ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಸರ ಖರೀದಿಗೆ ಮುನ್ನ....

Last Updated 15 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಚಿನ್ನದ ಆಭರಣಗಳು ಎಂದರೆ ಪ್ರೀತಿ ಇಲ್ಲದವರು ಕಡಿಮೆ. ಬಹುತೇಕ ಭಾರತೀಯರು ಹುಟ್ಟಿದಾಗಿನಿಂದ ಸಾಯುವವರೆಗೂ ವಿವಿಧ ಬಗೆಯ ಒಡವೆಗಳನ್ನು ಧರಿಸುತ್ತಾರೆ. ಚಿನ್ನದ ಒಡವೆ ಎಂದಾಕ್ಷಣ ನೆನಪಾಗುವುದು ಸರಗಳು. ಸರವನ್ನು ಪುರುಷರು, ಮಹಿಳೆಯರು, ಮಕ್ಕಳು, ವಯಸ್ಸಾದವರು ಹೀಗೆ ಎಲ್ಲರೂ ಧರಿಸಬಹುದು. ವಯೋಮಾನಕ್ಕೆ ತಕ್ಕಂತಹ ವಿವಿಧ ವಿನ್ಯಾಸದ ಚಿನ್ನದ ಸರಗಳು ಕತ್ತನ್ನು ಅಲಂಕರಿಸುತ್ತವೆ. ಈ ಚಿನ್ನದ ಸರವನ್ನು ಯಾವುದೇ ಉಡುಪಿನೊಂದಿಗೆ ಧರಿಸಿದರೂ ಅಂದವಾಗಿ ಕಾಣುತ್ತದೆ. ಇದು ನಮಗೆ ಭಿನ್ನ ನೋಟ ಸಿಗುವಂತೆ ಮಾಡುವುದರಲ್ಲಿ ಅನುಮಾನವಿಲ್ಲ. ಆ ಕಾರಣಕ್ಕೆ ವಿಶ್ವದಾದ್ಯಂತ ವಿವಿಧ ರಂಗದ ಸೆಲೆಬ್ರೆಟಿಗಳು ಚಿನ್ನದ ಸರವನ್ನು ಮೆಚ್ಚಿ ಧರಿಸುತ್ತಿದ್ದಾರೆ. ವಿವಿಧ ವಿನ್ಯಾಸದ ಉಡುಪಿನೊಂದಿಗೆ, ಬೇರೆ ಬೇರೆ ವಿನ್ಯಾಸದ ಚಿನ್ನದ ಸರಗಳನ್ನು ಧರಿಸಬಹುದು. ಬೇರೆ ಬೇರೆ ಸಂದರ್ಭಕ್ಕೆ, ವಿವಿಧ ರೀತಿಯ ವಿನ್ಯಾಸದ ಸರಗಳು ಹೊಂದುತ್ತವೆ.

ನಿಮ್ಮ ವ್ಯಕ್ತಿತ್ವವನ್ನು ಗುರುತಿಸಿ
ನೀವು ಚಿನ್ನದ ಸರ ಖರೀದಿಗೆ ಹೋಗುವ ಮುನ್ನ ನಿಮಗೇನು ಬೇಕು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಿ. ಕಚೇರಿ ಅಥವಾ ಹೊರಗಡೆ ತಿರುಗಾಡಲು ಹೋಗುವಾಗ ಧರಿಸಲು ಖರೀದಿಸುತ್ತಿದ್ದೀರಾ, ಪಾರ್ಟಿಗೆ ಹೋಗಲು ಬೇಕೇ ಅಥವಾ ಸಮಾರಂಭಗಳಿಗೆ ಹೋಗಲು ಬೇಕೆ ಎಂಬುದನ್ನು ಮೊದಲೇ ನಿರ್ಧರಿಸಿ.

ಒಂದೇ ಗಾತ್ರದ ಸರ ಎಲ್ಲದಕ್ಕೂ ಹೊಂದುವುದಿಲ್ಲ. ನೀವು ಸರವನ್ನು ಆಯ್ಕೆ ಮಾಡುವ ಮುನ್ನ ನಿಮಗೆ ಹೊಂದುವುದನ್ನೇ ಖರೀದಿಸಿ. ಪುರುಷರು ದಪ್ಪ ಹಾಗೂ ಅಗಲವಾಗಿ ಕಾಣಿಸುವ ಚಿನ್ನದ ಸರ ಖರೀದಿಸಬಹುದು. ಇದು ಅವರಿಗೆ ಹೆಚ್ಚು ಹೊಂದುತ್ತದೆ. ಫ್ರಾಂಕೊ ಸರಗಳು ಗಂಡಸರ ಅಂದವನ್ನು ಹೆಚ್ಚಿಸುತ್ತವೆ. ಇವು ಎಳೆಗಳ ರೂಪದಲ್ಲೂ ಸಿಗುತ್ತವೆ. ಪುರುಷ, ಮಹಿಳೆ ಇಬ್ಬರಿಗೂ ಹೊಂದುವ ರೆಟ್ರೊ ವಿನ್ಯಾಸದ ಸರವನ್ನು ಧರಿಸಬಹುದು. ರೆಟ್ರೊ ಶೈಲಿಯನ್ನು ಆಯ್ಕೆ ಮಾಡುವುದಾದರೆ ಎಲ್ಲಾ ಬಗೆಯ ಉಡು‍ಪಿಗೂ ಹೊಂದುವಂತಹ ಒಂದೇ ಎಳೆಯ ಸರವನ್ನು ಧರಿಸಬಹುದು.

ಹೇಗೆ ಧರಿಸಲು ಬಯಸುತ್ತೀರಿ..
ಒಂದೇ ಎಳೆ, ಎರಡೆಳೆ ಹಾಗೂ ಮೂರು ಎಳೆ ಹೀಗೆ ಎಷ್ಟು ಬೇಕು ಎಂಬುದನ್ನು ನೀವೇ ನಿರ್ಧರಿಸಬಹುದು. ನಿಮ್ಮ ನೋಟವನ್ನು ಸುಂದರವಾಗಿಸುವ ಸರದ ಆಯ್ಕೆ ಮಾಡುವುದು ನಿಮ್ಮ ಕೈಯಲ್ಲೇ ಇದೆ. ಅಗಲವಾದ ಮುಖ ಹೊಂದಿರುವವರು ಹೆಚ್ಚು ಎಳೆಯ ಸರ ಧರಿಸಿದರೆ ಸುಂದರವಾಗಿ ಕಾಣಬಹುದು. ‘ಕೇಬಲ್ ಚೈನ್’ ವಿನ್ಯಾಸದ ಸರಗಳು ಹೆಚ್ಚು ಪ್ರಚಲಿತದಲ್ಲಿವೆ. ಇದು ನಾವು ಧರಿಸಿದ ಉಡುಪಿನೊಂದಿಗೆ ಹೆಚ್ಚು ಅಂದವಾಗಿ ಕಾಣುತ್ತದೆ.

ದೇಹಕ್ಕೆ ಹೊಂದುವಂಥದ್ದು
ನಾವು ಉಡುಪುಗಳನ್ನು ಖರೀದಿ ಮಾಡುವಾಗ ಹೊಂದುವ ಬಣ್ಣದ ಹಾಗೂ ಇನ್ನಿತರ ಪರಿಕರಗಳನ್ನು ತೆಗೆದುಕೊಳ್ಳುತ್ತೇವೆ. ಹಾಗೆಯೇ ಚಿನ್ನದ ಸರ ಖರೀದಿಸುವಾಗಲೂ ನಮ್ಮ ದೇಹಕ್ಕೆ ಹೊಂದುವ, ನಮ್ಮ ಅಂದವನ್ನು ಹೆಚ್ಚಿಸುವುದನ್ನು ಖರೀದಿಸಬೇಕು. ನೀವು ದಪ್ಪಗಿದ್ದು ಕೋಲು ಮುಖದವರಾದರೆ ವಿ ಆಕಾರದ ಗಿಡ್ಡನೆಯ ಚೈನ್ ಹೆಚ್ಚು ಹೊಂದುತ್ತದೆ. ನೀವು ದುಂಡು ಮುಖ ಹೊಂದಿದ್ದರೆ ದಪ್ಪದ ರೋಪ್‌ ಚೈನ್ ಹೊಂದುತ್ತದೆ. ದುಂಡನೆಯ ಮುಖ ಹೊಂದಿರುವವರು ಉದ್ದನೆಯ ಚೈನ್ ಧರಿಸಿದರೆ ಅಭಾಸವಾಗಿ ಕಾಣಬಹುದು.

ವಜ್ರದೊಂದಿಗೆ ಚಿನ್ನ
ಸಮಯ ಅಥವಾ ಸಂದರ್ಭಕ್ಕೆ ಅನುಗುಣವಾಗಿ ಚಿನ್ನದ ಸರದೊಂದಿಗೆ ವಜ್ರದ ಆಭರಣವನ್ನು ತೊಡಬಹುದು. ಎಲ್ಲಾ ಸಂದರ್ಭದಲ್ಲೂ ಚಿನ್ನದೊಂದಿಗೆ ವಜ್ರದ ಆಭರಣಗಳನ್ನು ಧರಿಸುವುದು ಸೂಕ್ತವಲ್ಲ.

ಬಟ್ಟೆಗಳೊಂದಿಗೆ ಚೈನ್ ಧರಿಸುವುದು
ರೋಪ್‌ ಚೈನ್ ಅಥವಾ ಕೇಬಲ್ ಚೈನ್ ಅನ್ನು ಕಪ‍್ಪು ಅಥವಾ ಬಿಳಿ ಟೀ ಶರ್ಟ್‌ನೊಂದಿಗೆ ಧರಿಸುವುದರಿಂದ ಅಂದ ಹೆಚ್ಚಿಸಿಕೊಳ್ಳಬಹುದು. ಇದರೊಂದಿಗೆ ಡೆನಿಮ್ ಜಾಕೆಟ್ ಹಾಗೂ ಜೀನ್ಸ್‌ ಅನ್ನು ಮ್ಯಾಚ್ ಮಾಡಿಕೊಳ್ಳಬಹುದು. ಈ ಸರಗಳು ಸಾಮಾನ್ಯವಾಗಿ ಸ್ವಲ್ಪ ಉದ್ದವಾಗಿದ್ದು ನೀವು ಪಂಕ್ ಅಥವಾ ರೆಟ್ರೊ ನೋಟ ಬಯಸಿದರೆ ಈ ಎಲ್ಲವನ್ನೂ ಧರಿಸಬಹುದು.

ಲಿಂಕ್ ಚೈನ್
ನಿಮ್ಮ ಬಳಿ ಲಿಂಕ್ ಚೈನ್ ಇದ್ದರೆ ಅವುಗಳನ್ನು ಚಳಿಗಾಲದ ಉಡುಪಿನೊಂದಿಗೆ ಮ್ಯಾಚಿಂಗ್ ಮಾಡಿಕೊಳ್ಳಬಹುದು. ಇದರೊಂದಿಗೆ ಟೋಫಿ ಧರಿಸುವುದರಿಂದ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಚಳಿಗಾಲದಲ್ಲಿ ಬ್ಯಾಗಿ ಶರ್ಟ್ ಹಾಗೂ ಟೀ ಶರ್ಟ್‌ಗಳನ್ನು ಧರಿಸಿದರೆ ಆಧುನಿಕ ವಿನ್ಯಾಸದ ಸರ ಧರಿಸಬಹುದು.

ಸರ ಖರೀದಿಗೂ ಮುನ್ನ...
ಚಿನ್ನದ ಸರ ಖರೀದಿಗೆ ಮೊದಲು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಿ. ಚಿನ್ನದ ಬಗ್ಗೆ ಸ್ಥಳದಲ್ಲೇ ಖಾತರಿ ಹಾಗೂ ವಿನಿಮಯ ನೀತಿ ಇದೆಯೇ ನೋಡಿಕೊಳ್ಳಿ. ಹಾಗಿದ್ದಾಗ ಒಂದು ವೇಳೆ ಸರವು ನಿಮಗೆ ಅನುಗುಣವಾಗಿಲ್ಲದಿದ್ದರೆ, ಬೇರೆ ಯಾವುದೇ ಕಾರಣದಿಂದ ಹಾನಿಗೊಳಗಾಗಿದ್ದರೆ ಅದನ್ನು ಬದಲಿಸುವ ಆಯ್ಕೆ ಇರುತ್ತದೆ. ನೀವು ಖರೀದಿಸುವ ಒಡವೆಗೆ ಗ್ರಾಹಕರ ವಿಮರ್ಶೆ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ.

ಚಿನ್ನದ ಸರ ಖರೀದಿಗೂ ಯೋಚಿಸುತ್ತಲೇ ಇರಬೇಡಿ. ಚಿನ್ನಕ್ಕೆ ಎಂದಿಗೂ ಬೆಲೆ ಕಡಿಮೆಯಾಗುವುದಿಲ್ಲ. ಖರೀದಿಗೂ ಮುನ್ನ ನಿಮ್ಮ ನೆಚ್ಚಿನ ಹಾಗೂ ನಿಮಗೆ ವಿಶ್ವಾಸ ಎನ್ನಿಸುವ ಮಳಿಗೆಯಲ್ಲೇ ಖರೀದಿಸಿ. 916 ಹಾಲ್‌ಮಾರ್ಕ್‌ ಇರುವ ಚಿನ್ನವನ್ನೇ ಖರೀದಿಸುವುದು ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT