊಂಡಿದೆ.

ಇವೆಲ್ಲದರ ಮಧ್ಯೆ ಜನರಲ್ ಮೋಟರ್ಸ್ ಸಂಸ್ಥೆಯು ಹೊಸ ಮಾದರಿಯ ಕ್ಯಾಡಿಲಾಕ್-ಎಕ್ಸ್‌ಟಿ 6 ಅತ್ಯಾಧುನಿಕ ವಾಹನವನ್ನು ಪರಿಚಯಿಸಿದೆ. ಐಷಾರಾಮಿ ಮಾದರಿಯ ಕಾರುಗಳಿಗೆ ಪೈಪೋಟಿ ನೀಡುವ ಉದ್ದೇಶದಿಂದ ಸಿದ್ಧಪಡಿಸಲಾಗಿರುವ ಈ ವಾಹನವು ವಿಭಿನ್ನ ಮತ್ತು ವಿಶಿಷ್ಟತೆಯಿಂದ ಕೂಡಿದೆ.

ಜನರಲ್ ಮೋಟರ್ಸ್‌ ಸಂಸ್ಥೆಯ ಪ್ರಕಾರ, ಕ್ಯಾಡಿಲಾಕ್ ಅತ್ಯಾಧುನಿಕ ತಂತ್ರಜ್ಞಾನ ಮತ್ತು ನವೀನ ಮಾದರಿಯನ್ನು ಪ್ರತಿನಿಧಿಸುತ್ತದೆ. ಇದರ ಮೂಲಕವೇ ಆಟೊಮೊಬೈಲ್ ಕ್ಷೇತ್ರದಲ್ಲಿ ಹೊಸ ಛಾಪು ಮೂಡಿಸುವ ಗುರಿಯಿದೆ. ಇದು ಹಲವಾರು ಬದಲಾವಣೆಗೆ ನಾಂದಿ ಹಾಡಲಿದೆ.

ಆರ್ಥಿಕವಾಗಿ ಹಲವಾರು ಏರಿಳಿತಗಳಾದರೂ ಕಾರು ಪ್ರಿಯರು ಹೊಸ ಮಾದರಿಯ ಕಾರುಗಳನ್ನು ಖರೀದಿಸುವಲ್ಲಿ ಯಾವುದೇ ನಿರಾಸಕ್ತಿ ತೋರಿಲ್ಲ. ಯಾವ್ಯಾವ ಸಂಸ್ಥೆಯು ಎಷ್ಟೆಲ್ಲ ಸೌಕರ್ಯ ಮತ್ತು ವಿಶೇಷಗಳೊಂದಿಗೆ ವಾಹನಗಳನ್ನು ಪರಿಚಯಿಸುತ್ತದೆ ಎಂಬ ಆಧಾರದೊಂದಿಗೆ ಅವರು ಕಾರು ಖರೀದಿಸಲು ಯೋಜಿಸಿದ್ದಾರೆ.

ವಾಹನ ಉತ್ಪಾದನಾ ಪ್ರತಿಷ್ಠಿತ ಸಂಸ್ಥೆಗಳು ಈವರೆಗೆ ತಮ್ಮ ಗುಟ್ಟು ಬಿಟ್ಟು ಕೊಟ್ಟಿಲ್ಲ. ಕಾರುಗಳ ಮಾರಾಟದ ಭರಾಟೆ ಜೊತೆಗೆ ಟ್ರಕ್ಕುಗಳು ಮತ್ತು ಇತರೆ ಮಾದರಿ ವಾಹನಗಳ ಮಾರಾಟವೂ ವೃದ್ಧಿಯಾಗಿರುವ ಹಿನ್ನೆಲೆಯಲ್ಲಿ ವಿವಿಧ ಸಂಸ್ಥೆಗಳವರು ಎಚ್ಚರಿಕೆಯ ಹೆಜ್ಜೆಯಿಟ್ಟು ಮುನ್ನಡೆಯಲು ಬಯಸಿದ್ದಾರೆ.

ವರ್ಷದ ಆರಂಭದಲ್ಲಿ ಗ್ರಾಹಕರಲ್ಲಿ ನಿರಾಸೆ ಮೂಡಿಸಬಾರದು ಎಂಬ ಪಣ ತೊಟ್ಟಿರುವ ಕೆಲ ಸಂಸ್ಥೆಗಳು ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ವಾಹನಗಳನ್ನು ಕೊಡಮಾಡಲು ಬಯಸಿವೆ.

ಇದರಿಂದ ಸಂಸ್ಥೆಗೆ ಹೆಸರು ಬರಲಿದೆ. ಜೊತೆಜೊತೆಗೆ ಗ್ರಾಹಕರ ವಿಶ್ವಾಸವೂ ಗಳಿಸಲು ಸಾಧ್ಯವಾಗಲಿದೆ ಎಂಬ ನಿರೀಕ್ಷೆ ಸಂಸ್ಥೆ ಮಾಲೀಕರು ಹೊಂದಿದ್ದಾರೆ.

ಡೆಟ್ರಾಯ್ಟ್‌ನಲ್ಲಿ ಅಷ್ಟೇ ದೇಶ–ವಿದೇಶದ ಯಾವುದೇ ಮೂಲೆಯಲ್ಲಿ ಕಾರುಗಳ ಶೋ ನಡೆದರೂ ಕುತೂಹಲಕ್ಕೆ ಎಡೆ ಮಾಡಿಕೊಡುವುದಂತೂ ಸ್ಪಷ್ಟ. ಹೊಸ ವರ್ಷದ ಉಮೇದು ಮತ್ತು ಸಂಭ್ರಮದಲ್ಲಿರುವ ಬಹುತೇಕ ಕಾರು ಪ್ರಿಯರು ಹೊಸ ಕಾರು ಖರೀದಿಯೊಂದಿಗೆ ಜೀವನ ಮುಂದುವರೆಸಲು ಬಯಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT