ಪರಿಸರ ಸ್ನೇಹಿ ಡೆನಿಮ್‌

7

ಪರಿಸರ ಸ್ನೇಹಿ ಡೆನಿಮ್‌

Published:
Updated:

ಜೀನ್ಸ್‌ ಉಡುಗೆ ಯುವಕ ಯುವತಿಯರ ಮೆಚ್ಚು. ಆದರೆ ಇದೀಗ ಜೀನ್ಸ್‌ ಉಡುಪನ್ನೂ ಮೀರಿ ಜೀನ್ಸ್‌ ಅನ್ನೇ ಹೋಲುವ ಡೆನಿಮ್‌ ಉಡುಗೆ ಜನಪ್ರಿಯತೆಯ ಹಾದಿ ಹಿಡಿದಿದೆ. ಇದಕ್ಕೆ ಕಾರಣ ಡೆನಿಮ್‌ ಉಡುಗೆಯ ಬಣ್ಣ ಮಾಸದ ಗುಣ, ನಿರಿಗೆ ರಹಿತ ಸ್ವಭಾವ, ರಾಸಾಯನಿಕ ಬಳಸದೆ ಉತ್ಪಾದಿಸಿದ ‘ಪರಿಸರ ಸ್ನೇಹಿ’ ಬಟ್ಟೆ, ಮೇಲಾಗಿ ಮನತಣಿಸುವ ವೈವಿಧ್ಯಗಳು. 

ಇದಕ್ಕಾಗಿಯೇ ಇಂದು ಸಿನಿಮಾ ನಟನಟಿಯರು, ಮಾಡೆಲ್‌ಗಳು, ಸೆಲೆಬ್ರಿಟಿಗಳು, ಕ್ರೀಡಾಪಟುಗಳು ಅಷ್ಟೇ ಏಕೆ ಫ್ಯಾಷನ್‌ ಪ್ರಿಯರು ಡೆನಿಮ್‌ ಉಡುಗೆಗಳ ಬೆನ್ನು ಹತ್ತಿದ್ದಾರೆ. ಇದು ಧರಿಸಲು ಆರಾಮದಾಯಕ, ಫ್ಯಾಷನ್‌ ಹಾಗೂ ಟ್ರೆಂಡಿ ಲುಕ್‌ ಕೊಡುತ್ತದೆ, ಕೈಗೆಟಕುವ ಬೆಲೆಯಲ್ಲೂ ಲಭ್ಯ ಎನ್ನುವುದು ಡೆನಿಮ್‌ ಉಡುಗೆಗಳು ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿರಲು ಕಾರಣ. ಅಲ್ಲದೆ ಕ್ಯಾಶುವಲ್‌ ಉಡುಪಾಗಿ, ನಿತ್ಯವೂ ಕಚೇರಿಗೆ ತೆರಳುವ ಮಹಿಳೆ–ಪುರುಷರಿಗೆ ಡೆನಿಮ್‌ ಉಡುಗೆ ಸೂಕ್ತ. ಡೆನಿಮ್‌ ಉಡುಪು ಧರಿಸಿ ಇನ್ನಷ್ಟು ಸ್ಟೈಲಿಷ್‌ ಆಗಬೇಕಿದ್ದರೆ ಡೆನಿಮ್‌ ಕೋಟ್‌, ಜಾಕೆಟ್‌, ಶೂ. ಕೂಡ ಧರಿಸಬಹುದು. ಉಡುಗೆ ತೊಡುಗೆ ಅಲ್ಲದೆ ಬ್ಯಾಗ್‌, ಶೂಗಳಂತಹ ಆ್ಯಸ್ಸಸರೀಸ್‌ ಕೂಡ ಡೆನಿಮ್‌ನಲ್ಲಿ ಲಭ್ಯ. 

ಡೆನಿಮ್‌ ಉಡುಪು ಎಂದರೆ ಅದರ ನಿರ್ವಹಣೆ ಕಷ್ಟ ಎಂಬ ಭಾವನೆ ಅನೇಕರಲ್ಲಿದೆ. ಆದರೆ ಇದೀಗ ಫ್ಯಾಷನ್‌ ಟ್ರೆಂಡ್‌ ಆಗಿರುವ ಡೆನಿಮ್‌ ಸುಕ್ಕು ರಹಿತವಾಗಿದ್ದು ಎಲ್ಲ ಕಾಲಕ್ಕೂ ಸೂಕ್ತ ಎನಿಸಿದೆ. ಕಾಟನ್‌ ಅನ್ನು ಬಹುಪಾಲು ಕಚ್ಛಾ ಉತ್ಪನ್ನವಾಗಿ ಹೊಂದಿರುವ ಡೆನಿಮ್‌ ಉಡುಪು ಹಿತವಾದ ಅನುಭವವನ್ನೇ ನೀಡುತ್ತದೆ. ಹೀಗಾಗಿ ಡೆನಿಮ್‌ ಉಡುಗೆಗಳಿಗೆ ಈಗ ಬೇಡಿಕೆಯೂ ಹೆಚ್ಚುತ್ತಿದೆ,

ಹದಿ ವಯಸ್ಸಿನ ಹುಡುಗಿಯರಿಂದ ಹಿಡಿದು ಫ್ಯಾಷನ್‌ ಬಯಸುವ ಅಜ್ಜಿಯವರೆಗೂ ಡೆನಿಮ್‌ ಉಡುಗೆ ಆರಾಮದಾಯಕ. ಆಧುನಿಕ ಜೀವನಶೈಲಿಗೆ ಒಗ್ಗುವಂತೆ ಡೆನಿಮ್‌ ಉಡುಗೆ ಇದೀಗ ಮಾರುಕಟ್ಟೆಯಲ್ಲಿ ಲಭ್ಯ. ಎಲ್ಲ ಕಾಲಕ್ಕೂ ಸೂಕ್ತವಾಗುವ, ಎಲ್ಲ ವಯೋಮಾನಕ್ಕೂ ಒಪ್ಪುವ, ಫ್ಯಾಷನ್‌ಗೂ ಸಂಪ್ರದಾಯಕ್ಕೂ ಸೈ ಎನ್ನುವ ಉಡುಪು ಡೆನಿಮ್‌.  ಸಿಂಥೆಟಿಕ್‌ ಉಡುಪು ಕೆಲವೊಮ್ಮ ಔಟ್‌ಡೇಟೆಡ್‌ ಆಗುವುದುಂಟು. ಆದರೆ ಡೆನಿಮ್‌ ಮತ್ತು ರೇಷ್ಮೆ ಎಂದಿಗೂ ಔಟ್‌ ಆಫ್‌ ಫ್ಯಾಷನ್‌ ಆಗುವುದೇ ಇಲ್ಲ ಎಂಬುದು ಫ್ಯಾಷನ್‌ ತಜ್ಞರ ಅಭಿಮತ. ಜತೆಗೆ ಬಡವರಿಂದ ಹಿಡಿದು ಶ್ರೀಮಂತರ ವರೆಗೆ ಯಾರು ಬೇಕಾದರೂ ಡೆನಿಮ್‌ ಬಟ್ಟೆ ಧರಿಸಿ ಖುಷಿ ಪಡಬಹುದು. ಡೆನಿಮ್‌ ಉಡುಪಿನ ಬೆಲೆ 100 ರೂಪಾಯಿಯಿಂದ ಆರಂಭವಾಗಿ 10 ಸಾವಿರ ರೂಪಾಯಿಗಳವರೆಗೂ ಇದೆ. 

‘ಡೆನಿಮ್‌ ಬಟ್ಟೆ ತಯಾರಿಸಲು ವಿವಿಧ ಗಿಡಗಳ ಉತ್ಪನ್ನವನ್ನು ಬಳಸಿದ್ದೇವೆ. ನ್ಯಾಚುರಲ್‌ ಇಂಡಿಗೊ, ಮಾಡ್ಡರ್‌, ರೀಮ್‌, ಇಮೋದಿ ಹಾಗೂ ಹರ್ದಾ ಎಂಬ ಮರಗಳ ಸತ್ವವನ್ನು ಉಪಯೋಗಿಸಿ ಬಟ್ಟೆ ತಯಾರಿಸಲಾಗಿದೆ. ಜತೆಗೆ ನೈಸರ್ಗಿಕ ಡೈಯಿಂಗ್‌ನಿಂದ ಡೆನಿಮ್‌ ಬಟ್ಟೆ ವಿಶಿಷ್ಟವಾಗಿ ನಿಲ್ಲುತ್ತದೆ. ಫ್ಯಾಷನ್‌ ನಿಟ್ಟಿನಲ್ಲೂ ಡೆನಿಮ್‌ ಮೇಲುಗೈ ಸಾಧಿಸಿದೆ. ಮಕ್ಕಳ ಉಡುಗೆಯಿಂದ ಹಿಡಿದು ಯುವಕ–ಯುವತಿಯರ ಟ್ರೌಸರ್‌, ಶರ್ಟ್‌, ಪ್ಯಾಂಟ್‌, ಹಾಫ್‌ ಪ್ಯಾಂಟ್‌, ಟಾಪ್‌,  ಜಾಕೆಟ್‌.. ಎಲ್ಲವೂ ಡೆನಿಮ್‌ ವೈವಿಧ್ಯಗಳಲ್ಲಿ ಸೇರಿದೆ’ ಎನ್ನುತ್ತಾರೆ ಅರವಿಂದ್‌ ಉಡುಗೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮೀರ್‌ ಅಖ್ತರ್‌.

‘ಇದರ ‘ಫೈರ್‌ ಪ್ರೊಟೆಕ್ಟಿವ್‌’ ಗುಣದಿಂದಾಗಿ ಈ ಬಟ್ಟೆ ಯಾವ ಕಾಲದಲ್ಲೂ ಬಳಸಲು ಸೂಕ್ತವಾಗಿದೆ. ಫ್ಯಾಬ್ರಿಕ್‌ ತಯಾರಿಸುವಾಗಲೇ ಸಾಕಷ್ಟು ಅಧ್ಯಯನ, ಸಂಶೋಧನೆ ಕೈಗೊಳ್ಳಲಾಗಿದೆ. ತಜ್ಞರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ಜತೆಗೆ ಈ ಬಟ್ಟೆಗಳನ್ನು ಬಳಸಿ 10 ವರ್ಷಗಳ ನಂತರ ಇದನ್ನು ಮರುಬಳಕೆ ಮಾಡಲೂ ಯೋಗ್ಯವಾಗಿವೆ’ ಎಂದು ಹೇಳುತ್ತಾರೆ ಅಮೀರ್‌.

ಸದ್ಯ ಉಡುಪು ಉದ್ಯಮದಲ್ಲಿ ಮುಂಚೂಣಿಯಲ್ಲಿದೆ ಎನ್ನಲಾಗುವ ಅರವಿಂದ್‌ ಲಿಮಿಟೆಡ್‌ ‘ಡೆನಿಮ್‌ ಫಾರ್‌ ಗುಡ್‌’ ಎಂಬ ಬ್ರ್ಯಾಂಡ್‌ನ ಉತ್ಪನ್ನಗಳನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದೆ. ಉತ್ತಮ ತಂತ್ರಜ್ಞಾನ ಬಳಸಿ ಅರವಿಂದ್‌ ಹಾಗೂ ಇನ್ವಿಸ್ತಾ ಆಕರ್ಷಕ ಉಡುಪುಗಳನ್ನು ಗ್ರಾಹಕರಿಗೆ ನೀಡುವ ಉದ್ದೇಶ ಕಂಪೆನಿಗಿದೆ ಎಂದು ವಿವರ ನೀಡುತ್ತಾರೆ ಅಮೀರ್‌. 

‘ಅರವಿಂದ್‌ನಲ್ಲಿ ನಾವು ನಿರಂತರವಾಗಿ ಪರಿಸರ ಸ್ನೇಹಿ ತಂತ್ರಜ್ಞಾನಗಳನ್ನು ಮತ್ತು ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳುತ್ತಿದ್ದೇವೆ. ಈ ಮೂಲಕ ಹೊಸ ಹೊಸ ವಿನ್ಯಾಸಗಳ ಜೊತೆಯಲ್ಲಿ ಆರಾಮದಾಯಕ ಮತ್ತು ದೀರ್ಘಬಾಳಿಕೆ ಬರುವ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಈ ಉತ್ಪನ್ನಗಳು ಗ್ರಾಹಕರನ್ನು ಸೆಳೆಯುತ್ತಿವೆ. ಪ್ರಾಜೆಕ್ಟ್ ಇಂಡಿಗೋ ಲೈಫ್ ಡೆನಿಮ್ ವಿಭಾಗದ ಒಂದು ಹೊಸ ವಿಸ್ತರಣೆಯಾಗಿದೆ. ಈ ಮೂಲಕ ಇಂಡಿಗೋ ಭಾರತದಲ್ಲಿ ಮಾಸ್ಟರ್ ಎನಿಸಿದೆ’ ಎಂದು ತಮ್ಮ ಉತ್ಪನ್ನದ ಬಗ್ಗೆ ಬೆಳಕು ಚೆಲ್ಲುತ್ತಾರೆ ಅವರು.
 
ಜೀನ್ಸ್‌ನಂತೆ ಡೆನಿಮ್‌ ಪ್ಯಾಂಟ್‌ಗಳು ಸ್ಕಿನ್‌ ಟೈಟ್‌ ಅಲ್ಲ. ಹೀಗಾಗಿ ಸೂಕ್ತವಾದ ಚಪ್ಪಲಿ ಅಥವಾ ಶೂ ಹಾಕಿಕೊಂಡರೆ ಸ್ಟೈಲಿಷ್‌ ಲುಕ್‌ ಪಡೆಯಬಹುದು. ಬರೀ ಕಡು ನೀಲ ಅಷ್ಟೇ ಅಲ್ಲದೆ ಕಲರ್‌ ಡೆನಿಮ್‌ಗಳೂ ಇತ್ತೀಚೆಗೆ ಯುವತಿಯರನ್ನು, ಫ್ಯಾಷನ್‌ ಪ್ರಿಯರನ್ನು ಬಹುವಾಗಿ ಸೆಳೆಯುತ್ತಿದೆ. ಇಂಥ ಕಲರ್‌ ಡೆನಿಮ್‌ ಪ್ಯಾಂಟ್‌ಗೆ ಟೀ ಶರ್ಟ್‌ ಕೂಡ ಅತ್ಯಂತ ಸೊಗಸಾಗಿ ಕಾಣುತ್ತದೆ. ಈ ಉಡುಪಿಗೆ ಹೀಲ್ಡ್‌ ಶೂ ಸಖತ್‌ ಲುಕ್‌ ಕೊಡುತ್ತದೆ.

ಒಂದೇ ಉತ್ಪನ್ನ; ಹಲವು ನಾಮ
ಡೆನಿಮ್‌ನಲ್ಲಿ ಹಲವು ವೈವಿಧ್ಯಗಳಿವೆ. ಸಾಮಾನ್ಯವಾಗಿ ಎಲ್ಲ ಸ್ಟ್ರೆಚ್ ಡೆನಿಮ್‌ಗಳು ಲಿಕ್ರಾ ಹೆಸರಿನಲ್ಲಿ ಬರುತ್ತಿದ್ದು, ಕೂಲ್‌ಮ್ಯಾಕ್ಸ್‌ ಕೋರ್‌, ಕೂಲ್‌ಮ್ಯಾಕ್ಸ್ ಆಲ್ ಸೀಸನ್, ಲಿಕ್ರಾ ಡ್ಯುಯೆಲ್ ಎಫ್ಎಕ್ಸ್ ಮತ್ತು ಲಿಕ್ರಾ ಬ್ಯೂಟಿ.. ಹೀಗೆ ಗ್ರಾಹಕರನ್ನು ಸೆಳೆಯುತ್ತಿವೆ. ಈ ಎಲ್ಲಾ ಉತ್ಪನ್ನಗಳು ವಿನೂತನ, ಆರಾಮದಾಯಕ ಮತ್ತು ಬಾಳಿಕೆ ಬರುವ ಉಡುಪುಗಳಾಗಿವೆ.

ಮೂಲ: ಸುಧಾ: ಜುಲೈ 05

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !