ಸೊಪ್ಪು ಕಟ್ಟಿ, ಮಾರುವುದೇ ಕಾಯಕ

7
ಬದುಕು ಬನಿ

ಸೊಪ್ಪು ಕಟ್ಟಿ, ಮಾರುವುದೇ ಕಾಯಕ

Published:
Updated:
Deccan Herald

ನನ್ನ ಹೆಸರು ಕೆಂಪಮ್ಮ. ವಯಸ್ಸು 80. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಕೆ.ಆರ್.ಪುರ ಸಂತೆಯಲ್ಲಿ ಸೊಪ್ಪು ಕಟ್ಟಿ ವ್ಯಾಪಾರ ಮಾಡುವುದು ನಿತ್ಯದ ಕಾಯಕ. ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಕೊಲ್ದೇವಿ ಗ್ರಾಮ ನನ್ನ ಗಂಡನ ಮನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತವರುಮನೆ. ಮದುವೆಯಾಗಿ ಐದನೇ ವರ್ಷಕ್ಕೆ ಗಂಡ ತೀರಿಕೊಂಡಾಗ ದಿಕ್ಕು ತೋಚದೆ ಕೆಲಸ ಅರಸಿ ಬೆಂಗಳೂರಿಗೆ ಬಂದು ಸೊಪ್ಪು ಕಟ್ಟಿ ಜೀವನ ಆರಂಭಿಸಿದೆ.

ಇದ್ದ ಅಲ್ಪಸ್ವಲ್ಪ ಕೃಷಿ ಭೂಮಿಯಲ್ಲಿ ಗಂಡನ ಜೊತೆಗೆ ವ್ಯವಸಾಯ ಮಾಡಿಕೊಂಡಿದ್ದೆ. ಅನಾರೋಗ್ಯದಿಂದ ಗಂಡ ತೀರಿಕೊಂಡಾಗ ಇದ್ದ ಕೃಷಿ ಭೂಮಿ ಗಂಡನ ಸಂಬಂಧಿಕರ ಪಾಲಾಯಿತು. ಕೆಲ ದಿನ ಬೇರೆಯವರ ಮನೆಯಲ್ಲಿ ಕೂಲಿ ನಾಲಿ ಮಾಡಿ ಜೀವನ ನಿರ್ವಹಣೆ ಮಾಡಿದ ನಾನು ಕೊನೆಗೆ ಊರು ಬಿಟ್ಟು ಬೆಂಗಳೂರು ಪಟ್ಟಣ ಸೇರಿದೆ.

ನೆರೆ ರಾಜ್ಯ ತಮಿಳುನಾಡು, ಆಂಧ್ರಪ್ರದೇಶಗಳಿಂದ ಬರುವ ಕೊತಂಬರಿ, ಕರಿಬೇವಿನ ಸೊಪ್ಪನ್ನು ಕಟ್ಟು ಕಟ್ಟುವ ಕೆಲಸ ನನ್ನದು. ಅಷ್ಟೇ ಅಲ್ಲದೆ ಕೋಲಾರ, ಮುಳಬಾಗಿಲು, ನರಸಾಪುರ, ಮಾಲೂರುಗಳಿಂದ ರೈತರು ತರುವ ಸೊಪ್ಪನ್ನು ಅಲ್ಪಸ್ವಲ್ಪ ಹಣದಿಂದ ಖರೀದಿಸಿ ಕಟ್ಟುಗಳನ್ನು ಕಟ್ಟಿ ವ್ಯಾಪಾರ ಮಾಡುತ್ತೇನೆ.

ಕೆ.ಆರ್.ಪುರ ಸಂತೆಗೂ ನನಗೂ ಅವಿನಾಭಾವ ಸಂಬಂಧ. ಹದಿನೈದು ವರ್ಷದ ಹಿಂದೆ ಕೆಲಸ ಆರಸಿ ಬಂದಾಗ ಕೈ ಹಿಡಿದಿದ್ದು ಇದೇ ಸಂತೆ. ಅಗ ಆಯ್ಕೆ ಮಾಡಿಕೊಂಡ ಕೆಲಸವೇ ಕೊತಂಬರಿ, ಕರಿಬೇವಿನ ಸೊಪ್ಪುಗಳನ್ನು ಕಟ್ಟುವುದು. ನಂತರ ಅದನ್ನು ಮಾರುವುದು ನಿತ್ಯ ಕಾಯಕವಾಯಿತು.

ಮೊದಲಿಗೆ ಕೆಲಸ ಆರಂಭಿಸಿದಾಗ ಅಡೆತಡೆ ಅನುಭವಿಸಿದ್ದೇನೆ. ಸಂತೆ ಪಕ್ಕದ ಕಾಂಪ್ಲೆಕ್ಸ್ ಒಂದರ ಮುಂದೆ ಮೂರು ಅಡಿ ಜಾಗವೇ ನನ್ನ ಅಸ್ತಿ. ವ್ಯಾಪಾರ ಮಾಡಲು ಅ ಸಣ್ಣ ಜಾಗ ಒದಗಿಸಿದವರಿಗೆ ನಾನು ಕೃತಜ್ಞಳಾಗಿದ್ದೇನೆ.

ಇದ್ದ ಒಬ್ಬ ಮಗಳು ಇಪ್ಪತ್ತು ವರ್ಷದ ಹಿಂದೆ ತೀರಿಕೊಂಡಿದ್ದಾಳೆ. ಮಗಳಿಗೆ ಇದ್ದ ಒಬ್ಬ ಮಗಳು ದೂರದ ಊರಿನಲ್ಲಿದ್ದಾಳೆ. ಹದಿನೈದು ದಿನಗಳಿಗೊಮ್ಮೆ ಮೊಮ್ಮಗಳನ್ನು ಮಾತನಾಡಿಸಲು ತೆರಳುತ್ತೇನೆ. ಗಂಡನ ಮನೆಯಿಂದ ಆಗಲಿ ಅಥವಾ ತವರು ಮನೆಯಿಂದಾಗಲಿ ಯಾವುದೇ ಆಸರೆಯಿಲ್ಲ. ಕೆ.ಆರ್.ಪುರ ಸಂತೆಗೆ ಬರುವ ವ್ಯಾಪಾರಿಗಳು, ಸಾರ್ವಜನಿಕರೇ ನನಗೆ ಆಸರೆ. ಇಲ್ಲಿನ ಸಂತೆಯ ಒಂದು ಭಾಗದ ಸಂಕೀರ್ಣದ ಮುಂದಿರುವ ಪ್ಲಾಸ್ಟಿಕ್ ಹೊದಿಕೆಯೇ ನನಗೆ ಆಸರೆ. ಮಳೆ, ಗಾಳಿ, ಚಳಿ ಎನ್ನದೆ ನಿತ್ಯ ವ್ಯಾಪಾರ ಮಾಡುತ್ತೇನೆ. ರಾತ್ರಿ ಹತ್ತು ಗಂಟೆಗೆ ರೈತರು, ವ್ಯಾಪಾರಿಗಳು ಕೆ.ಆರ್.ಪುರ ಸಂತೆಗೆ ಸೊಪ್ಪುಗಳು ತರುತ್ತಾರೆ. ಇಡೀ ದಿನ ರಾತ್ರಿ ಸೊಪ್ಪು ತರುವ ವ್ಯಾಪಾರಿ ಹಾಗೂ ರೈತರಿಗೆ ಬೆಳಿಗ್ಗೆ 10 ಗಂಟೆಯವರೆಗೆ ಸೊಪ್ಪು ಕಟ್ಟುತ್ತೇನೆ.

ನನ್ನದು ರಾತ್ರಿ ಮತ್ತು ಹಗಲು ಎರಡೂ ಹೊತ್ತು ಕೆಲಸ. ನಿದ್ದೆ ಮಾಡೋದು ಕೇವಲ ಎರಡು ಗಂಟೆ. ಮಳೆ ಬಂದರೆ ನಿದ್ದೆ ಮಾಡಲು ಜಾಗ ಇರದೆ ಇರವುದರಿಂದ ಕೂತಲ್ಲಿಯೆ ನಿದ್ದೆ ಮಾಡುತ್ತೇನೆ. ರೈತರಿಂದ ಖರೀದಿಸಿದ ಸೊಪ್ಪಿನ ಕಟ್ಟುಗಳನ್ನು ಬಿಡಿಯಾಗಿ ಕಟ್ಟಿ ಮಾರುವ ಕಾಯಕ ತೃಪ್ತಿ ಕೊಟ್ಟಿದೆ. ದಿನಕ್ಕೆ ಆರು ನೂರರಿಂದ ಏಳು ನೂರು ಕಟ್ಟುಗಳನ್ನು ಕಟ್ಟಿ‌ಮಾರುತ್ತೇನೆ. ಒಂದು ಕೊತಂಬರಿ, ಕರಿಬೇವು ಸೊಪ್ಪನ್ನು ಐದು ಅಥವಾ ಆರು ರೂಪಾಯಿಗಳಿಗೆ ಮಾರುತ್ತೇನೆ. ದಿನಕ್ಕೆ ಇನ್ನೂರು ರೂಪಾಯಿಯಿಂದ ಮುನ್ನೂರು ರೂಪಾಯಿ ದುಡಿಯುತ್ತೇನೆ. ಜ್ವರಾ, ಗಿರಾ ಬಂದರೆ ಹತ್ತಿರದ ವೈದ್ಯರ ಬಳಿ ಇಂಜೆಕ್ಷನ್ ಹಾಕಿಸಿಕೊಳ್ಳುತ್ತೇನೆ. ಯಾರಿಗಾದರೂ ಕಾಸು ಕೊಟ್ಟರೆ ಊಟ ತಂದು ಕೊಡುತ್ತಾರೆ. ಕೂತಲ್ಲಿಯೆ ಊಟ ತಿಂದು ಕೆಲಸ‌ ಮಾಡುತ್ತೇನೆ.

ನನಗೆ ಈಗ ವಯಸ್ಸು ಎಂಬತ್ತು. ಆದರೂ ದುಡಿಯುವ ಹುಮ್ಮಸ್ಸು ಕಡಿಮೆಯಾಗಿಲ್ಲ. ಸಂಸಾರದಲ್ಲಿ ಏಳು, ಬೀಳು ಕಂಡಿದ್ದೇನೆ. ಸಮಸ್ಯೆಗಳಿಗೆ ಎದೆಯೊಡ್ಡಿ ನಿಂತು ಜೀವನ ನಿರ್ವಹಣೆ ಮಾಡುತ್ತಿದ್ದೇನೆ.

ಬರಹ ಇಷ್ಟವಾಯಿತೆ?

 • 17

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !