ಗುರುವಾರ , ಸೆಪ್ಟೆಂಬರ್ 23, 2021
21 °C

ಆನೆಗಳ ಹಾವಳಿ: ಪ್ರಯೋಜನಕ್ಕೆ ಬಾರದ ಸೋಲಾರ್‌,ರೈಲ್ವೆ ಕಂಬಿ ಬೇಲಿ; ರೈತರಿಗೆ ತೊಂದರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಅಂಚಿನಲ್ಲಿರುವ ಗ್ರಾಮಗಳಲ್ಲಿ ವನ್ಯಜೀವಿಗಳ ಹಾವಳಿ ತಪ್ಪಿಸಲು ಅರಣ್ಯ ಇಲಾಖೆ ರಾತ್ರಿ ಗಸ್ತು, ಸೋಲಾರ್‌ ಬೇಲಿ, ರೈಲ್ವೆ ಕಂಬಿಗಳನ್ನು ಅಳವಡಿಸಿದ್ದರೂ ಪ್ರಯೋಜನವಾಗುತ್ತಿಲ್ಲ. 

ಆನೆಗಳು ಮತ್ತು ಹಂದಿಗಳು ಕೃಷಿ ಜಮೀನುಗಳಿಗೆ ಅವ್ಯಾಹತವಾಗಿ ನುಗ್ಗುತ್ತಿದೆ. ಪ್ರತಿ ದಿನ ಒಂ‌ದಲ್ಲ ಒಂದು ಬಾಗದಲ್ಲಿ ಜಮೀನಿಗೆ ದಾಳಿ ಮಾಡಿ ಬೆಳೆ ಹಾನಿಮಾಡುತ್ತಿರುವುದು ರೈತರಿಗೆ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗೆ ತಲೆ ನೋವು ಉಂಟುಮಾಡಿದೆ.

ಬಂಡೀಪುರ ಅಭಯಾರಣ್ಯದ ಓಂಕಾರ, ಗೋಪಾಲಸ್ವಾಮಿ ಬೆಟ್ಟ ಮತ್ತು ಕುಂದುಕೆರೆ ವಲಯಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿದೆ. ಹಾವಳಿ ತಡೆಯಲು ಓಂಕಾರ ವಲಯದಲ್ಲಿ ರೈಲ್ವೆ ಕಂಬಿಗಳನ್ನು ಅಳವಡಿಸಿದ್ದರೂ ದಿನನಿತ್ಯ ಆನೆ ಕಾಟ ತಪ್ಪಿಲ್ಲ.

ಮಂಚಹಳ್ಳಿ ಗುಡ್ಡ, ಆಲತ್ತೂರು ಮತ್ತು ಬೋಳೆಗೌಡನಕಟ್ಟೆ ಭಾಗದಿಂದ ಆನೆಗಳು ರೈತರ ಜಮೀನಿಗೆ ದಾಳಿ ಮಾಡುತ್ತಿವೆ. ಇದರಿಂದಾಗಿ ಇಲ್ಲಿನ ಸಿಬ್ಬಂದಿಗಳು ರಾತ್ರಿ ಸಮಯದಲ್ಲಿ ಗಸ್ತು ಕಾದು ಆನೆಗಳನ್ನು ಕಾಡಿಗೆ ಓಡಿಸುವ ಕೆಲಸ ಮಾಡುತ್ತಾರೆ. ಗಸ್ತು ಇರುವ ಜಾಗದಲ್ಲಿ ಒಂದೆರಡು ದಿನಗಳು ಆನೆಗಳು ಬರುವುದಿಲ್ಲ. ಹಂದಿಗಳು ದಾರಿ ಮಾಡಿಕೊಂಡು ಜಮೀನಿಗೆ ಬಂದ ಜಾಗದಲ್ಲಿ ಮತ್ತೆ ಆನೆಗಳು ಬರಲು ಆರಂಭಿಸುತ್ತವೆ.

ಆನೆಗಳನ್ನಾದರೂ ಕಾಡಿಗೆ ಓಡಿಸಬಹುದು. ಹಂದಿಗಳನ್ನು ಹತೋಟಿಗೆ ತರಲು ಆಗುವುದಿಲ್ಲ ಎಂದು ಹೇಳುತ್ತಾರೆ ರೈತರು.

‘ಓಂಕಾರ್ ವಲಯದ ಕಾಡಂಚಿನ ಕುರುಬರಹುಂಡಿ ಗ್ರಾಮದಲ್ಲಿ ಕೆಲ ದಿನಗಳಿಂದ ಆನೆಗಳ ಹಾವಳಿ ಮಿತಿ ಮೀರಿದೆ. ಪ್ರತಿ ದಿನವೂ ಅರಣ್ಯದಿಂದ ಹೊರಬರುವ ಆನೆಗಳು ಬೆಳೆಗಳನ್ನು ನಾಶಪಡಿಸುತ್ತಿವೆ. ಅಲ್ಲದೆ ತಂತಿ ಬೇಲಿಗಳು, ಪೈಪ್‌ಲೈನ್ ಹಾಗೂ ಸಸಿಗಳನ್ನು ಕಿತ್ತು ನಾಶಪಡಿಸುತ್ತಿವೆ. ರಾತ್ರಿ ಗಸ್ತು ತಿರುಗುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ ಉಪಯೋಗವಾಗಿಲ್ಲ’ ಎಂದು ರೈತರು ಆರೋಪಿಸುತ್ತಾರೆ. 

ಗೋಪಾಲಸ್ವಾಮಿ ಬೆಟ್ಟದ ವಲಯದ ಸೋಲಾರ್ ಬೇಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸದೆ ಇರುವುದರಿಂದ ಆನೆಗಳು ದಾಳಿ ಮಾಡುತ್ತಲೇ ಇವೆ. ಆನೆಗಳ ಹಾವಳಿಯಿಂದ ಜಮೀನುಗಳನ್ನು ರಕ್ಷಿಸಲು ಅರಣ್ಯ ಇಲಾಖೆ ಸ್ಥಳೀಯ ಕೆಲವು ರೈತರನ್ನೇ ಕಾವಲಿಗೆ ನೇಮಿಸಿಕೊಂಡಿದೆ.

ಗಸ್ತು ಹೆಚ್ಚಿಸಲು ಆಗ್ರಹ 

ಆನೆಗಳ ಹಾವಳಿ ತಡೆಯಲು ರಾತ್ರಿ ಹೊತ್ತು ಗಸ್ತು ಹೆಚ್ಚಿಸುವುದು ಸೇರಿದಂತೆ ಇತರೆ ಕ್ರಮಗಳನ್ನು ಅರಣ್ಯ ಇಲಾಖೆ ತೆಗೆದುಕೊಳ್ಳಬೇಕು ಎಂದು ರೈತರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಒಂಟಿ ಆನೆ ಕಾಟ: ಗೋಪಾಲಸ್ವಾಮಿ ಬೆಟ್ಟ ವಲಯದ ಕಲ್ಲಿಗೌಡನಹಳ್ಳಿ ಬೀಟ್‌ನಲ್ಲಿ ಪ್ರತಿದಿನ ಒಂಟಿ ಆನೆಯೊಂದು ರಾತ್ರಿ ಹೊತ್ತು  ರಾಷ್ಟ್ರೀಯ ಹೆದ್ದಾರಿ ಇಲಾಖೆ ಸಿಬ್ಬಂದಿ ಕ್ವಾಟ್ರಸ್ ಮೂಲಕ ರೈತರ ಜಮೀನಿಗೆ ಹೋಗುತ್ತದೆ. ಬೆಳಿಗ್ಗೆ ಆರರ ಸಮಯದಲ್ಲಿ ಮತ್ತೆ ಕಾಡಿಗೆ ಹೋಗುತ್ತದೆ. ರಾತ್ರಿ ಆನೆ ಜಮೀನಿಗೆ ನುಗ್ಗದಂತೆ ಮಾಡಲು ಇಲಾಖೆಯ ಸಿಬ್ಬಂದಿ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಹೇಳುತ್ತಾರೆ.

ಹತ್ತಿರದಲ್ಲೇ ಆನೆಗಳು ರಸ್ತೆ ದಾಟಿ ರೈತರ ಜಮೀನಿಗೆ ಹೋದರೂ ಗಸ್ತಿನ ಸಿಬ್ಬಂದಿ ತಲೆ ಕೆಡಿಸಿಕೊಳ್ಳುವುದಿಲ್ಲ; ಗಸ್ತು ತಿರುಗುವ ವಾಹನದಲ್ಲೇ ನಿದ್ರೆಗೆ ಜಾರುತ್ತಾರೆ ಎಂಬುದು ರೈತರ ಆರೋಪ.

ಕಳೆದ ವಾರ ಮೇಲುಕಾಮನಹಳ್ಳಿ ಬಳಿ ಒಂಟಿ ಆನೆ ಜಮೀನಿಗೆ ನುಗ್ಗಿ ಸೋಲಾರ್ ಬೇಲಿ ನಾಶ ಮಾಡಿದೆ. ಈಗಾಗಲೇ ಗೋಪಾಲಸ್ವಾಮಿ ಬೆಟ್ಟ ಮತ್ತು ಕುಂದುಕೆರೆ ವಲಯದಲ್ಲಿ ಅಳವಡಿಸಿರುವ ನೇತಾಡುವ ಸೋಲಾರ್ ತಂತಿ ಬೇಲಿಗಳು ಉಪಯೋಗ ವಾಗುತ್ತಿಲ್ಲ. ಈ ಭಾಗದಲ್ಲಿ ರೈಲ್ವೆ ಕಂಬಿಗಳನ್ನು ಅಳವಡಿಸಬೇಕು ಎಂಬ ಕೂಗು ರೈತರಿಂದ ಹೆಚ್ಚಾಗಿದೆ.

ರೈಲು ಕಂಬಿಗಳನ್ನು ಅಳವಡಿಸಲು ಪ್ರಸ್ತಾವನೆ ಸಲ್ಲಿಸಿ ಸರ್ಕಾರಕ್ಕೆ ಪತ್ರಬರೆಯುವುದಾಗಿ ಬಂಡೀಪುರದ ಅರಣ್ಯ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು