ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನತ್ತು.. ಏನೀ ಗತ್ತು?

Published 4 ಮೇ 2024, 0:40 IST
Last Updated 4 ಮೇ 2024, 0:40 IST
ಅಕ್ಷರ ಗಾತ್ರ

ನಾಥನ ಪ್ರೀತಿಗೆ ನತ್ತು ಇರಬೇಕ ನತ್ತಿದ್ದರ ಪ್ರೀತಿಗೆ ಗತ್ತು ಇದ್ದಂಗ ಹೀಗೆ ಹಾಡು ಹೇಳುತ್ತ ಹೊಸ ಮದುವಣಗಿತ್ತಿಗೆ ಕಾಡುತ್ತಾರೆ. ಬಾಜಿರಾವ್‌ ಮಸ್ತಾನಿಯಲ್ಲಿ ಪ್ರಿಯಾಂಕಾ ಚೋಪ್ರಾ ಒಂಬತ್ತು ಮುತ್ತಿನ ನತ್ತು ಧರಿಸಿ, ಬಾಜೀರಾವನಿಗೆ ಮಾತಿನ ಚಾಟಿಯೇಟು ನೀಡುತ್ತಾಳೆ.. ’ನೀವು ಪ್ರಾಣ ಕೇಳಿದರೂ ಕೊಡ್ತಿದ್ದೆ, ಆದರೆ ನನ್ನಿಂದ ನನ್ನ ಹೆಮ್ಮೆಯನ್ನು ಕಿತ್ಕೊಂಡ್ರಿ‘ ಎಂದು. ಈ ನತ್ತು ನನ್ನ ತನ್ನದೆನ್ನುವ ಗತ್ತನ್ನು ನೀಡುತ್ತದೆ.

ಪುರಾಣದಲ್ಲಿ ವಜ್ರದ ನತ್ತು ಅಥವಾ ಮೂಗುತಿ ಧರಿಸಿದ ಗೌರಿ, ಪರ್ವತೇಶ್ವರ ಈಶ್ವರನನ್ನು ಮದುವೆಯಾಗಿ ಪಾರ್ವತಿಯಾಗುತ್ತಾಳೆ. ಆಗಿನಿಂದಲೂ ನಾಥನ ಪ್ರೀತಿಯ ಪ್ರತೀಕ ಈ ನತ್ತು ಆಗಿ ಪರಿಣಮಿಸಿದೆ ಎಂದು ದಂತಕತೆಗಳು ಹೇಳುತ್ತವೆ. 

ಋತುಮತಿಯಾದಾಗ ಒಂಟು ಹರಳಿನ ಮೂಗುತಿ, ಮದುವೆಗೆ ಮೂರು ಹರಳಿನ ಮೂಗುತಿ, ಮಕ್ಕಳಾದಾಗ ಏಳು ಹರಳಿನ ಮೂಗುತಿ ಧರಿಸಿ, ತನ್ನ ಸುಖ ಸಂಸಾರದ ಗುಟ್ಟನ್ನು ಹರಳುಗಳಲ್ಲಿ ಬಿಚ್ಚಿಡುತ್ತ ಹೋಗುತ್ತಾಳೆ ಗರತಿ ಎಂದು ಹಳೆಯ ನಂಬಿಕೆಗಳು ಹೇಳುತ್ತವೆ.

80ರ ದಶಕದಲ್ಲಿ ಮೂರು ವಜ್ರದ ಹರಳುಗಳ ಮೂಗುತಿಗೆ ಶ್ರೀದೇವಿ ಮೂಗುತಿ ಎಂಬ ಹೆಸರು ಬಂದಿತ್ತು. ನಟಿ ಶ್ರೀದೇವಿ ಧರಿಸುತ್ತಿದ್ದ ಈ ಬಗೆಯ ಮೂಗುತಿ ಟ್ರೆಂಡ್‌ಗೆ ಬಂದಿದ್ದೇ ಆಗ. ಮೈಸೂರು ಮಹಾರಾಜರ ಕಾಲದಲ್ಲಿ ನವಿಲು ಮತ್ತು ಬಾತುಕೋಳಿಯಾಕಾರದ ಮೂಗುತಿಗಳು ಪ್ರಸಿದ್ಧವಾದವು. ಒಂಟಿ ಮೂಗುತಿಗೆ ನಾಲ್ಕು ಹರಳುಗಳ ಝಾಲರಿ ಹಾಕುವುದೂ ಕರ್ನಾಟಕದಲ್ಲಿ ಜನಪ್ರಿಯವಾಗಿದೆ. 

ಅರ್ಧ ಚಂದ್ರ, ನಕ್ಷತ್ರಗಳಂಥ ಮೂಗುತಿಗೆ ಈಗಲೂ ಎಲ್ಲಿಲ್ಲದ ಬೇಡಿಕೆ ಇದೆ. ಇದೀಗ ಟ್ರೆಂಡ್‌ನಲ್ಲಿರುವದು ಆಕ್ಸಿಡೈಸ್ಡ್ ಬೆಳ್ಳಿಯ ಮೂಗುತಿಗಳು. ಮೂಗಿಗಿಂತ ಮೂಗುತಿ ಭಾರವೇ ಎನ್ನುವಷ್ಟು ದೊಡ್ಡಾಕಾರದ ಮೂಗುತಿ ಧರಿಸುವುದು ಟ್ರೆಂಡ್‌ ಆಗಿದೆ. ಮೊದಲೆಲ್ಲ ಮದುವೆಗೆ ಮುನ್ನ ಮೂಗು ಚುಚ್ಚುವ ಸಂಪ್ರದಾಯ ದೇಶದ ಕೆಲವು ಭಾಗಗಳಲ್ಲಿತ್ತು. ಆದರೆ ಈಗ ಎಳವೆಯಲ್ಲಿಯೇ ಮೂಗೂರಿಸುವುದರಿಂದ ಸುಲಭವಾಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಹತ್ತು ತುಂಬುವ ಮುನ್ನವೇ ಮೂಗು ಚುಚ್ಚುತ್ತಾರೆ. 

ಎಳೆ ಮೂಗಿಗೆ ಬಂಗಾರ ಅಥವಾ ತಾಮ್ರದ ತಂತಿಯನ್ನು ಚುಚ್ಚುವುದರಿಂದ ಮೂಗೂರುವುದ ಎಂದು ಕರೆಯಲಾಗುತ್ತದೆ. ಮುಕ್ಕಡು ಮೂಗಿಗೆ ಚಿಕ್ಕ ಮೂಗುತಿ ತಂದ ಮಾವ.. ಎಂದು ಹೇಳುತ್ತಾರೆ. ಮೊಂಡು ಮೂಗಿಗೆ ಚಿಕ್ಕ ಮೂಗುತಿಯೇ ಚಂದ ಎಂದು ಹೇಳುವ ಪರಿ ಇದು. ಸಂಪಿಗೆ ಮೂಗಿಗೆ ಮಾವಿನ ಮೂಗುತಿ ಎಂದು ಆಯಾ ಆಕಾರದ ಮೂಗುಗಳಿಗೆ ಎಂಥ ಮೂಗುತಿ ಹಾಕಬೇಕು ಎಂಬುದನ್ನೂ ಹೇಳಲಾಗುತ್ತದೆ. 

ಬಾಂಗ್ಲಾದೇಶಿ ಮೂಲದ ನಥೇರಿ ಎಂದು ಕರೆಯಲಾಗುವ ಮೂಗುತಿಯಂತೂ ದೊಡ್ಡದೊಂದು ರಿಂಗಿನಂತಿರುತ್ತದೆ. ನಮ್ಮಲ್ಲಿ ರಾಜಸ್ಥಾನ ಹಾಗೂ ಗುಜರಾತ್‌ ರಾಜ್ಯಗಳಲ್ಲಿ ಈ ಬಗೆಯ ಮೂಗುತಿ ಪ್ರಸಿದ್ಧವಾಗಿದೆ. ಬಂಗಾಲಿಗಳಲ್ಲಿಯೂ. ಈ ದೊಡ್ಡ ಮೂಗುತಿ ಜೋಲುಬೀಳಬಾರದೆಂದೇ ತಲೆಗೊಂದು ಚೈನನ್ನೂ ಹಾಕಲಾಗುತ್ತದೆ. ಮದುವೆ ವ್ಯವಸ್ಥೆ ಚಾಲನೆಗೆ ಬರುವ ಮೊದಲೇ ಮಗಳನ್ನು ಅತಿಥಿಗಳಿಗೆ ಸ್ವತ್ತಾಗಿ ನೀಡಲಾಗುತ್ತಿತ್ತಂತೆ. ಹಾಗೆ ಬಂದ ಅತಿಥಿಗಳು, ಗೋವು, ಎಮ್ಮೆ ಮುಂತಾದ ರಾಸುಗಳಿಗೆ ಹಗ್ಗ ಕಟ್ಟಿಕೊಂಡು ಹೋಗುವಂತೆ, ತಮಗೆ ಸೇರಿದ ಸ್ವತ್ತಿದು ಎಂದು ಹೀಗೆ ನತ್ತು ಹಾಕಿ ಕರೆದೊಯ್ಯುತ್ತಿದ್ದರಂತೆ. ನಂತರ ಇವು ಮದುವೆಯ ವ್ಯವಸ್ಥೆಗೆ ಒಳಪಟ್ಟವು ಎಂದು ಇತಿಹಾಸ ಹೇಳುತ್ತದೆ.

ಪುರಾಣ, ಇತಿಹಾಸಗಳು ಏನೇ ಹೇಳಿದರೂ, ಮೂಗಿರುವ ಸುಂದರಿಯರೆಲ್ಲ ಮೂಗುತಿಯನ್ನು ಆಸೆ ಪಡುತ್ತಲೇ ಇರುತ್ತಾರೆ. ಅಕ್ಷಯ ತದಿಗೆಗೆ ಮೂಗು ಚುಚ್ಚಿಸಿಕೊಂಡರೆ ಗಾಯವಾಗದು ಎಂಬ ನಂಬಿಕೆಯೂ ಇದೆ. ಅಷ್ಟಾದರೂ ಚಿನ್ನ ಮನೆ ಸೇರೀತು ಎಂಬ ಆಸೆಯೂ ಇದರ ಹಿಂದಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT