ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಷನ್ ಲೋಕಕ್ಕೆ ಹೊಸ ಎಂಟ್ರಿ; ‘ಮಟನ್ ಸ್ಲೀವ್ಸ್‌’

Last Updated 14 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಫ್ಯಾಷನ್ ಕ್ಷೇತ್ರದ ಹರಿವಿನಲ್ಲಿ ದಿನಕ್ಕೊಂದು ಹೊಸ ಸೇಪರ್ಡೆಯಾಗುತ್ತಲೇ ಇರುತ್ತದೆ. ಅದರಲ್ಲೂ ಉಡುಪಿನ ಹಳೆಯ ವಿನ್ಯಾಸಕ್ಕೆ ನಾವಿನ್ಯತೆಯ ರೂಪ ನೀಡಿ ಮಾರುಕಟ್ಟೆಗೆ ಪರಿಚಯಿಸುವ ಟ್ರೆಂಡ್ ಕಳೆದ ಕೆಲ ವರ್ಷಗಳಿಂದ ನಡೆಯುತ್ತಿದೆ. ಅಂತಹ ಸಾಲಿಗೆ ಈಗ ಹೊಸತಾಗಿ ಸೇರ್ಪಡೆಯಾಗಿದೆ ಮಟನ್ ಸ್ಲೀವ್‌ ಅಥವಾ ಬಲೂನ್ ಸ್ಲೀವ್ಸ್‌. 2019ರ ಅಂತ್ಯದಿಂದ ಫ್ಯಾಷನ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ ಮಟನ್ ಸ್ಲೀವ್ಸ್ ಟ್ರೆಂಡ್‌.‌

ಉದ್ದನೆಯ ಸ್ಲೀವ್ಸ್‌ ಸಂಪೂರ್ಣವಾಗಿ ಬಲೂನ್‌ನಂತೆ ಊದಿಕೊಂಡಿದ್ದು ಮಟ್ಟಿಕಟ್ಟಿನ ಬಳಿ ಬಿಗಿಯಾಗಿರುತ್ತದೆ. ಇದು ಗಾಳಿ ಊದಿದ ಬಲೂನ್‌ನಂತಿರುವ ಕಾರಣಕ್ಕೆ ಬಲೂನ್ ಸ್ಲೀವ್ಸ್ ಎಂದೂ ಕರೆಯುತ್ತಾರೆ. ಆ ರೀತಿಯ ಸ್ಲೀವ್ಸ್ ಇರುವ ದಿರಿಸನ್ನು 1875ರ ಕಾಲದಿಂದಲೂ ರಾಜ–ರಾಣಿಯರು ಧರಿಸುತ್ತಿದ್ದರು. ಅಂದು ಪುರುಷ, ಮಹಿಳೆ ಇಬ್ಬರೂ ಧರಿಸುತ್ತಿದ್ದ ಮಟನ್ ಸ್ಲೀವ್ಸ್ ಫ್ಯಾಷನ್ ಇಂದು ಹೆಂಗಳೆಯರ ನೆಚ್ಚಿನ ಸ್ಟೈಲ್ ಆಗಿದೆ. ಹಳೆಯದಕ್ಕೆ ಆಧುನಿಕ ರೂಪ ನೀಡಿ ಫ್ಯಾಷನ್ ಮಾರುಕಟ್ಟೆಯಲ್ಲಿ ಆಕರ್ಷಿಸುವಂತೆ ಮಾಡಿದ್ದಾರೆ ವಸ್ತ್ರ ವಿನ್ಯಾಸಕರು.

ಎಲ್ಲದಕ್ಕೂ ಹೊಂದುವ ಸ್ಟೈಲ್‌: ಈ ಮಟನ್ ಸ್ಲೀವ್ಸ್ ಕೇವಲ ಗೌನ್‌ಗೆ ಮಾತ್ರವಲ್ಲ, ಸೀರೆಯ ಬ್ಲೌಸ್‌, ಜಾಕೆಟ್‌, ಚೂಡಿದಾರ್‌, ಜೀನ್ಸ್ ಟಾಪ್ ಹೀಗೆ ಲಲನೆಯರ ನೆಚ್ಚಿನ ಎಲ್ಲಾ ಬಗೆಯ ಉಡುಪಿಗೂ ಹೊಂದುತ್ತದೆ. ಆಧುನಿಕ ಮಾತ್ರವಲ್ಲ, ಸಾಂಪ್ರದಾಯಿಕ ದಿರಿಸಿಗೂ ಇದು ಸರಿ ಹೊಂದುತ್ತದೆ.

ಮಟನ್ ಸ್ಲೀವ್‌ ಇತಿಹಾಸ: ಮಟನ್ ಸ್ಲೀವ್ಸ್ ಇರುವ ದಿರಿಸುಗಳನ್ನು 18 ಹಾಗೂ 19ನೇ ಶತಮಾನದ ಕಾಲದಲ್ಲಿ ರಾಜ–ರಾಣಿಯರು ಧರಿಸುತ್ತಿದ್ದರು. ಆಗೆಲ್ಲಾ ಗೌನ್ ರೂಪದ ಉಡುಪು ಹೆಚ್ಚು ಧರಿಸುತ್ತಿದ್ದ ಕಾರಣ ಗೌನ್‌ಗೆ ಸಾಮಾನ್ಯವಾಗಿ ಮಟನ್ ಅಥವಾ ಬಲೂನ್ ಸ್ಲೀವ್ ಇರುತ್ತಿತ್ತು. ಇದನ್ನು ಪ್ರೆಂಚ್‌ನಲ್ಲಿ ‘ಗಿಗೋಟ್ ಸ್ಲೀವ್ಸ್’ ಎಂದೂ ಕರೆಯುತ್ತಿದ್ದರು.

ನವೀನ ಸ್ಪರ್ಶ: ಹಿಂದೆಲ್ಲಾ ಉದ್ದಕ್ಕೆ ಮೇಲಿನಿಂದ ಕೆಳಗೆ ಒಂದೇ ರೂಪದ ಮಟನ್ ಸ್ಲೀವ್ಸ್ ಇರಿಸುವ ಟ್ರೆಂಡ್ ಇತ್ತು. ಆದರೆ ಫ್ಯಾಷನ್ ಲೋಕದಲ್ಲಿ ಹೊಸತನಕ್ಕೆ ತಕ್ಕಂತೆ ಈಗ ಇದರಲ್ಲಿ ಹಾಫ್ ಸ್ಲೀವ್ಸ್‌, ಸೆಮಿ ಹಾಫ್ ಸ್ಲೀವ್ಸ್ ಕೂಡ ಲಭ್ಯವಿದೆ. ಅಲ್ಲದೇ ಫ್ಯಾಷನ್ ಟ್ರೆಂಡ್‌ಗೆ ತಕ್ಕಂತೆ ಒಂದೇ ಸ್ಲೀವ್ಸ್‌ಗೆ ಎರಡು ಬಣ್ಣದ ಅಥವಾ ವಿನ್ಯಾಸದ ಬಟ್ಟೆ ಬಳಸಿರುವುದನ್ನು ಕಾಣಬಹುದು.

ನಟಿಯರಿಗೂ ಅಚ್ಚುಮೆಚ್ಚು: ಈ ಮಟನ್ ಸ್ಲೀವ್ ಹೊಂದಿರುವ ಜಾಕೆಟ್‌, ಗೌನ್‌ಗಳು ಭಾರತದ ನಟಿಯರನ್ನು ಆಕರ್ಷಿಸಿವೆ. ವಿಶೇಷ ಸಂದರ್ಭಗಳಲ್ಲಿ ನಟಿಯರು ಮಟನ್ ಸ್ಲೀವ್ಸ್ ಹೊಂದಿರುವ ಉಡುಪು ಧರಿಸಿ ಮಿಂಚಿದ್ದಾರೆ. ಬಾಲಿವುಡ್‌ನ ಸ್ಟೈಲಿಶ್‌ ನಟಿ ಎನ್ನಿಸಿಕೊಂಡಿರುವ ಅನುಷ್ಕಾ ಶರ್ಮಾ ಅನೇಕ ಸಂದರ್ಭಗಳಲ್ಲಿ ವಿಭಿನ್ನ ವಿನ್ಯಾಸದ ಬಲೂನ್ ಅಥವಾ ಮಟನ್ ಸ್ಲೀವ್ಸ್ ಇರುವ ಉಡುಪು ಧರಿಸಿದ್ದಾರೆ.

ಮಟನ್ ಸ್ಲೀವ್ಸ್ ಜಾಕೆಟ್‌, ಪುಲ್‌ಓವರ್‌: ಚಳಿಗಾಲದಲ್ಲಿ ಮಟನ್ ಸ್ಲೀವ್ಸ್ ಇರುವ ಜಾಕೆಟ್ ಅಥವಾ ಪುಲ್‌ಓವರ್‌ಗಳು ಹೆಚ್ಚು ಸೂಕ್ತ. ಇದು ಟ್ರೆಂಡಿ ಲುಕ್ ನೀಡುವುದಲ್ಲದೇ ಕೈಗಳನ್ನು ಪೂರ್ತಿ ಮುಚ್ಚಿ ಚಳಿಯಿಂದ ರಕ್ಷಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT