ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲದಲ್ಲಿ ಕೂದಲು ಆರೈಕೆ

Last Updated 8 ಜುಲೈ 2020, 8:01 IST
ಅಕ್ಷರ ಗಾತ್ರ

ಮಳೆಗಾಲ ಬಂತೆಂದರೆ ಚರ್ಮ ಮತ್ತು ಕೂದಲು ಆರೈಕೆಗೆ ಹೆಚ್ಚು ಗಮನ ನೀಡುವುದು ಅವಶ್ಯ. ಹವಾಮಾನ ಬದಲಾವಣೆಯಿಂದಾಗಿ ಈ ಕಾಲದಲ್ಲಿ ಕೂದಲು ಉದುರುವಿಕೆ, ಕೂದಲು ಒಣಗದಿರುವುದು, ಚರ್ಮ ಶುಷ್ಕವಾಗುವುದು.. ಇಂತಹಸಮಸ್ಯೆಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ. ಈ ಕಾಲದಲ್ಲಿ ಮುಖದ ಅಂದ, ದೇಹದ ಆರೋಗ್ಯ ಕಾಪಾಡುವುದು, ಮೇಕಪ್‌ ಮಾಡಿಕೊಳ್ಳುವ ಕುರಿತು ಬೆಂಗಳೂರಿನ ಸೌಂದರ್ಯ ತಜ್ಞೆ ಜಯಾ ವೈಷ್ಣವ್‌‌ ಕೆಲ ಸಲಹೆಗಳನ್ನು ನೀಡಿದ್ದಾರೆ.

* ಮಳೆಗಾಲದಲ್ಲಿ ಕೂದಲು ಒಣಗಲು ತುಂಬಾ ಸಮಯ ತೆಗೆದುಕೊಳ್ಳುವುದರಿಂದ ವಾರಕ್ಕೆ ಎರಡು ಬಾರಿ ತಲೆಗೆ ಸ್ನಾನ ಮಾಡಿದರೆ ಸಾಕು. ಕೂದಲು ಒಣಗಿಸಲು ಡ್ರೈಯರ್‌ ಬಳಸಬಹುದು. ಆದರೆ ಡ್ರೈಯರ್‌ ತುಂಬ ಬಿಸಿ ಬೇಡ.

* ಮಳೆಯಲ್ಲಿ ನೆನದು ತಲೆ ಒದ್ದೆಯಾದಾಗ ಟವೆಲ್‌ನಿಂದ ತಲೆಯನ್ನು ಚೆನ್ನಾಗಿ ಒರೆಸಬೇಕು. ಕೂದಲಿನಲ್ಲಿ ತೇವ ಹಾಗೇ ಉಳಿದಿದ್ದರೆ ತಲೆ ತುರಿಸಲು ಆರಂಭವಾಗುತ್ತದೆ. ಇದರ ಜೊತೆಗೆ ಕೂದಲಿನ ಬುಡದಲ್ಲಿ ಕಲ್ಮಶಗಳು ನಿಂತು ತಲೆಹೊಟ್ಟಿನಂಥ ಸಮಸ್ಯೆ ಕಾಡಬಹುದು. ಈ ಸಮಸ್ಯೆ ನಿವಾರಣೆಗೆ ಸ್ನಾನಕ್ಕಿಂತ ಮುಂಚೆ ಕೂದಲಿಗೆ ಮೆಹಂದಿ, ಮೊಸರು ಮಿಶ್ರ ಮಾಡಿ ಹಚ್ಚಬೇಕು. ನಂತರ ಒಂದು ಗಂಟೆ ಬಿಟ್ಟು ಸ್ನಾನ ಮಾಡಬೇಕು. ಮಳೆಗಾಲದಲ್ಲಿ ಕೂದಲು ಆಗಾಗ ಒದ್ದೆಯಾಗುವುದರಿಂದ ಮೂರು ತಿಂಗಳಿಗೊಮ್ಮೆ ಹೇರ್‌ ಸ್ಪಾ ಮಾಡಿದರೆ ಸಾಕು.

* ಮಳೆಗಾಲದಲ್ಲಿ ವಾತಾವರಣ ಹೆಚ್ಚು ತೇವಾಂಶದಿಂದ ಕೂಡಿರುತ್ತದೆ. ಈ ಅವಧಿಯಲ್ಲಿಒಣಚರ್ಮ ಸಮಸ್ಯೆ ‌ಕಡಿಮೆ. ಆದರೂ ಹೆಚ್ಚು ನೀರು ಕುಡಿಯಬೇಕು. ದಿನಕ್ಕೆ ಕನಿಷ್ಟ ಎರಡು ಲೀಟರ್‌ ನೀರು ದೇಹಕ್ಕೆ ಸಿಗಬೇಕು. ಆಯಾ ಋತುಮಾನದಲ್ಲಿ ಸಿಗುವ ಹಣ್ಣು, ತರಕಾರಿ ಸೇವಿಸಬೇಕು.

* ಮುಖಕ್ಕೆ ಐಸ್‌ ತುಂಡಿನಿಂದ ವೃತ್ತಾಕಾರವಾಗಿ ಐದು ನಿಮಿಷ ಉಜ್ಜಿದರೆ ಆರಾಮವೆನಿಸುವುದು. ಚರ್ಮ ಒಣಗುತ್ತಿದೆ ಎಂದು ಎನಿಸಿದರೆ ಮಾಯಿಶ್ಚರೈಸರ್‌ ಹಚ್ಚಬಹುದು. ಸಾಮಾನ್ಯ ಮಾಯಿಶ್ಚರೈಸರ್‌ ಬಳಸಿ. ಆದರೆ ಮಳೆ ಬರುವಾಗ ಮಾಯಿಶ್ಚರೈಸರ್‌ ಹಚ್ಚಿಕೊಂಡು ಹೊರ ಹೋದರೆ ದೇಹವೆಲ್ಲ ಎಣ್ಣೆ ಎಣ್ಣೆಯಂತಾಗುತ್ತದೆ.

* ಮಳೆಗಾಲದಲ್ಲಿ ಮುಖದಲ್ಲಿ ಮೊಡವೆ, ಸಣ್ಣ ಸಣ್ಣ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಮನೆಯಲ್ಲೇ ಕೆಲ ವಸ್ತುಗಳನ್ನು ಬಳಸಿ ಫೇಸ್‌ಪ್ಯಾಕ್‌ ಮಾಡಿಕೊಳ್ಳಬಹುದು. ಹಾಲಿನ ಕೆನೆ, ಕಡಲೆ ಹಿಟ್ಟು, ಅರಿಶಿನ, ರೋಸ್‌ವಾಟರ್ ಮೊದಲಾದ ಪದಾರ್ಥಗಳನ್ನು ಬಳಸಿ ಮನೆಯಲ್ಲಿಯೇ ಫೇಸ್‌ಪ್ಯಾಕ್‌ ಮಾಡಿಕೊಳ್ಳಬಹುದು. ಪಪ್ಪಾಯಿ ಫೇಶಿಯಲ್‌ ಮಾಡಿಕೊಳ್ಳಬಹುದು. ಆದರೆ ಹೆಚ್ಚು ರಾಸಾಯನಿಕ ಅಂಶ ಇರುವ ಸೌಂದರ್ಯವರ್ಧಕ ಕ್ರೀಮ್‌ಗಳನ್ನು ಕಡಿಮೆ ಬಳಸುವುದು ಒಳಿತು.

* ಅಲಂಕಾರ ಪ್ರಿಯರು ವಾಟರ್‌ ಫ್ರೂಫ್ ಮೇಕಪ್‌ ಸಾಧನಗಳನ್ನು ಬಳಕೆ ಮಾಡಬೇಕು. ಕಾಡಿಗೆ, ಲಿಪ್‌ಸ್ಟಿಕ್‌, ಫೌಂಡೇಷನ್‌ ಕ್ರೀಮ್‌ಗಳೆಲ್ಲವೂ ಈಗ ವಾಟರ್‌ ಪ್ರೂಫ್‌ ಸಿಗುತ್ತದೆ. ಇದರಿಂದ ಆಕಸ್ಮಿಕವಾಗಿ ಮಳೆಯಲ್ಲಿ ನೆನೆದರೂ ಕಣ್ಣಿನ ಮೇಕಪ್‌, ತುಟಿಯ ರಂಗು, ಮುಖದ ಸೌಂದರ್ಯ ಹಾಳಾಗುವುದು ತಪ್ಪುತ್ತದೆ. ಆಯಿಲ್‌ ಫ್ರೀ ಅಥವಾ ಮ್ಯಾಟ್‌ಬೇಸ್‌ ಫೌಂಡೇಷನ್‌ ಬಳಸಬಹುದು.

* ಈ ಅವಧಿಯಲ್ಲಿ ಮೇಕಪ್‌ ಹೆಚ್ಚು ಗಾಢವಾಗಿರಬಾರದು. ನ್ಯೂಡ್‌ ಮೇಕಪ್‌ ಉತ್ತಮ. ಗಾಢ ಬಣ್ಣದ ಲಿಪ್‌ಸ್ಟಿಕ್‌ಗಿಂತ ಸಾಫ್ಟ್‌ ಕಲರ್‌ ಲಿಪ್‌ಸ್ಟಿಕ್‌ ಬಳಸಬೇಕು

* ಈ ಅವಧಿಯಲ್ಲಿ ಬೇಗ ಬ್ಯಾಕ್ಟೀರಿಯಾ ಸೋಂಕು ತಗಲುವುದರಿಂದ, ಹದವಾದ ಬಿಸಿನೀರಿನಲ್ಲಿ ಸ್ನಾನ ಮಾಡಿ, ಮೈ ಒರೆಸಿ ಉತ್ತಮ ಗುಣಮಟ್ಟದ ಡಿಯೊಡ್ರೆಂಟ್‌ ಬಳಸಬೇಕು.

* ಮಾರುಕಟ್ಟೆಯಲ್ಲಿ ಒಣಚರ್ಮ, ಎಣ್ಣೆ ಚರ್ಮದವರಿಗೆ ಬೇರೆ ಬೇರೆ ಮೇಕಪ್‌ ಸಾಧನಗಳು ಲಭ್ಯ. ಅದನ್ನು ನೋಡಿಕೊಂಡು ಖರೀದಿಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT